ADVERTISEMENT

ದಾಖಲೆ ಪತ್ರ ಸುರಕ್ಷೆಗೆ ಡಿಜಿಟಲ್ ಲಾಕರ್

ಮನೋಜ್ ಸಲ್ಡಾನ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಶಾಲಾ ಕಾಲೇಜು ದಿನಗಳ ಅಂಕಪಟ್ಟಿಗಳು... ಹೀಗೆ ಹತ್ತು ಹಲವು ದಾಖಲೆ ಪತ್ರಗಳನ್ನು ಸುರಕ್ಷಿತವಾಗಿ ಕಾಪಾ ಡಬೇಕು.. ಜೆರಾಕ್ಸ್ಮಾ ಡಿಸಿಕೊಳ್ಳಬೇಕು. ಕೆಲವೊಮ್ಮೆ ಕಚೇರಿಗಳಿಗೆ ಸಲ್ಲಿಸಬೇಕು, ಅರ್ಜಿಗಳು, ಅನುಮತಿ ಕೋರಿಕೆ ಪತ್ರಗಳ ಜತೆ ಲಗತ್ತಿಸಬೇಕು. ನಕಲು ಪ್ರತಿಗಳ ಜತೆ ಪರಿಶೀಲನೆಗೆ ತೆಗೆದುಕೊಂಡು ಹೋಗಬೇಕು. ಅಂತಹ ಸಂದರ್ಭಗಳಲ್ಲೆಲ್ಲಾ ಎಲ್ಲಿಯಾದರೂ ಈ ಮೂಲ ದಾಖಲೆ ಪತ್ರಗಳು ಕಳೆದುಹೋಗಿಬಿಟ್ಟರೆ? ಆತಂಕ ಸಹಜ.

ಈ ಗುರುತಿನ ಪತ್ರ ಮೊದಲಾದ ದಾಖಲೆ ಪತ್ರಗಳನ್ನು ಹಲವರು ಮನೆಯಲ್ಲಿ ಬೀರುವಿನಲ್ಲೋ, ಲಾಕರ್‌ನಲ್ಲಿಯೋ ಸುರಕ್ಷಿತವಾಗಿಡುತ್ತಾರೆ. ಈ ದಾಖಲೆ ಪತ್ರಗಳ ಸುರಕ್ಷತೆಗೆ ಮತ್ತು ಸಲ್ಲಿಕೆಗೆ ಆನ್‌ಲೈನ್ ಸೌಲಭ್ಯವಿದ್ದರೆ ಹೇಗೆ ? ಎಲ್ಲೆಡೆಗೂ ಮಹತ್ವದ ಈ ದಾಖಲೆಗಳನ್ನು ಕೊಂಡೊ ಯ್ಯುವುದನ್ನು ತಪ್ಪಿಸಲು ಈಗ ಡಿಜಿಟಲ್ ಲಾಕರ್ ಸೌಲಭ್ಯ ಲಭ್ಯವಿದೆ. ಭಾರತ ಸರ್ಕಾರ ಇತ್ತೀಚೆಗಷ್ಟೇ ಡಿಜಿಲಾಕರ್ ಸೌಲಭ್ಯ ಪ್ರಾರಂಭಿಸಿದೆ. ಕೇಂದ್ರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಈ ಸೇವೆ ಒದಗಿಸುತ್ತದೆ.

ಡಿಜಿ ಲಾಕರ್ ಎಲ್ಲಿ ಲಭ್ಯ?
ಡಿಜಿಲಾಕರ್ http//digilocker.gov.in  ವೆಬ್‌ ಸೈಟ್‌ನಲ್ಲಿ ಲಭ್ಯವಿದೆ. ಈ ವೆಬ್‌ಸೈಟಿನಲ್ಲಿ ಲಾಗಿನ್‌ ಆಗುವ ಮೂಲಕ ಯಾರು ಬೇಕಾದರೂ ಡಿಜಿ ಲಾಕರ್ ಸೌಲಭ್ಯ ವನ್ನು ಪಡೆದುಕೊಳ್ಳಬಹುದು. ಡಿಜಿ ಲಾಕರ್‌ನಲ್ಲಿ ಈ ಕೆಳಕಂಡ ಕಾರ್ಡ್ ಹಾಗೂ ದಾಖಲೆಗಳನ್ನು ನೀವು ಅಪ್‌ಲೋಡ್ ಮಾಡಬಹುದು.

*ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
*ಪದವಿ ಪ್ರಮಾಣಪತ್ರಗಳು
*ಪಾನ್ ಕಾರ್ಡ್
*ಮತದಾರರ ಗುರುತಿನ ಚೀಟಿ
*ಪಾಸ್ ಪೋರ್ಟ್
*ಡ್ರೈವಿಂಗ್ ಲೈಸೆನ್ಸ್
*ರೇಷನ್ ಕಾರ್ಡ್
*ವಿದ್ಯುಚ್ಛಕ್ತಿ ಬಿಲ್
*ಟೆಲಿಫೋನ್ ಬಿಲ್ / ನೀರಿನ ಬಿಲ್
*ಆಸ್ತಿ ತೆರಿಗೆ ರಶೀದಿ
*ಮತ್ತಿತರೆ ದಾಖಲೆಗಳು

ಡಿಜಿ ಲಾಕರ್ ವೈಶಿಷ್ಟ್ಯ
ಬಳಕೆದಾರರಿಗೆ ತಮ್ಮದೇ ಆದ ಒಂದು ಪ್ರತ್ಯೇಕ ಡಿಜಿಟಲ್ ಲಾಕರ್ ದೊರಕುತ್ತದೆ. ಆದರೆ, ಈ ಡಿಜಿಟಲ್ ಲಾಕರ್ ನಾಗರಿಕರ ಆಧಾರ್ ಸಂಖ್ಯೆಗೆ ಹೊಂದಿಕೊಂಡಿರು ತ್ತದೆ. ಹಾಗಾಗಿ, ಆಧಾರ್ ಸಂಖ್ಯೆ ಇಲ್ಲದವರಿಗೆ ಡಿಜಿ ಲಾಕರ್ ಸಿಗುವುದಿಲ್ಲ. ಈ ಡಿಜಿಟಲ್‌ ಲಾಕರ್‌ ಮೂಲಕವೂ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ದಾಖಲೆಗ ಳನ್ನು ಲಾಕರ್‌ನಲ್ಲಿ ಸಂಗ್ರಹಿಸಲು 10 ಎಂಬಿ ಸಾಮರ್ಥ್ಯ ದೊರಕುತ್ತದೆ. ಈ ದಾಖಲೆಗಳ ಸಂಗ್ರಹ ಸ್ಮರಣಕೋಶದ ಸಾಮರ್ಥ್ಯವನ್ನು 1 ಜಿ.ಬಿವರೆಗೂ ವಿಸ್ತರಿಸಲು ಅವಕಾಶವಿದೆ.

ದಾಖಲೆಗಳಿಗೆ ಆನ್‌ಲೈನ್‌ನಲ್ಲಿಯೇ ಸಹಿ ಮಾಡಲು ಇ-ಸಹಿ (ಎಲೆಕ್ಟ್ರಾನಿಕ್‌ ಸಹಿ) ಸೌಲಭ್ಯವೂ ದೊರಕುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಹಲವು ಲಗತ್ತುಗಳನ್ನು ಸಲ್ಲಿಸಬೇಕಾಗಿರು ತ್ತದೆ. ಇಂತಹ ಸಂದರ್ಭಗಳಲ್ಲಿ ಡಿಜಿ ಲಾಕರ್‌ನಲ್ಲಿ ಸಂಗ್ರಹಿಸಿದ ದಾಖಲೆ ಪತ್ರಗಳನ್ನು ನೇರವಾಗಿ ಅಲ್ಲಿಂದಲೇ ಅಟ್ಯಾಚ್‌ ಮಾಡಬಹುದು.

ಸೌಲಭ್ಯ ಪಡೆಯುವುದು ಹೇಗೆ ?
digilocker.gov.in ವೆಬ್‌ಸೈಟ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿದ ತಕ್ಷಣ ನಿಮ್ಮ ಮೊಬೈಲ್‌ ಫೋನ್‌ಗೆ ಮೆಸೇಜ್ ಮೂಲಕ ಪಾಸ್‌ವರ್ಡ್ ಬರುತ್ತದೆ. ಮತ್ತೆ ಈ ಪಾಸ್‌ವರ್ಡನ್ನು ವೆಬ್‌ಸೈಟ್‌ನಲ್ಲಿ 30 ನಿಮಿಷಗಳೊಳಗೆ ನಮೂದಿಸ ಬೇಕು. ಹೀಗೆ ಲಾಗಿನ್ ಆದ ಬಳಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು.

ಡಿಜಿ ಲಾಕರ್ ವಿಭಾಗ
ಮೈ ಸರ್ಟಿಫಿಕೇಟ್ಸ್:  ಈ ವಿಭಾಗದಲ್ಲಿ ನಾವು ಅಪ್‌ಲೋಡ್ ಮಾಡಿದ ದಾಖಲೆಗಳು ಮತ್ತು ಸರ್ಕಾರಿ ಇಲಾಖೆಗಳು ನಮಗೆ ನೀಡಿದ ದಾಖಲೆಗಳು ಇರುತ್ತದೆ.

ಮೈ ಪ್ರೊಫೈಲ್: ಈ ವಿಭಾಗದಲ್ಲಿ ನಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಲಿಂಗ, ಇ-ಮೇಲ್, ಮೊಬೈಲ್ ನಂಬರ್ ಇರುತ್ತದೆ.

ಮೈ ಇಸುಯರ್/ಮೈ ರಿಕ್ವೆಸ್ಟರ್: ಈ ವಿಭಾಗದಲ್ಲಿ ನಮಗೆ ಇಲಾಖೆಗಳು ನೀಡಿದ ದಾಖಲೆಗಳು ಮತ್ತು ನಮ್ಮ ದಾಖಲೆಗಳನ್ನು ಕೋರಿದ ಇಲಾಖೆಗಳ ವಿವರ ಇರುತ್ತದೆ.

ಡಿಜಿ ಲಾಕರ್‌ನಲ್ಲಿ ನಾವು ಅಪ್‌ಲೋಡ್ ಮಾಡಿದ ದಾಖಲೆಗಳ ಜೊತೆ ಬೇರೆ ಇಲಾಖೆ ಹಾಗೂ ಪ್ರಾಧಿಕಾರಗಳು ಸಹ ನಮಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬಹುದು. ಸರ್ಕಾರಿ ಇಲಾಖೆಗಳು ನಮ್ಮ ಲಾಕರ್‌ನಲ್ಲಿ ದಾಖಲೆ ಗಳನ್ನು ನೀಡಿದಾಗ ಅಂತಹ ಇಲಾಖೆಗಳಿಗೆ ಇಸ್ಯುಯರ್ (Issuer) ಎಂದು ಕರೆಯುತ್ತಾರೆ. ಉದಾಹರಣೆಗೆ: ಆದಾಯ ತೆರಿಗೆ ಇಲಾಖೆ, ನೋಂದಣಿ ಇಲಾಖೆ, ಸಿಬಿಎಸ್‌ಇ.

ಹಾಗೆಯೇ ಕೆಲವು ಸರ್ಕಾರಿ ಇಲಾಖೆಗಳು ನಮ್ಮ ಲಾಕರ್‌ನಲ್ಲಿರುವ  ದಾಖಲೆಗಳನ್ನು ಪರಿಶೀಲಿಸಲು ಮತ್ತು ಇಲಾಖೆಗಳಿಗೆ ಸಲ್ಲಿಸಲು ಬೇಕಾಗುವ ಸಮಯದಲ್ಲಿ, ನಮ್ಮ ಲಾಕರ್‌ನಿಂದ ದಾಖಲೆಗಳನ್ನು ಪರಿಶೀಲಿಸಬಹುದು. ಅಂತಹ ಇಲಾಖೆಗಳಿಗೆ ರಿಕ್ವೆಸ್ಟರ್ ಎಂದು ಕರೆಯುತ್ತಾರೆ. ಉದಾಹರಣೆಗೆ: ಆರ್‌ಟಿಒ, ಪಾಸ್‌ಪೋರ್ಟ್ ಆಫೀಸ್, ವಿಶ್ವವಿದ್ಯಾಲಯ.

ದಾಖಲೆಗಳ ಸಲ್ಲಿಕೆ ಹೇಗೆ?
ನಮ್ಮ ಲಾಕರ್‌ನಲ್ಲಿರುವ ದಾಖಲೆಗಳನ್ನು ಯಾವುದಾ ದರೂ ಸಂಸ್ಥೆಗೆ ಸಲ್ಲಿಸಬೇಕಾಗಿದ್ದರೆ, ಆ ದಾಖಲೆಯ ಶೇರ್ ಲಿಂಕನ್ನು  ಕ್ಲಿಕ್  ಮಾಡಬೇಕು. ಯಾರಿಗೆ  ಅಥವಾ ಯಾವ ಸಂಸ್ಥೆಗೆ ಸಲ್ಲಿಸಬೇಕಿದೆಯೋ ಅವರ/ಸಂಸ್ಥೆಯ ಇ-ಮೇಲ್‌ ನಮೂದಿಸಬೇಕು. ಇ-ಮೇಲ್ ಮೂಲಕವೇ ದಾಖಲೆಗಳು ಕ್ಷಿಪ್ರಗತಿಯಲ್ಲಿ ರವಾನೆಯಾಗುತ್ತವೆ. ಜತೆಗೆ ದಾಖಲೆ ಸಲ್ಲಿಸಿದವರ (ನಮ್ಮ) ಹೆಸರು, ಆಧಾರ್ ಸಂಖ್ಯೆಯೂ ಇ-ಮೇಲ್‌ನಲ್ಲಿ ನಮೂದಾಗುತ್ತದೆ. ನಮ್ಮ ಲಾಕರ್‌ನಿಂದ ದಾಖಲೆಗಳನ್ನು ಕೋರುವವರು ಮತ್ತು ದಾಖಲೆಗಳನ್ನು ನೀಡುವ ಇಲಾಖೆಗಳು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ನೋಂದಾಯಿಸಬೇಕು.

ಇ-ಸೈನ್(e-sign)
ದಾಖಲೆಗಳನ್ನು ಸಲ್ಲಿಸಲು ಸಹಿ ಬೇಕಾಗುತ್ತದೆ. ಆನ್‌ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸುವ ಸಲುವಾಗಿ ಸಹಿ ಅವಶ್ಯಕ. ಆದ ಕಾರಣ ದಾಖಲೆಗಳಿಗೆ ಸಹಿ ಅಳವಡಿಸಲು ಇ-ಸೈನ್ ಸೌಲಭ್ಯ ಪ್ರಾರಂಭ ಮಾಡಲಾಗು ತ್ತಿದೆ. ಡಿಜಿಟಲ್ ಸಹಿ ಮುಖಾಂತರ ದಾಖಲೆಗಳಿಗೆ ಇ-ಸೈನ್ ನಮೂದಿಸಿ ದಾಖಲೆಗಳನ್ನು ಆನ್‌ಲೈನ್ನಲ್ಲಿಯೇ ಸಲ್ಲಿಸ ಬಹುದು. ಇ-ಸೈನ್ ಸೇವೆಯನ್ನು ಕೆಲ ಸಮಯದ ನಂತರ ಆರಂಭಿಸಲಾಗುತ್ತದೆ.

ಗೌಪ್ಯತೆ
ತಜ್ಞರು ಡಿಜಿ ಲಾಕರ್ ಜನರ ಗೌಪ್ಯತೆಗೆ, ವೈಯಕ್ತಿಕ ಮಾಹಿತಿಗಳಿಗೆ ಗಂಭೀರ ಬೆದರಿಕೆ ಒಡ್ಡುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ಕೇಂದ್ರ ಘಟಕದಲ್ಲಿ ಸಂಗ್ರಹಿಸಲಾಗಿರುವ ದತ್ತಾಂಶ ಗಳನ್ನು ಹ್ಯಾಕರ್‌ಗಳು ಕದಿಯುವ ಅಥವಾ ಬಾಹ್ಯ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇರುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಭೂ ದಾಖಲೆ, ಪ್ಯಾನ್ ಕಾರ್ಡ್ ಮತ್ತು ಪಡಿತರ ಚೀಟಿ ಮೊದಲಾದ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಆದರೆ, ಪಾಸ್‌ಪೋರ್ಟ್‌ ಮತ್ತಿತರ ಖಾಸಗಿ ಮಾಹಿತಿ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು.

ಡಿಜಿ ಲಾಕರ್‌ನ ಪ್ರಯೋಗಾತ್ಮಕ ಮಾದರಿಯನ್ನು ಫೆಬ್ರವರಿ 12ರಂದು ಪ್ರಾರಂಭಿಸಲಾಯಿತು. ಡಿಜಿ ಲಾಕರ್ ಸೇವೆ ಐಚ್ಛಿಕ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಡಿಜಿಟಲ್ ಲಾಕರ್ಸ್ ಪರಸ್ಪರ ಸಂಯೋಜನೆ ವಿಚಾರ ಸ್ಪಷ್ಟವಾಗಿಲ್ಲ. ಮಹಾರಾಷ್ಟ್ರ ಸರಕಾರವೂ ‘ಮಹಾ ಡಿಜಿಟಲ್ ಲಾಕರ್’ ಪರಿಚಯಿಸಿದೆ. ಆಧಾರ್ ಕಾರ್ಡ್ ಹೊಂದಿರುವ ಮಹಾರಾಷ್ಟ್ರದ ನಿವಾಸಿಗಳು elocker.maharashtra.gov.in ಲಾಗಿನ್ ಆಗಿ ಇ-ಲಾಕರ್ ಸೌಲಭ್ಯ ಬಳಸಬಹುದು. 2011ರ ಜನಗಣತಿ ಪ್ರಕಾರ ದೇಶದ ಶೇ 95ರಷ್ಟು ಜನರು ಅಂತರ್ಜಾಲ ಸಂಪರ್ಕವನ್ನು ಹೊಂದಿಲ್ಲ. ಶೇ 90ರಷ್ಟು ಕುಟುಂಬಗಳು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಹೊಂದಿಲ್ಲ. ಈ ಸನ್ನಿವೇಶದಲ್ಲಿ ಯಾರು ಡಿಜಿ ಲಾಕರ್ ಸೇವೆ ಪಡೆಯುವವರು? ಎಂಬ ಪ್ರಶ್ನೆಯೂ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.