ADVERTISEMENT

ಲೊರೆಟ್ಟಾ ಜತೆ ಜುಂಬಾ ಸಂಭ್ರಮ

ಮಂಜುಶ್ರೀ ಎಂ.ಕಡಕೋಳ
Published 23 ನವೆಂಬರ್ 2018, 19:31 IST
Last Updated 23 ನವೆಂಬರ್ 2018, 19:31 IST
   

ಮೈಮನಕ್ಕೆ ಹಿತವಾಗುವ ವ್ಯಾಯಾಮ ಎನ್ನುವ ಕಾರಣಕ್ಕಾಗಿ ಜನಪ್ರಿಯವಾಗಿರುವ ಜುಂಬಾ ಬರೀ ನೃತ್ಯ ಪ್ರಕಾರವಾಗಿಷ್ಟೆ ಉಳಿದಿಲ್ಲ. ಅದೀಗ ಫಿಟ್‌ನೆಸ್‌ ಪ್ರಕಾರವಾಗಿಯೂ ಯುವಜನರ ನಡುವೆ ಜನಪ್ರಿಯ. ಭಿನ್ನ ಸಂಸ್ಕೃತಿ, ಜನರು ಇರುವ ಬೆಂಗಳೂರು ಈಗ ಫಿಟ್‌ನೆಸ್ ರಾಜಧಾನಿ ಎಂಬ ಹೆಸರಿಗೂ ಖ್ಯಾತಿಯಾಗಿದೆ. ನಗರದಲ್ಲಿ ದಿನೇದಿನೇ ಜನಪ್ರಿಯವಾಗುತ್ತಿರುವ ಜುಂಬಾ ಫಿಟ್‌ನೆಸ್ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ನಗರಕ್ಕೆ ಬರುತ್ತಿದ್ಧಾರೆ ಜುಂಬಾ ಸೆಲೆಬ್ರಿಟಿ ಲೊರೆಟ್ಟಾ ಬೇಟ್ಸ್.

ಶನಿವಾರ (ನ. 24) ವಿಆರ್ ಬೆಂಗಳೂರು ಮಾಲ್‌ನಲ್ಲಿ ನಡೆಯುವ ಜುಂಬಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಲೊರೆಟ್ಟಾಳ ಫಿಟ್‌ನೆಸ್ ರಹಸ್ಯ ಅರಿಯಲು ನಗರದ ಜುಂಬಾ ಪ್ರಿಯರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಎರಡು ಮುದ್ದಾದ ಮಕ್ಕಳ ತಾಯಿಯಾಗಿರುವ ಲೊರೆಟ್ಟಾಳ ಬಳಕುವ ದೇಹದ ಹಿಂದಿನ ಗುಟ್ಟು ಜುಂಬಾ ಫಿಟ್‌ನೆಸ್. ಅಂತರರಾಷ್ಟ್ರೀಯ ಮಟ್ಟದ ಜುಂಬಾ ಫಿಟ್‌ನೆಸ್ ಮಾಸ್ಟರ್ ಮತ್ತು ಎಜುಕೇಷನಲ್ ಟ್ರೈನರ್ ಅಗಿರುವ ಲೊರೆಟ್ಟಾಳ ತರಗತಿಗಳು ಜಾಗತಿಕವಾಗಿಯೂ ಬಲು ಜನಪ್ರಿಯ.

‘ಬೆಂಗಳೂರು ಜುಂಬಾ ಪ್ರಿಯರ ತಾಣವಾಗಿರುವ ಹಿನ್ನೆಲೆಯಲ್ಲಿ ಜುಂಬಾ ಕುರಿತು ಮಾರ್ಗದರ್ಶನ ನೀಡಲು ಲೊರೆಟ್ಟಾ ಅವರನ್ನು ಆಹ್ವಾನಿಸಲಾಗಿದೆ’ ಎನ್ನುತ್ತಾರೆ ಜುಂಬಾ ಇನ್‌ಸ್ಟ್ರಕ್ಟರ್ ನಮ್ರತಾ ವರ್ಮಾ.‌

ADVERTISEMENT

‘ಜುಂಬಾ ಯೋಗದಷ್ಟೇ ಜನಪ್ರಿಯವಾಗುತ್ತಿದೆ. ಐದು ವರ್ಷದ ಮಗುವಿನಿಂದ ಹಿಡಿದು ಎಪ್ಪತ್ತೈದು ವರ್ಷದ ವೃದ್ಧರವರೆಗೆ ಜುಂಬಾದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಇದು ಒಂದು ರೀತಿಯಲ್ಲಿ ಫನ್ ಅಂಡ್ ಫಿಟ್‌ನೆಸ್. ಇದರಲ್ಲಿ ವರ್ಕೌಟ್ ಮಾಡೋದು ಗೊತ್ತಾಗುವುದೇ ಇಲ್ಲ. ಆದರೆ, ಜುಂಬಾವನ್ನು ಪ್ರಮಾಣೀಕೃತ ಟ್ರೈನರ್‌ಗಳಿಂದಲೇ ಕಲಿಯಬೇಕೇ ಹೊರತು ಯುಟ್ಯೂಬ್ ನೋಡಿ ಅಲ್ಲ’ ಎನ್ನುತ್ತಾರೆ ಅವರು.

‘ಜುಂಬಾ ಫಿಟ್‌ನೆಸ್ ಅನ್ನು ಆವಿಷ್ಕರಿಸಿದ ಕೊಲಂಬಿಯನ್ ಡಾನ್ಸರ್ ಆಲ್ಬರ್ಟೊ ಬೆಟೊ ಅವರಿಂದ ನಾನು ಜುಂಬಾ ತರಬೇತಿ ಪಡೆದಿದ್ದೇನೆ. ಬೆಟೊ www.zumba.com ಅನ್ನು ಸ್ಥಾಪಿಸಿದ್ದು ಅಲ್ಲಿ ಜುಂಬಾ ತರಬೇತಿ, ಶಿಕ್ಷಕರ ಬಗ್ಗೆ ವಿವರವಾದ ಮಾಹಿತಿಗಳಿವೆ. ನೀವಿರುವ ಜಾಗಕ್ಕೆ ಹತ್ತಿರದಲ್ಲಿ ಜುಂಬಾ ತರಬೇತಿ ಎಲ್ಲಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನೂ ಪಡೆಯಬಹುದು. ನೀವು ಪಡೆಯುತ್ತಿರುವ ಜುಂಬಾ ತರಬೇತಿ ಸರಿಯಾಗಿದೆಯೇ ಇಲ್ಲವೇ, ನಿಮ್ಮ ಜುಂಬಾ ಟ್ರೈನರ್‌ ಪ್ರಮಾಣಪತ್ರ ಪಡೆದಿದ್ದಾನೆಯೇ ಇಲ್ಲವೇ ಎಂಬುದನ್ನೂ ಅಲ್ಲಿ ಪರಿಶೀಲಿಸಬಹುದು. ಜುಂಬಾ ಅನ್ನೋದು ಬರೀ ನೃತ್ಯ–ಫಿಟ್‌ನೆಸ್ ಪ್ರಕಾರವಷ್ಟೇ ಅಲ್ಲ. ಅದೊಂದು ಕಂಪನಿ ಕೂಡಾ’ ಎನ್ನುವುದು ಅವರ ವಿವರಣೆ.

ಲೊರೆಟ್ಟಾ ಬೇಟ್ಸ್

ನ. 24ರಂದು ಲೊರೆಟ್ಟಾ ನಡೆಸಲಿರುವ ಜುಂಬಾ ಕಾರ್ಯಾಗಾರದಲ್ಲಿ ದೇಶ–ವಿದೇಶಗಳ 600 ಜನರು ಭಾಗವಹಿಸುತ್ತಿರುವುದು ವಿಶೇಷ. 70 ದೇಶಗಳಲ್ಲಿ ಜುಂಬಾವನ್ನು ಜನಪ್ರಿಯವಾಗಿಸಿರುವ ಲೊರೆಟ್ಟಾಳ ಸಲಹೆ, ಮಾರ್ಗದರ್ಶನ ಪಡೆಯಲು ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಜುಂಬಾ ಮಾಸ್ಟರ್ ಕ್ಲಾಸ್ ವಿತ್ ಲೊರೆಟ್ಟಾ ಬೇಟ್ಸ್‌: ಸ್ಥಳ– ಸ್ಕೈ ಡೆಕ್, ವಿಆರ್ ಬೆಂಗಳೂರು, ವೈಟ್‌ಫೀಲ್ಡ್‌ ಮುಖ್ಯರಸ್ತೆ, ದೇವಸಂದ್ರ ಇಂಡಸ್ಟ್ರೀಯಲ್ ಎಸ್ಟೇಟ್, ಮಹದೇವಪುರ. ನ.24, ಸಂಜೆ 6. ಟಿಕೆಟ್ ಬೆಲೆ ₹ 1 ಸಾವಿರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.