ಸಿಂಗಪುರ (ಪಿಟಿಐ): ಸತತ ಎಂಟನೇ ಬಾರಿಯೂ ವಿಶ್ವದ ಅತ್ಯಂತ ಸಿರಿವಂತ ಭಾರತೀಯ ಎಂಬ ಶ್ರೇಯಕ್ಕೆ ಮುಂಬೈ ಮೂಲದ ರಿಲಯನ್ಸ್ ಉದ್ಯಮಗಳ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ.
‘ಫೋಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಮೊದಲಿಗರಾಗಿದ್ದಾರೆ.
ದಿಲೀಪ್ ಶಾಂಘ್ವಿ, ಅಜೀಂ ಪ್ರೇಮ್‌ಜಿ , ಪಲ್ಲೋಂಜಿ ಮಿಸ್ತ್ರಿ , ಲಕ್ಷ್ಮಿ ಮಿತ್ತಲ್ ನಂತರದ ಸ್ಥಾನದಲ್ಲಿದ್ದಾರೆ.
ಮುಕೇಶ್ ₨1,43,960 ಕೋಟಿಗಳಷ್ಟು (23.6 ಶತಕೋಟಿ ಡಾಲರ್) ಆಸ್ತಿ ಹೊಂದುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸನ್ ಫಾರ್ಮಾ ಸಮೂಹ ಕಂಪೆನಿಗಳ ಒಡೆಯ ದಿಲೀಪ್ ಶಾಂಘ್ವಿ ₨1,09,800 ಕೋಟಿ ಸಂಪತ್ತು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರು ₨1,00,040ಕೋಟಿ ಸಂಪತ್ತು ಹೊಂದುವ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಷಪೂರ್ಜಿ ಪಲ್ಲೋಂಜಿ ಸಮೂಹದ ಅಧ್ಯಕ್ಷ ಪಲ್ಲೋಂಜಿ ಮಿಸ್ತ್ರಿ ಅವರು ₨96,990ಕೋಟಿ ಮೌಲ್ಯದ ಸಂಪತ್ತಿಗೆ ಒಡೆಯರಾಗಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.
ಉಕ್ಕು ತಯಾರಿಕೆ ಲೋಕದ ದಿಗ್ಗಜ ಎನಿಸಿಕೊಂಡಿರುವ, ಆರ್ಸೆಲರ್ ಮಿತ್ತಲ್ ಕಂಪೆನಿಯ ಮಾಲೀಕ ಲಕ್ಷ್ಮಿ ಮಿತ್ತಲ್ ₨96,380 ಕೋಟಿ ಮೌಲ್ಯದ ಸಂಪತ್ತು ಹೊಂದುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಹಿಂದುಜಾ ಸೋದರರು ₨81,130 ಕೋಟಿ ಶಿವ ನಾಡಾರ್ ₨75 ಸಾವಿರ ಕೋಟಿ, ಆದಿ ಗೋದ್ರೆಜ್ ಮತ್ತು ಕುಟುಂಬ ₨70,760 ಕೋಟಿ, ಕುಮಾರ್ ಬಿರ್ಲಾ ₨56,120 ಕೋಟಿ ಹಾಗೂ ಸುನೀಲ್ ಮಿತ್ತಲ್ ಮತ್ತು ಕುಟುಂಬ ₨48,068 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ.
ಮಲ್ಯ ಹೊರಕ್ಕೆ
ಸಿಂಗಪುರ (ಪಿಟಿಐ): ಫೋಬ್ಸ್ ನಿಯತಕಾಲಿಕ ಪ್ರಕಟಿಸಿರುವ ಭಾರತದ 100 ಸಿರಿವಂತರ ಪಟ್ಟಿಯಿಂದ ಯುನೈಟೆಡ್ ಬ್ರಿವರೀಸ್ ಸಮೂಹದ (ಯುಬಿ) ಅಧ್ಯಕ್ಷ ವಿಜಯ ಮಲ್ಯ ಹೊರಬಿದ್ದಿದ್ದಾರೆ.
ಸಾಲ ಮರುಪಾವತಿಸದ ಕಾರಣಕ್ಕಾಗಿ ಬ್ಯಾಂಕುಗಳು ‘ಉದ್ದೇಶ ಪೂರ್ವಕ ಸುಸ್ತಿದಾರ’ ಎಂದು ಘೋಷಿಸಿರುವುದರಿಂದ ಮಲ್ಯ ಅವರು ಫೋಬ್ಸ್ ಸಿರಿವಂತರ ಪಟ್ಟಿ ಸೇರಲು ಸಾಧ್ಯವಾಗಿಲ್ಲ. 2013ರಲ್ಲಿ ಮಲ್ಯ ಈ ಪಟ್ಟಿಯಲ್ಲಿ 84ನೇ ಸ್ಥಾನದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.