ADVERTISEMENT

ಕಡೆಯದಾಗಿ ಒಂದು ಮಾತು....

ಬೋರ್ಡ್ ರೂಮಿನ ಸುತ್ತ ಮುತ್ತ

ಸತ್ಯೇಶ್ ಎನ್ ಬೆಳ್ಳೂರು
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST
ಡಿ.ವಿ.ಸಾಂಗಳೇಕರ್
ಡಿ.ವಿ.ಸಾಂಗಳೇಕರ್   

ಕೆಲಸಕ್ಕೆ ಬರುವಾಗ ನೀನುಟ್ಟ ಬಟ್ಟೆಬರೆ/
ಕೊಳೆಯಿರದೆ ಚೆಂದಿರಲಿ, ಸರಳವಾಗಿರಲಿ//
ಒಲವಿರಲಿ ಕಂಗಳಲಿ ಸ್ನೇಹಮಯ ನಗೆಯಿರಲಿ/
ಕಳೆಯಿರಲಿ ಮೊಗದಲ್ಲಿ – ನವ್ಯಜೀವಿ//

ನಾನು ಚಿಕ್ಕವನಿದ್ದಾಗ ಅಪ್ಪ ಹೇಳುತ್ತಿದ್ದರು. ‘ಓದುವಾಗ ಚೆನ್ನಾಗಿ ಓದಿಬಿಡು. ಒಳ್ಳೆಯ ಅಂಕಗಳು ಬಂದರೆ ಒಳ್ಳೆಯ ಕೆಲಸ ಗ್ಯಾರಂಟಿ. ಆ ಮೇಲೆ ನಿನ್ನ ಬದುಕೇ ಬೇರೆಯಾಗುತ್ತದೆ. ಜೀವನದ ಎಲ್ಲ ಸಂತೋಷಗಳಿಗೂ ಅಗಾಧ ಸಮಯವಿರುತ್ತದೆ’ ...
ಅವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ‘ಓದುವಾಗ ಕಷ್ಟಪಟ್ಟರೆ ಕೆಲಸಕ್ಕೆ ಸೇರಿದ ಮೇಲೆ ಹಾಯಾಗಿರಬ ಹುದು’ ಎಂಬುದರಲ್ಲಿ ಏನೂ ದೋಷವಿಲ್ಲ. ಆದರೆ ಈ ಮಾತು ಆ ದಿನಗಳಿಗೆ ಮಾತ್ರ ಅನ್ವಯ. ಏಕೆಂದರೆ, ಅಂದು ಓದು ಮುಗಿದ ನಂತರದ ಕೆಲಸದ ದಿನಗಳೆಲ್ಲ ಅಷ್ಟು ಒತ್ತಡಗಳಿಲ್ಲದ, ಪ್ರಾಮಾಣಿಕವಾಗಿ ದುಡಿದವ ರಿಗೆ ಏನೊಂದು ತೊಡಕನ್ನು ಎಸಗದ ಸಂತಸ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ತೃಪ್ತಿಯ ದಿನಗಳು.

ಬಹಳಷ್ಟು ಆಯ್ಕೆಗಳಿಲ್ಲದ ಏಕರೂಪ, ಏಕಭಾವ. ಈಗಿನ ಕಾಲದಂತೆ ಕೆಲಸ ಮಾಡುವುದು ಅಷ್ಟೊಂದು ಗೊಂದಲಮಯ ಹಾಗೂ ಸ್ಪರ್ಧಾತ್ಮಕವಾಗಿರಲಿಲ್ಲ. ಹಾಗಾದರೆ ಈಗಿನ ಕಾಲದ ಮಕ್ಕಳಿಗೆ ಏನನ್ನು ಹೇಳಬೇಕು ಎಂದು ಆಲೋಚಿಸುತ್ತಲೇ ಈ ಲೇಖನಕ್ಕೆ ಧುಮುಕಿದ್ದೇನೆ.

ಕಳೆದ ಎರಡು ದಶಕಗಳಳ್ಲಿ ನಮ್ಮ ನಗರಗಳಲ್ಲಿನ ವೃತ್ತಿ ಜೀವನ ಸಾಕಷ್ಟು ಬದಲಾಗಿದೆ. ಅಮೆರಿಕದಲ್ಲಿ ಇರುವಂತಹದೇ ಕಾರ್ಯವೈಖರಿ. ಚೆನ್ನಾಗಿ ದುಡಿದವ ನಿಗೆ ಹೆಚ್ಚು ಸಂಬಳ ಹಾಗೂ ಹಾಗೆಯೇ ದುಡಿಯುತ್ತಿರು ವವರೆಗೂ ಮಾನ್ಯತೆ. ಸಾಧಾರಣದವರಿಗೆ ಕೆಲಸಕ್ಕೆ ಏನೂ ತೊಂದರೆ ಇಲ್ಲದಿದ್ದರೂ ಬಡ್ತಿಯೆಂಬುದು ಬರಿಯ ಕನಸು. ಸಾಧಾರಣಕ್ಕೂ ಕೆಳಕ್ಕಿರುವವರು ಕೆಲಸ ಕಳೆದುಕೊಳ್ಳುವುದರಲ್ಲೇ  ನಿಸ್ಸೀಮನಾಗಿರಬೇಕು!

ಇನ್ನು ಕೆಲಸದಲ್ಲಿ ಅನಿವಾರ್ಯ ಹಾಗೂ ಕೆಲವೊಮ್ಮೆ ಅನಾರೋಗ್ಯಕರವಾದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತದೆ. ಮತ್ತೊಬ್ಬನನ್ನು ಕೊಂದೇ ತಾನು ಬದುಕ ಬೇಕೆಂಬ ಮೃಗ ಪ್ರವೃತ್ತಿ ನಾಗರೀಕತೆಯ ಸೀಮೆಯ ಅಡಿಯಲ್ಲೇ ಹೆಡೆಯಾಡಿಬಿಡುತ್ತದೆ. ‘ಬರೀ ಕೆಲಸ ಮಾಡಿದರೆ ಸಾಕೆ? ಅದನ್ನು ಪ್ರಪಂಚಕ್ಕೆ ತಿಳಿಸಬೇಡವೆ? ಬಣ್ಣ ಕಟ್ಟಿ ಬಡಾಯಿ ಕೊಚ್ಚಿಕೊಂಡರೆ ತಪ್ಪೇನು?’ ಎನ್ನುವ ಮಟ್ಟಕ್ಕೆ ಬೆಳೆದುಬಿಡುತ್ತದೆ.

ಈ ವಾತಾವರಣದಲ್ಲಿ ಜನ ವಿಧಿ ಇಲ್ಲದೆ, ಶಕ್ತಿ ಮೀರಿ ದುಡಿಯುತ್ತಾರೆ. ತಮ್ಮ ನಾಯಕನನ್ನು ಒಲಿಸಿಕೊಳ್ಳಲು  ಹಾಗೂ ತಮ್ಮದೇ ಕಹಳೆಯನ್ನು ಊದಿಕೊಳ್ಳಲು ಇಲ್ಲಸಲ್ಲದ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಏನಾದರೂ ಹೊಸತೊಂದನ್ನು ಸಾಧಿಸಬೇಕೆಂಬ ಹಟದಲ್ಲಿ ರಾತ್ರಿ ದೀಪವನ್ನು ಉರಿಸುತ್ತಾರೆ. ಇನ್ನೊಬ್ಬರನ್ನು ಉರುಳಿಸಿ ಆತನ ಮೇಲೆ ತನ್ನ ಸಾಮ್ರಾಜ್ಯವನ್ನು ಕಟ್ಟುವ ಹುನ್ನಾರ ದಲ್ಲಿರುತ್ತಾರೆ.

ತಮ್ಮ ಸೋಲುಗಳನ್ನು ಮರೆಮಾಚಲು ಬೇಡದ ನೆಪಗಳನ್ನು ಹುಡುಕುತ್ತಾರೆ. ವಾರಾಂತ್ಯದಲ್ಲೂ ತಮ್ಮ ತೊಡೆಯ ಮೇಲಿನ ಗಣಕಯಂತ್ರದಲ್ಲಿ ಸೇರಿ ಕೊಂಡು ಅಲ್ಲಿಯೇ ಸುಖಸಂಸಾರದ ಮಾನವೀಯ ಅನನ್ಯ ಅನುಭವಗಳ ಭಾಜನರಾಗಿ ಬಿಡುತ್ತಾರೆ. ಹಾಗಾಗಿ ಈ ಪರಿಯ ಅತ್ಯಂತ ಕ್ಲಿಷ್ಟ ಹಾಗೂ  ಸಂಕೀರ್ಣ ಮಯವಾಗಿ ವೃತ್ತಿಜೀವನಕ್ಕೆ ಕಾಲಿಡುತ್ತಿರುವ ಯುವಕ ರಿಗೆ ಕೆಲವೊಂದು ಸಲಹೆಗಳನ್ನು ನೀಡಬೇಕೆಂಬ ಆಸೆ. ಇವುಗಳಿಂದ ವೃತ್ತಿಜೀವನದ ಒತ್ತಡಗಳು ಸ್ವಲ್ಪಮಟ್ಟಿ ಗಾದರೂ ಕಡಿಮೆಯಾಗಿ ಕಾಲಕ್ರಮೇಣ ವೈಯಕ್ತಿಕ ಸಮಾಧಾನಗಳು ಸಾಧ್ಯ ಎಂಬುದು ನಾನು ಕಂಡು ಕೊಂಡ ಸತ್ಯ.

ಮದುವೆಯಾಗಿ, ಕೆಲಸದ ಮೊದಲ ನಾಲ್ಕಾರು ವರ್ಷಗಳು ಇವು ಅತ್ಯಂತ ಅಮೂಲ್ಯವಾದ ಸಮಯ. ಸಂಬಳ ಸಿಗುತ್ತದೆ ಎಂದು ಮೋಜಿಗಿಳಿಯದೆ ವಸ್ತು ನಿಷ್ಠರಾಗಿ ಕೆಲಸವನ್ನು ಕಲಿಯಬೇಕೆಂಬ ಒಂದೇ ಒತ್ತಾಸೆ ಯಿಂದ ಯಾರು ಏಕಚಿತ್ತದಲ್ಲಿ ದುಡಿಯುತ್ತಾರೋ, ಅವರೆಲ್ಲ ಈ ವೃತ್ತಿಯೆಂಬ ಮ್ಯಾರಥಾನ್‌ ಓಟದಲ್ಲಿ ಅಂತಿಮವಾಗಿ ಗೆದ್ದವರೇ ಆಗುತ್ತಾರೆ. ಮೊದಲ ಕೆಲಸ ಮೊದಲ ಪ್ರೀತಿಯ ತರಹ ಕುತೂಹಲ, ಅದ್ಭುತ ಹಾಗೂ ಅದೃಷ್ಟವಿದ್ದರೆ ದಿಕ್ಕನ್ನೇ ಬದಲಾಯಿಸಬಲ್ಲ ದಿಕ್ಕೂಚಿ! ಅದು ದಕ್ಕಿತೆಂದು ಸುಮ್ಮನೆ ಕನಸು ಕಾಣುತ್ತ ಕೂರು ವಂತಿಲ್ಲ. ಮಾಗುವವರೆಗೆ ಬೆವರಿಳಿಸಲೇ ಬೇಕು!

ಎರಡನೆಯದೇ ಜವಾಬ್ದಾರಿ ಕುರಿತದ್ದು. ನೀವು ಮಾಡುವ ಯಾವುದೇ ಕೆಲಸದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನೀವೇ ಹೊರಬೇಕು. ನೆಪಗಳನ್ನು ಹುಟ್ಟುಹಾಕುವ ಕೆಟ್ಟ ಚಟಕ್ಕೆ ಬಲಿಯಾಗದೆ, ‘ತಪ್ಪು ನನ್ನಿಂದಾಗಿದೆ’ ಎನ್ನುವ ಎದೆಗಾರಿಕೆ ಬೆಳೆಸಿಕೊಳ್ಳಿ. ಈ ಪರಿಯ  ಕಾರ್ಯವೈಖರಿಯಿಂದ ನಿಮ್ಮ ಸಹೋದ್ಯೋಗಿ ಗಳು ಆ ಕ್ಷಣಕ್ಕೆ ನಿಮ್ಮ ಮೇಲೆ ಹತೋಟಿ ಸಾಧಿಸಬ ಹುದು. ಆದರೆ ಅದಕ್ಕೂ ಮುಖ್ಯವಾಗಿ ನೀವೇ ನಿಮ್ಮ ಹತೋಟಿ ಸಾಧಿಸಿರುತ್ತೀರಿ. ತಪ್ಪುಗಳನ್ನು ಕಡಿಮೆ ಮಾಡುತ್ತಾ ಬೆಳೆಯುತ್ತೀರಿ. ‘ಎಷ್ಟು ಬೇಗ ಈ ಸಿದ್ಧಾಂತ ನಿಮ್ಮದಾಗುತ್ತದೋ ಅಷ್ಟು ಬೇಗ  ನಿಮ್ಮ ಉನ್ನತಿಯಾ ಗುತ್ತದೆ’ ಎಂಬುದು ನಂಬಲು ಕಷ್ಟವಾದರೂ, ನೀವು ನಂಬಿ ನಿಮ್ಮದಾಗಿಸಿಕೊಳ್ಳಲೇಬೇಕು.

ಮೂರನೆಯದು, ಸಮಯ ಹಾಗೂ ಆರೋಗ್ಯ ಕುರಿತದ್ದು. ಕೆಲಸಕ್ಕೆ ಸೇರಿದ ಹೊಸತರಲ್ಲಿ ಎಲ್ಲರೂ ದಿನದ 14 ತಾಸು ಕಚೇರಿಯಲ್ಲಿರುತ್ತಾರೆ! ಆದರೆ ಆ ದೀರ್ಘಾವಧಿಯಲ್ಲಿ ಸರಿಯಾಗಿ ಕಲಿತದ್ದು ಎಷ್ಟು ಎಂಬುದು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆ. ಅದೆಷ್ಟು  ತಾಸುಗಳನ್ನು ಅಂತರ್ಜಾಲದಲ್ಲಿ ಹಾಗೂ ಕ್ಯಾಂಟೀನಿನಲ್ಲಿ ಕಳೆದಿದ್ದೀರಿ? ಅದೆಷ್ಟನ್ನು ಗಪ್‌ಚಿಪ್ಪಿನಲ್ಲಿ ಹಾಳುಗೆಡವಿ ದ್ದೀರಿ? ಆರನೇ ತಿಂಗಳಿನಲ್ಲೇ ಮತ್ತೊಂದು ಹೆಚ್ಚಿನ ಸಂಬಳದ ಕೆಲಸದಲ್ಲಿ ಅನ್ವೇಷಣೆಯಲ್ಲಿ ಅದೆಷ್ಟು ಸಮಯ ಸಂದಿದೆ? ಕಚೇರಿಯಲ್ಲಿನ ವೈಯಕ್ತಿಕ ಸಮಯ ವನ್ನು ಶಿಸ್ತಿನಿಂದ ಪಾಲಿಸುವುದಾದರೆ, ಯಾವುದೇ ಕೆಲಸವಾದರೂ ಕನಿಷ್ಠ ಹತ್ತು ತಾಸುಗಳಲ್ಲಿ ಮುಗಿಸಿ ಮನೆಗೆ ಹಿಂತಿರುಗಬಹುದು ಇದು ಸತ್ಯ!

ಹೀಗೆ ದೊರೆವ ಕಚೇರಿಯ ಹೊರಗಿನ ಸಮಯ ವನ್ನು ಬಳಸುವುದು ಹೇಗೆ? ಅದು ನಿಮಗೆ ಬಿಟ್ಟದ್ದು. ನಿಮ್ಮ  ಆಶೋತ್ತರಗಳನ್ನು ಹಾಗೂ ಹುಮ್ಮಸ್ಸುಗಳನ್ನು  ಹಾಗೂ ಹವ್ಯಾಸಗಳನ್ನು ಅದು ಅವಲಂಬಿಸಿರುತ್ತದೆ. ಆದರೆ, ನನ್ನದೊಂದು ಸಲಹೆ. ಆ ಸಮಯದಲ್ಲಿ ಕನಿಷ್ಠ ಪಕ್ಷ ಒಂದೂವರೆ ತಾಸನ್ನು ನಿಮ್ಮ ದೇಹವನ್ನು ಸದೃಢಗೊಳಿಸುವತ್ತ ಕಳೆಯಿರಿ. ಜಿಮ್ಮಿನಲ್ಲಿ ಬೆವರಿಳಿಸಿ. ಇಲ್ಲಿ ಅವಕಾಶವಿದ್ದರೆ ಬಯಲಿಗಿಳೆದು ತೆರೆದ ಆಗಸದಡಿ ನಿಮಗಿಷ್ಟವಾದ ಆಟವಾಡಿ. ಅದೂ ಆಗದಿದ್ದರೆ  ಪಾರ್ಕಿಗೆ ತೆರಳಿ ಅಲ್ಲಿ ಬರುವ ಮುದ್ದಾದ ಹುಡುಗಿ ಯರನ್ನು ನೋಡನೋಡುತ್ತಾ ನಾಲ್ಕಾರು ಮೈಲಿ ತ್ವರೆಯಿಂದ ನಡೆದುಬಿಡಿ.

ನಿಮಗೆ ಗೊತ್ತಿರಲಿ, ಕೆಲಸಕ್ಕೆ ಸೇರಿದ ಹೊಸತರಲ್ಲಿ ಆರೋಗ್ಯ ಎಂಬುದು ಎಲ್ಲರಿಗೂ ಇರುತ್ತದೆ. ಆ ವಯಸ್ಸೇ ಹೀಗೆ. ಈ ವೇಳೆಯಲ್ಲಿ ಕೆಲಸ ಹಾಗೂ ಮೋಜಿನಲ್ಲಿ ಅದೆಷ್ಟು ಮಗ್ನರಾಗಿ ಬಿಡುತ್ತಾರೆಂದರೆ ಯಾವುದೇ ವ್ಯಾಯಾಮದಿಂದ ವಂಚಿತರಾಗುತ್ತಾರೆ. ಅನಾರೋಗ್ಯದ ಸಂಕೇತಗಳು ಕಾಡುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಕೆಲಸ ಹೋದರೆ ಮತ್ತೊಂದು ಸಾಧ್ಯ. ಆರೋಗ್ಯವೇ ಹೋದರೆ? ನನ್ನ ಮಟ್ಟಿಗೆ, ಸಮಯ ಹಾಗೂ ಆರೋಗ್ಯ ಪರಸ್ಪರ ಒಂದನ್ನು ಉಳಿಸಿ ಇನ್ನೊಂದನ್ನು ಬೆಳೆಸಿ!

ನಾಲ್ಕನೆಯದಾಗಿ, ಆದಷ್ಟೂ ನಿಮ್ಮ ಅಹಂಕಾರವನ್ನು ಕಡಿಮೆಗೊಳಿಸಿಕೊಳ್ಳಿ. ವೃತ್ತಿಜೀವನದಲ್ಲಿ ಕಷ್ಟವಾದರೂ ಇದಕ್ಕೊಂದು ಸೂಕ್ತವಾದ ಮಾರ್ಗವುಂಟು. ಕೆಲಸಕ್ಕೆ ಸೇರಿದ ದಿನದಿಂದ ನೀವು ನಿಮಗೆ ಪ್ರಾಮಾಣಿಕವಾಗಿ ಸರಿ ಎನಿಸಿದ್ದನ್ನೆಲ್ಲ ಮಾಡುತ್ತಿದ್ದರೂ ಜೊತೆಯಲ್ಲೇ ಇನ್ನಿತರರ ಅನಿಸಿಕೆ ಅಭಿಪ್ರಾಯಗಳಿಗೆ ಗೌರವ ಕೊಡುವ ಒಂದೊಳ್ಳೆಯ ಗುಣ ಬೆಳೆಸಿಕೊಳ್ಳಿ. ಕೆಲವೊಮ್ಮೆ ಇದರಿಂದ ನಿಮ್ಮ ಸಹೋದ್ಯೋಗಿಗಳು ಆ ಕ್ಷಣದ ಕದನದಲ್ಲಿ ನಿಮಗಿಂತ ಮೇಲಾಗಿ ಕಾಣಬಹುದು. ಆದರೆ ನನ್ನನ್ನು ನಂಬಿ ವೃತ್ತಿ ಜೀವನದ ವರ್ಷಗಳು ಉರುಳಿದಂತೆಲ್ಲ ಈ ನಿಮ್ಮ ಗುಣ ನಿಮ್ಮನ್ನು ಕಾಯುತ್ತದೆ.

ಕೈ ಹಿಡಿದು ಬೆಳೆಸುತ್ತ ಗೌರವ ಧಕ್ಕಿಸುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಕೆಲಸ ಮುಗಿಸಿ ನೀವು ಮನೆಗೆ ಹಿಂತಿರುಗಿ ದಾಗ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಜೀವನದಲ್ಲಿ ಇದಕ್ಕಿಂತ ಹೆಚ್ಚೇನು ಬೇಕು ಹೇಳಿ?

ಮತ್ತೊಂದು ವಿಷಯ, ಬಿಸಿರಕ್ತ ಎಂದು ಯಾರೊಂದಿಗೂ ಕಲಹ ಬೇಡ. ವಿನಾಕಾರಣ ಮನಸ್ತಾಪ ಬೇಡ. ಹುಚ್ಚು ಸ್ಪರ್ಧೆ ಬೇಡ. ಹಾಗೊಮ್ಮೆ ಜಗಳ ಅನಿವಾರ್ಯವೇ ಆದರೆ, ಅವರೊಡನೆ ಜಗಳವಾಡಿ. ಆದರೆ, ಅವರನ್ನು ಮತ್ತೊಂದು ದಿನ ಸೇರಲಿಕ್ಕನುವಾಗುವಂತೆ ಪುಟ್ಟ ಗವಾಕ್ಷಿಯನ್ನಾದರೂ ತೆರೆದಿಟ್ಟು ಬನ್ನಿ. ಇದಕ್ಕಾಗಿ ನೀವು ನಿಮ್ಮೆಲ್ಲ ನಡೆ, ನುಡಿ ಹಾಗೂ ಕಾರ್ಯವೈಖರಿಯಲ್ಲಿ ನಯ ಕಂಡುಕೊಳ್ಳ ಬೇಕು. ವ್ಯವಹಾರ ಚಾತುರ್ಯ ಅಥವಾ ಡಿಪ್ಲೊಮೆಸಿ ಎಂಬುವುದು ವಾಣಿಜ್ಯಲೋಕದಲ್ಲಿ ಅತ್ಯಂತ ಬೆಲೆ ಬಾಳುವ ವಿಷಯ. ಅದನ್ನು ನಿಮ್ಮ ದೈನಂದಿನ  ಆಹಾರದಲ್ಲಿ ಅಳವಡಿಸಿಕೊಳ್ಳಲು  ಬೇಕಾದ ಎಲ್ಲ ಕಲಿಕೆ ಹಾಗೂ ಕಸರತ್ತನ್ನು ನೀವು ಕೆಲಸದ ಮೊದಲ ದಿನದಿಂದಲೇ ಮಾಡುವುದು ಸೂಕ್ತ. ವಯಸ್ಸಾದಂತೆಲ್ಲ ದಕ್ಕದ ವಿದ್ಯೆಯೊಂದಿದ್ದರೆ ಅದೇ ಈ ಗುಣ!

ಮಾಡುವ ಕೆಲಸದಲ್ಲಿ ಪರಿಪೂರ್ಣತೆಯನ್ನು ಕಂಡು ಕೊಳ್ಳುವುದು ಅತ್ಯಂತ ಅವಶ್ಯಕ. ಹಾಗೆಂದು ಆ ಕ್ಷಣದ ಗೆಲುವುಗಳನ್ನು ಮರೆಯುವಂತೆಯೂ ಇಲ್ಲ. ದಿನನಿತ್ಯದ ಮೈಲಿಗಲ್ಲುಗಳನ್ನು ದಾಟುತ್ತಲೇ ‘ಪರಿಪೂರ್ಣ’ ಎಂಬ  ಊರನ್ನು ಸೇರುವ ಸಾಧನೆಯನ್ನು ಕೆಲಸಕ್ಕೆ ಸೇರಿದಂದಿ ನಿಂದಲೇ ಕರಗತ ಮಾಡಿಕೊಂಡಲ್ಲಿ ಅಂತಿಮವಾಗಿ ಪರಿಪೂರ್ಣವಾಗಿ ಗೆಲುವು ನಿಮ್ಮದೆಂಬುದರಲ್ಲಿ ಸಂದೇಹ ಬೇಡ!
ಹಾಗೆಯೇ ನೀವು ಏನೇ ಕೆಲಸ ಮಾಡಿದರೂ ಅದನ್ನು ಧೈರ್ಯದಿಂದ ಹಾಗೂ ಆತ್ಮವಿಶ್ವಾಸದಿಂದ ಮಾಡಿ. ಅದರಲ್ಲಿ ಸೋಲು ಬರಬಹುದು ಎಂಬ ಗುಮಾನಿ ಬೇಡ. ಆ ರೀತಿಯ ಕೀಳರಿಮೆ ನಿಮ್ಮನ್ನು ಕೆಲಸ ಶುರು ಮಾಡುವ ಮುನ್ನವೇ ಮಾನಸಿಕವಾಗಿ ನಿಶ್ಯಕ್ತಿಗೊಳಿಸಿಬಿಡುತ್ತದೆ. ಸೋಲೇ ಖಂಡಿತವಾದರೆ ಅದು ಬರುವ ಹೊತ್ತಿನಲ್ಲಿ ಬಂದರಾಯ್ತು. ನಾವಾ ಗಿಯೇ ಅದನ್ನು ಮೊದಲೇ ತಂದುಕೊಳ್ಳುವುದಾದರೂ ಏಕೆ ಹೇಳಿ!

ಇನ್ನೊಂದು ಮುಖ್ಯವಾದ ಸಂಗತಿ. ಇಂದಿನ ದಿನ ಗಳ ಈ ಪೈಪೋಟಿ ಯುಗದಲ್ಲಿ ಒಂದು ಅಸಾಧಾ ರಣವಾದ ಸಾಧ್ಯತೆ ನಮ್ಮ ಮುಂದಿದೆ. ಹಿಂದೆಂದೂ ಇಲ್ಲದ ಹೇರಳವಾದ ಅವಕಾಶಗಳಿವೆ. ಬೇರೊಬ್ಬರಿ ಗಾಗಿ ದುಡಿಯುವುದನ್ನು ತೊರೆದು ನಿಮ್ಮದೇ  ಉದ್ಯೋಗ ಶುರು ಮಾಡಲು ಇದೇ ಪ್ರಶಸ್ತವಾದ ಸಮಯ.

ಅನುಭವವಿಲ್ಲದೆ ಸ್ವಂತ ಉದ್ಯೋಗ ಹೇಗೆ? ಎಂಬ  ಅಪನಂಬಿಕೆಗಳು ನಿಮ್ಮನ್ನು ಮುತ್ತದಿರಲಿ. ಸ್ವಂತ ಉದ್ಯೋಗಕ್ಕೆ  ಬೇಕಾದ ಮಾರುಕಟ್ಟೆ, ವಿಶ್ವಜ್ಞಾನ, ಆರ್ಥಿಕ ನೆರವು ಎಲ್ಲವೂ ಈಗ ಕೂಗಳತೆಯಲ್ಲಿ ಲಭ್ಯ.

ನಿಮ್ಮ ಮನಸ್ಸಿನಾಳದಲ್ಲಿ ಯಾವುದಾದರೂ  ಯೋಚನೆ ಇದ್ದರೆ ಅಥವಾ ‘ಯುರೇಖಾ’ ಎಂಬ ಉದ್ಘಾರಕ್ಕಾಗಿ ಕಾದಿರುವ ಚಿಂತೆ  ಇದ್ದರೆ, ಏನೊಂದೂ ಯೋಚಿಸದೆ ಯಾವುದಕ್ಕೂ ಹೆದರದೆ ಅದರ ಹಿಂದೆ  ನಡೆದು ಬಿಡಿ. ಆ ನಿಮ್ಮ ಕನಸು ಗಟ್ಟಿ ಇದ್ದರೆ ಹಿಂದೆಂದೂ ಇರದಷ್ಟು ಯಶಸ್ಸಿನ ಸಾಧ್ಯತೆ ಇಂದಿಗೆ ಎಂಬುದು ಅಕ್ಷರಶಃ ಸತ್ಯ!

ಹಾಗೊಮ್ಮೆ ನಿಮ್ಮದೇ ಸ್ವಂತ ಉದ್ಯೋಗದ ಕನಸು ನಿಮಗಿರದಿದ್ದರೆ ನಷ್ಟವೇನೂ ಇಲ್ಲ. ಸ್ವಂತ ಉದ್ಯೋಗಕ್ಕೆ ಬೇಕಾದ ಆ ಜೀವಂತ ಮನೋಧರ್ಮವನ್ನು ನಿಮ್ಮ  ಕಚೇರಿಯ ಕೆಲಸದಲ್ಲಿ ಕಂಡುಕೊಳ್ಳಿ. ನಿಮ್ಮ  ಕೆಲಸದ ಮಟ್ಟಿಗೆ ಅದು ನಿಮ್ಮದೇ ಉದ್ಯೋಗದ ಅಂಗವೆಂದು ಭಾವನಾತ್ಮಕವಾಗಿ ಭಾಗಿಗಳಾಗಿದ್ದು ಕಟ್ಟಿಟ್ಟಬುತ್ತಿ!

ನನ್ನಪ್ಪ ನನಗೆ ಹೇಳಿದ ಬುದ್ಧಿಮಾತು ಆ ಕಾಲಕ್ಕೆ ಸೂಕ್ತವಾಗಿತ್ತು. ಆದರೆ ಅದು ಇಂದಿನ ಬದಲಾದ ಕಾಲಮಾನಕ್ಕೆ ಅರ್ಧಸತ್ಯವಷ್ಟೆ. ಹಾಗಾಗಿ  ಅದನ್ನು ಸ್ವಲ್ಪ ಬದಲಿಸಿ ಇಂದಿನ ಯುವಕರಿಗೆ ನಾ ಹೇಳಬಯಸು ವುದಿಷ್ಟೆ.

‘ಓದುವಾಗ ಚೆನ್ನಾಗಿ ಓದಿಬಿಡಿ. ಒಳ್ಳೆಯ ಅಂಕಗಳು ಬಂದರೆ ಒಳ್ಳೆಯ ಕೆಲಸ ಗ್ಯಾರಂಟಿ. ಆದರೆ, ಅಷ್ಟಕ್ಕೆ  ಎಲ್ಲ ಮುಗಿಯಿತು ಎಂದು ತಿಳಿಯಬೇಡಿ. ವೃತ್ತಿಜೀವ ನದ ಮೊದಲ ನಾಲ್ಕಾರು ವರ್ಷಗಳು ಬಹಳ ಮುಖ್ಯ. ನಿಮ್ಮದೇ ಕಾಯಕಕ್ಷೇತ್ರದಲ್ಲಿ ದಕ್ಷರಾಗಿ ಬಿಡಿ. ಒಂದು ಶಿಸ್ತುಬದ್ಧವಾದ ಜೀವನಶೈಲಿಯನ್ನು ನಿಮ್ಮದಾಗಿಸಿ ಕೊಳ್ಳಿ. ಆ ಮೇಲೆ ನಿಮ್ಮ ಬದುಕೇ ಬೇರೆಯಾಗುತ್ತದೆ. ಜೀವನದ ಎಲ್ಲ ಸಂತೋಷಗಳಿಗೂ ಅಗಾಧ ಸಮಯವಿರುತ್ತದೆ’!

ಕಡೆಯದಾಗಿ, ಒಂದು ಮಾತು. ವೃತ್ತಿ ಎಂಬುದು ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ. ಅದು  ನಮ್ಮ ಇರುವಿಕೆಗಾಗಿ ಅದರ ಹೋರಾಟದ ಸಮಯವೇ ನಿಜವಾದ ಬದುಕು. ವೃತ್ತಿಯನ್ನು ಕಡೆಗಣಿಸದೆ ಹೇಗೆ ಅರ್ಥೈಸಿಕೊಂಡು ನಿಭಾಯಿಸುತ್ತೇನೆ ಎಂಬುದನ್ನು ಅವಲಂಬಿಸಿಯೇ ನಮ್ಮ  ಬದುಕಾದರೆ, ನಮ್ಮ  ಬದುಕು ಹೇಗಿರುತ್ತದೆ ಎಂಬುದನ್ನು ಅವಲಂಬಿಸಿಯೇ ನಮ್ಮ ವೃತ್ತಿ ಜೀವನ ರೂಪುಗೊಳ್ಳುವುದು.

ಹಾಗಾಗಿ ಇವೆರಡರ ಬಗ್ಗೆಯೂ ಕಾಳಜಿ ವಹಿಸುವುದು ನಮ್ಮನ್ನೇ ಆರೋಗ್ಯದ ಹಾಗೂ ಆನಂದದ ದೃಷ್ಟಿಯಿಂದ ಅನಿವಾರ್ಯ ಹಾಗೂ ಅವಶ್ಯಕ!

ಇತ್ತೀಚಿನ ಕೆಲವು ವರ್ಷಗಳಿಂದ ನಾಯಿಕೊಡೆ ಗಳಂತೆ ನಮ್ಮ ಸುತ್ತೆಲ್ಲ ತಲೆ ಎತ್ತುತ್ತಿರುವ ಮ್ಯಾನೇಜ್‌ ಮೆಂಟ್‌ ಕಾಲೇಜುಗಳನ್ನು ಕಂಡು ದಿಗ್ಭ್ರಮೆಗೊಂಡಾಗ, ನಾಲ್ಕು ವರ್ಷಗಳ ಕೆಳಗೆ ಜನ್ಮತಾಳಿದ್ದು ‘ಬೋರ್ಡ್ ರೂಮಿನ ಸುತ್ತಮುತ್ತ’ ಅಂಕಣ. ಈ ಪಾಟಿ ಮ್ಯಾನೇಜ್‌ಮೆಂಟಿನ ಶಿಕ್ಷಣ ಕೇಂದ್ರಗಳು ಏಕೆ ಎನ್ನುವ ವಿಶ್ಲೇಷಣೆಯೊಂದಿಗೆ ಶುರುವಾದ ಈ ಪಯಣ ಕಂಪೆನಿಯೊಂದರ ವಿದ್ಯಮಾನಗಳನ್ನೊಳಗೊಂಡಂತೆ ಅದರ ನಿರ್ವಹಣಾ ಕ್ಷೇತ್ರದ ಅನೇಕ ಸ್ತರಗಳನ್ನು ಚರ್ಚಿಸಿದೆ.

ಕಂಪೆನಿಯ ನಾಯಕನಿಂದ ಕಡೆಯ ನೌಕರನವರೆಗೆ, ಯಾರು ಹೇಗಿದ್ದರೆ ಚೆನ್ನ ಎಂಬ ಅಂಶಗಳನ್ನು ಶೋಧಿಸಿದೆ. ಕಂಪೆನಿಯ ಹಿನ್ನೆಲೆಯಲ್ಲಿ ವೈಯಕ್ತಿಕ ಆತ್ಮಾಭಿವೃದ್ಧಿಯನ್ನು ಸಂಪಾದಿಸಿಕೊಳ್ಳುವ ಮಾರ್ಗಗಳನ್ನು ಸೂಚಿಸಿದೆ. ಶಿವಾಜಿ, ಚಾಣಕ್ಯ, ಮಹಾಭಾರತದ ಪಾತ್ರಧಾರಿಗಳು ಹಾಗೂ ನಮ್ಮ ಕಾಲದ ಯಶಸ್ವೀ ಉದ್ಯಮಿಗಳ ದೃಷ್ಟಾಂತದೊಂದಿಗೇ  ನಾನು ಹತ್ತಿರದಲ್ಲಿ ಕಂಡ ಅಥವಾ ಎಲ್ಲೋ ಓದಿ ಪ್ರಭಾವಿತಗೊಂಡ ವ್ಯಕ್ತಿಚಿತ್ರಗಳು ಒಂದಾಗಿ ಕೂಡಿ  ಬೋರ್ಡ್‌ ರೂಮಿನ ಸುತ್ತಮುತ್ತಲಿನ ಜಗತ್ತನ್ನು ಪರಿಚಯಿಸಿದೆ. ನಿರ್ವಹಣಾ ಶಿಕ್ಷಣದಲ್ಲಿ ಕಲಿಕೆಯ ರೂಪದಲ್ಲಿ ಎದುರಾಗುವ ಹಲವಾರು ವಿಷಯಗಳು ನನ್ನದೇ ಸ್ವಂತ ಅನುಭವದ ನೆಲೆಗಟ್ಟಿನಲ್ಲಿ ಸಿದ್ಧಾಂತಗಳಾಗಿ ಮಾರ್ಪಟ್ಟಿದೆ. ಈ ಲೇಖನ ಮಾಲೆ ನಿಮಗೆ ರುಚಿಸಿದೆ ಎಂಬ ನಂಬಿಕೆಯಿಂದಲೇ ವಿರಮಿಸುತ್ತಿದ್ದೇನೆ. ನಮಸ್ಕಾರ.

ಲೇಖಕರನ್ನು satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT