ADVERTISEMENT

ಇನ್ಫೊಸಿಸ್‌ ಶೇ 3.6 ಪ್ರಗತಿ

4ನೇ ತ್ರೈಮಾಸಿಕ: ಮಾರುಕಟ್ಟೆ ನಿರೀಕ್ಷೆ ತಲುಪದ ಕಂಪೆನಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST
ವಿಶಾಲ್‌ ಸಿಕ್ಕಾ
ವಿಶಾಲ್‌ ಸಿಕ್ಕಾ   

ಚೆನ್ನೈ (ಪಿಟಿಐ): ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳನ್ನು ನೀಡುವ ಪ್ರಮುಖ ಕಂಪೆನಿ ‘ಇನ್ಫೊಸಿಸ್‌’ 4ನೇ ತ್ರೈಮಾಸಿಕ ದಲ್ಲಿ (ಜನವರಿ–ಮಾರ್ಚ್‌) ಮಾರುಕಟ್ಟೆ ನಿರೀಕ್ಷೆ ಯನ್ನು ತಲುಪುವಲ್ಲಿ ವಿಫಲ ವಾಗಿದೆ. ನಿವ್ವಳ ಲಾಭ ಶೇ 3.5ರಷ್ಟು ಅಲ್ಪ ಏರಿಕೆಯಾಗಿದ್ದು, ರೂ3,097 ಕೋಟಿಗಳಿಗೆ ತಲುಪಿದೆ.

ಕಂಪೆನಿ ವರಮಾನದಲ್ಲಿ ಕೇವಲ ಶೇ 2.4ರಷ್ಟು ಅಲ್ಪ ಹೆಚ್ಚಳವಾಗಿದೆ. ರೂ12,875 ಕೋಟಿಗಳಿಂದ ರೂ13,411 ಕೋಟಿಗಳಿಗೆ ಏರಿಕೆಯಾಗಿದೆ.

ಸಾಫ್ಟ್‌ವೇರ್‌ ಸೇವೆಗಳನ್ನು ರಫ್ತು ಮಾಡುವ ದೇಶದ ಎರಡನೇ ಅತಿ ದೊಡ್ಡ ಕಂಪೆನಿಯು 2013–14ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ2,992 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಲಾಭದ ಪ್ರಮಾಣದಲ್ಲಿ ಇಳಿಕೆ ಯಾಗುತ್ತಿದೆ. ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಶೇ 4.7ರಷ್ಟು ಕುಸಿತ ವಾಗಿದ್ದು, ರೂ3,250ಕ್ಕೆ ಇಳಿಕೆಯಾಗಿದೆ. ವರಮಾನವೂ ಕೂಡಾ ಶೇ 2.8ರಷ್ಟು ತಗ್ಗಿದೆ. ರೂ13,796 ಕೋಟಿಗಳಿಗೆ ಕುಸಿದಿದೆ.

2014–15ನೇ ಹಣಕಾಸು ವರ್ಷದಲ್ಲಿ ಕಂಪೆನಿ ನಿವ್ವಳ ಲಾಭ ಶೇ 15.8ರಷ್ಟು ಏರಿಕೆಯಾಗಿ, ರೂ12,329 ಕೋಟಿಗಳಿಗೆ ತಲುಪಿದೆ. ವರಮಾನ ದಲ್ಲಿಯೂ ಶೇ 6.4ರಷ್ಟು ಹೆಚ್ಚಳವಾಗಿ, ರೂ53,319 ಕೋಟಿಗಳಿಗೆ ಏರಿಕೆಯಾಗಿದೆ.

‘4ನೇ ತ್ರೈಮಾಸಿಕದಲ್ಲಿ ಸೇವಾ ವಲಯದ ಪ್ರಗತಿ ನಿರೀಕ್ಷೆಗಿಂತಲೂ ಕಡಿಮೆ ಇದೆ. ಹೀಗಿದ್ದರೂ ನಾವು ಆರೋಗ್ಯಕರ ಪ್ರಗತಿಯನ್ನೇ ಸಾಧಿಸಿದ್ದೇವೆ’ ಎಂದು ಕಂಪೆನಿ ಸಿಒಒ ಯು.ಬಿ.ಪ್ರವೀಣ್‌ ರಾವ್‌ ಹೇಳಿದರು.

ಕ್ಯಾಲಿಡಸ್‌ ಖರೀದಿ: ಅಮೆರಿಕದ ಡಿಜಿಟಲ್‌ ಕಾಮರ್ಸ್‌ ಕ್ಯಾಲಿಡಸ್ ಕಂಪೆನಿಯನ್ನು ರೂ763 ಕೋಟಿಗಳಿಗೆ ಖರೀದಿ ಮಾಡುವುದಾಗಿ ಇನ್ಫೊಸಿಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ಏರ್‌ವಿಜ್‌ ಕಂಪೆನಿಯಲ್ಲಿ ರೂ12,500 ಕೋಟಿ ಬಂಡವಾಳ ಹೂಡಲು ಇನ್ಫೊಸಿಸ್‌ ಮುಂದಾಗಿದೆ.

ಷೇರು ಮೌಲ್ಯ ಶೇ 6 ಕುಸಿತ: 4ನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ಬರದೇ ಇರುವುದರಿಂದ ಇನ್ಫೊಸಿಸ್‌ ಷೇರುಗಳು ದಿನದ ವಹಿವಾಟಿನಲ್ಲಿ ಶೇ 6ರಷ್ಟು ಮೌಲ್ಯ ಕಳೆದುಕೊಂಡಿವೆ. ಬಿಎಸ್‌ಇನಲ್ಲಿ ಪ್ರತಿ ಷೇರು ರೂ1,996ರಂತೆ ಎನ್‌ಎಸ್‌ಇನಲ್ಲಿ ರೂ1,982ರಂತೆ ವಹಿವಾಟು ನಡೆಸಿದವು. ಮಾರುಕಟ್ಟೆ ಮೌಲ್ಯವು ರೂ14,504 ಕೋಟಿಗಳಷ್ಟು ಕುಸಿದು, ರೂ2.29 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.
*
ಅಂಕಿ–ಅಂಶ
3,097ಕೋಟಿ 4ನೇ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ನಿವ್ವಳ ಲಾಭ
13ಸಾವಿರ ಕೋಟಿ 4ನೇ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟು ವರಮಾನ
* 2014–15ರಲ್ಲಿ ಕಂಪೆನಿ ನಿವ್ವಳ ಲಾಭ ರೂ12,329 ಕೋಟಿ
* 2014–15ರಲ್ಲಿ ವರಮಾನ ರೂ 53,319 ಕೋಟಿ
* 2015–16ಕ್ಕೆ ಶೇ 10 ರಿಂದ ಶೇ 12ರಷ್ಟು ವರಮಾನ ಏರಿಕೆ ನಿರೀಕ್ಷೆ
*
2015–16ರಲ್ಲಿ ಶೇ 10 ರಿಂದ ಶೇ 12 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ. 2020ಕ್ಕೆ ₨1.25 ಲಕ್ಷ ಕೋಟಿ ವರಮಾನ ಗಳಿಸುವ ವಿಶ್ವಾಸವಿದೆ
ವಿಶಾಲ್‌ ಸಿಕ್ಕಾ, ಇನ್ಫೊಸಿಸ್‌ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.