ಮದುವೆ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗೃಹಪ್ರವೇಶ, ಹೊಸ ಉದ್ಯಮಕ್ಕೆ ಚಾಲನೆ, ವಾಣಿಜ್ಯ ಮಳಿಗೆಯ ಆರಂಭ, ಹೊಸದಾಗಿ ಆಸ್ತಿ ಖರೀದಿ... ಹೀಗೆ ವಿವಿಧ ಸಂದರ್ಭಗಳಲ್ಲಿ ಬಹಳಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗೆ, ಆತ್ಮೀಯರಿಗೆ, ಬಂಧು ಮಿತ್ರರಿಗೆ ಉಡುಗೊರೆ, ಪ್ರೀತಿಯ ಕಾಣಿಕೆ ನೀಡುವುದು ಸಾಮಾನ್ಯ ನಡವಳಿಕೆ. ಆದರೆ, ತೆರಿಗೆ ಕಾಯ್ದೆಯ ಪ್ರಕಾರ ಇಂತಹ ಉಡುಗೊರೆ ವಿನಿಮಯಗಳಿಗೂ ಗಿಫ್ಟ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಆತ್ಮೀಯರಿಗೆ, ಬಂಧು ಬಳಗದವರಿಗೆ ಅಥವಾ ಪರಿಚಯದವರಿಗೆ ನೀವು ಗಿಫ್ಟ್ (ದಾನ ಅಥವಾ ಉಡುಗೊರೆ) ನೀಡಿದರೆ ಅಥವಾ ಅವರಿಂದ ಉಡುಗೊರೆ ಸ್ವೀಕರಿಸಿದರೆ ತೆರಿಗೆ ನೀಡಬೇಕೇ?
ಮದುವೆ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗೃಹಪ್ರವೇಶ, ಹೊಸ ಉದ್ಯಮದ, ವಾಣಿಜ್ಯ ಮಳಿಗೆಯ ಆರಂಭ, ಹೊಸ ಆಸ್ತಿ ಖರೀದಿ... ಹೀಗೆ ವಿವಿಧ ಸಂದರ್ಭಗಳಲ್ಲಿ ಬಹಳಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗೆ, ಆತ್ಮೀ ಯರಿಗೆ, ಬಂಧು ಮಿತ್ರರಿಗೆ ಉಡುಗೊರೆ, ಪ್ರೀತಿಯ ಕಾಣಿಕೆ ನೀಡುವುದು ಸಾಮಾನ್ಯ ನಡವಳಿಕೆ. ಆದರೆ, ಇಂತಹ ಉಡುಗೊರೆ ವಿನಿಮಯಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಬಂಧು ಬಳಗದವರಿಗೆ ಅಥವಾ ಸಂಘ ಸಂಸ್ಥೆಗಳಿಗೆ ಸ್ಥಿರ ಚರ ಆಸ್ತಿ ಯನ್ನು ದಾನವಾಗಿ ನೀಡುವ ಕ್ರಮ ಭಾರತದಲ್ಲಿ ಲಾಗಾಯ್ತಿನಿಂದಲೂ ರೂಢಿಯಲ್ಲಿದೆ. ಈ ದಾನ ಪ್ರಕ್ರಿಯೆಗೂ ತೆರಿಗೆ ಹೊರೆ ಬೀಳುತ್ತದೆಯೇ?
ಉಡುಗೊರೆ ನೀಡಿದವರಿಗೆ ತೆರಿಗೆ ಎಂಬ ಹೊರೆ ಯೇನೂ ಇರುವುದಿಲ್ಲ. ಆದರೆ, ಉಡುಗೊರೆ ಅಥವಾ ದಾನವಾಗಿ ದೊಡ್ಡ ಮೊತ್ತ ಅಥವಾ ಆಸ್ತಿಯನ್ನು ಸ್ವೀಕ ರಿಸಿದಾಗ ಮಾತ್ರ ಅದರ ಮೌಲ್ಯ ಮತ್ತು ಉಡುಗೊರೆ ನೀಡಿದವರ ಸಂಬಂಧವನ್ನು ಆಧರಿಸಿ ಗಿಫ್ಟ್ ಟ್ಯಾಕ್ಸ್ (ಉಡುಗೊರೆ ತೆರಿಗೆ) ಪಾವತಿಸ ಬೇಕಾಗುತ್ತದೆ. ಅದು ದಾನ, ಉಡುಗೊರೆ ಸ್ವೀಕರಿಸಿದವರ ಹೊಣೆಗಾರಿಕೆ ಯಾಗಿರುತ್ತದೆ.
ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಇಲ್ಲಿದೆ...
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56ರ ಪ್ರಕಾರ ಗಿಫ್ಟ್ ಟ್ಯಾಕ್ಸ್ (ಉಡುಗೊರೆ ತೆರಿಗೆ) ವಿಧಿಸಲಾಗುತ್ತದೆ. ಆದರೆ ಸಂಬಂಧಿಗಳಿಂದ ಪಡೆದ ಉಡುಗೊರೆ ಅಥವಾ ದಾನಕ್ಕೆ ತೆರಿಗೆ ವಿನಾಯ್ತಿ ಇದೆ.
ಸಂಬಂಧ ಇಲ್ಲದಿರುವ ವ್ಯಕ್ತಿಗಳಿಂದ ಉಡುಗೊರೆ, ದಾನ ಪಡೆದರೆ ಮಾತ್ರ ಅದು ಗಿಫ್ಟ್ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡುತ್ತದೆ.
ಹಿಂದೆ ಪ್ರತ್ಯೇಕವಾದ ಗಿಫ್ಟ್ ಟ್ಯಾಕ್ಸ್ ಆ್ಯಕ್ಟ್ (ಉಡುಗೊರೆ ತೆರಿಗೆ ಕಾಯ್ದೆ) ಇತ್ತು. 1998ರಲ್ಲಿ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.
ಕೆಲ ವ್ಯಕ್ತಿಗಳು ತಾವು ಪಡೆದ ಭಾರಿ ಮೌಲ್ಯದ ಉಡುಗೊರೆ, ದಾನಗಳನ್ನು ‘ಸಂಬಂಧಿಗಳು ನೀಡಿದ ಗಿಫ್ಟ್’ ಎಂದು ಘೋಷಿಸಿಕೊಂಡು ಆದಾಯ ತೆರಿಗೆ ಯನ್ನು ವಂಚಿಸುತ್ತಿದ್ದರು. ಹೀಗೆ ತೆರಿಗೆ ವಂಚಿಸುವ ಉದ್ದೇಶದಿಂದಲೇ ದೊಡ್ಡ ಮೊತ್ತದ ಹಣ ಹಾಗೂ ಆಸ್ತಿಗಳನ್ನು ವರ್ಗಾವಣೆ ಮಾಡುತ್ತಿದ್ದರು.
ಈ ನಕಲಿ ಸಂಬಂಧದ ಗಿಫ್ಟ್‌ಗಳನ್ನೂ ತೆರಿಗೆಗೆ ಒಳಪಡಿಸುವ ಉದ್ದೇಶದಿಂದ 2004ರಲ್ಲಿ ಗಿಫ್ಟ್‌ಗಳಿಗೆ ಆದಾಯ ತೆರಿಗೆ ಅಡಿಯಲ್ಲಿ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಯಿತು.
ತೆರಿಗೆಗೆ ಒಳಪಡುವ ವಹಿವಾಟು
*ಯಾವುದೇ ವ್ಯಕ್ತಿಯಿಂದ ರೂ50 ಸಾವಿರಕ್ಕಿಂತ ಅಧಿಕ ಹಣ ಸ್ವೀಕರಿಸಿದರೆ ಅದು ಉಡುಗೊರೆ ತೆರಿಗೆಗೆ ಒಳಪಡುತ್ತದೆ.
*ರೂ50 ಸಾವಿರಕ್ಕಿಂತ ಅಧಿಕ ಮೌಲ್ಯದ ಚರಾಸ್ತಿಯನ್ನು ಅಸಮರ್ಪಕ ಬೆಲೆಗೆ, ಅಂದರೆ ಆ ಚರಾಸ್ತಿಗೆ ಮಾರುಕಟ್ಟೆಯಲ್ಲಿ ಇರುವ ಧಾರಣೆಗಿಂತ ಕಡಿಮೆ ಬೆಲೆಗೆ ಸ್ವೀಕರಿಸಿದರೆ ಆ ವಹಿವಾಟು ಉಡುಗೊರೆ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಇಂಥ ಚರಾಸ್ತಿಗಳ ಪಟ್ಟಿಯಲ್ಲಿ ಚಿನ್ನಾಭರಣ, ಷೇರು, ಚಿತ್ರಕಲೆ, ಶಿಲ್ಪಕಲೆಗಳು ಸೇರುತ್ತವೆ.
*ರೂ50 ಸಾವಿರಕ್ಕಿಂತ ಅಧಿಕ ನೋಂದಣಿ ಮೌಲ್ಯದ ಸ್ಥಿರಾಸ್ತಿಯನ್ನು, ಉಡುಗೊರೆಯಾಗಿ ಸ್ವೀಕರಿಸಿದರೆ ಅದು ಸಹ ಉಡುಗೊರೆ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಸ್ಥಿರಾಸ್ತಿಯ ಪಟ್ಟಿಯಲ್ಲಿ ನಿವೇಶನ ಮತ್ತು ಮನೆ ಮೊದಲಾದವು ಸೇರುತ್ತವೆ.
ಈ ತೆರಿಗೆ ಪದ್ಧತಿಯಲ್ಲಿ ಗಮನಿಸಬೇಕಾದ ವಿಷಯವೆಂದರೆ ಉಡು ಗೊರೆ ರೂ50 ಸಾವಿರದ ಮಿತಿಯಲ್ಲಿರಬೇಕು. ರೂ50 ಸಾವಿರವನ್ನು ಮೀರಿದರೆ ಮಾತ್ರವೇ ಆ ಉಡುಗೊರೆ ಅಥವಾ ದಾನವು ಗಿಫ್ಟ್ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡುತ್ತದೆ. ರೂ50 ಸಾವಿರಕ್ಕಿಂತ ಕಡಿಮೆ ಬೆಲೆಯ ಚರಾಸ್ತಿ, ಸ್ಥಿರಾಸ್ತಿ ಹಾಗೂ ಹಣಕ್ಕೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ.
ಮತ್ತೊಂದು ಮುಖ್ಯ ವಿಷಯ; ಈ ಉಡುಗೊರೆ ತೆರಿಗೆಯನ್ನು ಪಾವತಿಸಬೇಕಾದವರು ಯಾರು?
ಉಡುಗೊರೆ ಸ್ವೀಕರಿಸುವವರೇ ಈ ಗಿಫ್ಟ್ ಟ್ಯಾಕ್ಸ್ ಪಾವತಿಸಬೇಕು. ಉಡುಗೊರೆ ನೀಡುವವರು ಯಾವುದೇ ತೆರಿಗೆ ಹೊಣೆಗಾರಿಕೆಗೆ ಒಳಪಡುವುದಿಲ್ಲ.
ಯಾವುದಕ್ಕೆ ತೆರಿಗೆ ವಿನಾಯ್ತಿ
ಕೆಲವು ಸನ್ನಿವೇಶಗಳಲ್ಲಿ ವ್ಯಕ್ತಿಯೊಬ್ಬರು ಹಣ, ಸ್ಥಿರಾಸ್ತಿ ಅಥವಾ ಚರಾಸ್ತಿ ರೂಪದಲ್ಲಿ ಪಡೆದ ಉಡುಗೊರೆ ಅಥವಾ ದಾನಕ್ಕೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಅವುಗಳೆಂದರೆ;
*ಸಂಬಂಧಿಕರಿಂದ ಉಡುಗೊರೆ ಪಡೆದಾಗ
*ಮದುವೆ ಸಂದರ್ಭದಲ್ಲಿ ಉಡುಗೊರೆ ಪಡೆದಾಗ
*ಪಿತ್ರಾರ್ಜಿತವಾಗಿ ಅಥವಾ ವಿಲ್ (ಉಯಿಲು) ಮೂಲಕ ಪಡೆದಾಗ
*ಸಾವಿನಂಚಿನಲ್ಲಿ ಇರುವ ದಾನಿಯಿಂದ ಉಡುಗೊರೆ ಅಥವಾ ದಾನ ಪಡೆದಾಗ
*ಸ್ಥಳೀಯ ಸಂಸ್ಥೆಯಿಂದ ಪಡೆದಾಗ
*ಯಾವುದೇ ಅರ್ಹ ವಿಶ್ವವಿದ್ಯಾಲಯ, ವಿದ್ಯಾಸಂಸ್ಥೆ, ಆಸ್ಪತ್ರೆ, ಟ್ರಸ್ಟ್ ಅಥವಾ ಸಂಸ್ಥೆಯಿಂದ ಪಡೆದಾಗ
*ನೋಂದಾಯಿತ ಸಮಾಜ ಸೇವಾ ಸಂಸ್ಥೆಯಿಂದ ಪಡೆದಾಗ
ಈ ಉಡುಗೊರೆ ಅಥವಾ ದಾನಕ್ಕೆ ತೆರಿಗೆ ವಿನಾಯ್ತಿ ಇರುತ್ತದೆ. ಅಲ್ಲದೇ, ಈ ಉಡುಗೊರೆ ಅಥವಾ ದಾನದ ಆಸ್ತಿಯ ಮೌಲ್ಯಕ್ಕೆ ಯಾವುದೇ ಮಿತಿ ವಿಧಿಸಿರುವುದಿಲ್ಲ. ಇಂತಹ ಪ್ರಸಂಗಗಳಲ್ಲಿ ಪೂರ್ಣ ಮೊತ್ತವನ್ನು ತೆರಿಗೆ ವ್ಯಾಪ್ತಿಯಿಂದಲೇ ಹೊರಗಿಡಲಾಗುತ್ತದೆ.
ಸಂಬಂಧಿಕರು ಯಾರು?
ಉಡುಗೊರೆ ಅಥವಾ ದಾನ ಸ್ವೀಕರಿಸುವ ವ್ಯಕ್ತಿಯ;
1) ಪತಿ ಅಥವಾ ಪತ್ನಿ
2) ಅಣ್ಣ , ತಮ್ಮ , ಅಕ್ಕ, ತಂಗಿ
3) ಪತಿ ಅಥವಾ ಪತ್ನಿಯ ಅಣ್ಣ, ಅಕ್ಕ, ತಮ್ಮ, ತಂಗಿ
4)ಪೋಷಕರ ಅಣ್ಣ, ಅಕ್ಕ, ತಂಗಿ, ತಮ್ಮ
5) ಮಕ್ಕಳು, ಮೊಮ್ಮಕ್ಕಳು, ತಂದೆ, ತಾಯಿ, ಅಜ್ಜ- ಅಜ್ಜಿ
6) ಪತಿ ಅಥವಾ ಪತ್ನಿಯ ತಂದೆ -ತಾಯಿ, ಅಜ್ಜ- ಅಜ್ಜಿ, ಮೊಮ್ಮಕ್ಕಳು
ಈ ಮೇಲಿನ ಕ್ರಮಸಂಖ್ಯೆ 2ರಿಂದ 6ರವರೆಗಿನ ಪಟ್ಟಿಯಲ್ಲಿ ಇರುವ ಸಂಬಂಧಿಕರ ಗಂಡ ಅಥವಾ ಹೆಂಡತಿಯು ಉಡುಗೊರೆ ಅಥವಾ ದಾನಕ್ಕೆ ತೆರಿಗೆ ವಿನಾಯ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ‘ಸಂಬಂಧಿಕರು’ ಎಂಬ ಪಟ್ಟಿಗೆ ಸೇರಿರುತ್ತಾರೆ.
ಈ ಸಂಬಂಧಿಕರನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳನ್ನು ಸಂಬಂಧಿಗಳಲ್ಲದವರು ಎಂದು ತೆರಿಗೆ ವಿನಾಯ್ತಿಗೆ ಸಂಬಂಧಿಸಿದಂತೆ ಗಿಫ್ಟ್ ಟ್ಯಾಕ್ಸ್ ಕಾಯ್ದೆಯಲ್ಲಿ ಘೋಷಿಸಲಾಗಿದೆ.
ಆದಾಯ ತೆರಿಗೆ ಇಲಾಖೆಗೆ ಪ್ರತಿ ವರ್ಷದ ಜುಲೈ 31ಕ್ಕೆ ಮುನ್ನ ವಾರ್ಷಿಕ ಆದಾಯ ಮತ್ತು ಉಳಿತಾಯ ಹೂಡಿಕೆಯ ವಿಚಾರವಾಗಿ ಲೆಕ್ಕಪತ್ರ (ರಿಟರ್ನ್) ಸಲ್ಲಿಸುವಾಗ ಈ ಉಡುಗೊರೆ ಗಳ ಮೌಲ್ಯವನ್ನು ‘ಬೇರೆ ಮೂಲ ಗಳಿಂದ ಬಂದಿರುವ ಆದಾಯ’ ಎಂಬ ಕಾಲಂನಲ್ಲಿ ನಮೂದಿಸಬೇಕು.
ತೆರಿಗೆ ವ್ಯಾಪ್ತಿ ಆಸ್ತಿಗಳು?
ಗಿಫ್ಟ್ ಟ್ಯಾಕ್ಸ್‌ಗೆ ಒಳಪಡುವ ಸ್ಥಿರ/ಚರ ಆಸ್ತಿಗಳೆಂದರೆ;
*ಭೂಮಿ , ಕಟ್ಟಡ
*ಷೇರು
*ಚಿನ್ನಾಭರಣ ಹಾಗೂ ಬಂಗಾರ
*ಚಿತ್ರಕಲೆ, ಶಿಲ್ಪಕಲೆ ಹಾಗೂ ಕಲಾಕೃತಿಗಳ ಸಂಗ್ರಹ.
ಈ ಪಟ್ಟಿಯಲ್ಲಿರುವ ವಸ್ತುಗಳನ್ನು ಉಡುಗೊರೆ ಯಾಗಿ ಪಡೆದಾಗ (ರೂ50 ಸಾವಿರ ಮೌಲ್ಯ ಮೀರಿ ದ್ದರೆ) ಅವಕ್ಕೆ ತೆರಿಗೆ ವಿಧಿಸಲಾಗುತ್ತದೆ.
ಈ ಪಟ್ಟಿಯಲ್ಲಿರದ ವಸ್ತುಗಳನ್ನು ಉಡುಗೊರೆ ಅಥವಾ ದಾನವಾಗಿ ಪಡೆದರೆ ಅವುಗಳಿಗೆ ಯಾವುದೇ ತೆರಿಗೆ ನೀಡುವ ಅವಶ್ಯಕತೆ ಇರುವುದಿಲ್ಲ.
ಉದಾ: ವಾಹನಗಳು, ಗಡಿಯಾರ, ವಸ್ತ್ರ, ಪೀಠೋಪಕರಣ ಗಿಫ್ಟ್ ಟ್ಯಾಕ್ಸ್ ವ್ಯಾಪ್ತಿಗೆ ಬರುವ ಆಸ್ತಿಯ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಈ ವಸ್ತುಗ ಳನ್ನು ಉಡುಗೊರೆಯಾಗಿ ಪಡೆವ ವ್ಯಕ್ತಿಗಳು ತೆರಿಗೆಗೆ ಒಳಪಡುವುದಿಲ್ಲ.
ಉದಾ: ನಾಗರಾಜ್ ಎಂಬುವವರು 2014ರಲ್ಲಿ ವಿವಿಧ ಸಂದರ್ಭ ಗಳಲ್ಲಿ ಕೆಲವು ಉಡುಗೊರೆಗಳನ್ನು ಪಡೆದಿದ್ದರು.
*ಮದುವೆ ಸಂದರ್ಭದಲ್ಲಿ ಒಟ್ಟು ರೂ1 ಲಕ್ಷ ನಗದು.
*ಜನ್ಮದಿನಾಚರಣೆ ಸಂದರ್ಭದಲ್ಲಿ ಸ್ನೇಹಿತರಿಂದ ರೂ70 ಸಾವಿರ ನಗದು. ರೂ3 ಸಾವಿರ ಮೌಲ್ಯದ ಕೈಗಡಿಯಾರ, ರೂ60 ಸಾವಿರ ಬೆಲೆಯ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದರು. ಹಾಗೂ ಸಂಬಂಧಿಕರಿಂದ ರೂ1 ಲಕ್ಷ ನಗದು ಹಣವನ್ನು ಉಡುಗೊರೆಯಾಗಿ ಪಡೆದಿದ್ದರು.
*ಸಾವಿನ ಅಂಚಿನಲ್ಲಿರುವ ನೆರೆ ಮನೆಯವರಿಂದ ರೂ2 ಲಕ್ಷ ಹಣ.
*ಸಂಬಂಧಿಕರಲ್ಲದವರಿಂದ ರೂ5 ಲಕ್ಷ ಬೆಲೆಯ ಕಾರು.
*ಪಿತ್ರಾರ್ಜಿತ ಆಸ್ತಿಯಾದ ಮನೆಯ ಬೆಲೆ ರೂ25 ಲಕ್ಷವನ್ನು ಪಡೆದಿದ್ದರು.
ಪತಿ, ಪತ್ನಿ ನಡುವೆ ಉಡುಗೊರೆ
ಪತಿ, ಪತ್ನಿ ‘ಸಂಬಂಧಿಕರು’ ಎಂದು ಪರಿಗಣಿಸಿ ಇವರ ನಡುವೆ ವಿನಿಮಯಗೊಳ್ಳುವ ಉಡುಗೊರೆಗಳಿಗೂ ಗಿಫ್ಟ್ ಟ್ಯಾಕ್ಸ್‌ನಿಂದ ವಿನಾಯ್ತಿ ನೀಡಲಾಗಿದೆ.
ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 64ರ ಪ್ರಕಾರ ಪತಿ, ಪತ್ನಿ ನಡುವೆ ಹಣ ಮತ್ತು ಆಸ್ತಿ ವರ್ಗಾವಣೆಯಾಗಿ, ಅಂತಹ ಆಸ್ತಿಯಿಂದ ಲಭಿ ಸುವ ಆದಾಯಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ಮಾವ ಅಥವಾ ಅತ್ತೆಯು ತಮ್ಮ ಸೊಸೆಗೆ ಆಸ್ತಿಯನ್ನು ವರ್ಗಾಯಿಸಿ ದರೂ ಅದು ಗಿಫ್ಟ್ ಟ್ಯಾಕ್ಸ್‌ಗೆ ಒಳಪಡುತ್ತದೆ. ಮಗಳು ಮತ್ತು ಅಳಿಯನಿಗೆ ಇದು ಅನ್ವಯಿಸುವುದಿಲ್ಲ.
ಆದಾಯ ತೆರಿಗೆಯನ್ನು ವಂಚಿಸುವ ಉದ್ದೇಶ ದಿಂದ ಹಣ ಮತ್ತು ಆಸ್ತಿಯನ್ನು ಗಂಡ, -ಹೆಂಡತಿ, ಸೊಸೆಗೆ ವರ್ಗಾಯಿಸುತ್ತಾರೆ. ಆದ ಕಾರಣ ಅಂತಹ ಆಸ್ತಿಗಳಿಂದ ಲಭಿಸಿದ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇದನ್ನು ಕಾಯ್ದೆಯಲ್ಲಿ ‘ಕ್ಲಬ್ಬಿಂಗ್ ನಿಬಂಧನೆ’ಗಳು ಎಂದು ಹೇಳಲಾಗಿದೆ.
ರೂ50 ಸಾವಿರದ ಮಿತಿ
ಇಲ್ಲಿ ತೆರಿಗೆ ವಿನಾಯ್ತಿ ನೀಡುವುದಕ್ಕೆ ಸಂಬಂಧಿ ಸಿದಂತೆ ಉಡುಗೊರೆಗೆ ವಿಧಿಸಿರುವ ರೂ50 ಸಾವಿರ ಮೌಲ್ಯದ ಮಿತಿಯನ್ನು ಮೂಲ ವಿನಾಯ್ತಿ ಎಂದು ತಿಳಿಯಬಾರದು. ಉಡುಗೊರೆ ಅಥವಾ ದಾನದ ಮೊತ್ತ ಅಥವಾ ಆಸ್ತಿಯ ಮೌಲ್ಯ ರೂ50 ಸಾವಿರವನ್ನು ಮೀರಿದರೆ ಪೂರ್ಣ ಮೊತ್ತಕ್ಕೆ/ಆಸ್ತಿ ಮೌಲ್ಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಈ ರೂ50 ಸಾವಿರದ ಮಿತಿಯು ಹಣಕಾಸು ವರ್ಷದ ಪೂರ್ಣ ಅವಧಿವರೆಗೂ ಅನ್ವಯಿಸುತ್ತದೆ. ಪ್ರತ್ಯೇಕ ವ್ಯವಹಾರಕ್ಕೆ ಅಲ್ಲ.
ಉದಾಹರಣೆಗೆ ಹೇಳುವುದಾದರೆ ಸಂತೋಷ ಎಂಬುವವರು ತಮಗೆ ಸಂಬಂಧಿಕರಲ್ಲ ಸಂದೀಪ, ಕಾರ್ತಿಕ್ ಮತ್ತು ಲಲಿತಾ ಎಂಬವರಿಂದ ಉಡು ಗೊರೆಯಾಗಿ ಹಣವನ್ನು ಪಡೆದರು. ಅವರು ಪಡೆದ ಈ ಉಡುಗೊರೆ ಹೇಗೆ ಗಿಫ್ಟ್ ಟ್ಯಾಕ್ಸ್‌ಗೆ ಒಳಪಡುತ್ತದೆ?
ಒಂದು ವರ್ಷದಲ್ಲಿ ರೂ50 ಸಾವಿರಕ್ಕಿಂತ ಅಧಿಕ ಮೊತ್ತದ ಉಡುಗೊರೆ ಪಡೆದರೆ ಮಾತ್ರವೇ ಗಿಫ್ಟ್ ಟ್ಯಾಕ್ಸ್ ಪಾವತಿಸಬೇಕು. ಈ ಪ್ರಕರಣದಲ್ಲಿ ಸಂತೋಷ್ ಅವರು ಒಟ್ಟು ರೂ50 ಸಾವಿರವನ್ನಷ್ಟೇ ಉಡುಗೊರೆಯಾಗಿ ಪಡೆದಿದ್ದಾರೆ. ಅವರ ಪಡೆದ ಉಡುಗೊರೆಗಳು ತೆರಿಗೆಗೆ ಒಳಪಡುವುದಿಲ್ಲ.
ಒಂದು ವೇಳೆ ಲಲಿತಾ ಅವರು ನೀಡಿದ ಹಣ ರೂ15 ಸಾವಿರ ಆಗಿದ್ದರೆ, ಸಂತೋಷ್ ಪಡೆದುಕೊಂಡ ಉಡುಗೊರೆಗಳ ಒಟ್ಟು ಮೊತ್ತ ರೂ55 ಸಾವಿರವಾಗುತ್ತಿತ್ತು. ಆಗ ಸಂತೋಷ್ ಅವರು ಪೂರ್ಣ ರೂ55 ಸಾವಿರ ಮೊತ್ತಕ್ಕೂ ಗಿಫ್ಟ್ ಟ್ಯಾಕ್ಸ್ ನೀಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.