ನೀತಿ ನಿಯಮಗಳಿರಲಿ, ಶಿಸ್ತು ಸಂಯಮವಿರಲಿ/
ಭೀತಿಯಾಗಿ ಇರಲಿ ಬಿಡು, ಅಳತೆಯೊಂದರಲಿ//
ಮಾತಿನಲಿ ಬೆದರಿಕೆಯ ಪದಗಳಾಟದ ಜೊತೆಯೆ/
ಪ್ರೀತಿಯೂ ಬೆಸೆದಿರಲಿ –ನವ್ಯಜೀವಿ//
ಪ್ರಾಜೆಕ್ಟ್ ಒಂದರಲ್ಲಿ ಎಪ್ಪತ್ತು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಬಿಡುವಿರದಷ್ಟು ಕೆಲಸ. ತಾವು ಕಾರ್ಯೋನ್ಮುಖರಾಗಿರುವ ಈ ಕೆಲಸ ಅದೆಷ್ಟು ಮಹತ್ವದ್ದು ಹಾಗೂ ಇದು ದೇಶದ ಉನ್ನತಿಯ ಹಾದಿಯಲ್ಲಿ ಅದೆಷ್ಟು ವಿಶೇಷವಾದದ್ದು ಎಂಬ ಅರಿವಿದೆ. ಹಾಗಾಗಿ ಎಲ್ಲ ವಿಜ್ಞಾನಿಗಳೂ ತಮ್ಮನ್ನು ಈ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಬಿಟ್ಟಿದ್ದಾರೆ. ಶತಾಯ ಗತಾಯ ಹಿಡಿದ ಕೆಲಸವನ್ನು ನಿಗದಿ ಪಡಿಸಿರುವ ಸಮಯದೊಳಗೆ ಮುಗಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಇವರೆಲ್ಲರ ನಾಯಕ ಕೂಡ ಅಷ್ಟೇ ಶಿಸ್ತಿನ ಸಿಪಾಯಿ. ಕೆಲಸದ ವಿಷಯದಲ್ಲಿ ಎಂದಿಗೂ ಆತ ಹೊಂದಾಣಿಕೆ ಮಾಡಿಕೊಂಡವನೇ ಅಲ್ಲ. ತಾನೇ ಎಲ್ಲದರಲ್ಲೂ ಮುಂದೆ ನಿಂತು ಅದಮ್ಯ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾನೆ.
ಒಂದು ದಿನ ವಿಜ್ಞಾನಿಯೊಬ್ಬ ಆತನ ಬಳಿ ಬಂದು ‘ಸರ್, ನನಗೆ ಈ ದಿನ ಸಂಜೆ ಐದೂವರೆಗೆಲ್ಲ ಹೊರಡಲು ಅನುಮತಿ ಬೇಕು’ ಎಂದು ಕೇಳುತ್ತಾನೆ. ಅದಕ್ಕೆ ಬಾಸ್ ‘ಅಷ್ಟು ಬೇಗ? ಅದೇನು ಅಂತಹ ತುರ್ತಾದ ಕೆಲಸವಿದೆ? ಮನೆಯಲ್ಲೆಲ್ಲಾ ಸೌಖ್ಯ ತಾನೆ?’ ಎಂದು ವಿಚಾರಿಸುತ್ತಾರೆ. ‘ಹಾಗೇನಿಲ್ಲ ಸರ್, ನಗರದಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನದ ಕಡೆಯ ದಿನ ಇದು. ನನ್ನ ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುತ್ತೇನೆಂದು ಹೇಳಿದ್ದೇನೆ. ಹಾಗಾಗಿ ಇಂದು ಸಂಜೆ ಸ್ವಲ್ಪ ಬೇಗ ಮನೆಗೆ ತೆರಳಲು ಅನುಮತಿ ಕೇಳುತ್ತಿದ್ದೇನೆ’ ಎನ್ನುತ್ತಾ ಯಾವುದೋ ಮಾಡಬಾರದ ತಪ್ಪನ್ನು ಮಾಡುವ ಹಾಗೆ ಮುಖ ಕೆಳಗೆ ಹಾಕಿ ನಿಂತಿದ್ದ ಆ ವಿಜ್ಞಾನಿ.
‘ಆಯಿತು’ ಎಂದಷ್ಟೇ ಚುಟುಕಾಗಿ ಹೇಳಿ ಮತ್ತೆ ಕೆಲಸದಲ್ಲಿ ಜಾರಿಕೊಂಡ ಬಾಸಿನ ಕೋಣೆಯಿಂದ ಹೊರಬಂದ ವಿಜ್ಞಾನಿಯೂ ಕೂಡ ಎಂದಿನಂತೆ ತನ್ನ ಕೆಲಸದಲ್ಲಿ ಮುಳುಗಿ ಹೋದ. ಕೆಲಸದಲ್ಲಿ ತನ್ಮಯತೆ ಒಂದು ಬಿಟ್ಟರೆ ಆಗ ಸಮಯದ ಪರಿವೆಯೇ ಇರುವುದಿಲ್ಲ. ಪಾಪ ಈ ವಿಜ್ಞಾನಿಯದೂ ಅದೇ ಕತೆ. ಸಮಯ ಮರೆತು ಹೋಯಿತು. ಕೆಲಸ ಮುಗಿಸಿ ಹೊರಡಬೇಕೆಂಬ ಯೋಚನೆ ಸುಳಿದಾಗ ಕೈ ಗಡಿಯಾರ ನೋಡಿಕೊಳ್ಳುತ್ತಿದ್ದಾನೆ. ಸಣ್ಣ ಮುಳ್ಳು ಎಂಟರ ಸಮೀಪಕ್ಕೆ ಮೆಲ್ಲ ಸಾಗುತ್ತಿದೆ. ತಕ್ಷಣವೇ ಅವನಿಗೆ ತನ್ನ ಮಕ್ಕಳನ್ನಿಂದು ವಸ್ತು ಪ್ರದರ್ಶನಕ್ಕೆ ಕರೆದೊಯ್ಯುವುದಾಗಿ ಕೊಟ್ಟ ಮಾತು ನೆನಪಾಗುತ್ತದೆ. ಕೆಲಸದ ಕರ್ತವ್ಯದ ಭಾರ ಒಮ್ಮೆಗೆ ಇಳಿದು, ಅಲ್ಲೀಗ ಅಪ್ಪನ ಅಪರಾಧ ಭಾವ ಹೆಡೆ ಎತ್ತಿದೆ.
ಕಚೇರಿಯಿಂದ ದೌಡಾಯಿಸಿ ವಿಜ್ಞಾನಿ ಮನೆಗೆ ಬರುತ್ತಾನೆ. ಮಕ್ಕಳಿಗೆ ಏನು ಸಬೂಬು ನೀಡುವುದೆಂಬ ಚಿಂತೆ. ಅನ್ಯತಾ ಅವರನ್ನು ನೋಯಿಸಿದೆನಲ್ಲಾ ಎಂದು ಪಾಪಪ್ರಜ್ಞೆ. ಹಜಾರದಲ್ಲಿ ಹೆಂಡತಿ ಕುಳಿತಿದ್ದಾಳೆ. ಬಳಿ ಬಂದ ಪತಿಯನ್ನು ಕಂಡು ಎಂದಿನಂತೆ ಮುಗುಳ್ನಗುತ್ತ ಬಿಸಿಯಾದ ಕಾಫಿ ತರಲು ಒಳಹೊರಟಿದ್ದಾಳೆ.
ಹಿಂಜರಿಯುತ್ತಲೇ ವಿಜ್ಞಾನಿ ‘ಏನೇ? ಮಕ್ಕಳು ಎಲ್ಲಿ? ಈ ದಿನ ವಸ್ತು ಪ್ರದರ್ಶನಕ್ಕೆ ಅವರನ್ನು ಕರೆದೊಯ್ಯುತ್ತೇನೆ ಎಂದು ಮಾತು ಕೊಟ್ಟಿದ್ದೆ. ಬೆಳಿಗ್ಗೆಯೇ ಬಾಸಿನಿಂದ ಬೇಗ ಕಚೇರಿ ಬಿಡಲು ಅನುಮತಿಯನ್ನೂ ಪಡೆದಿದ್ದೆ. ಆದರೆ, ಕೆಲಸದ ಭರದಲ್ಲಿ ಎಲ್ಲ ಮರೆತುಹೋಯಿತು. ದೊಡ್ಡ ತಪ್ಪಾಗಿ ಹೋಯಿತು. ಮಕ್ಕಳು ಮುನಿಸಿಕೊಂಡಿದ್ದಾರೇನು?’ ಎನ್ನುತ್ತಲೇ ಕುಬ್ಜನಾಗುತ್ತಿದ್ದ ವಿಜ್ಞಾನಿ.
‘ಅರೆ, ನಿಮಗೆ ಗೊತ್ತೇ ಇಲ್ಲವೆ? ನಿಮ್ಮ ಬಾಸ್ ಮನೆಗೆ ಐದೂವರೆಗೆ ಸರಿಯಾಗಿ ಬಂದು, ನೀವು ಕೆಲಸದಲ್ಲಿ ಮಗ್ನರಾಗಿರುವುದರಿಂದ ನಿಮಗೆ ಬರಲಾಗುವುದಿಲ್ಲವೆಂದು ತಿಳಿಸಿ ಮಕ್ಕಳನ್ನು ತಾನೇ ಸ್ವತಃ ವಸ್ತು ಪ್ರದರ್ಶನಕ್ಕೆ ಕರೆದೊಯ್ದರಲ್ಲ. ರಾತ್ರಿಯೂಟ ಮುಗಿಸಿಯೇ ಮಕ್ಕಳನ್ನು ಕರೆತರುವುದಾಗಿ ಹೇಳಿ ಹೊರಟರು. ಎಂಥಾ ಒಳ್ಳೇ ಮನುಷ್ಯ ಕಣ್ರೀ, ನಿಮ್ಮ ಬಾಸ್!’ ಎನ್ನುತ್ತ ಬೆನ್ನು ಮಾಡಿ ಅಡುಗೆ ಮನೆಯತ್ತ ಹೊರಟ ಹೆಂಡತಿಯ ಹಿಂದೆ ವಿಜ್ಞಾನಿ ಮಾತೇ ಬರದಂತಾಗಿ ದಂಗಾಗಿ ನಿಂತಿದ್ದಾನೆ!
ಪ್ರಾಯಶಃ ಐದೂವರೆಗೆ ಬಾಸ್ ನಾನು ಕೆಲಸದಲ್ಲಿ ನಿರತನಾಗಿರುವುದನ್ನು ಕಂಡಿರಬೇಕು. ಆ ಹೊತ್ತಿನ ಸಂಶೋಧನಾ ಪ್ರಯೋಗವನ್ನು ಆ ಹೊತ್ತಿಗೇ ನಿಲ್ಲಿಸುವಂತಿರಲಿಲ್ಲ. ಇದು ಬಾಸಿಗೂ ಗೊತ್ತು. ಹಾಗಾಗಿ ಅವರೇ ಸ್ವತಃ ಮನೆಗೆ ಬಂದು ನನ್ನ ಮಕ್ಕಳನ್ನು ನನ್ನ ಪರವಾಗಿ ವಸ್ತು ಪ್ರದರ್ಶನಕ್ಕೆ ಕರೆದೊಯ್ದಿದ್ದಾರೆ. ಆ ಗಳಿಗೆಯಲ್ಲಿ ವಿಜ್ಞಾನಿಯ ಕಣ್ಣುಗಳು ಧನ್ಯತಾಭಾವದಿಂದ ಒದ್ದೆಯಾಗಿರಲೇಬೇಕು!
ಆ ವಿಜ್ಞಾನಿ ಕೆಲಸ ಮಾಡುತ್ತಿದ್ದುದು ತುಂಭಾದಲ್ಲಿದ್ದ ಬಾಹ್ಯಾಕಾಶ ವಿಜ್ಞಾನದ ಪ್ರಾಜೆಕ್‌್ಟನಲ್ಲಿ. ಹಾಗೂ ಆತನ ಬಾಸ್ ಮತ್ತಾರೂ ಅಲ್ಲ, ನಾವು ಕಂಡ ಭಾರತದ ಅನೇಕ ರಾಷ್ಟ್ರಾಧ್ಯಕ್ಷರಲ್ಲಿ ನಮ್ಮೆಲ್ಲರಿಗೂ ಬಹಳ ಪ್ರಿಯವೆನ್ನಿಸುವ ಡಾ. ಅಬ್ದುಲ್ ಕಲಾಂ ಅವರು!
ಅವರ ಒಟ್ಟಾರೆ ವ್ಯಕ್ತಿತ್ವವೇ ನನಗೆ ಅಪ್ಯಾಯನ. ಅವರ ಬಾಲ್ಯ, ಓದು, ಕಾರ್ಯಕ್ಷೇತ್ರದಲ್ಲಿನ ವೈಜ್ಞಾನಿಕ ಸಾಧನೆ, ಬದುಕು, ಬರಹ ಅಧ್ಯಕ್ಷರಾಗಿದ್ದಾಗ ಅವರು ಪಾಲಿಸಿದ ನಿಯಮಗಳು ಹಾಗೂ ಅಧ್ಯಕ್ಷಾವಧಿಯ ನಂತರ ಸಮಾಜದಲ್ಲಿ ಅವರು ವ್ಯವಹರಿಸುವ ರೀತಿ ನೀತಿ –ಹೀಗೆ ಎಲ್ಲವೂ ಅವರಲ್ಲಿ ನನಗೆ ಅತ್ಯಂತ ಗೌರವ ಮೂಡಿಸಿದೆ. ಸನಾತನ ಧರ್ಮದ ತವರೂರಾಗಿ ವಿಶ್ವಕ್ಕೆ ಮನುಜ ಸಂಸ್ಕೃತಿಯನ್ನು ಪರಿಚಯಿಸಿದ ನಮ್ಮ ಈ ಶ್ರೇಷ್ಠ ನೆಲದ ಅಧ್ಯಕ್ಷರಾಗುವುದಕ್ಕೆ ಅದೇನೆಲ್ಲ ಗುಣಗಳಿರಬೇಕೋ, ಅವೆಲ್ಲ ಅವರಲ್ಲಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಎಲ್ಲರಿಗೂ ಅವರೊಬ್ಬ ಮಾದರಿಯೇ ಸರಿ.
ಬಾಸ್ ಒಬ್ಬ ಹೇಗಿರಬೇಕು ಎಂದ ಕೂಡಲೇ ಅಮೆರಿಕದ ಮ್ಯಾನೇಜ್‌ಮೆಂಟ್ ತಜ್ಞರೆಲ್ಲ ತಮ್ಮದೇ ಆದ ಒಂದೊಂದು ಗುಣ ಪಟ್ಟಿಯನ್ನು ನೀಡುತ್ತಾರೆ. ಒಬ್ಬನದು ‘ಒಳ್ಳೆಯ ಬಾಸ್ ಆಗುವುದಕ್ಕೆ ಏಳು ಸೂತ್ರಗಳಿವೆ’. ಮತ್ತೊಬ್ಬನದು ‘ಬಾಸ್‌ಗಿರಬೇಕಾದ ಹತ್ತು ಗುಣಗಳು’ ಎಂಬ ವ್ಯಾಖ್ಯಾನ. ಇವೆಲ್ಲದರಲ್ಲೂ ‘ಎಂಪತಿ’ ಎಂಬುವುದು ಸಾಮಾನ್ಯ ಗುಣ. ಆದರೆ ಆ ವಿಶೇಷ ಗುಣಕ್ಕೆ ಇವರೆಲ್ಲ ನೀಡುವುದು ಕಡೆಯ ಸ್ಥಾನವೆಂಬುವುದು ಮಾತ್ರ ನನಗೆ ಅರ್ಥವಾಗದ ವಿಚಾರ, ಒಪ್ಪದ ಸಿದ್ಧಾಂತವೂ ಹೌದು.
‘ಎಂಪತಿ’ ಎಂಬುವುದನ್ನು ನಮ್ಮ ನಿಘಂಟುಗಳು ‘ಇತರರ ಭಾವನೆ ಹಾಗೂ ಅನುಭವಗಳನ್ನು ಗ್ರಹಿಸುವ ಶಕ್ತಿ’ ಎಂದು ವಿವರಿಸುತ್ತ ‘ಅನುಭೂತಿ’ ಎಂಬ ಕನ್ನಡ ಪದವನ್ನು ಸೂಚಿಸುತ್ತವೆ. ಯಾಕೋ ‘ಎಂಪತಿ’ ಎಂಬ ಆಂಗ್ಲ ಪದದ ಹಿಂದೆ ಕೇಳಿ ಬರುವ ಆ ಮ್ಯಾನೇಜ್‌ಮೆಂಟಿನ ಕಷ್ಟ ಹಾಗೂ ಸಿದ್ಧಾಂತ ನನಗೆ ‘ಅನುಭೂತಿ’ ಎಂಬ ಪದ ಕೇಳಿದಾಗ ಒಡಂಬಡುವುದಿಲ್ಲ ಸಹೋದ್ಯೋಗಿಗಳ ಬಗೆಗಿನ ಗೌರವದಿಂದ, ಕೆಲಸದಲ್ಲಿ ಅವರಿಗೆ ಪ್ರಾಮಾಣಿಕವಾಗಿ ಇರುವ ತೊಂದರೆಗಳನ್ನು ಸ್ವತಃ ಯಾರು ಮನಗಂಡು, ಅವುಗಳನ್ನು ಕ್ಷುಲ್ಲಕ ಎಂದು ಪರಿಗಣಿಸದೆ ಅವುಗಳಿಗೆ ಅನುಕಂಪದಿಂದ ಪ್ರತಿಸ್ಪಂದಿಸುತ್ತಾರೋ, ಅಂತಹವರಲ್ಲಿ ‘ಎಂಪತಿ’ ಇದೆ ಎಂದರ್ಥ.
ಯಾವುದೇ ಕ್ಷೇತ್ರವಿರಲಿ, ಅಲ್ಲಿನ ಎಲ್ಲರ ಅನಿಸಿಕೆಗಳಿಗೆ ಗೌರವ ಸೂಚಿಸಿ ಯಾರು ಕಾರ್ಯ ನಿರ್ವಹಿಸುತ್ತಾರೋ, ಅವರಲ್ಲಿ ‘ಎಂಪತಿ’ ಇದೆ ಎನ್ನಬಹುದು. ಇದಕ್ಕೊಂದು ಸೂಕ್ತ ಹಾಗೂ ಸಮಂಜಸವಾದ ಕನ್ನಡದ ಪದ ಅಥವಾ ಪದ ವಿನ್ಯಾಸವೊಂದನ್ನು ಹುಡುಕುತ್ತಿದ್ದೇನೆ. ತಮ್ಮಲ್ಲಿ ಯಾರಾದರೂ ಸೂಚಿಸಿದರೆ – ಮುಂಗಡ ಧನ್ಯವಾದಗಳು.
‘ಬಾಸ್’ ಎಂದರೆ ನಾಯಕ ಕಂಪೆನಿಯನ್ನು ನಡೆಸುವ ಮುಂದಾಳತ್ವವನ್ನು ವಹಿಸಿಕೊಂಡಿರುವ ಅತ್ಯಂತ ಜವಾಬ್ದಾರಿ ಮನುಷ್ಯ. ಕಂಪೆನಿಯನ್ನು ಸರ್ವ ಕಾಲದಲ್ಲೂ ಲಾಭದಾಯಕವಾಗಿ ನಡೆಸಬಲ್ಲ ದೂರದೃಷ್ಟಿ ಹಾಗೂ ಕಾರ್ಯತತ್ಪರತೆ, ಇವೆರಡೂ ಅವನಿಗಿರಬೇಕಾದ ಅಸ್ತ್ರಗಳು. ಕಂಪೆನಿಯನ್ನು ನಡೆಸುವ ನೀತಿ ನಿಯಮಗಳ ಬೆನ್ನಲ್ಲೇ ಎಲ್ಲರಲ್ಲಿ ಶಿಸ್ತು ಸಂಯಮವನ್ನು ಬೆಳೆಸುವಂತಹ ಕೌಶಲವೂ ಅವನಿಗಿರಬೇಕು. ಆದರೆ, ಇದಾವುದನ್ನೂ ಆತನೊಬ್ಬನೇ ನಡೆಸಲಾಗುವುದಿಲ್ಲ. ಅದಕ್ಕಾಗಿ ಅವನಿಗೆ ಅನೇಕ ಸಹದ್ಯೋಗಿಗಳ ಸಹಕಾರ ಬೇಕು. ಅವರೆಲ್ಲರೂ ಆ ನಾಯಕನನ್ನು ತುಂಬು ಮನಸ್ಸಿನಿಂದ ಬೆಂಬಲಿಸಬೇಕು. ಆತ ತೋರಿದ ದಾರಿಯಲ್ಲಿ ಅವರೆಲ್ಲ ಶ್ರದ್ಧೆಯಿಂದ ಮುನ್ನಡೆಯುವಂತಿರಬೇಕು. ಹಾಗಾಗಬೇಕಾದರೆ, ಬಾಸ್ ಆದವನು ತನ್ನ ಜನರನ್ನು ‘ಕಾಪಾಡಿಕೊಳ್ಳಬೇಕು’.
ಕಾಪಾಡಿಕೊಳ್ಳುವುದು ಎಂದರೆ ಅವರಿಗೆ ಪ್ರತಿ ತಿಂಗಳು ವೇತನ ಬರುವಂತೆ ನೋಡಿಕೊಂಡು ಬಿಟ್ಟರೆ ಸಾಕಾಗದು. ಆತ ಅವರನ್ನೆಲ್ಲ ಗೌರವದಿಂದ ನಡೆಸುತ್ತಾ, ಅವರ ಅನಿಸಿಕೆಗಳಿಗೆ ಸೂಕ್ತವೆಂದಲ್ಲಿ ಬೆಲೆ ಕೊಡುತ್ತ, ಅವರ ಎಲ್ಲ ತೊಂದರೆಗಳನ್ನು ಸ್ವ ಪ್ರೇರಣೆಯಿಂದ ಪರಿಹರಿಸುತ್ತ ಸಾಗಬೇಕು. ಅಂದರೆ, ಅವನಲ್ಲಿ ಎಂಪತಿ ಇರಬೇಕು!
ಹಾಗಾದರೆ, ಎಂಪತಿಗಾಗಿ ಬೆಟ್ಟಗಳನ್ನು ಕಡೆಯಬೇಕೆ? ಅಲ್ಲವೇ ಅಲ್ಲ. ದಿನನಿತ್ಯದ ವ್ಯವಹಾರಗಳಲ್ಲಿ ಒಂದೊಳ್ಳೆಯ ಮಾತು; ಅನುಕಂಪದ ಒಂದೊಳ್ಳೆಯ ಕೃತ್ಯ; ನಿನ್ನ ತೊಂದರೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂಬ ಒಂದೊಳ್ಳೆಯ ಅನುಭೂತಿ; ಕೆಲಸದ ಶಿಸ್ತಿನಲ್ಲಿ ತೊಡಕಾಗದ ಹಾಗೆ ಒಂದೊಳ್ಳೆಯ ವೈಯಕ್ತಿಕ ಮಾತುಕತೆ ಹಾಗೂ ವ್ಯವಹಾರ; ಇಷ್ಟೆ! ಕೆಲಸದಲ್ಲಿ ಬಾಸ್ ಅದೆಷ್ಟೇ ಗಟ್ಟಿಗನಾಗಿದ್ದರೂ ಈ ಒಂದು ವಿಷಯದಲ್ಲಿ ಹಗುರವಾಗಿಬಿಟ್ಟರೆ, ಅಂತಹವನ ಜೊತೆ ಯಾರೂ ತಮ್ಮ ಕಾರ್ಯಜೀವನವನ್ನು ಕಳೆಯಬೇಕೆಂದು ಹಂಬಲಿಸುವುದಿಲ್ಲ ಎಂಬುದೇ ಸಾರ್ವಕಾಲಿಕ ಸತ್ಯ. ಅಂತೆಯೇ, ನನ್ನ ಮಟ್ಟಿಗೆ ಒಳ್ಳೆಯ ಬಾಸ್ ಒಬ್ಬನಲ್ಲಿ ಇರಬೇಕಾದ ಅಗ್ರ ಗುಣ ಇದು.
ಇದಿಲ್ಲದಿದ್ದರೆ ‘ಈ ಮನುಷ್ಯ, ಎಂಥಾ ಬಾಸ್ ಕಣ್ರೀ’ ಎಂದು ಜನ ಹೇಳಿದರೂ ಹೇಳಬಹುದೇ ಹೊರತು, ಅವರೆಂದಿಗೂ ‘ಈ ಬಾಸ್, ಎಂಥಾ ಒಳ್ಳೆ ಮನುಷ್ಯ ಕಣ್ರೀ’ ಎಂದು ಗೌರವಿಸಲಾರರು.
ಡಾ. ಅಬ್ದುಲ್ ಕಲಾಂ ಅವರ ಘಟನೆಯನ್ನು ಮತ್ತೊಮ್ಮೆ ಓದಿಕೊಳ್ಳಿ ಒಳ್ಳೆಯ ಬಾಸ್ ಆಗುವುದು ಜೊತೆ ಜೊತೆಯಲ್ಲಿಯೇ ಒಳ್ಳೆಯ ಮನುಷ್ಯನಾಗುವುದೂ ಅದೆಷ್ಟು ಸಾರ್ಥಕ ಹಾಗೂ ಹಿತಕರ ಎಂಬ ಅರಿವು ಮೂಡುವುದು ಖಂಡಿತ!
ಲೇಖಕರು:satyesh.bellur@gmail.com ಇ–ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.