ADVERTISEMENT

ಒಡವೆ ವಿನ್ಯಾಸದ ಮೋಹಕ ಕೌಶಲ

ಇದು ಬಂಗಾರದ ಹಬ್ಬ

ವಿದ್ಯಾಶ್ರೀ ಎಸ್.
Published 6 ಮೇ 2019, 7:24 IST
Last Updated 6 ಮೇ 2019, 7:24 IST
   

ಆಭರಣ ವಿನ್ಯಾಸವು ಒಂದು ಕಲೆ. ಬದಲಾದ ಕಾಲಕ್ಕೆ ತಕ್ಕಂತೆ ಅದರ ವಿನ್ಯಾಸದಲ್ಲಿ ಹೊಸತನ ಮೂಡುತ್ತಲೇ ಇರುತ್ತದೆ. ಹಳತು ಹೊಸದಾದರೆ, ಟ್ರೆಂಡ್‌ಗೆ ತಕ್ಕಂತೆ ನಾನಾ ರೂಪ ಪಡೆಯುವ ಮೂಲಕ ಆಭರಣಗಳ ಪ್ರಿಯರ ಮನಸು ಗೆಲ್ಲುತ್ತದೆ.

ಹೆಂಗಸರು ಆಭರಣಗಳನ್ನು ಖರೀದಿಸುವಾಗ ಕೇವಲ ಹೂಡಿಕೆಯ ಉದ್ದೇಶವಷ್ಟೇ ಇರುವುದಿಲ್ಲ. ಒಡವೆಗಳು ಆಕರ್ಷಕವಾಗಿರಬೇಕು ಎಂಬ ಆಕಾಂಕ್ಷೆಯೂ ಅವರಲ್ಲಿ ಇರುತ್ತದೆ. ಟ್ರೆಂಡ್‌ಗೆ ತಕ್ಕಂತೆ ಒಡವೆಗಳ ವಿನ್ಯಾಸವೂ ಒಗ್ಗಿಕೊಂಡರೇನೆ ಅದು ಗ್ರಾಹಕರನ್ನು ಸೆಳೆಯಲು ಸಾಧ್ಯ.

ಆಭರಣ ವಿನ್ಯಾಸವನ್ನು ಸಿದ್ಧಿಸಿಕೊಳ್ಳಲು ಪ್ರತಿ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸುವ ಕೌಶಲ ಅಗತ್ಯ. ಇತಿಹಾಸ, ಪರಂಪರೆ, ದೇವಸ್ಥಾನ, ಪ್ರಕೃತಿ, ಐತಿಹಾಸಿಕ ಸ್ಮಾರಕಗಳು, ಕಲೆ... ಹೀಗೆ ಹಲವು ವಿಷಯಗಳಿಂದ ಸ್ಫೂರ್ತಿ ಪಡೆದು ಆಭರಣಗಳು ಕಳೆಗಟ್ಟುತ್ತವೆ. ಪರಿಕಲ್ಪನೆ ಹಂತದಲ್ಲಿ ಸ್ಫೂರ್ತಿ ಹಾಗೂ ವಿಷಯದ ನಡುವೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಆಭರಣಗಳನ್ನು ವಿನ್ಯಾಸ ಮಾಡಲಾಗುತ್ತದೆ.

ADVERTISEMENT

ಭಾರತ ಆಭರಣಗಳ ತವರು. ಪಾಶ್ಚಾತ್ಯ ರಾಷ್ಟ್ರಗಳಿಗೆ ಬಹುವರ್ಷಗಳಿಂದಲೂ ನಿರಂತರವಾಗಿ ರತ್ನ, ಹರಳುಗಳನ್ನು ಪೂರೈಸಿದೆ. ನಿಜಾಮರ ಕಾಲದ ವಿನ್ಯಾಸಗಳನ್ನು ಇತರ ರಾಷ್ಟ್ರಗಳು ಅನುಕರಿಸಿವೆ. ರವಿವರ್ಮನ ಕಲಾಕೃತಿಗಳಲ್ಲಿನ ಆಭರಣ ವಿನ್ಯಾಸಗಳು ಬ್ರಿಟಿಷ್‌ ರಾಣಿಯ ಆಭರಣಗಳಲ್ಲೂ ಪ್ರತಿಬಿಂಬಿತವಾಗಿರುವುದೇ ಇದಕ್ಕೆ ನಿದರ್ಶನ. ಆಭರಣ ವಿನ್ಯಾಸದ ಮೂಲಪಾಠವನ್ನು ವಿಶ್ವಕ್ಕೆ ಬೋಧಿಸಿರುವುದರಲ್ಲಿ ಭಾರತದ ಪಾತ್ರ ಗಮನಾರ್ಹ. ವಿಜಯನಗರದ ಅರಸರು, ಮೈಸೂರು ಒಡೆಯರು ಹಾಗೂ ನಿಜಾಮರ ಶೈಲಿಯ ಆಭರಣ ವಿನ್ಯಾಸಗಳು ವಿಶ್ವದ ಆಭರಣ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ.

ದೇವಸ್ಥಾನಗಳಲ್ಲಿರುವ ಸುಂದರ ಕೆತ್ತನೆಗಳು, ದೇವರ ಸಣ್ಣಸಣ್ಣ ಮಾದರಿಗಳಿಂದ ಸ್ಫೂರ್ತಿ ಪಡೆದು ತಯಾರಾಗಿರುವ ಟೆಂಪಲ್ ಜುವೆಲ್ಲರಿಗೆ ಇದೀಗ ಟ್ರೆಂಡ್ ಎನಿಸಿದೆ. ಅದ್ಧೂರಿ ಸಮಾರಂಭಗಳಿಂದ ಚಿಕ್ಕ ಸಮಾರಂಭಗಳಿಗೂ ತಕ್ಕುದಾದ ವಿನ್ಯಾಸ ಇದರಲ್ಲಿ ರೂಪುಗೊಂಡಿದೆ.

ಟೆಂಪಲ್ ಜುವೆಲರಿ ವಿನ್ಯಾಸವನ್ನು ಆಭರಣ ಜಗತ್ತಿಗೆ ಪರಿಚಯಿಸಿದ್ದು ದಕ್ಷಿಣ ಭಾರತವೇ. ಆಭರಣಗಳ ವಿನ್ಯಾಸದ ಇತಿಹಾಸದ ಪರದೆ ಸರಿಸಿದಾಗ ಈ ಟೆಂಪಲ್ ಜುವೆಲರಿ 9ನೇ ಶತಮಾನದ ಚೋಳರ ಕಾಲದಲ್ಲಿಯೇ ಜನಪ್ರಿಯವಾಗಿತ್ತು ಎನ್ನುವ ವಿವರಗಳು ದೊರೆಯುತ್ತವೆ. ಆ ಕಾಲದಲ್ಲಿ ಪೂಜಿಸುತ್ತಿದ್ದ ದೇವತೆಗಳು ಮತ್ತು ಇತರ ದೇವರ ವಿಗ್ರಹಗಳನ್ನು ಆಭರಣದಲ್ಲಿ ವಿನ್ಯಾಸಗೊಳಿಸುತ್ತಿದ್ದರಂತೆ. ದೇವಸ್ಥಾನಗಳು ಹೆಚ್ಚಾಗಿರುವ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ವಿನ್ಯಾಸದ ಆಭರಣಗಳಿಗೆ ಬಹುಬೇಡಿಕೆ ಇದೆ.

ಚಿನ್ನ, ಬೆಳ್ಳಿ ಮತ್ತು ಅಮೂಲ್ಯವಾದ ಹರಳು–ಮುತ್ತುಗಳನ್ನು ಬಳಸಿ ಟೆಂಪಲ್ ಜುವೆಲರಿ ಆಭರಣಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ತಿರುಪತಿ ವೆಂಕಟರಮಣ, ಲಕ್ಷ್ಮಿ, ಸರಸ್ವತಿ, ಗಣಪತಿ, ಕೃಷ್ಣ ಮತ್ತು ದೇವರ ಚಿತ್ರಗಳನ್ನು ಅಚ್ಚಿನ ಮಾದರಿಯಲ್ಲಿ ಟೆಂಪಲ್ ಜುವೆಲರಿ ವಿನ್ಯಾಸದಲ್ಲಿ ಬಳಸಲಾಗುತ್ತದೆ.

ಉದ್ದನೆಯ ಹಾರದಲ್ಲಿ ದೇವರ ಚಿತ್ತಾರದ ದೊಡ್ಡ ಡಾಲರ್ ಇರುತ್ತದೆ. ಹಾರದ ಎಳೆಯಲ್ಲೂ ದೇವರ ಸಣ್ಣ ಮಾದರಿಗಳನ್ನು ವಿನ್ಯಾಸ ಮಾಡಲಾಗಿರುತ್ತದೆ. ನೆಕ್ಲೆಸ್‌ಗೂ ಇದೇ ಮಾದರಿಯನ್ನು ಬಳಸುವುದುಂಟು.

ಹೀಗೆ ಬಗೆಬಗೆ ವಿಷಯದ ಮೂಲಕ ಸ್ಫೂರ್ತಿ ಪಡೆದು ರೂಪು ಪಡೆದ ಆಭರಣಗಳು ಸಿನಿಮಾಗಳ ಮೂಲಕ ಟ್ರೆಂಡ್‌ ಹುಟ್ಟುಹಾಕುತ್ತವೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಪದ್ಮಾವತ್‌ ಸಿನಿಮಾದಲ್ಲಿ ದೊಡ್ಡ ದೊಡ್ಡ ಆಭರಣಗಳು ಕಣ್ಸೆಳೆದಿದ್ದವು. ಆದರೆ, ಅದು ಟ್ರೆಂಡ್‌ ಸೃಷ್ಟಿಸಿದ್ದು ಕಡಿಮೆ. ಬಾಹುಬಲಿ 2 ಸಿನಿಮಾದ ಆಭರಣಗಳು ಹೆಚ್ಚು ಜನಪ್ರಿಯತೆ ಪಡೆದವು.

ದೇವಸೇನಾ ಪಾತ್ರ ಮಾಡಿರುವ ಅನುಷ್ಕಾ ಶೆಟ್ಟಿ ಹಾಗೂ ಶಿವಗಾಮಿಯಾಗಿ ನಟಿಸಿರುವ ರಮ್ಯಕೃಷ್ಣ ಧರಿಸಿರುವಂತಹ ಆಭರಣಗಳ ಟ್ರೆಂಡ್ ಶುರುವಾಗಿದೆ. ಅದರಲ್ಲೂ ಅನುಷ್ಕಾ ಶೆಟ್ಟಿಯ ಮೂಗುತಿ, ತಮ್ಮನ್ನಾ ಡಾಬು, ಆಭರಣ ಪ್ರಿಯರ ಕಣ್ಣುಕುಕ್ಕಿತ್ತು. ಈ ಆಭರಣಗಳು ಇದೀಗ ಚಿನ್ನ, ಬೆಳ್ಳಿ, ಕುಂದನ್, ಮಲ್ಟಿ ಕಲರ್ ಸ್ಟೋನ್, ಮುತ್ತುಗಳಲ್ಲಿ ಮರುಜೀವ ತಳೆದು ಅಕ್ಷಯ ತೃತೀಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ.

**

ನಾನು ಮಾಡುವ ವಿನ್ಯಾಸಕ್ಕೆ ಪ್ರಕೃತಿಯೇ ಪ್ರೇರಣೆ. ಹೂಗಳ ವರ್ಣಸಂಯೋಜನೆ ಗಮನಿಸಿ ಬಣ್ಣಗಳನ್ನು ಸಂಯೋಜಿಸುತ್ತೇನೆ. ದೇಸಿ ಸಂಸ್ಕೃತಿ, ಕುಶಲಕರ್ಮಿಗಳ ಚಾಕಚಕ್ಯತೆ ಎಂಥವರನ್ನೂ ಸೆಳೆಯುತ್ತದೆ. ಅವುಗಳ ಬಗ್ಗೆ ಅರಿವು ಹೆಚ್ಚಾದಂತೆ ನನ್ನ ಒಳಗಿದ್ದ ಆಭರಣ ವಿನ್ಯಾಸದ ಪರಿಕಲ್ಪನೆಗಳ ಅರಿವೂ ವಿಸ್ತಾರವಾಯಿತು. ಆಭರಣವನ್ನು ನಾನು ವಸ್ತುವಾಗಿ ಮಾತ್ರವೇ ನೋಡುವುದಿಲ್ಲ. ನನ್ನ ಪ್ರಕಾರ ಆಭರಣಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬ.
– ಪಲ್ಲವಿ ಫೋಲೆ, ಆಭರಣ ವಿನ್ಯಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.