ಬೆಂಗಳೂರು: ಸಾಫ್ಟ್‌ವೇರ್ ರಫ್ತು ಕ್ಷೇತ್ರ ದಲ್ಲಿ ದೇಶದ ಎರಡನೇ ಅತಿ ದೊಡ್ಡ ಕಂಪೆನಿಯಾದ ‘ಇನ್ಫೊಸಿಸ್’ ಮಾರ್ಚ್ 31ಕ್ಕೆ ಕೊನೆಗೊಂಡ 2013–14ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ರೂ.2,992 ಕೋಟಿ ನಿವ್ವಳ ಲಾಭ ಗಳಿಸಿದೆ. ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 4.1ರಷ್ಟು ಮತ್ತ ವಾರ್ಷಿಕವಾಗಿ ಶೇ 25ರಷ್ಟು ಏರಿಕೆ ಕಂಡುಬಂದಿದೆ.
ದಾಖಲೆ: 2013–14ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ರೂ.50,133 ಕೋಟಿ ವರಮಾನ ಗಳಿಸಿದೆ. ಇನ್ಫೊಸಿಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಾರ್ಷಿಕ ವರಮಾನ ರೂ.50 ಸಾವಿರ ಕೋಟಿ ಗಡಿ ದಾಟಿದೆ ಎಂದು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ‘ಸಿಇಒ’ ಎಸ್.ಡಿ.ಶಿಬುಲಾಲ್ ಹೇಳಿದರು.
ಜನವರಿ –ಮಾರ್ಚ್ ತ್ರೈಮಾಸಿಕದಲ್ಲಿ ರೂ.12,875 ಕೋಟಿ ವರಮಾನ ದಾಖಲಾಗಿದ್ದು ಶೇ 1.2ರಷ್ಟು ಕುಸಿತ ಕಂಡಿದೆ. ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಯಲ್ಲಿ ಮುಂದುವರಿದಿರುವ ಅಸ್ಥಿರತೆ ವರಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಆದರೆ, ಮುಂಬರುವ ತ್ರೈಮಾಸಿಕಗಳಲ್ಲಿ ವಹಿವಾಟು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. 92 ಗ್ರಾಹಕ ಸಂಸ್ಥೆಗಳು ಹೊಸದಾಗಿ ಸೇರ್ಪಡೆಯಾಗಿವೆ. 2014–15ನೇ ಸಾಲಿನಲ್ಲಿ ವರಮಾನದಲ್ಲಿ ಶೇ 7ರಿಂದ ಶೇ 9ರಷ್ಟು ಪ್ರಗತಿ ಅಂದಾಜು ಮಾಡಿದ್ದೇವೆ ಎಂದು ಅವರು ಹೇಳಿದರು.
ನಾಸ್ಕಾಂ ನಿರೀಕ್ಷೆಗಿಂತ ಕಡಿಮೆ
ಆದರೆ, ಇನ್ಫೊಸಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿನ ಪ್ರಗತಿ ಕುರಿತು ಅಂದಾಜು ಮಾಡಿರುವ ವರಮಾನ ಮುನ್ನೋಟ ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಮಾಡಿರುವ ಅಂದಾಜಿ ಗಿಂತಲೂ (ಶೇ 13ರಿಂದ ಶೇ 15) ಕಡಿಮೆ ಇದೆ.
ವೇತನ ಏರಿಕೆ
ಇನ್ಫೊಸಿಸ್ ತನ್ನ ಸಿಬ್ಬಂದಿ ವೇತನವನ್ನು ಏ.1ರಿಂದ ಹೆಚ್ಚಿಸಿದೆ. ದೇಶೀಯ ನೌಕರರ ವೇತನ ಶೇ 6ರಿಂದ ಶೇ 7ರಷ್ಟು ಮತ್ತು ವಿದೇಶಗಳಲ್ಲಿರುವ ನೌಕರರ ವೇತನ ಶೇ 1ರಿಂದ 2ರಷ್ಟು ಏರಿಕೆಯಾಗಿದೆ.
ರೋಹನ್ ಮೂರ್ತಿ ಅವಧಿ
ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನಾರಾಯಣ ಮೂರ್ತಿ ಅವರ ಸೇವಾ ಅವಧಿ ಪೂರ್ಣಗೊಳ್ಳುತ್ತಿದ್ದಂತೆ, ಕಾರ್ಯನಿರ್ವಾಹಕ ಸಹಾಯಕರಾಗಿರುವ ಅವರ ಮಗ ರೋಹನ್ ಮೂರ್ತಿಯ ಸೇವಾ ಅವಧಿಯೂ ಪೂರ್ಣಗೊಳ್ಳಲಿದೆ ಎಂದು ಶಿಬುಲಾಲ್ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಹೇಳಿದ್ದಾರೆ. ಆ ಮೂಲಕ ರೋಹನ್‌ಗೆ ಕಂಪೆನಿಯಲ್ಲಿ ಇನ್ನೂ ಉನ್ನತ ಹುದ್ದೆ ನೀಡಲಾಗುತ್ತದೆ ಎನ್ನುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ನಿವೃತ್ತಿ– ಶಿಬುಲಾಲ್ ಸ್ಪಷ್ಟನೆ
ತಮ್ಮ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಶಿಬುಲಾಲ್, ಕೊನೆ ಕ್ಷಣದಲ್ಲಿ ಆಗುವ ಅನಗತ್ಯ ಗೊಂದಲಗಳನ್ನು ನಿವಾರಿಸಲು ಮುಂಚಿತವಾಗಿಯೇ ಈ ಕುರಿತು ನಿರ್ಧಾರ ಪ್ರಕಟಿಸಿದ್ದೇನೆ ಎಂದರು.
‘ನಿವೃತ್ತಿಗೆ ಇದು ಸಕಾಲ ಎನಿಸಿದೆ. 2015ರ ಜ.9ರಂದು ನನ್ನ ಸೇವಾ ಅವಧಿ ಮುಗಿಯಲಿದೆ. ಆದರೆ, ಅದಕ್ಕಿಂತ ಮೊದಲೇ ಕಂಪೆನಿಯ ನಿರ್ದೇಶಕ ಮಂಡಳಿಗೆ ಹೊಸ ‘ಸಿಇಒ’ ಲಭ್ಯವಾದರೆ ತಕ್ಷಣವೇ ಹುದ್ದೆಯಿಂದ ನಿರ್ಗಮಿಸುವೆ’ ಎಂದು ಸ್ಪಷ್ಟಪಡಿಸಿದರು.ಕಂಪೆನಿ ನಿರ್ದೇಶಕ ಮಂಡಳಿ ಸದಸ್ಯತ್ವವನ್ನೂ ತೊರೆಯುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಬ್ಬರ ಬೆನ್ನಿಗೊಬ್ಬರಂತೆ ಹಿರಿಯ ಅಧಿಕಾರಿಗಳು ಇನ್ಫೊಸಿಸ್ ತೊರೆಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಸಾವಿರಾರು ಜನ ಉದ್ಯೋಗಿಗಳಿರುವ ಇನ್ಫೊಸಿಸ್ನಲ್ಲಿ ಒಂದಿಬ್ಬರು ಕಂಪೆನಿಯಿಂದ ನಿರ್ಗಮಿಸುವುದು ಸಹಜ. ಎಲ್ಲ ಕಂಪೆನಿಗಳಲ್ಲಿಯೂ ಇದು ಸಾಮಾನ್ಯ ಸಂಗತಿ. ಸದ್ಯ ಇನ್ಫೊಸಿಸ್ ಉತ್ತಮವಾದ ತಂಡವನ್ನು ಹೊಂದಿದೆ ಎಂದರು.
‘ಜಾಗತಿಕ ಆರ್ಥಿಕ ಅಸ್ಥಿರತೆಯಂತಹ ಸವಾಲಿನ ಸಂದರ್ಭದಲ್ಲಿ ಇನ್ಫೊಸಿಸ್‌ನ ‘ಸಿಇಒ’ ಆಗಿ ನೇಮಕಗೊಂಡೆ. ಆಗ ಯೂರೋಪ್ ಮತ್ತು ಅಮೆರಿಕ ಮಾರುಕಟ್ಟೆಯಲ್ಲಿ ವಹಿವಾಟು ಕುಸಿದಿತ್ತು. ವೀಸಾ ಸಮಸ್ಯೆಯಿಂದಾಗಿ ವಿದೇಶಗಳಲ್ಲಿ ಕಂಪೆನಿಯ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಇತ್ತು.
ಪ್ರಮುಖವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ಫೊಸಿಸ್ ಬ್ರಾಂಡ್ ಮೌಲ್ಯ ಹೆಚ್ಚಿಸಬೇಕಿತ್ತು ಮತ್ತು ಗ್ರಾಹಕರ ಆತ್ಮವಿಶ್ವಾಸ ಮರಳಿ ಪಡೆಯಬೇಕಿತ್ತು. ಆಗಷ್ಟೇ, ಐ.ಟಿ ಸೇವೆಗಳ ಮೌಲ್ಯವರ್ಧನೆಗಾಗಿ 2.0 ತಂತ್ರಜ್ಞಾನದಿಂದ 3.0 ತಂತ್ರಜ್ಞಾನಕ್ಕೆ ಬದಲಾಗುತ್ತಿದ್ದೆವು. ಹೀಗೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಆದರೆ, ಈ ಎಲ್ಲ ಸಮಸ್ಯೆಗಳು ಈಗ ಇತ್ಯರ್ಥಗೊಂಡಿವೆ. ಹಿಂದಿಗಿಂತಲೂ ಹೆಚ್ಚು ಸದೃಢವಾದ ಮತ್ತು ಶಕ್ತಿಶಾಲಿಯಾದ ಇನ್ಫೊಸಿಸ್ ನಿಮ್ಮೆದುರಿಗಿದೆ’ ಎಂದು ಶಿಬುಲಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.