ADVERTISEMENT

ಗತ್ತಿನಾಗ ಬಾಳ ನೋಡ (ಬೋರ್ಡ್ ರೂಮಿನ ಸುತ್ತಮುತ್ತ)

ಸತ್ಯೇಶ್ ಎನ್ ಬೆಳ್ಳೂರು
Published 13 ನವೆಂಬರ್ 2012, 19:30 IST
Last Updated 13 ನವೆಂಬರ್ 2012, 19:30 IST

 `ಫಲಿತಾಂಶ ಒಂದು ನಿರ್ದಿಷ್ಟ ಕೆಲಸದ      ಯಶಸ್ಸಾದರೆ, ಯಶಸ್ಸು ಅಂತಹ ಅನೇಕ ಕೆಲಸಗಳ ಒಟ್ಟು ಫಲಿತಾಂಶ~ ಎಂಬ ಸೂತ್ರವೊಂದನ್ನು ನಾವಿಲ್ಲಿ ಹುಟ್ಟುಹಾಕಬಹುದು. ಅಂದರೆ, ಫಲಿತಾಂಶ ನಾವು ದಾಟಬೇಕಾದ        ಮೈಲಿಗಲ್ಲುಗಳಾದರೆ, ಯಶಸ್ಸು ಅವೆಲ್ಲವುಗಳ ಅಂತಿಮ ಘಟ್ಟ.

         ಫಲಿತಾಂಶಗಳೆಲ್ಲವೂ     ಒಳ್ಳೆಯವೇ ಆಗಿ     ಮೂಡಿಬಂದಾಗ ಮಾತ್ರವೇ ಯಶಸ್ಸು ಕೂಡ      ಪ್ರಶಂಸನೀಯ           ಆಗಿರುತ್ತದೆಯೆ? ಅಥವಾ ಫಲಿತಾಂಶಗಳೇನೇ ಇರಲಿ, ಯಶಸ್ಸು ಒಂದೇ ನಮ್ಮ ಲಕ್ಷ್ಯವಾಗಬೇಕೆ? ಅಥವಾ ಯಶಸ್ಸನ್ನು ಬದಿಗಿಟ್ಟು   ಫಲಿತಾಂಶಗಳ ಕಡೆಗೇ ನಮ್ಮ ಗಮನವಿರಬೇಕೆ? ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ, ಅಂತೆಯೇ ವಿಭಿನ್ನ      ಉತ್ತರಗಳೂ ಕೂಡ.
___________________________________________________


ಸೋಲಿತಿಹ ಗುಂಪಿನೊಳು ಇರಲಾರು ಬಯಸುವರು?/
ಬೀಳುತಿಹ ಮರದಡಿಯೆ ನಿಲ್ಲುವವರಾರು?//
ಆಳಬೇಕೆಂದೆನಲು ಗೆಲ್ಲುತಿರು ಅವನರತ/
ಊಳಿಗವದೇನಿರಲಿ - ನವ್ಯ ಜೀವಿ//

ಕಳೆದ ಲೇಖನದಲ್ಲಿ ಫಲಿತಾಂಶದ ಮಹತ್ವದ ಬಗ್ಗೆ ಮಾತನಾಡುತ್ತಾ ಕಡೆಯಲ್ಲಿ ಯಶಸ್ಸು ಎಂಬ ಪದವನ್ನು ಬಳಸಿದ್ದೆವು. ಈ ಎರಡೂ ಪದಗಳ ಅರ್ಥ ಬೇರೆ ಬೇರೆಯೇ ಆದರೂ ಇವುಗಳ ಅಂತಿಮ ದರ್ಶನ ಒಂದೇ ಆಗಿದೆ. ಬೋರ್ಡ್‌ರೂಮಿನ ಸುತ್ತಮುತ್ತಲಿನ ನಮ್ಮ ಮಾತುಕತೆಗೆ ಇವೆರಡೂ ಪದಗಳಿಗೆ ನಮ್ಮದೇ ಆದ ಒಂದು ಅರ್ಥ ಕಲ್ಪಿಸಿ ಅದರಂತೆ ಮುಂದೆ ಸಾಗುವುದು ಸೂಕ್ತವಾದೀತು.
 
`ಫಲಿತಾಂಶ ಒಂದು ನಿರ್ದಿಷ್ಟ ಕೆಲಸದ ಯಶಸ್ಸಾದರೆ, ಯಶಸ್ಸು ಅಂತಹ ಅನೇಕ ಕೆಲಸಗಳ ಒಟ್ಟು ಫಲಿತಾಂಶ~ ಎಂಬ ಸೂತ್ರವೊಂದನ್ನು ನಾವಿಲ್ಲಿ ಹುಟ್ಟುಹಾಕಬಹುದು. ಅಂದರೆ, ಫಲಿತಾಂಶ ನಾವು ದಾಟಬೇಕಾದ ಮೈಲಿಗಲ್ಲುಗಳಾದರೆ, ಯಶಸ್ಸು ಅವೆಲ್ಲವುಗಳ ಅಂತಿಮ ಘಟ್ಟ.

ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಹೊರಟಿದ್ದೇನೆ. ಮದ್ದೂರು ಸೇರಿದಾಗ ಅಲ್ಲಿನ ಬಸ್ ನಿಲ್ದಾಣದ ಹೋಟೆಲಿಗೆ ತೆರಳಿ ಅಲ್ಲಿ ಸಿಗುವ ಅದ್ಭುತವಾದ ಮದ್ದೂರು ವಡೆಯನ್ನು ಸವಿದು ಬಾಯಿ ಚಪ್ಪರಿಸಿದಾಗ ಆ ಹಂತದ ಫಲಿತಾಂಶಕ್ಕೆ ಸಂತೋಷ ಪಡಬಹುದು. ಅಲ್ಲಿಂದ ಮುಂದುವರೆದು ಶ್ರೀರಂಗಪಟ್ಟಣ ತಲುಪಿದಾಗ ಹತ್ತಿರದ ನಿಮಿಶಾಂಬ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಮಾಡಿದಾಗ ಪ್ರಾಯಶಃ ನಮ್ಮ ಎರಡನೇ ಫಲಿತಾಂಶವೂ ಶುಭವಾಯಿತು ಎಂದು ನಮಗನ್ನಿಸಬಹುದು. ಕಡೆಯ ಘಟ್ಟ ಮೈಸೂರು.
ಸಮಯಕ್ಕೆ ಸರಿಯಾಗಿ ತಲುಪಿ ಅಲ್ಲಿನ ನಮ್ಮ ಕೆಲಸಗಳೆಲ್ಲ ಸುಸೂತ್ರವಾಗಿ ನೆರವೇರಿದವೆಂದರೆ ನಮ್ಮ ಈ ಒಟ್ಟು ಪರಿಶ್ರಮಕ್ಕೆ ಯಶಸ್ಸು ಲಭಿಸಿತೆಂದೇ ಭಾವಿಸಬಹುದು. ಇಡೀ ಪಯಣ ನಮ್ಮ ಪರಿಶ್ರಮವಾದರೆ, ಮದ್ದೂರಿನಲ್ಲಿ ಜಿಹ್ವಾಚಾಪಲ್ಯ ತೀರಿಸಿಕೊಂಡದ್ದು ಒಂದು ಫಲಿತಾಂಶವೇ ಸರಿ. ಸಾಲು ಸಾಲುಗಳ ಇಂತಹ ಫಲಿತಾಂಶಗಳೇ ನಮ್ಮ ಅಂತಿಮ ಯಶಸ್ಸಿನ ಗುಟ್ಟು!

ಫಲಿತಾಂಶಗಳೆಲ್ಲವೂ ಒಳ್ಳೆಯವೇ ಆಗಿ ಮೂಡಿಬಂದಾಗ ಮಾತ್ರವೇ ಯಶಸ್ಸು ಕೂಡ ಪ್ರಶಂಸನೀಯವಾಗಿರುತ್ತದೆಯೆ? ಅಥವಾ ಫಲಿತಾಂಶಗಳೇನೇ ಇರಲಿ, ಯಶಸ್ಸು ಒಂದೇ ನಮ್ಮ ಲಕ್ಷ್ಯವಾಗಬೇಕೆ? ಅಥವಾ ಯಶಸ್ಸನ್ನು ಬದಿಗಿಟ್ಟು ಫಲಿತಾಂಶಗಳ ಕಡೆಗೇ ನಮ್ಮ ಗಮನವಿರಬೇಕೆ? ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ, ಅಂತೆಯೇ ವಿಭಿನ್ನ ಉತ್ತರಗಳೂ ಕೂಡ.

ವಿಶ್ವಕಪ್ ಕ್ರಿಕೆಟ್‌ನ ಪಂದ್ಯಾವಳಿಗಳು ಶುರುವಾಗಿವೆ ಎಂದಿಟ್ಟುಕೊಳ್ಳೋಣ. ಇದು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯುವಂತಹುದು. ಭಾರತ ತನ್ನ ಗುಂಪಿನ ಮಿಕ್ಕ ಮೂರು ತಂಡಗಳೊಂದಿಗೆ ಮೊದಲು ಸೆಣಸಬೇಕು.
 
ಆ ಗುಂಪಿನ ಪ್ರತಿ ಪಂದ್ಯದ ಫಲಿತಾಂಶ ಭಾರತಕ್ಕೆ ನೆರವಾಗಬೇಕು. ತಾನೇ ಎಲ್ಲ ಪಂದ್ಯಗಳನ್ನೂ ಗೆದ್ದುಬಿಟ್ಟರೆ ಅದು ನಿರಾಳ. ಹಾಗಾಗದಿದ್ದಾಗ, ಇನ್ನುಳಿದ ತಂಡಗಳ ಫಲಿತಾಂಶಗಳೂ ಭಾರತದ ಭವಿಷ್ಯಕ್ಕೆ ಪೂರಕವಾಗಿ ಮೂಡಿ ಬರಬೇಕು. ಆಗ ಒಟ್ಟಾರೆ ಆ ಗುಂಪಿನಿಂದ ಮುಂದಕ್ಕೆ ತೇರ್ಗಡೆಯಾಗುವ ಸಾಧ್ಯತೆ ಭಾರತಕ್ಕೆ ಒದಗುತ್ತದೆ.

ಈ ಪಯಣ ಇಲ್ಲಿಗೇ ಮುಗಿಯುವುದಿಲ್ಲ. ನಂತರದ ನಾಕೌಟ್ ಶುರುವಾಗುತ್ತದೆ. ಅಲ್ಲಿನ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕು. ಎಂಟರ ಹಾಗೂ ನಾಲ್ಕರ ಹಂತವನ್ನು ದಾಟಿ ಅಂತಿಮವಾದ ಪಂದ್ಯವನ್ನು ಗೆದ್ದಾಗಲೇ ಹಿಂದಿನ ಎಲ್ಲ ಫಲಿತಾಂಶಗಳ ಒಟ್ಟು ಪರಿಣಾಮವೆಂಬಂತೆ `ವಿಶ್ವಕಪ್ ವಿಜೇತರು~ ಎಂಬ ಮಣಿಮಕುಟದ ಯಶಸ್ಸು ದೇಶಕ್ಕೆ ಲಭ್ಯ.

ಇಲ್ಲಿ ಫಲಿತಾಂಶ ಹಾಗೂ ಯಶಸ್ಸಿನ ಹಾದಿಯಲ್ಲಿ ಅನೇಕ ಸಾಧ್ಯತೆಗಳು ಕಂಡುಬರುತ್ತವೆ.
ಕೆಳಕಂಡಂತೆ ಅವುಗಳಲ್ಲಿ ಮುಖ್ಯವಾದ ಐದನ್ನು ವಿಮರ್ಶಿಸೋಣ:
1) ಭಾರತ ಲೀಗ್‌ನ ತನ್ನೆಲ್ಲ ಪಂದ್ಯಗಳಲ್ಲೂ ಸೋತು ಸ್ವದೇಶಕ್ಕೆ ಮರಳುವುದು.

2) ಭಾರತ ಲೀಗ್‌ನ ಎಲ್ಲ ಪಂದ್ಯಗಳಲ್ಲೂ ಚೆನ್ನಾಗಿ ಆಡದಿದ್ದರೂ ಇನ್ನುಳಿದ ತಂಡಗಳ ಸೋಲಿನಿಂದ ರನ್ ರೇಟ್ ಎಂಬ ನಿಯಮಾವಳಿಯ ಮೇರೆಗೆ ನಾಕೌಟ್‌ಗೆ ಬರುವುದು. ಆದರೆ ನಾಕೌಟ್‌ನಲ್ಲಿ ಸೋಲನ್ನನುಭವಿಸಿ ಹಿಂತಿರುಗುವುದು.

3) ಲೀಗ್‌ನಲ್ಲಿ ಅತ್ಯುತ್ತಮವಾಗಿ ಆಡಿದರೂ ನಾಕೌಟ್‌ನಲ್ಲಿ ಸೋತು ಸರಣಿಯಿಂದ ಹೊರಬೀಳುವುದು.

4) ಮೇಲೆ ತಿಳಿಸಿರುವ ಎರಡನೆಯ ಸಂಭವದಂತೆಯೇ ಲೀಗ್‌ನಲ್ಲಿ ಚೆನ್ನಾಗಿ ಆಡದಿದ್ದರೂ, ನಾಕೌಟ್‌ನಲ್ಲಿ ಅಚಾನಕ್ ಸ್ಪೂರ್ತಿ ಪಡೆದು ಎಲ್ಲರನ್ನೂ ಸದೆಬಡಿದು ವಿಶ್ವವಿಜೇತರಾಗುವುದು.

5) ಲೀಗ್ ಹಾಗೂ ನಾಕೌಟ್ ಎರಡರಲ್ಲೂ ಅಪ್ರತಿಮವಾಗಿ ಆಡಿ, ಎಲ್ಲ ಪಂದ್ಯಗಳಲ್ಲೂ ಗೆದ್ದು, ತಮ್ಮದೇ ಬಲದ ಮೇಲೆ ವಿಶ್ವವಿಜೇತರಾಗುವುದು.

ಈ ಐದೂ ಸನ್ನಿವೇಶಗಳು ಸಂಭವನೀಯ. ಮೊದಲನೆಯದಕ್ಕೆ ಯಾವುದೇ ವಿವರಣೆಯ ಅಗತ್ಯವಿಲ್ಲ. ಇಲ್ಲಿ ಫಲಿತಾಂಶಗಳೇ ಇಲ್ಲವಾದಾಗ ಯಶಸ್ಸನ್ನು ಹುಡುಕುವ ಗೋಜಿಗೆ ಕೈ ಹಾಕುವುದೇ ಬೇಡ. ಅದರ ಅಗತ್ಯವೂ ಇಲ್ಲ.ಎರಡನೆಯದರಲ್ಲಿ ಫಲಿತಾಂಶಗಳು ಕೆಲವೆಡೆ ಉತ್ತಮವಾಗಿದ್ದರೂ, ಯಶಸ್ಸು ಮಾತ್ರ ಮರೀಚಿಕೆಯೇ ಆಗಿದೆ.

ಮೂರನೆಯದರಲ್ಲಿ ಫಲಿತಾಂಶಗಳೆಲ್ಲ ಅತ್ಯುತ್ತಮವಾಗಿದ್ದರೂ ಯಶಸ್ಸು ಮಾತ್ರ ದೊರಕದೇ ಹೋಗಿದೆ.ನಾಲ್ಕನೆಯದು ಸ್ವಲ್ಪ ವೀಶೇಷವಾದದ್ದು. ಫಲಿತಾಂಶಗಳೆಲ್ಲ ಸಡಿಲವಾಗಿದ್ದರೂ ಯಶಸ್ಸು ಲಭಿಸಿದೆ.

ಕಡೆಯದರಲ್ಲಿ ಮಾತ್ರ ಫಲಿತಾಂಶಗಳ ಹಾಗೂ ಯಶಸ್ಸಿನ ಒಟ್ಟಾರೆ ಸಂಗಮ ಸಂಭ್ರಮ ತಂದಿದೆ.ಇದುವರೆಗೆ ನಡೆದಿರುವ ಅನೇಕ ಪಂದ್ಯಾವಳಿಗಳಲ್ಲಿ ಭಾರತ ಮೇಲಿನ ಯಾವ ಸನ್ನಿವೇಶವನ್ನು ಹೋಲುವ ನಯದಿ ಆಟವಾಡಿದೆ ಹಾಗೂ ಆ ಸಂದರ್ಭದಲ್ಲಿ ಅದನ್ನು ಬೆಂಬಲಿಸಿದ್ದ ನಮಗೆ ಎಂತಹ ಅನುಭವವಾಗಿದೆ ಎಂಬುದನ್ನು ವಿಶ್ಲೇಷಿಸಿದರೆ ಯಾವುದು ತಪ್ಪು ಹಾಗೂ ಯಾವುದು ಒಪ್ಪು ಎಂಬರಿವು ನಮ್ಮಲ್ಲಿ ಮೂಡುವುದರಲ್ಲಿ ಸಂಶಯವೇ ಇಲ್ಲ.

ಮನೆಯ ವಾತಾವರಣದಲ್ಲಿ ಅಥವಾ ನಮ್ಮ ವೈಯಕ್ತಿಕವಾದ ಜೀವನದಲ್ಲಿ ಮೇಲಿನ ಎಲ್ಲ ಐದು ಸಂಭವಗಳಿಗೂ ಅದರದೇ ಆದ ಸ್ಥಾನಮಾನ ಇದೆ. ಏಕೆಂದರೆ ಇಲ್ಲಿ ಫಲಿತಾಂಶ ಹಾಗೂ ಯಶಸ್ಸಿನ ಚರ್ಚೆಗಿಂತ ಅದರ ಹಿಂದೆ ಅಡಗಿರುವ ಪರಿಶ್ರಮ ಹಾಗೂ ಪ್ರಾಮಾಣಿಕತೆಗೇ ಹೆಚ್ಚು ಒತ್ತು.
 
`ಅರ್ಥದ ಪ್ರೀತಿಗಿಂತ ಇಲ್ಲಿ ಪ್ರೀತಿಯೇ ಅರ್ಥವತ್ತಾದ್ದು!~ ಆದರೆ ಇಲ್ಲಿ ಕೂಡ ನಾವು ನಾಲ್ಕನೆಯ ಅಥವಾ ಇನ್ನೂ ಮಿಗಿಲಾಗಿ ಐದನೆಯ ಸಾಧ್ಯತೆಯನ್ನು ಅಪೇಕ್ಷಿಸುತ್ತೇವೆ. ಅವುಗಳಿಗಾಗಿಯೇ ಹಾತೊರೆಯುತ್ತೇವೆ. ನಮ್ಮೆಲ್ಲ ಪೂಜೆ ಪುನಸ್ಕಾರಗಳು ಆ ದಿಕ್ಕಿನಲ್ಲಿಯೇ ನಡೆಯುತ್ತವೆ. ಆದರೆ ಫಲಿತಾಂಶ ಹಾಗೂ ಯಶಸ್ಸುಗಳು ಮೇಲಿನ ಮೊದಲ ಮೂರು ಸಾಧ್ಯತೆಗಳಾದಾಗ ನಾವು ಹತಾಶರಾಗದೆ ಕಣ್ಣಿಗೆ ಕಾಣದ ವಿಧಿಯನ್ನು ಕಾರಣವಾಗಿಸಿ ಮುಂದೆ ಸಾಗುತ್ತೇವೆ.
 
`ಯಾರಿಗುಂಟು ಯಾರಿಗಿಲ್ಲ, ಬಾಳೆಲ್ಲ ಬೇವು - ಬೆಲ್ಲ. ಬಂದದ್ದೆಲ್ಲ ನೀಸಬೇಕಯ್ಯ ಗೆಳೆಯ. ಬಾರದಕ್ಕೆ ಚಿಂತೆ ಯಾಕಯ್ಯ~ ಎಂಬ ನಮ್ಮ ನೆಚ್ಚಿನ ಕವಿ ಡಾ. ದೊಡ್ಡರಂಗೇಗೌಡರ ಒಂದು ಸುಂದರ ಹಾಡಿನ ಪಲ್ಲವಿಯ ಮೊದಲೆರಡು ಸಾಲುಗಳನ್ನು ಗುನುಗುತ್ತ ಆದದ್ದನ್ನು ಮರೆತು ಬಿಡುತ್ತೇವೆ.

ಆದರೆ, ಬೋರ್ಡ್‌ರೂಮಿನ ಸುತ್ತಮುತ್ತ ಮರೆವಿಗೆ ಜಾಗವಿಲ್ಲ. ವಿಧಿಗೆ ಸ್ಥಾನವಿಲ್ಲ. ಅವನ ಹೆಸರಿನ ಅಡಿಯಲ್ಲಿ ಯಾವುದೇ ನೆಪಗಳಿಗೆ ನೆಲೆ ಇಲ್ಲ. ಬೆಲೆಯೂ ಇಲ್ಲ. ಇರಲೂ ಬಾರದು. ಪರಿಶ್ರಮಕ್ಕೆ ಪ್ರಾಮಾಣಿಕತೆಗೆ ಹಾಗೂ ಕಾರ್ಯತತ್ಪರತೆಗೆ ತಕ್ಕುದಾದ ಪ್ರಾಶಸ್ತ್ಯ ಹಾಗೂ ಗೌರವ ತೋರಲೇ ಬೇಕಾದರೂ ಫಲಿತಾಂಶ ಹಾಗೂ ಯಶಸ್ಸಿಗೆ ಮಾತ್ರವೇ ಮನ್ನಣೆ ದೊರಕಬೇಕು.
 
ಮೇಲೆ ಹೇಳಿರುವ ಮೊದಲನೆಯ ಮೂರು ಸನ್ನಿವೇಶಗಳು ಇಲ್ಲಿ ಅಪ್ರಸ್ತುತ. ನಾಲ್ಕನೆಯ ಸನ್ನಿವೇಶ ಮೇಲ್ನೋಟಕ್ಕೆ ಪರವಾಗಿಲ್ಲ ಎಂದೆನ್ನಿಸಿದರೂ ಸೂಕ್ತವಲ್ಲ. ಏಕೆಂದರೆ, ಇಲ್ಲಿನ ಫಲಿತಾಂಶಗಳ ಪ್ರತಿ ಸೋಲಿನಲ್ಲೂ ಕೆಲವೊಮ್ಮೆ ತುಂಬಲಾರದ ನಷ್ಟ ಉಂಟಾಗಿ ಕಡೆಗೊಮ್ಮೆ ಯಶಸ್ಸು ಲಭಿಸಿದರೂ, ಆ ಯಶಸ್ಸಿನಲ್ಲಿ ಹೇಳಿಕೊಳ್ಳಬಹುದಾದ ಯಾವ ಗಳಿಕೆಯೂ ಇಲ್ಲದೆ ಎಲ್ಲ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಗುತ್ತದೆ. ಆದ್ದರಿಂದ, ಸರಿಯೋ ತಪ್ಪೊ, ಐದನೆಯ ಸಂಭವಕ್ಕೇ ಕಂಪೆನಿಗಳಲ್ಲಿ ಪ್ರಾಧಾನ್ಯತೆ. ಅದಕ್ಕೇ ಹೇಳತೀರದ ಒತ್ತು.

ಇಲ್ಲಿ ಫಲಿತಾಂಶಗಳಿಗೆ ಎಷ್ಟು ಬೆಲೆಯೋ, ಯಶಸ್ಸಿಗೂ ಅಷ್ಟೇ ಬೆಲೆ. ಕೆಲವೊಮ್ಮೆ ಯಶಸ್ಸಿಗೂ ಮೀರಿದ ಬೆಲೆ ಫಲಿತಾಂಶಗಳಿಗುಂಟು. ಹಂತಹಂತದಲ್ಲೂ ಗೆಲ್ಲುತ್ತ ಸಾಗುವುದೇ ಇಲ್ಲಿನ ಮಂದಿಗಿರುವ ಒಂದು ಉಪಾಯ. ಇದು ನಿಜವೇ ಆಗಿರುವುದರಿಂದ, ಈ ವ್ಯವಸ್ಥೆಯ ಬಗ್ಗೆ ಬೇಸರಪಡದೆ ಇದರ ಆಚರಣೆಯಲ್ಲಿಯೇ ಹಿತ ಕಾಣುವುದು ಎಲ್ಲರಿಗೂ ಇರುವ ಏಕಮೇವ ಪರಿಹಾರ ಮಾರ್ಗವೂ ಹೌದು.

ಮೇಲೆ ಉದಾಹರಿಸಿದ ಡಾ. ದೊಡ್ಡರಂಗೇಗೌಡರ ಹಾಡಿನ ಪಲ್ಲವಿಯ ಕಡೆ ಸಾಲು ನನಗೆ ಈಗ ಮತ್ತೆ ನೆನಪಾಗುತ್ತದೆ. `ಗೋಣು ಹಾಕಿ ಕೂಡಬೇಡ ಗತ್ತಿನಾಗ ಬಾಳ ನೋಡ!~

ನಮಗಿರುವುದು ಒಂದೇ ದಾರಿ ಎಂದಾದಾಗ, ಗೋಣು ಹಾಕಿ ಕೂರದೆ, ಗತ್ತಿನಿಂದ ಬಾಳನ್ನು ನೋಡುವುದೇ ನಾವು ಕವಿವರ್ಯರಿಗೆ ನೀಡಬಹುದಾದ ಕಾಣಿಕೆ ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.