ADVERTISEMENT

ಅಮ್ಮಂದಿರಿಗೂ ಹಿತವೆನಿಸುವ ಜೀನ್ಸ್‌ಗಳ ಮಾಹಿತಿ ಇಲ್ಲಿದೆ...

ಪವಿತ್ರಾ ಭಟ್
Published 10 ಮೇ 2024, 23:30 IST
Last Updated 10 ಮೇ 2024, 23:30 IST
   

ಅಮ್ಮನಾಗಿ ಬಡ್ತಿ ಹೊಂದಿದ ಮೇಲೆ ದೇಹದಲ್ಲಾಗುವ ಬದಲಾವಣೆಗಳಿಂದ ಇಷ್ಟವಾದ ಸ್ಟೈಲಿಷ್ ಬಟ್ಟೆ ತೊಡಲು ಹಿಂಜರಿಯುವವರೇ ಹೆಚ್ಚು. ತೊಟ್ಟರೂ ಇರಿಸುಮುರಿಸು, ಈಗ ಹೇಗೆ ಕಾಣುವೆನೋ ಎಂಬ ಕೀಳರಿಮೆ.

ಮೊದಲೆಲ್ಲಾ ‘ಜೀನ್ಸ್‌ ಪ್ಯಾಂಟ್, ಟೀ ಶರ್ಟ್‌, ಫ್ರಾಕ್‌ಗಳನ್ನು ಧರಿಸುತ್ತಿದ್ದೆ, ಆದರೆ ಮಗುವಾದ ಮೇಲೆ ಇಷ್ಟವಾದ ದಿರಿಸು ಧರಿಸುವುದು ಹೇಗೆ?’ ಎಂದು ಹಲವರು ಪ್ರಶ್ನಿಸಿಕೊಳ್ಳುವುದಿದೆ. ಜೀನ್ಸ್‌ ಎನ್ನುವುದು ಬಹಳ ಕ್ಯಾಷುಯಲ್‌ ಉಡುಗೆಯಾಗಿದ್ದು,

ಅಮ್ಮಂದಿರಿಗಾಗಿಯೇ ಹಲವು ರೀತಿಯ ಜೀನ್ಸ್‌ಪ್ಯಾಂಟ್‌ಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಧರಿಸಿಯೂ ಟ್ರೆಂಡಿಯಾಗಿ ಕಾಣಬಹುದು.

ADVERTISEMENT

ಬೂಟ್‌ಕಟ್‌ ಜೀನ್ಸ್‌

ಕೆಲವು ಫ್ಯಾಷನ್‌ಗಳು ಎಂದಿಗೂ ಮಾಸದು. ಅದಕ್ಕೆ ಒಂದು ಉದಾಹರಣೆಯೆಂದರೆ ಬೂಟ್‌ಕಟ್ ಜೀನ್ಸ್. ಇದು 60 ಮತ್ತು 70ರ ದಶಕದಲ್ಲಿ ಜನಪ್ರಿಯವಾಗಿತ್ತು, ಈಗಲೂ ಮಹಿಳೆಯರ ನೆಚ್ಚಿನ ಜೀನ್ಸ್‌ ಆಗಿ ಉಳಿದುಕೊಂಡಿದೆ. ಎಲ್ಲಾ ದೇಹ ಪ್ರಕಾರಗಳಿಗೆ ಸರಿ ಹೊಂದುವಂಥ ಈ ಜೀನ್ಸ್‌ ಅಮ್ಮಂದಿರಿಗೆ ಉತ್ತಮ ಆಯ್ಕೆಯಾಗಿದೆ.

ಹೈ– ವೇಸ್ಟ್‌ ಜೀನ್ಸ್‌

ಹೈ– ವೇಸ್ಟ್‌ ಜೀನ್ಸ್‌ ಎಲ್ಲಾ ವಯಸ್ಸಿನ ಮಹಿಳೆಯರು ಇಷ್ಷಪಡುವ ದಿರಿಸು. ಆರಾಮದಾಯಕ ಎನಿಸುವ ಈ ಪ್ಯಾಂಟ್‌ಗಳು ಕೊಂಚ ದಪ್ಪ ಇರುವವರಿಗೆ ಹೇಳಿಮಾಡಿಸಿದಂತಿದೆ. ಅಲ್ಲದೆ ಹೈ– ವೇಸ್ಟ್‌ ಜೀನ್ಸ್‌ ಸ್ಲಿಮ್‌ ಆಗಿ ಕಾಣುವಂತೆ ಮಾಡುತ್ತವೆ. 

ಫ್ಲೇರ್ಡ್‌ ಜೀನ್ಸ್‌

ರೆಟ್ರೊ ಶೈಲಿಯಂತೆ ಕಾಣಿಸುವ ಫ್ಲೇರ್ಡ್‌ ಜೀನ್ಸ್‌ಗಳು ಬೂಟ್‌ಕಟ್‌ನಂತೆ ಕಂಡರೂ ಕೊಂಚ ಭಿನ್ನವಾಗಿರುತ್ತದೆ. ತೊಡೆ ಮತ್ತು ಮೀನಖಂಡಗಳ ಭಾಗದಲ್ಲಿ ಅಗಲ ವಾಗಿರುತ್ತದೆ. ಹೀಗಾಗಿ ಧರಿಸಲು ಕೂಡ ಆರಾಮದಾಯಕ ಎನಿಸುತ್ತದೆ. ಕುರ್ತಾ, ಸ್ವೆಟರ್‌, ಅಥವಾ ಶಾರ್ಟ್‌ ಟಾಪ್‌ನೊಂದಿಗೆ ಈ ಜೀನ್ಸ್‌ ಧರಿಸಿದರೆ, ನೀವು ದಪ್ಪವಾಗಿದ್ದರೂ ಸ್ಲಿಮ್‌ ಆಗಿ ಕಾಣುತ್ತೀರಿ.

ಸಿಗರೇಟ್‌ ಕಟ್‌ ಜೀನ್ಸ್‌

ಕಚೇರಿಗೆ ತೆರಳುವ ಅಮ್ಮಂದಿರಿಗೆ ಸಿಗರೇಟ್‌ ಕಟ್‌ ಜೀನ್ಸ್‌ ಪ್ಯಾಂಟ್‌ಗಳು ವಿಭಿನ್ನ ರೀತಿಯ ಲುಕ್‌ ನೀಡಲಿದೆ. ಪೂರ್ತಿಯಾಗಿ ಪಾದದವರೆಗೆ ಇರದೆ ಆ್ಯಂಕಲ್‌ನವರೆಗೆ ಮಾತ್ರ ಇರುವ ಪ್ಯಾಂಟ್‌ಗಳಿಗೆ ಟೀ ಶರ್ಟ್‌ ಅಥವಾ ಶಾರ್ಟ್‌ ಕುರ್ತಾ ಮತ್ತು ಸ್ಟೈಲಿಷ್‌ ಚಪ್ಪಲ್‌ ಧರಿಸಿದರೆ ಅಂದವಾಗಿ ಕಾಣುವಂತೆ ಮಾಡುತ್ತದೆ.

ಜಂಪ್‌ಸೂಟ್‌ಗಳು

ಎಲ್ಲಾ ರೀತಿಯ ದೇಹಾಕೃತಿಯವರಿಗೆ ಜಂಪ್‌ಸೂಟ್‌ಗಳು ಉತ್ತಮ ಆಯ್ಕೆ ಬಟ್ಟೆಯಾಗಿದೆ. ದಪ್ಪ ಅಥವಾ ಸಣ್ಣ ದೇಹವಾಗಿರಲಿ ಆರಾಮವಾಗಿ ಧರಿಸಬಹುದು. ಚಿಕ್ಕಮಕ್ಕಳನ್ನು ಕರೆದೊಯ್ಯುವಾಗ ಉಡುಪನ್ನು ಸರಿಪಡಿಸಿಕೊಳ್ಳಬೇಕೆಂಬ ಗೋಜಲು ಇದರಲ್ಲಿ ಇರುವುದಿಲ್ಲ.

ಇವುಗಳನ್ನು ನೆನಪಿಡಿ

  • ಅಮ್ಮಂದಿರು ಜೀನ್ಸ್‌ ಪ್ಯಾಂಟ್ ಧರಿಸುವಾಗ ಬಣ್ಣಗಳ ಸಂಯೋಜನೆ ಬಗ್ಗೆ ಹೆಚ್ಚು ಗಮನ ಹರಿಸಿ. ಉದಾಹರಣೆಗೆ ಕಂದುನೀಲಿ ಜೀನ್ಸ್‌ಗೆ ತಿಳಿ ನೀಲಿ ಬಟ್ಟೆಗಳು ಹೆಚ್ಚು ಸೂಕ್ತವೆನಿಸುತ್ತವೆ.

  • ಜೀನ್ಸ್‌ ಧರಿಸಿದಾಗ ಶರ್ಟ್‌ ಮೇಲೆ ಒಂದು ಕೋಟ್‌ ಧರಿಸಿ

  • ನೆನಪಿಡಿ, ಋತುಮಾನಕ್ಕೆ ತಕ್ಕಂತೆ ಜೀನ್ಸ್‌ ಮೇಲೆ ಟಾಪ್‌ಗಳ ಆಯ್ಕೆಯಿರಲಿ. ಜೀನ್ಸ್‌ನ ಹೊಸ ಮಾದರಿ ಜಂಗಿಗ್ಸ್‌ಕೂಡ ಆಯ್ಕೆಯಲ್ಲಿ ಇರಲಿ.

  • ಬೇಸಿಗೆಯಲ್ಲಿ ಕ್ರಾಪ್‌ ಟಾಪ್‌, ಶಾರ್ಟ್‌ ಟಾಪ್‌, ರಫಲ್‌ ಶರ್ಟ್‌ಗಳು ಆಯ್ಕೆಯಾಗಿದ್ದರೆ, ಚಳಿಗಾಲ, ಮಳೆಗಾಲದಲ್ಲಿ ಹೂಡಿಗಳು, ಫುಲ್‌ ಸ್ಲೀವ್‌ ಶರ್ಟ್‌ಗಳು ಉತ್ತಮ ಆಯ್ಕೆಯಾಗಿರುತ್ತದೆ.

  • ಏನನ್ನೇ ಧರಿಸಿದರೂ ಆತ್ಮವಿಶ್ವಾಸದಿಂದ ಇರುವುದು ಬಹುಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.