ಮೀನಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ ... ಹೆಣ್ಣಿನ ಕಣ್ಣುಗಳ ವರ್ಣನೆಗೆ ಕವಿಗಳು ಬಳಸಿರುವ ಪದಗಳಿಗೆ ಲೆಕ್ಕವಿಟ್ಟವರಾರು? ಮೀನಿನಾಕಾರದ ಕಂಗಳ ಒಡತಿ ಮೀನಾಕ್ಷಿಯಾದರೆ, ಜಿಂಕೆಯಂಥ ಕಂಗಳ ಒಡತಿ ಮೃಗನಯನಿ... ಹೀಗೆ ಒಂದೊಂದು ಆಕಾರಕ್ಕೂ ಒಂದೊಂದು ಅರ್ಥಪೂರ್ಣ ಹೆಸರು. ಹಾಗಾದರೆ, ನೀವು ಮೀನಾಕ್ಷಿಯೇ, ಮೃಗನಯನಿಯೇ ಅಥವಾ ಬಟ್ಟಲು ಕಂಗಳ ಒಡತಿಯೇ ಎಂಬುದನ್ನು ಕಂಡುಕೊಳ್ಳೋದು ಹೇಗೆ ಅಂತೀರಾ? ಅದಕ್ಕಾಗಿ ಇಲ್ಲಿವೆ ಕೆಲ ಟಿಪ್ಸ್.
* ನಿಮ್ಮ ಹುಬ್ಬು ಮತ್ತು ಕಣ್ರೆಪ್ಪೆಯ ಮಧ್ಯಭಾಗದಲ್ಲಿ ಹೆಚ್ಚುವರಿ ಜಾಗವಿರದಿದ್ದಲ್ಲಿ ನಿಮ್ಮದು ಸಣ್ಣ ಕಣ್ಣು. ಹುಬ್ಬು ಮತ್ತು ಕಣ್ರೆಪ್ಪೆಯ ಮಧ್ಯಭಾಗದಲ್ಲಿ ಹೆಚ್ಚು ಜಾಗವಿದ್ದಲ್ಲಿ ನಿಮ್ಮದು ಬಾದಾಮಿ ಮತ್ತು ಬಟ್ಟಲು ಕಂಗಳು
*ಕಣ್ಣುಗಳನ್ನು ಅಗಲವಾಗಿ ತೆರೆದಾಗ ನಿಮ್ಮ ಕಣ್ಣುಗುಡ್ಡೆಯು ಎದ್ದು ಕಾಣುವಂತಿದ್ದರೆ ನಿಮ್ಮದು ಬಟ್ಟಲು ಕಂಗಳು ಅಥವಾ ಬಾದಾಮಿ ಆಕಾರದ ಕಂಗಳು ಎಂದರ್ಥ. ಕಣ್ಣುಗುಡ್ಡೆಯ ಭಾಗ ಅಷ್ಟಾಗಿ ಎದ್ದುಕಾಣದೇ ಇದ್ದಲ್ಲಿ ನಿಮ್ಮದು ಸಣ್ಣ ಕಣ್ಣು ಎಂದರ್ಥ
* ವಕಣ್ಣುಗುಡ್ಡೆ ಸುತ್ತ ಬಿಳಿಯ ಭಾಗ ಕಾಣದಿದ್ದಲ್ಲಿ ಅವು ಬಾದಾಮಿಯಾಕಾರದ ಕಂಗಳು
*ಕಣ್ಣುಗುಡ್ಡೆಯ ಸುತ್ತಲೂ ಬಿಳಿಭಾಗ ಹೆಚ್ಚು ಕಾಣುತ್ತಿದ್ದರೆ ಅವು ಬಟ್ಟಲುಕಂಗಳು ಎಂದರ್ಥ
*ಹುಬ್ಬಿನ ಮೇಲ್ಭಾಗಕ್ಕೆ ಅಂಟಿಕೊಂಡಂತೆ ಇದ್ದರೆ, ಹುಬ್ಬು ಮತ್ತು ಕಣ್ಣನಡುವೆ ಹೆಚ್ಚು ಜಾಗವಿರದಿದ್ದಲ್ಲಿ, ಅವಕ್ಕೆ ಸಣ್ಣಕಣ್ಣು ಎಂದರ್ಥ.
*ಹಣೆ ಮತ್ತು ಮೂಗಿಗೆ ಹೊಂದಿ ಕೊಂಡಂತೆಯೇ ಇದ್ದು, ಹಣೆಭಾಗ ಹೆಚ್ಚು ಉಬ್ಬಿದ್ದರೆ ಅವು ಕುಳಿಕಂಗಳು ಎನ್ನಬಹುದು.
*ಕಣ್ಣಿನ ಆಕಾರ ಮೊಗ್ಗಿನಂತೆ ಉದ್ದುದ್ದ ಇದ್ದರೆ ಅವು ಚೂಪುಕಂಗಳು ಎನ್ನಬಹುದು.
*ಹುಬ್ಬಿಗಿಂತಲೂ ಕಣ್ಣಗಳೇ ಹೆಚ್ಚು ಎದ್ದುಕಾಣುವಂತಿದ್ದರೆ ಅವು ದೊಡ್ಡ ಕಂಗಳೆನ್ನಬಹುದು.
* ಬಕಣ್ರೆಪ್ಪೆ ಮತ್ತು ಹುಬ್ಬುಗಳೆರಡೂ ಅಂಟಿಕೊಂಡಂತೆ ಇರುವ ಕಂಗಳಿಗೆ ಕಾಡಿಗೆಯ ಅಲಂಕಾರ ಸಾಕು.
*ಕಣ್ರೆಪ್ಪೆಯೂ ವಿಶಾಲವಾಗಿದ್ದು, ಹುಬ್ಬು ಮತ್ತು ಕಣ್ಣಿನ ನಡುವೆ ಸಾಕಷ್ಟು ಜಾಗವಿದ್ದು, ಕಣ್ಣುಗಳು ಕೇವಲ ಪುಟ್ಟಗೆರೆಯಂತೆ ಕಾಣುತ್ತಿದ್ದರೆ ಅವು ಅತಿ ಸಣ್ಣ ಕಣ್ಣುಗಳೆಂದು ಬಣ್ಣಿಸಬಹುದಾಗಿದೆ.
*ಇಷ್ಟಕ್ಕೂ ಕಣ್ಣಿನ ಆಕಾರದಿಂದಲೇ ಕಣ್ಣಿನಲಂಕಾರ ನಿರ್ಧರಿಸಬೇಕು. ಹಾಗಾಗಿ ಕಣ್ಣಿನ ಆಕಾರ ಮಹತ್ವ ಪಡೆಯುತ್ತದೆ. ಕಣ್ರೆಪ್ಪೆಯ ಜಾಗ ವಿಶಾಲವಾಗಿದ್ದಲ್ಲಿ ಕಣ್ಣಿನಲಂಕಾರ ಮಾಡುವುದು ಸುಲಭವೂ ಹೌದು. ಚಂದವೂ ಹೌದು. ಕಣ್ಣು ಸಣ್ಣದಾಗಿದ್ದಲ್ಲಿ ಕೇವಲ ಐಲೈನರ್ ಮಾತ್ರ ಬಳಸಬೇಕು. ಮಸ್ಕರಾದಿಂದ ಕಣ್ರೆಪ್ಪೆಯನ್ನು ಎತ್ತಬಹುದು. ಕಣ್ರೆಪ್ಪೆಯ ಮೇಲೆ, ಹುಬ್ಬಿನ ಕೆಳಗೆ ಬೆಟ್ಟದಂತಿರುವ ಜಾಗವನ್ನೂ ಅಲಂಕಾರಕ್ಕಾಗಿ ಬಳಸಬಹುದು. ಸಾಧ್ಯವಿದ್ದಷ್ಟೂ ನ್ಯೂಡ್ ಮೇಕಪ್ ಹೊಂದುತ್ತದೆ.
*ಬಾದಾಮಿಯಾಕಾರದ ಕಣ್ಣು ನಿಮಗಿದ್ದಲ್ಲಿ, ಕಣ್ಣಿನಲಂಕಾರಕ್ಕೆ ಹೇಳಿ ಮಾಡಿಸಿದ ಆಕಾರವಿದು. ಕಣ್ರೆಪ್ಪೆಯಿಂದ ಹುಬ್ಬಿನಡಿಯವರೆಗೂ ಬಣ್ಣಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡಬಹುದು. ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಕಣ್ಣಿನಲಂಕಾರ ಮಾಡಿಕೊಳ್ಳಬಹುದು.
ಅಲಂಕಾರವೇನೇ ಇರಲಿ, ಕಣ್ನೋಟ ತೀಕ್ಷ್ಣವಾಗಿರಬೇಕು. ಆತ್ಮ ವಿಶ್ವಾಸದಿಂದ ತುಂಬಿರಬೇಕು. ನಗುತಲಿರಬೇಕು. ಆಗಲೇ ಸಾರ್ಥಕ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.