ಚಳಿಗಾಲಕ್ಕೂ–ಚರ್ಮಕ್ಕೂ ಹಾವು–ಮುಂಗುಸಿ ಸಂಬಂಧ. ಚಳಿಗಾಲದ ಮೂಡ್‌ಗಾಳಿ ಸಣ್ಣಗೆ ಅಡಿ ಇಡುತ್ತಿದ್ದಂತೆ ಚರ್ಮ ಕಳೆಗುಂದಲು ಆರಂಭಿಸುತ್ತದೆ. ಮಳೆಗಾಲದಲ್ಲಿ ಹೊಳೆಯುವ, ಬಿಸಿಲಿಗೆ ತುಸು ಬಾಡಿದಂತೆನಿಸಿದರೂ ಸಣ್ಣ ಕಾಳಜಿಗೆ ಮತ್ತೆ ಉತ್ತೇಜನಗೊಳ್ಳುವ ಮುಖ, ಅದ್ಯಾಕೊ ಚಳಿಗಾಲಕ್ಕೆ ತುಸು ಹೆಚ್ಚೇ ಆರೈಕೆ ಬೇಡುತ್ತದೆ. ಹೀಗಿರುವಾಗ ವಾರಕ್ಕೊಂದರಂತೆ ಎದುರಾಗುವ ಮದುವೆಗಳಿಗೆ ಹೇಗೆ ತಯಾರಾಗುವುದು? ನಾಲ್ಕು ಜನರೊಂದಿಗೆ ಬೆರೆತು ಮಾತಾಡುವಾಗ ಒಳಗೊಳಗೇ ಕುಗ್ಗುವಂತೆ ಮಾಡುವ ಮುಖದ ಒಡಕುಗಳನ್ನು ಮುಚ್ಚಿಕೊಳ್ಳುವುದು ಹೇಗೆ?
ಹೌದು, ವಧು–ವರನ ಸಂಬಂಧಿಕರೇ ಆಗಲಿ, ದೂರದ ಬಂಧುವೇ ಇರಲಿ… ಮದುವೆ ದಿನ ಎಲ್ಲರಲ್ಲಿ ಎದ್ದುಕಾಣಬೇಕು ಎಂದೆನಿಸುವುದು ಸಹಜವೇ. ಈ ನೋಟಕ್ಕೆ ನಿಮ್ಮ ಚರ್ಮ ಆರೋಗ್ಯಕರವಾಗಿ ಕಾಣುವಂತೆ ಮತ್ತು ಸುಕ್ಕು–ಬಿರುಕುಗಳಿಲ್ಲದೇ ಪ್ರಜ್ವಲಿಸುವಂತೆ ಕಂಗೊಳಿಸುವುದು ಬಹಳ ಮುಖ್ಯ. ಅದಕ್ಕಾಗಿ ನಿಮ್ಮ ತಯಾರಿ ಹೇಗಿರಬೇಕು. ಬೆಲ್ಲಿಡೇಮ್‌ನ ಮೇಕಪ್ ಆರ್ಟಿಸ್ಟ್ ದೀಪಾ ಹೊಳಿಮಠ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಚಳಿಗಾಲ ಅಂದರೆ ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಥಂಡಿ ಹವಾ. ವಾತಾವರಣದಲ್ಲಿ ಶುಷ್ಕತೆಯಿಂದಾಗಿ ತ್ವಜೆ ಕಪ್ಪಾಗುತ್ತದೆ ಮತ್ತು ಒರಟು–ಒರಟಾಗಿ ಕಾಣಿಸುತ್ತದೆ. ಸೂಕ್ತ ಕಾಳಜಿ ವಹಿಸದೇ ಇದ್ದರೆ ಯಾವುದೇ ಮೇಕಪ್ ಸಹ ನಿಮ್ಮ ತ್ವಜೆಯ ಅಂದವನ್ನು ಹೆಚ್ಚಿಸದು. ಬದಲಿಗೆ ಮತ್ತಷ್ಟು ಅಂದಗೇಡಿಯನ್ನಾಗಿ ಮಾಡುತ್ತದೆ. ಅದಕ್ಕಾಗಿ ನೀವು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಭಾರತೀಯರು ಮದುವೆಯಂತಹ ಸಮಾರಂಭಗಳಲ್ಲಿ ಗಾಢವಾದ ಬಣ್ಣಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಗಾಢ ಬಣ್ಣದ ರೇಶ್ಮೆಯಂತಹ ಬಟ್ಟೆಗಳನ್ನು ಧರಿಸುವವರು ಹೆಚ್ಚು. ಇಂತಹ ದಿರಿಸಿಗೆ ಹೊಂದಿಕೆಯಾಗಲು ಸರಳ ಮೇಕಪ್ ಸೂಕ್ತ. ಮೇಕಪ್ ಆರಂಭಿಸುವ ಮುನ್ನ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
ಗುಣಮಟ್ಟದ ಆಯ್ಕೆ
ಮುಖದ ಮೇಲೆ ಮೇಕಪ್ ಒಂದೇ ಸಮ ಹರಡಿಕೊಳ್ಳಲು ಮತ್ತು ಹೊಳಪು ಮೂಡಲು ಈ ಕ್ರಮ ಬಹಳ ಮುಖ್ಯ. ನಿಮ್ಮ ಮುಂದಿನ ಎಲ್ಲಾ ಮೇಕಪ್ ಕೌಶಲ ಈ ಮಾಶ್ಚರೈಸರ್ ಮೇಲೆ ಅವಲಂಭಿಸಿರುವುದು. ಮೃದುವಾದ ಅನುಭವ ಮತ್ತು ಒಂದೇ ತರದ ಟೋನ್‌ಗಾಗಿ ಈ ಚಳಿಗಾಲಕ್ಕೆ ಮಾಶ್ಚರೈಸರ್ ಫೌಂಡೇಶನ್ ಉತ್ತಮ ಆಯ್ಕೆ. ನೀವು ತೊಟ್ಟ ಬಟ್ಟೆ, ಚರ್ಮದ ಪ್ರಕಾರ, ನಿಮ್ಮ ಮೈಬಣ್ಣಕ್ಕೆ ಹೊಂದುವಂತಹಫೌಂಡೇಶನ್, ಐಶ್ಯಾಡೊ, ಐಲೈನರ್ ಇರಲಿ. ಕೆಂಪು, ಹಳದಿ, ಹಸಿರು, ಮರೂನ್, ಪಿಂಕ್, ನೀಲಿಯಂತಹ ಗಾಢ ಬಣ್ಣದ ಲೆಹೆಂಗಾ, ಗಾಘ್ರಾ, ಸೀರೆಗಳಿದ್ದಾಗ ಮುಖದ ಮೇಕಪ್‌ಸಾಧ್ಯವಾದಷ್ಟುಸೌಮ್ಯವಾಗಿರಲಿ. ಆದರೆ ಲಿಪ್‌ಸ್ಟಿಕ್ ಗಾಢವಾಗಿರಲಿ, ಬೋಲ್ಡ್ ಕಲರ್ ಐ ಲೈನರ್, ಶ್ಯಾಡೊ, ಮಸ್ಕರಾ ಬಳಸುವ ಮೂಲಕ ಕಣ್ಣಿನ ಅಂದಕ್ಕೆ ಹೆಚ್ಚು ಒತ್ತು ಕೊಡಬಹುದು. ಗೋಲ್ಡನ್ ಐಶ್ಯಾಡೊ ಯಾವುದೇ ಬಣ್ಣದ ಉಡುಗೆಗೂ ಸೈ.
ಮಾಶ್ಚರೈಸರ್ ಮರೆಯಬೇಡಿ
ಯಾವುದೇ ಕಾಲವಿರಲಿ, ಅತ್ಯುತ್ತಮ ಮಾಶ್ಚರೈಸರ್ ಬಳಸುವುದನ್ನು ಮರೆಯಬೇಡಿ. ಕೈ–ಕಾಲು–ಮುಖಕ್ಕೆ ಒಂದೇ ಮಾಶ್ಚರೈಸರ್ ಬಳಸುವವರೂ ಉಂಟು. ಇದು ತಪ್ಪು. ದೇಹದ ಇತರ ಭಾಗಗಳಿಗಿಂತ ಮುಖ ಹೆಚ್ಚು ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಆದ್ದರಿಂದ ದೇಹಕ್ಕೆ ಹಚ್ಚುವ ಮಾಶ್ಚರೈಸರ್ ಅನ್ನೇ ಮುಖಕ್ಕೆ ಹಚ್ಚಬೇಡಿ. ಅಂದಹಾಗೆ ಕೇವಲ ಮಾಶ್ಚರೈಸರ್ ಒಂದೇ ಬಳಸಿದರೆ ಸಾಲದು. ಯುವಿ ಕಿರಣಗಳ ಪ್ರಭಾವವನ್ನು ತಗ್ಗಿಸಲು ಸನ್‌ಸ್ಕ್ರೀನ್ ಕೂಡ ಅಗತ್ಯ. ಅನೇಕರು ತಾವು ಎ.ಸಿ. ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಸನ್‌ಸ್ಕ್ರೀನ್ ಅಗತ್ಯವಿಲ್ಲ ಅಂದುಕೊಳ್ಳುತ್ತಾರೆ. ಆದರೆ ಬಿಸಿಲಿನಲ್ಲಿ ಓಡಾಡುವವರು ಮಾತ್ರವಲ್ಲ, ಮನೆಯಲ್ಲಿರುವವರು, ಕಚೇರಿಯಲ್ಲಿ ಕೂತು ಕೆಲಸ ಮಾಡುವವರೂ ಸನ್‌ಸ್ಕ್ರೀನ್ ಬಳಸುವುದನ್ನು ಮರೆಯಬಾರದು.
ಆ್ಯಂಟಿ ಟ್ಯಾನ್ ಈಗ ಬೇಡ
ಪಾರ್ಲರಿಗೆ ಹೋದಾಗ ಹುಷಾರಾಗಿರಿ. ಮೂಡ್ ಗಾಳಿಯ ಜೊತೆಗೆ ಬಿಸಿಲೂ ಇರುವುದರಿಂದ ಮುಖ ಕಪ್ಪಾಗಿ ಕಳಾಹೀನವಾಗಿ ಕಾಣುವುದು ಸಾಮಾನ್ಯ. ಆದರೆ ಪಾರ್ಲರಿಗೆ ಹೋದಾಗ ಫೇಶಿಯಲ್ ಜೊತೆ ಆ್ಯಂಟಿ ಟ್ಯಾನ್ (Anti Tan) ಮಾಡುತ್ತಾರೆ. ಆದರೆ ಈ ಹವಾಮಾನಕ್ಕೆ ಇದುಅನಗತ್ಯ. ಅದರಲ್ಲೂ ಒಣ ಚರ್ಮದವರಿಗಂತೂ ಇದು ತದ್ವಿರುದ್ಧ. ಅದು ಚರ್ಮದ ತೇವಾಂಶವನ್ನು ತೆಗೆದುಹಾಕುವುದರಿಂದ ಚರ್ಮ ಮತ್ತಷ್ಟು ಶುಷ್ಕವಾಗುತ್ತದೆ. ಫ್ರೂಟ್ ಫೇಶಿಯಲ್, ಕುಕುಂಬರ್ ಫೇಶಿಯಲ್ ಉತ್ತಮ. ಈ ಹವಾಮಾನಕ್ಕೆ ಯಾವುದೇ ಕಾರಣಕ್ಕೂ ಬ್ಲೀಚ್ ಮತ್ತು ಮೆಟಾಲಿಕ್ ಫೇಶಿಯಲ್‌ಗೆ ಹೋಗಬೇಡಿ.ಸಮಾರಂಭಗಳು ಹಗಲು ಹೊತ್ತಿನಲ್ಲಿದ್ದರೆ ನೈಸರ್ಗಿಕ ನೋಟಕ್ಕಾಗಿ ಅತ್ಯಂತ ಕಡಿಮೆ ಮೇಕಪ್ ಆಯ್ಕೆ ಮಾಡಿಕೊಳ್ಳಿ. ರಾತ್ರಿಯ ಸಮಾರಂಭಗಳಾದರೆ, ಗಾಢವಾದ ಮೇಕಪ್ ಪರವಾಗಿಲ್ಲ
ದೀಪಾ ಹೊಳಿಮಠ, ಮೇಕಪ್ ಆರ್ಟಿಸ್ಟ್, ಬೆಲ್ಲಿಡೇಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.