ADVERTISEMENT

ಅಲ್ಪ ಬಂಡವಾಳ --– ಕೈತುಂಬಾ ಸಂಪಾದನೆ

ಸಣ್ಣ ಅತಿ ಸಣ್ಣ ಕೈಗಾರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ಅಲ್ಪ ಬಂಡವಾಳ --– ಕೈತುಂಬಾ ಸಂಪಾದನೆ
ಅಲ್ಪ ಬಂಡವಾಳ --– ಕೈತುಂಬಾ ಸಂಪಾದನೆ   

‘ಫ್ಯಾಕ್ಟರಿ ಅಂದ್ರೆ ಹುಡುಗಾಟ ಅಲ್ಲ.  ಕೋಟಿಗಟ್ಟಲೆ ಬಂಡವಾಳ, ವಿಶಾಲವಾದ ಜಾಗ, ನುರಿತ ಸಿಬ್ಬಂದಿ, ಯಂತ್ರೋಪಕರಣಗಳು, ಉತ್ತಮ ಮಾರುಕಟ್ಟೆ.... ಇನ್ನೂ ಏನೇನೆಲ್ಲವೂ ಬೇಕು. ಇದೆಲ್ಲ ನಮ್ಮಂತಹ ಬಡಪಾಯಿಗಳಿಂದ ಆಗೋ ಕೆಲಸ ಅಲ್ಲ. ಆದರೆ ಸಣ್ಣದೊ, ಇಲ್ಲವೇ ಅತಿ ಸಣ್ಣ  ಗಾತ್ರದ್ದೋ ಆದ ಕೈಗಾರಿಕೆಯಾದರೆ ಇದೆಲ್ಲ ಸಮಸ್ಯೆಯೇ ಅಲ್ಲ. ಸ್ವಲ್ಪ ರಿಸ್ಕ್‌ ತಗೊಂಡರೆ ಸಾಕು. ನಿಜಕ್ಕೂ ಅಲ್ಪ ಬಂಡವಾಳದಿಂದ ದೊಡ್ಡ ಲಾಭ ತರುವ ಕಾಮಧೇನು ಈ ಉದ್ಯಮ’....

ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಮೋಟಾರ್‌ ರಿವೈಡಿಂಗ್‌ ಕಾಯಕದಲ್ಲಿ ನಿರತ ಮುರುಗನ್‌ ಆಡಿದ ಆತ್ಮವಿಶ್ವಾಸದ ಮಾತುಗಳಿವು.

ನಿಜ, ನಮ್ಮಲ್ಲಿ ಕೃಷಿ ಬಿಟ್ಟರೆ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಅತಿಸಣ್ಣ, ಸಣ್ಣ ಪ್ರಮಾಣದ ಉದ್ಯಮಗಳ (ಮೈಕ್ರೊ, ಸ್ಮಾಲ್‌ ಎಂಟರ್‌ಪ್ರೈಸರ್ಸ್‌–ಎಂಎಸ್‌ಇ) ವಲಯ ಇಂದು ಭರವಸೆಯ ಕ್ಷೇತ್ರ ಎನಿಸಿದೆ. ವ್ಯಾಪಾರ ಇಲ್ಲವೆ ಉದ್ಯಮ ರಂಗದಲ್ಲಿ ಹೆಸರು ಮಾಡಿ ಭಾರಿ ಕೈಗಾರಿಕೆಗಳಾಗಿ ಬೆಳೆದಿರುವ ಕೈಗಾರಿಕೆಗಳಲ್ಲಿ ಬಹುತೇಕ  ಉದ್ಯಮಗಳು ಶುರುವಾಗಿದ್ದು ಸಣ್ಣ ಕೈಗಾರಿಕೆಗಳಾಗಿಯೇ. ಸಣ್ಣ ಇಲ್ಲವೇ ಅತಿ ಸಣ್ಣ ಕೈಗಾರಿಕೆಗಳ ವಹಿವಾಟು ಹೆಚ್ಚುತ್ತಾ ಹೋದಂತೆ ಅವುಗಳನ್ನು ಮಧ್ಯಮ ಪ್ರಮಾಣದ ಉದ್ಯಮಗಳೆಂದೂ, ಆನಂತರ ಬೃಹತ್‌ ಕೈಗಾರಿಕೆಗಳೆಂದೂ ಗುರುತಿಸಲಾಗುತ್ತದೆ.

ಸ್ವಲ್ಪ ಎಚ್ಚರವಹಿಸಿ ಹೆಜ್ಜೆ ಇಟ್ಟಲ್ಲಿ ಖಂಡಿತ ಈ ಕ್ಷೇತ್ರ ನಂಬಿದವರಿಗೆ ಕೈಕೊಡದು, ಅಂದರೆ, ನಷ್ಟ ಉಂಟು ಮಾಡದು.
ಹಾಗಾದರೆ ಅತಿ ಸಣ್ಣ, ಇಲ್ಲವೇ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಬೇಕಾದ ಅರ್ಹತೆ ಏನು? ಬಂಡವಾಳ ಎಷ್ಟು ಬೇಕು? ಸಿಬ್ಬಂದಿ ಸಂಖ್ಯೆ ಎಷ್ಟಿರಬೇಕು? ಯಾವ ಯಾವ ಯಂತ್ರೋಪಕರಣಗಳ ಅಗತ್ಯ ಎಷ್ಟಿದೆ? ಹಾಗೂ ಸರ್ಕಾರದಿಂದ ಯಾವ ರೀತಿಯ ನೆರವು, ಅಂದರೆ ಸಬ್ಸಿಡಿ, ತೆರಿಗೆ ರಿಯಾಯ್ತಿ, ಕಡಿಮೆ ಬೆಲೆಗೆ ಜಾಗ ಸಿಗುತ್ತದೆ. ನಂತರದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇರುವ ಮಾರುಕಟ್ಟೆ ಎಲ್ಲಿದೆ? ಸಂಸ್ಥೆಯ ಬೆಳವಣಿಗೆ ಹೇಗೆ? ಉತ್ತಮ ಭವಿಷ್ವ ಇದೆಯೇ? ಎಂಬ ಮಾಹಿತಿಗಳೆಲ್ಲವೂ ಇಲ್ಲಿವೆ.

ಯಾರೂ ಆರಂಭಿಸಬಹುದು
ಈಗ ಯಾವುದೇ ಕೆಲಸಕ್ಕಾಗಲೀ, ಉದ್ಯಮ ಆರಂಭಿಸಲಾಗಲೀ, ಸೇವಾ ಕ್ಷೇತ್ರ ಪ್ರವೇಶಕ್ಕಾಗಲೀ ಕನಿಷ್ಠ ಮಟ್ಟದ ಕ್ವಾಲಿಫಿಕೇಶನ್‌ ಅಂದರೆ ಅರ್ಹತೆ ಇರಲೇಬೇಕು. ಆದರೆ ‘ಎಂಎಸ್‌ಇ’ ಅರ್ಥಾತ್‌ ಅತಿಸಣ್ಣ ಹಾಗೂ ಸಣ್ಣ ಉದ್ಯಮ ಆರಂಭಿಸಲು ಇಂತಹ ಯಾವುದೇ ವಿದ್ಯಾರ್ಹತೆ ಅಗತ್ಯ ಇಲ್ಲ. ಇಲ್ಲಿ ಬೇಕಾಗಿರುವುದು ಅನುಭವ ಅಥವಾ ಅನುಭವಿಗಳ ಮಾರ್ಗದರ್ಶನ ಇಲ್ಲವೇ ಪರಿಣತರಿಂದ ಪಡೆದ ತರಬೇತಿ. ಉದ್ಯಮಶೀಲ ಪ್ರವೃತ್ತಿ ಇರುವ, ಸವಾಲುಗಳನ್ನು ಎದುರಿಸಿ ಮುಂದೆ ನುಗ್ಗುವಂತಹ ಛಲದ ಸ್ವಭಾವವಿರುವ  ಯಾರು ಬೇಕಾದರೂ ಈ ‘ಎಂಎಸ್‌ಇ’ ಕ್ಷೇತ್ರ ಪ್ರವೇಶಿಸಬಹುದಾಗಿದೆ.

ಕನಿಷ್ಠ ಬಂಡವಾಳ?
ಈ ಅತಿಸಣ್ಣ ಹಾಗೂ ಸಣ್ಣ ಉದ್ಯಮ ಕ್ಷೇತ್ರದಲ್ಲಿ ಒಂದು ಸಂಸ್ಥೆ ಅಥವಾ ಕೈಗಾರಿಕೆ ಆರಂಭಿಸಲು ಕೋಟ್ಯಂತರದಷ್ಟು ದೊಡ್ಡ ಲೆಕ್ಕದಲ್ಲಿ ಹಣವೇನೂ ಬೇಕಿಲ್ಲ. ಮನೆ ಮಂದಿ ಉಳಿಸಿದ ಸಾವಿರಾರು ಇಲ್ಲವೇ ಲಕ್ಷ ರೂಪಾಯಿ ಇದ್ದರೂ ಸಾಕು, ಮೊದಲಿಗೆ ಅತಿಸಣ್ಣ  ಉದ್ಯಮ (ಮೈಕ್ರೊ ಎಂಟರ್‌ಪ್ರೈಸ್‌) ಆರಂಭಿಸಿಬಿಡಬಹುದು. ಅದರಲ್ಲೂ ವಾಸದ ಮನೆಯಲ್ಲೇ ನಡೆಸಬಹುದಾದ ಅಥವಾ ಉತ್ಪಾದಿಸಬಹುದಾದ ಅತಿ ಸಣ್ಣ ಕೈಗಾರಿಕೆಗೆ ಕೆಲವೇ ಸಾವಿರದಷ್ಟು ಬಂಡವಾಳವಾದರೂ ಸಾಕು. ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವ ಅಗತ್ಯವೂ ಅಷ್ಟಾಗಿ ಬರುವುದಿಲ್ಲ.


‘ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ’ (ಕೆಎಸ್‌ಎಫ್‌ಸಿ), ಸರ್ಕಾರಿ ಸ್ವಾಮ್ಯದ ಅಥವಾ ಖಾಸಗಿ ಬ್ಯಾಂಕುಗಳು, ಉದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿಯೇ ಆರಂಭಗೊಂಡ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳೂ ಈ ಅತಿಸಣ್ಣ, ಸಣ್ಣ ಉದ್ಯಮಗಳಿಗೆ ನಿಗದಿತ ಅವಧಿ ಲೆಕ್ಕದಲ್ಲಿ ಸಾಲ ನೀಡುತ್ತವೆ. ಸಣ್ಣ ಕೈಗಾರಿಕೆ ಆರಂಭಿಸುವವರಿಗಾದರೆ ₨1 ಕೋಟಿವರೆಗೂ ಖಾತರಿ ಇಲ್ಲದೇ ಸಾಲ ನೀಡುವಂತಹ ಯೋಜನೆಗಳೂ ಇವೆ. ಯಂತ್ರೋಪಕರಣ ಖರೀದಿಸಲು ಸಾಲ ನೀಡುವುದರ ಜತೆಗೇ ಉದ್ಯಮದ ಸಾಮರ್ಥ್ಯ ಹೆಚ್ಚಿಸಿ ಆಧುನಿಕರಣಗೊಳಿಸಲೂ ಸಹ ‘ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌’ (ಎಸ್‌ಐಡಿಬಿಐ) ಶೇ 15ರ ಸಬ್ಸಿಡಿ ದರದಲ್ಲಿ ಸಾಲ ನೀಡುತ್ತದೆ.

ಮನೆಯವರೇ ಕೆಲಸಗಾರರು

ಮೇಣದ ಬತ್ತಿ, ಉಪ್ಪಿನಕಾಯಿ ತಯಾರಿಕೆ­ಯಂತಹ ಅತಿ ಸಣ್ಣ ಕೈಗಾರಿಕೆಗಳನ್ನು ಬಹಳಷ್ಟು ಕಡೆ ಮನೆಯ ಸದಸ್ಯರೇ ಒಟ್ಟಾಗಿ ಸೇರಿಕೊಂಡು ನಡೆಸುವುದೂ ಇದೆ. ಹಾಗಾಗಿ ನುರಿತ ಸಿಬ್ಬಂದಿ ಅಥವಾ ಕಾರ್ಮಿಕರ ವಿಚಾರ ಇಲ್ಲಿ ದೊಡ್ಡ ಸಮಸ್ಯೆಯೇ ಅಲ್ಲ. ಅತಿ ಸಣ್ಣ ಕೈಗಾರಿಕೆಗಳಲ್ಲಿ ಸಾಮಾನ್ಯವಾಗಿ ಸಿಬ್ಬಂದಿ ಸಂಖ್ಯೆ ಹೆಚ್ಚೆಂದರೆ 5ರಿಂದ 10 ಜನ ಮಾತ್ರ.

ಅಗತ್ಯವಿರುವ ಸಿಬ್ಬಂದಿಗಳ ಸಂಖ್ಯೆ ಕನಿಷ್ಠವಷ್ಟೇ ಅಲ್ಲ, ಅದರಲ್ಲಿ ಎಲ್ಲರೂ ಅತಿ ಕುಶಲ ಕಾರ್ಮಿಕರೇ ಆಗಿರಬೇಕು ಎಂದೇನೂ ಇಲ್ಲ. ಸಂಬಂಧಿಸಿದ ಕೈಗಾರಿಕೆ  ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರೂ ಸಾಕು. ಕೆಲವು ಸಣ್ಣ ಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳ ಪ್ರಮಾಣಕ್ಕೆ ಅನುಗುಣವಾಗಿ ಒಟ್ಟು ಕಾರ್ಮಿಕರ ಸಂಖ್ಯೆ ನೂರರವರೆಗೂ ಇರುತ್ತದೆ.

ಮನೆಯಲ್ಲೇ ಸ್ಥಳಾವಕಾಶ
‘ಎಂಎಸ್‌ಇ’ಗಳ ಆರಂಭಕ್ಕೆ ಬಹಳ ವಿಶಾಲವಾದ ಕೈಗಾರಿಕಾ ಷೆಡ್‌, ಇಲ್ಲವೇ ದೊಡ್ಡ ಜಾಗದ ಅಗತ್ಯವೇನೂ ಇರುವುದಿಲ್ಲ. ಉಪ್ಪಿನಕಾಯಿ ಇಲ್ಲವೆ ಹಪ್ಪಳ, ಎಲೆಕ್ಟ್ರಿಕಲ್‌ ಸ್ವಿಚ್‌, ಪ್ರಿಟಿಂಗ್‌ ಅಂಡ್‌ ಬೈಂಡಿಗ್‌, ಸ್ಕ್ರೀನ್‌ ಪಿಂಟಿಂಗ್‌, ಮೈ ಉಜ್ಜುವ, ಬಟ್ಟೆ ತೊಳೆಯುವ ಬ್ರಷ್‌ ಮೊದಲಾದವನ್ನು ತಯಾರಿಸು­ವಂತಹ ಉದ್ಯಮ ಸಂಸ್ಥೆಗಳಿಗೆ ಆರಂಭದಲ್ಲಿ ವಾಸವಿರುವ ಮನೆಯಲ್ಲೇ ಜಾಗ ಮಾಡಿಕೊಡ­ಬಹುದು. ನಂತರ ಉದ್ಯಮ ಚೆನ್ನಾಗಿ ನಡೆದರೆ ಸ್ವಲ್ಪ ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸಿಕೊಳ್ಳಬಹು­ದಾಗಿದೆ.

ಆದರೆ ಎಲ್ಲ ಉತ್ಪನ್ನಗಳನ್ನು ಮನೆಯಲ್ಲೇ ತಯಾರಿಸಲು ಆಗದು. ಇದಕ್ಕಾಗಿ ಕೈಗಾರಿಕಾ ವಸಾಹತುಗಳಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಕೈಗಾರಿಕಾ ನಿವೇಶನ ಇಲ್ಲವೆ ಮೂಲಸೌಕರ್ಯಗಳನ್ನು ಒಳಗೊಂಡ  ವಿವಿಧ ಅಳತೆಯ ಷೆಡ್‌ಗಳನ್ನು ಒದಗಿಸುತ್ತದೆ.
ಆದರೆ, ಇಲ್ಲಿ ಎಲ್ಲರಿಗೂ ಜಾಗ ಸಿಗುತ್ತದೆ ಎನ್ನುವ ಖಾತರಿ ಇಲ್ಲ. ಆಗ ಖಾಸಗಿಯಾಗಿಯೂ  ಅನುಕೂಲವಿದ್ದೆಡೆ ಸ್ಥಳಾವಕಾಶ ಮಾಡಿಕೊಳ್ಳಬಹುದು.

‘ಕೆಎಸ್‌ಎಸ್‌ಐಡಿಸಿ’ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಇಂತಹ 160 ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿ­ಪಡಿಸಿದೆ. 234 ದಾಸ್ತಾನು ಮಳಿಗೆಗ­ಳನ್ನೂ(ಗೋದಾಮುಗಳನ್ನು) ಈ ಸಂಸ್ಥೆ ನಿರ್ಮಿಸಿದೆ.

ಕೈಗಾರಿಕಾ ಷೆಡ್‌ಗಳನ್ನು ಒದಗಿಸುವುದರ ಜತೆಗೇ ಅಗತ್ಯ ಕಚ್ಚಾ ಸಾಮಗ್ರಿಗಳನ್ನೂ ‘ಕೆಎಸ್‌ಎಸ್‌ಐಡಿಸಿ’ ಒದಗಿಸುತ್ತಿದ್ದು, ಇದಕ್ಕಾಗಿ ವಿವಿಧೆಡೆ 24 ಡಿಪೊಗಳನ್ನು ನೆಲೆಗೊಳಿಸಿದೆ. ಸರ್ಕಾರದಿಂದ ನಿರ್ಮಿಸಲಾದ ಕೈಗಾರಿಕಾ ವಸಾಹತುಗಳ ಜತೆಗೆ ಖಾಸಗಿ ಕೈಗಾರಿಕಾ  ಪ್ರದೇಶಗಳೂ ರಾಜ್ಯದ ವಿವಿಧೆಡೆ ಸಾಕಷ್ಟು ಸಂಖ್ಯೆಯಲ್ಲಿವೆ.

ಯಂತ್ರೋಪಕರಣ ಕಷ್ಟವಲ್ಲ
ಕೆಲವು ‘ಎಂಎಸ್‌ಇ’ಗಳನ್ನು ಯಾವುದೇ ಯಂತ್ರೋಪಕರಣ ಇಲ್ಲದೇ ಕೇವಲ ಮಾನವ ಶ್ರಮವನ್ನು ಆಧರಿಸಿಯೇ ಮಾರಾಟ ಕಷ್ಟವೇನಲ್ಲ
‘ಎಸ್‌ಎಸ್‌ಐ’(ಸಣ್ಣ ಬಂಡವಾಳದ ಉದ್ಯಮ)ಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಕ್ಷೇತ್ರ ಈಗ ವ್ಯಾಪಕವಾಗಿ ಬೆಳೆದಿದೆ. ಹತ್ತಾರು ಸರ್ಕಾರಿ ಸಂಸ್ಥೆಗಳು ಇದಕ್ಕೆ ಅಗತ್ಯವಾದ ನೆರವನ್ನೂ ನೀಡುತ್ತಿವೆ. ಸ್ವಂತ ನೆಲೆಯಲ್ಲಿ ಮಾರುಕಟ್ಟೆ ಕಂಡುಕೊಳ್ಳುವುದರ ಜತೆಗೇ ‘ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ’(ಎನ್‌ಎಸ್‌ಐಸಿ), ‘ಸಣ್ಣ ಕೈಗಾರಿಕೆಗಳ ಸೇವಾ ಸಂಸ್ಥೆ’ (ಎಸ್‌ಐಎಸ್‌ಐ), ‘ರಫ್ತು ಉತ್ತೇಜನ ಮಂಡಳಿ’ ಮತ್ತು ‘ಎಸ್‌ಟಿಸಿ’ ಮೊದಲಾದ ಸರ್ಕಾರಿ ಸಂಸ್ಥೆಗಳು ಈ ಕುರಿತು ಸಣ್ಣ ಉದ್ಯಮಿಗಳಿಗೆ ಅಗತ್ಯ ನೆರವು–ಮಾರ್ಗದರ್ಶನ ನೀಡುತ್ತವೆ.

ಇಲ್ಲಿ ನೋಂದಣಿ ಅಗತ್ಯ
ಬಹುತೇಕ ‘ಎಸ್‌ಎಸ್ಐ’(ಸಣ್ಣ ಬಂಡವಾಳದ ಕೈಗಾರಿಕೆ)ಗಳು ಅದರಲ್ಲೂ ಅತಿ ಸಣ್ಣ ಕೈಗಾರಿಕೆಗಳು ಸರ್ಕಾರದ ಸಂಬಂಧಿಸಿದ ಇಲಾಖೆಯ ಕಚೇರಿಗಳಲ್ಲಿ ನೋಂದಣಿಯಾಗದ ಕಾರಣ ಈ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಅಂಕಿ–ಅಂಶಗಳ ಕುರಿತು ನಿಖರ ಮಾಹಿತಿ ಸಿಗದು.

ಯಾವುದೇ ‘ಎಸ್‌ಎಸ್‌ಐ’ ಆರಂಭಕ್ಕೆ ಮೊದಲು ಯಾವ ಉತ್ಪನ್ನ ತಯಾರಿಸಬೇಕು ಎಂಬ ಆಯ್ಕೆ ಅಗತ್ಯ. ನಂತರ ಇದಕ್ಕೆ ಬೇಕಾದ ಮೂಲ ಅಗತ್ಯಗಳ ಕುರಿತು ಒಂದು ಯೋಜನಾ ವರದಿ (ಪ್ರಾಜೆಕ್ಟ್ ರಿಪೋರ್ಟ್) ಸಿದ್ಧಪಡಿಸಿಕೊಂಡು ‘ಡಿಐಸಿ’ಯಲ್ಲಿ ನೋಂದಾಯಿಸಿಕೊಳ್ಳಬೇಕು.

ನಂತರ ಆರಂಭಿಸಲು ಉದ್ದೇಶಿಸಿದ ಕೈಗಾರಿಕಾ ಸಂಸ್ಥೆಯನ್ನು ರಾಜ್ಯ ಮಾರಾಟ ತೆರಿಗೆ(ಕರ್ನಾಟಕ ಸ್ಟೇಟ್‌ ಸೇಲ್ಸ್ ಟ್ಯಾಕ್ಸ್–ಕೆಎಸ್‌ಟಿ), ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಸಂಸ್ಥೆಗಳು, ನೌಕರರ ಭವಿಷ್ಯ ನಿಧಿ ಕಚೇರಿ(ಇಪಿಎಫ್‌), ಇಎಸ್‌ಐ(ಸಿಬ್ಬಂದಿಗಳ ಸರ್ಕಾರಿ ವಿಮಾ ಸಂಸ್ಥೆ), ಕಾರ್ಮಿಕರ ಇಲಾಖೆಗಳಲ್ಲಿ ನೋಂದಣಿ ಮಾಡಿಸಿ ಅನುಮತಿ  ಪತ್ರ ಪಡೆಯಬೇಕು.

ಸ್ಥಳೀಯ ಸಂಸ್ಥೆಗಳು, ಅಂದರೆ, ಬೆಂಗಳೂರಿನಲ್ಲಾದರೆ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ, ಬೇರೆ ನಗರಗಳಲ್ಲಾದರೆ ಅಲ್ಲಿನ ಮಹಾನಗರಪಾಲಿಕೆ ಅಥವಾ ನಗರಸಭೆ ಕಚೇರಿಯಿಂದ ವ್ಯಾಪಾರದ ಅನುಮತಿ, ಆರೋಗ್ಯ ಇಲಾಖೆಯ ಅನುಮತಿ, ಸಾಮಾನ್ಯ ಲೈಸನ್‌್ಸ  ಪಡೆಯಬೇಕಾಗುತ್ತದೆ.

ಇಷ್ಟೇ ಅಲ್ಲದೆ, ‘ಎಸ್‌ಎಸ್‌ಐ’ಗಳೂ (ತಯಾರಿಕಾ ವಲಯ) ವ್ಯಾಪಾರಿ ಲೈಸನ್ಸ್ ಟ್ರೇಡ್‌ ಲೈಸನ್ಸ್)  ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚನೆ ಹೊರಡಿಸಿದೆ.

‘ಕೈಗಾರಿಕಾ ವಸಾಹತು ಮೇಲ್ದರ್ಜೆಗೇರಿಸಿ’
>ರಾಜ್ಯದ ಹಲವೆಡೆ ಸರ್ಕಾರ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಿದ್ದರೂ ಅವುಗಳಲ್ಲಿ ಬಹಳಷ್ಟು ಕಡೆ ಮೂಲ ಸೌಲಭ್ಯಗಳೇ ಸಮರ್ಪಕವಾಗಿಲ್ಲ. ಹೀಗಾಗಿ ಖಾಸಗಿ ಬಡಾವಣೆಗಳಲ್ಲಿ ಕೈಗಾರಿಕೆಗಳು ಬೆಳೆಯುವಂತಾಗಿದೆ. ಇದು  ಆ ಭಾಗದ ಜನವಸತಿ ಪ್ರದೇಶದ ನಿವಾಸಿಗಳಿಗೂ ಕಿರಿಕಿರಿ ಎನಿಸುತ್ತಿದೆ. ಕೈಗಾರಿಕಾ ವಸಾಹತುಗಳನ್ನು ಮೇಲ್ದರ್ಜೆಗೇರಿಸುವುದೇ  ಇದಕ್ಕೆ  ಉತ್ತಮ ಪರಿಹಾರವಾಗಿದೆ.

ADVERTISEMENT

ಜತೆಗೆ ರೂಪಾಯಿ ಅಪಮೌಲ್ಯ, ಅನಾರೋಗ್ಯಕಾರಿ ಸ್ಪರ್ಧೆ ಮೊದಲಾದ ಕಾರಣಗಳಿಂದಾಗಿ ತೊಂದರೆಗೆ ಒಳಗಾದ ತಯಾರಿಕಾ ಕೈಗಾರಿಕೆಗಳಿಗೆ ತಾತ್ಕಾಲಿಕವಾಗಿ ತೆರಿಗೆ ರಿಯಾಯ್ತಿ ಪ್ರಕಟಿಸಬೇಕು.
ಟ್ರೇಡ್‌ ಲೈಸನ್‌್ಸ ಪಡೆಯುವುದು ತಯಾರಿಕಾ ಉದ್ಯಮಗಳಿಗೂ ಕಡ್ಡಾಯ ಮಾಡಲಾಗಿದ್ದು, ಇದು ರದ್ದಾಗಬೇಕು ಎಂಬುದು ನಮ್ಮ ಸಂಘದ ಒತ್ತಾಯವಾಗಿದೆ. ರಾಜ್ಯದ ಸಣ್ಣ, ಅತಿ ಸಣ್ಣ ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ದುಂಡು ಮೇಜಿನ ಸಭೆಯೊಂದನ್ನು ಕರೆಯಬೇಕು ಎಂದು ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ.
– ಬಿ.ಪಿ. ಶಶಿಧರ್‌, ಅಧ್ಯಕ್ಷ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)

‘ಎಂಎಸ್ಇ’ ವರ್ಗೀಕರಣ
ಕಾರ್ಯ ಚಟುವಟಿಕೆ ಆಧಾರದಲ್ಲಿ ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ನಡುವೆ ಹೆಚ್ಚಿನ ವ್ಯತ್ಯಾಸಗಳೇನೂ ಕಾಣುವುದಿಲ್ಲ. ಆದರೆ ಬಂಡವಾಳ ಹೂಡಿಕೆ ಆಧಾರದಲ್ಲಿ ಕೇಂದ್ರ ಸರ್ಕಾರದ ‘ಮೈಕ್ರೊ, ಸ್ಮಾಲ್‌ ಅಂಡ್ ಮೀಡಿಯಂ ಎಂಟರ್‌ಪ್ರೈಸೆಸ್‌ ಡೆವಲಪ್‌ಮೆಂಟ್‌  ಕಾಯ್ದೆ–2005’ ಅನ್ವಯ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳನ್ನು ವರ್ಗೀಕರಿಸಲಾಗಿದೆ. ₨25 ಲಕ್ಷದವರೆಗೆ ಬಂಡವಾಳ ಹೂಡಿಕೆಯಾಗಿದ್ದರೆ ಅದು ಅತಿಸಣ್ಣ ಕೈಗಾರಿಕೆ(ಮೈಕ್ರೊ). ₨25 ಲಕ್ಷದಿಂದ ₨5 ಕೋಟಿವರೆಗೆ ಹೂಡಿಕೆ ಆಗಿದ್ದರೆ ಅದನ್ನು ಸಣ್ಣ ಕೈಗಾರಿಕೆ(ಮೀಡಿಯಂ ಎಂಟರ್‌ಪ್ರೈಸ್‌) ಎನ್ನಲಾಗುತ್ತದೆ. ನಂತರದ್ದೇನಿದ್ದರೂ ಮಧ್ಯಮ ಪ್ರಮಾಣದ(ಮೀಡಿಯಂ) ಕೈಗಾರಿಕೆ ವಿಭಾಗಕ್ಕೆ ಸೇರಿಕೊಳ್ಳುತ್ತದೆ.

ಪ್ಲಾಸ್ಟಿಕ್‌ ಹೂಗಳ ತಯಾರಿಕೆ, ಟೀ–ಕಾಫಿ– ಹಣ್ಣಿನ ರಸ ಸೇವನೆಗೆ ಬಳಸುವ ಕಾಗದದ ಲೋಟ, ಉಪ್ಪಿನಕಾಯಿ, ಹಪ್ಪಳ, ಮೋಟಾರ್‌ ರಿವೈಡಿಂಗ್‌, ಮೇಣದ ಬತ್ತಿ ತಯಾರಿಕೆ, ಪ್ಲಾಸ್ಟಿಕ್‌ ಆಟಿಕೆ ಮತ್ತಿತರ ಕಡಿಮೆ ಬಂಡವಾಳ ಅಗತ್ಯವಿರುವ ಕೈಗಾರಿಕೆಗಳನ್ನು ‘ಅತಿ ಸಣ್ಣ’(ಮೈಕ್ರೊ) ಗುಂಪಿಗೆ ಸೇರಿಸಲಾಗಿದ್ದರೆ, ಪೀಠೋಪಕರಣ ತಯಾರಿಕೆ, ಯಂತ್ರದ ಬಿಡಿಭಾಗಗಳ ತಯಾರಿಕೆ, ಸಿದ್ಧ ಉಡುಪು ತಯಾರಿಕೆ, ಪ್ಯಾಕ್‌ ಮಾಡಲಾದ ಅಹಾರ, ಬೇಕರಿ ಮತ್ತಿತರ ಕೈಗಾರಿಕೆಗಳು ಸಣ್ಣ ಕೈಗಾರಿಕೆಗಳಿಗೆ ಸೇರಿಸಲಾಗಿದೆ.

‘ರಿಯಾಯ್ತಿ ಕೊಡಬೇಕು’
ರೂಪಾಯಿ ಅಪಮೌಲ್ಯ ‘ಎಸ್‌ಎಸ್‌ಐ’ಗಳ ಮೇಲೆ ಹೇಳಿಕೊಳ್ಳುವಂತಹ ತೀವ್ರ ಪರಿಣಾಮ ಬೀರದೇ ಇದ್ದರೂ ಹತ್ತಾರು ಕಡೆ ರಫ್ತು ಬೇಡಿಕೆಗಳು ಬರುವುದೇ ನಿಂತು ಹೋಗಿದೆ. ಹಾಗಾಗಿ ‘ಎಸ್‌ಎಸ್‌ಐ’ಗಳ ಸಾಲ ಮರುಪಾವತಿ ವಿಷಯದಲ್ಲಿ ಬ್ಯಾಂಕ್‌ಗಳು ಸ್ವಲ್ಪ ರಿಯಾಯ್ತಿ ತೋರಬೇಕಿದೆ.

ಸದ್ಯ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌)ಯನ್ನು ಮುಂಗಡವಾಗಿಯೇ ಸರ್ಕಾರಕ್ಕೆ ಕಟ್ಟಲಾಗುತ್ತಿದೆ. ಇದನ್ನು ಮೂರು ತಿಂಗಳಿಗೊಮ್ಮೆ ಕಟ್ಟಲು ಅವಕಾಶ ಮಾಡಿಕೊಡಬೇಕು. ಇದರಿಂದ ಸಣ್ಣ ಉದ್ಯಮಗಳಿಗೆ ಅನುಕೂಲವಾಗುತ್ತದೆ.
–ಆರ್‌.ರಾಜು, ಸಣ್ಣ ಕೈಗಾರಿಕೋದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.