ಗುರು ತಾನು ಚೆಂದದಲಿ ಪಾಠ ಮಾಡಿದರಾಯ್ತೆ?/
ಅರಿಯದೆಯೆ ಮಕ್ಕಳಿನ ಲೋಪದೋಷಗಳ//
ಪರಿಹಾರ ನೀಡಿದರೆ ಅದರ ನ್ಯೂನತೆಗಳಿಗೆ/
ಗುರುತರದ ಗುರು ಅವನೆ! - ನವ್ಯಜೀವಿ//
ನಾನು ಮಾರಾಟ ವಿಭಾಗಕ್ಕೆ ಕಾಲಿಟ್ಟ ಮೊದಲ ವರ್ಷಗಳು. `ಸೀಮೆನ್ಸ್' ಕಂಪೆನಿಯ ಡಿಫೆನ್ಸ್ ವಿಭಾಗದಲ್ಲಿದ್ದೆ. ಹೈದರಾಬಾದಿನ ಡಿ.ಆರ್.ಡಿ.ಎಲ್ ದೇಶದ ರಕ್ಷಣಾ ಕ್ಷೇತ್ರದಲ್ಲಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ. ಅಲ್ಲಿನ ಹಿರಿಯ ಅಧಿಕಾರಿಗಳೊಬ್ಬರನ್ನು ಕಾಣಲೆಂದು ಅವರ ಕಚೇರಿಗೆ ಮೀಟಿಂಗಿಗೆ ಗೊತ್ತಾದ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದೆ. ಅವರೂ ಹಾಗೂ ಅವರ ತಂಡ ದೇಶದ ರಕ್ಷಣಾದಳಕ್ಕೆಂದು ತಯಾರು ಮಾಡುತ್ತಿದ್ದ ಕ್ಷಿಪಣಿಯೊಂದರ ಮೂಲ ವಿನ್ಯಾಸದಲ್ಲಿ ನಮ್ಮ ಕಂಪೆನಿಯ ಕೆಲವು ಭಾಗಗಳನ್ನು ಅಳವಡಿಸುವುದು ನನ್ನ ಉದ್ದೇಶವಾಗಿತ್ತು.
ಅವರ ಕೊಠಡಿ ಅತ್ಯಂತ ಸುಸಜ್ಜಿತವಾಗಿತ್ತು. ನಾನು ಗ್ರಾಹಕರೊಂದಿಗೆ ಮಾತಿಗಿಳಿವ ಮುನ್ನ ಅವರ ಗಮನಕ್ಕೆ ಬಾರದಂತೆ ಕೊಠಡಿಯನ್ನೊಮ್ಮೆ ಸೂಕ್ಷ್ಮವಾಗಿ ವೀಕ್ಷಿಸುತ್ತೇನೆ. ಅವರ ಕೊಠಡಿ ನನಗೆ ಅವರ ಬಗೆಗಿನ ಅನೇಕ ವಿವರಗಳನ್ನು ನೀಡುತ್ತದೆ. ಅವರ ಅಚ್ಚುಕಟ್ಟುತನ, ಶಿಸ್ತು, ನಂಬಿಕೆಗಳು, ಸಿದ್ಧಾಂತಗಳು ಅಥವಾ ಅವರ ಬೇಕಾಬಿಟ್ಟಿತನ, ಬೇಜವಾಬ್ದಾರಿ ಕಾರ್ಯವೈಖರಿ, ಪ್ರದರ್ಶನದ ಟೊಳ್ಳುತನ... ಹೀಗೆ ಅವರ ಬಹುತೇಕ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಅವರ ಕೊಠಡಿ ಪರಿಚಯಿಸುತ್ತದೆ. ಅವರೊಡನೆಯ ಮುಂದಿನ ಮಾತುಕತೆಯಲ್ಲಿ ಇದು ಅತ್ಯಂತ ಸಹಾಯಕ ಕೂಡ.
ಇವರ ಕೊಠಡಿಯಲ್ಲಿ ನನ್ನ ಗಮನ ಸೆಳೆದದ್ದು ಅವರು ಕೂರುವ ಕುರ್ಚಿಯ ಹಿಂದೆ ಅಥವಾ ನಾವು ಇವರ ಮುಂದೆ ಕುಳಿತಾಗ ನಮ್ಮ ಕಣ್ಣಿಗೆ ನೇರ ಕಾಣುವ ಹಾಗೆ ಅವರು ತೂಗು ಹಾಕಿದ್ದ ಒಂದು ಫಲಕ. ಸ್ವತಃ ಕೈಯ್ಯಾರೆ ಬರೆದಿದ್ದರಿಂದ ಅದಕ್ಕೆ ಅವರು ಕೂಡುವ ಮಹತ್ವದ ಅರಿವು ತಕ್ಷಣವೇ ಆಗುತ್ತದೆ. ಆಂಗ್ಲಭಾಷೆಯಲ್ಲಿದ್ದ ಅದರ ಭಾವಾರ್ಥ - `ನಮ್ಮ ಸಮಸ್ಯೆ ನನ್ನದು ಮಾತ್ರವಲ್ಲ, ಅದು ನಿಮ್ಮದು ಕೂಡ. ಅದಕ್ಕೆ ಪರಿಹಾರ ನಿಮ್ಮಲ್ಲಿ ಇಲ್ಲದಿದ್ದರೆ ದಯವಿಟ್ಟು ನನ್ನ ಸಮಯವನ್ನು ಹಾಳು ಮಾಡಬೇಡಿ'!
ಮೊದಲ ಓದಿನಲ್ಲಿ ನಿಮಗಿದು ನೇರವಾಗಿ ಹಾಗೂ ಖಾರವಾಗಿ ಬರೆದಿದ್ದಾರೆ ಎನ್ನಿಸಬಹುದು. ಈತ ಬಹಳ ಅಹಂಕಾರದ ಮನುಷ್ಯನಿರಬಹುದೆಂದು ಅನ್ನಿಸಲೂಬಹುದು. ಈತನಿಗೆ ತಾನೊಬ್ಬ ಬಹಳ ಶಿಸ್ತಿನ ಸಿಪಾಯಿ ಎಂದು ಪ್ರದರ್ಶಿಸಬೇಕೆಂಬ ಮನೋಭಾವ ಇರಬಹುದೆ? ಅಥವಾ ಮುಂದೆ ಕುಳಿತವರನ್ನು ಅಂಕೆಯಲ್ಲಿ ಇಡಲು ಗ್ರಾಹಕರು ಬಳಸುವ ಸೂತ್ರವಿರಬಹುದೆ? ಉತ್ತರ ಅನೇಕ - ಎಲ್ಲ ನಮ್ಮ ಚಿಂತನೆಗಳನ್ನು ಅವಲಂಬಿಸಿರುತ್ತದೆ ಎಂಬುದಂತೂ ಸತ್ಯ.
ಆದರೆ ಈ ಒಂದು ಹೇಳಿಕೆಯಲ್ಲೇ ಮಾರಾಟ ವಿಭಾಗದವರಿಗೆ ಅತ್ಯಂತ ಬೆಲೆ ಬಾಳುವ ಒಂದು ಪಾಠವಿದೆ. ಅದನ್ನು ಎಲ್ಲ ಸೇಲ್ಸ್ ಹುಡುಗರೂ ತಮ್ಮ ವೃತ್ತಿ ಜೀವನದಲ್ಲಿ ಆದಷ್ಟು ಬೇಗ ಅರಿತುಕೊಂಡು ಬಿಟ್ಟರೆ ಅಲ್ಲಿಂದ ಅವರ ಬೆಳವಣಿಗೆ ಖಚಿತ.
ಮಾರಾಟ ವಿಭಾಗದವರಲ್ಲಿ ವೃತ್ತಿಯನ್ನು ಶುರು ಮಾಡುವ ಬಹುತೇಕರಲ್ಲಿ ಒಂದು ತಪ್ಪು ಗ್ರಹಿಕೆ ಇದೆ. ಇಲ್ಲಿ ನಾವು ಚೆನ್ನಾಗಿ ಮಾತನಾಡಬೇಕು. ಆರ್ಡರ್ ಗಿಟ್ಟಿಸುವುದಕ್ಕೆ ಸುಳ್ಳುಗಳನ್ನು ಹೆಣೆಯುವ ಪರಿಸ್ಥಿತಿ ಬಂದರೂ ನಾವು ಹಿಮ್ಮೆಟ್ಟಬಾರದು. ಗ್ರಾಹಕರಿಗೆ ಚೆನ್ನಾಗಿ ತಿನ್ನಿಸಿ, ಕುಡಿಸಿ, ಮೆರೆಸಿ ನಮ್ಮ ಕೆಲಸವನ್ನು ಮಾಡಿಕೊಳ್ಳಬೇಕು. ಎದುರಾಳಿಗಳ ಬೆಲೆಗಳನ್ನು ಹೇಗಾದರೂ ಮಾಡಿ ಕಂಡುಕೊಂಡು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನಮ್ಮ ಸರಕುಗಳನ್ನು ಮಾರಿಬಿಟ್ಟರಾಯ್ತು. ಉತ್ಪನ್ನಗಳ ಹಿಂದೆ ಅಡಗಿರುವ ಸಾಮಾನ್ಯ ಹಾಗೂ ತಾಂತ್ರಿಕ ಜ್ಞಾನ ಅಥವಾ ಅವುಗಳ ಬೆನ್ನೆಲುಬಾದ ಟೆಕ್ನಾಲಜಿ ನಮಗೇಕೆ ಬೇಕು? - ಹೀಗೆ ಅನೇಕ ವಿಚಾರಗಳು ಅವರ ತಲೆಯಲ್ಲಿ ಸುಳಿಯುತ್ತವೆ.
ಇವೆಲ್ಲ ಬೇಡವೇ ಬೇಡವೆಂದು ನಾನೆಂದೂ ಹೇಳುವುದಿಲ್ಲ. ನನ್ನ ವಿಚಾರದಲ್ಲಿ ಇವೆಲ್ಲಾ ಕೆಲಸದ ಶೇಕಡಾ ಐವತ್ತರಷ್ಟು ಮಾತ್ರ. ಇವುಗಳಿಂದ ಸಣ್ಣಪುಟ್ಟ ಕಾರ್ಯಗಳಲ್ಲಿ ಗೆಲ್ಲಬಹುದೇ ಹೊರತು ದೊಡ್ಡ ದೊಡ್ಡ ಯುದ್ಧಗಳಲ್ಲಿ ಗೆಲುವು ಸಾಧ್ಯವಿಲ್ಲ. ಆಗೊಮ್ಮೆ ಈಗೊಮ್ಮೆ ಆರ್ಡರ್ ಗಿಟ್ಟಿಸಿಕೊಳ್ಳಬಹುದೇ ಹೊರತು ಸರ್ವಕಾಲದಲ್ಲೂ ಆರ್ಡರ್ ಗಿಟ್ಟಿಸಿಕೊಳ್ಳುವ ದಿಸೆಯಲ್ಲಿ ನಮ್ಮ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಾ, ಜತೆಗೆ ಗ್ರಾಹಕರನ್ನೂ ಕಳೆದುಕೊಳ್ಳದೆ ಮುಂದೆ ಸಾಗುವುದು ಕಠಿಣವಾದೀತು. ಇದಕ್ಕಾಗಿ ನಾವು ನಮ್ಮ ಬತ್ತಳಿಕೆಯಲ್ಲಿ ಇನ್ನುಳಿದ ಶೇಕಡಾ ಐವತ್ತರಷ್ಟು ಖಾಲಿ ಜಾಗದಲ್ಲಿ ನವನವೀನ ಬಾಣಗಳನ್ನು ತುಂಬಬೇಕಾಗುತ್ತದೆ. ಕಳೆದ ಲೇಖನದಲ್ಲಿ ನಾನು ತಿಳಿಸಿದ ವಿನ್-ವಿನ್ ಕಾರ್ಯವೈಖರಿಯನ್ನು ಬೆಳೆಸಿಕೊಳ್ಳುವುದು ಹಾಗೂ ಅದಕ್ಕೆ ಪೂರಕವಾಗಿ ಪ್ರಾಮಾಣಿಕತೆಯನ್ನು ನಮ್ಮೆಲ್ಲ ವ್ಯವಹಾರಗಳಲ್ಲಿ ತಂದುಕೊಳ್ಳುವುದು ಒಂದಾದರೆ, ಎರಡನೆಯದು ಈ ಲೇಖನದಲ್ಲಿ ನಾನು ಪ್ರತಿಪಾದಿಸ ಹೊರಟಿರುವ ಮತ್ತೊಂದು ಅಂಶ.
ಮೇಲೆ ಉಲ್ಲೇಖಿಸಿರುವ ಗ್ರಾಹಕರ ಫಲಕವನ್ನೊಮ್ಮೆ ಮತ್ತೆ ಓದಿ ನೋಡಿ. ಗ್ರಾಹಕ ಮಹಾಶಯ ಎದುರು ಕುಳಿತು ತನಗೆ ಏನನ್ನೋ ಮಾರಲು ಹವಣಿಸುತ್ತಿರುವವನಿಗೆ ಸ್ಪಷ್ಟವಾಗಿ ಹೇಳುತ್ತಿದ್ದಾನೆ - `ನೀವು ನನ್ನೊಡನೆ ಮಾತಿಗಿಳಿವ ಮುನ್ನ, ನಿಮಗೆ ನನ್ನ ಸಮಸ್ಯೆಗಳೇನು ಎಂಬುದರ ಪೂರ್ಣ ಅರಿವಿದೆಯೆ? ಅಥವಾ ಅವುಗಳನ್ನು ಕಂಡುಕೊಳ್ಳುವತ್ತ ನಿಮಗೆ ಕುತೂಹಲವಾದರೂ ಇದೆಯೆ? ಹಾಗೊಮ್ಮೆ ನಿಮಗೆ ನನ್ನ ಸಮಸ್ಯೆಗಳ ಪರಿಚಯ ಇದ್ದರೆ, ಅವುಗಳಿಗೆ ನೀವು ಮಾರಬೇಕೆಂದಿರುವ ಉತ್ಪನ್ನಗಳಿಂದ ಪರಿಹಾರ ಉಂಟೆ? ಪರಿಹಾರ ಪೂರ್ಣವಾಗಿರಬೇಕೆಂದಿಲ್ಲ. ಆದರೆ ಅದು ಪರಿಹಾರದ ಮಾರ್ಗವನ್ನಾದರೂ ತೋರಿಸುವ ಸಾಧ್ಯತೆ ಇದೆಯೆ?' ಇವೆಲ್ಲವುಗಳಿಗೆ ಮುಂದೆ ಕುಳಿತವನಿಗೆ ಉತ್ತರ ಇದ್ದರೆ, ಗ್ರಾಹಕನ ಸಮಸ್ಯೆಯನ್ನು ಆತ ತನ್ನದೇ ಸಮಸ್ಯೆ ಎಂಬಷ್ಟು ಗಂಭೀರವಾಗಿ ತೆಗೆದು ಕೊಂಡಿದ್ದಾನೆಂದೇ ಅರ್ಥ. ನಮ್ಮದಲ್ಲದ ಸಮಸ್ಯೆಗಳಿಗೆ ಎಂದಿಗೂ ಪರಿಹಾರ ಕಂಡುಕೊಳ್ಳದ ಮನುಜ ಪ್ರವೃತ್ತಿಗೆ ಗ್ರಾಹಕನ ಸಮಸ್ಯೆ ತನ್ನದಲ್ಲವೆಂದೆನಿಸಿಬಿಟ್ಟರೆ ಅದಕ್ಕೆ ಪರಿಹಾರ ಮಾಡಿರುವ ಪ್ರಕ್ರಿಯೆಗೂ ಆತ ಕೈ ಹಾಕಲಾರ!
ಇನ್ನು ಆ ಫಲಕದಲ್ಲಿರುವ ಎರಡನೇ ಪಾಠದಲ್ಲಿ ಗ್ರಾಹಕ ಹೇಳುತ್ತಿದ್ದಾನೆ- `ಸಮಯ ಎಂಬುದು ಅತ್ಯಂತ ಮುಖ್ಯವಾದದ್ದು. ನನ್ನ ಸಮಸ್ಯೆಗಳಿಗೆ ನಿಮ್ಮಲ್ಲಿ ಪರಿಹಾರ ಇಲ್ಲದಿದ್ದಲ್ಲಿ, ನೀವು ವೃಥಾ ಕಾಲಹರಣ ಮಾಡುತ್ತಿದ್ದೀರಿ. ನನ್ನ ಹಾಗೂ ನಿಮ್ಮ ಇಬ್ಬರ ಸಮಯವೂ ವ್ಯರ್ಥವಾಗುತ್ತದೆ. ನನ್ನ ಸಮಸ್ಯೆಗಳಿಗೆ ನಿಮ್ಮಲ್ಲಿ ಪರಿಹಾರವಿದ್ದರೆ ಮಾತಿಗಿಳಿಯಿರಿ. ಇಲ್ಲವೆಂದರೆ ದಯವಿಟ್ಟು ಜಾಗ ಖಾಲಿ ಮಾಡಿರಿ'. ಇದಕ್ಕಿಂತ ನೇರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇದು ಗ್ರಾಹಕನ ಅಹಂಕಾರವನ್ನು ತೋರಿಸುವುದಕ್ಕೆ ಬದಲಾಗಿ ಅವನು ಸಮಯಕ್ಕೆ ಕೊಡುವ ಮಹತ್ವವನ್ನು ತೋರಿಸುತ್ತದೆ. ಸಮಸ್ಯೆಯ ಪರಿಹಾರದಲ್ಲಿ ಮಾತ್ರವೇ ಅಡಕವಾಗಿರುವ ಅವನ ಕಾರ್ಯನಿಷ್ಠೆಯನ್ನು ಎತ್ತಿ ಹಿಡಿಯುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ `ಸಮಯಕ್ಕೆ ಮಹತ್ವ ಕೊಡುವ ಎಲ್ಲರೂ ಮಹಾತ್ಮರಾಗಿದ್ದಾರೆ. ಇನ್ನುಳಿದವರು, ಕೇವಲ ಸಮಯ ಸಾಧಕರಷ್ಟೇ!'
ಮುಂಬೈನ ಬಾಬಾ ಪವರ್ ಸಂಸ್ಥೆಯಿಂದ ನಾನೀಗ ಕೆಲಸದಲ್ಲಿರುವ ತೇಜಸ್ ನೆಟ್‌ವರ್ಕ್ಸ್ ಕಂಪೆನಿಗೆ ಬಹುದೊಡ್ಡ ಮೊತ್ತದ ಭಾರೀ ವ್ಯಾಪ್ತಿಯ ನೆಟ್ ವರ್ಕ್ ಆರ್ಡರ್ ಪಡೆದಿದ್ದೆ. ಅದು ಸುಮಾರು ಹತ್ತು ವರ್ಷಗಳ ಹಿಂದೆ ಟೆಲಿಕಾಂ ಕ್ಷೇತ್ರದಲ್ಲಿನ ಘಟಾನುಘಟಿಗಳೆಲ್ಲರನ್ನೂ ಸೋಲಿಸಿ, ಆಗಿನ್ನೂ ಒಂದು ವರ್ಷ ಮಗುವಾಗಿದ್ದ ತೇಜಸ್ ಕಂಪೆನಿಗೆ ಈ ಮೊದಮೊದಲು ಆರ್ಡರ್ ಗಳಿಸಿದ್ದು ನನಗೆ ಸಾರ್ಥಕತೆಯನ್ನು ತಂದಿತ್ತು. ಆ ಸಮಯದಲ್ಲಿ ಬಾಬಾ ಕಂಪೆನಿಯ ಎಲ್ಲ ಅಧಿಕಾರಿಗಳೊಂದಿಗೆ ನನಗೆ ನಿಕಟ ಸಂಪರ್ಕವಿತ್ತು. ಅವರಲ್ಲಿ ಒಬ್ಬರಾದ ಡಿ.ಎನ್.ಪ್ರಸಾದ್ ನಂತರದ ದಿನಗಳಲ್ಲಿ ಬಾಬಾ ಟೆಲಿ ಸಂಸ್ಥೆಗೆ ವರ್ಗಾವಣೆಗೊಂಡಿದ್ದರು.
ಈಗ ಸುಮಾರು ಎರಡು ವರ್ಷಗಳ ಕೆಳಗೆ ಒಂದು ದಿನ ಅನಿರೀಕ್ಷಿತವಾಗಿ ಪ್ರಧಾನ್ ಅವರು ಕರೆ ಮಾಡಿದ್ದರು. ಹೇಳುತ್ತಿದ್ದರು. `ಸತ್ಯೇಶ್ ನಾವೊಂದು ಟೆಕ್ನಾಲಜಿಯನ್ನು ಆರಿಸಿಕೊಳ್ಳುವತ್ತ ಸಮಾಲೋಚನೆಯಲ್ಲಿ ಇದ್ದೇವೆ. ಇದರಲ್ಲಿ ನಿಮ್ಮ ತೇಜಸ್ ಕಂಪೆನಿಯ ಪಾಲೇನೂ ಇಲ್ಲ. ಆದರೂ ಕೇಳುತ್ತಿದ್ದೇನೆ. ಯಾವ ಟೆಕ್ನಾಲಜಿ ಹೇಗೆ ಎಂಬುದರ ಬಗ್ಗೆ ನಿನ್ನ ಅಭಿಪ್ರಾಯ ತಿಳಿಸು. ವಿ ವ್ಯಾಲ್ಯೂ ಯುವರ ಒಪಿನಿಯನ್' ಎಂದರು. ಅವರೊಡನೆ ಮಾತು ಮುಗಿಸಿದಾಗ ದಶಕದ ಹಿಂದೆ ಅವರ ಮೊದಲ ಆರ್ಡರ್ ಗಿಟ್ಟಿಸಿಕೊಂಡದ್ದಕ್ಕಿಂತ ಹೆಚ್ಚಿನ ಸಾರ್ಥಕಭಾವ ಮನಸ್ಸನ್ನಾವರಿಸಿತ್ತು!
ತನ್ನ ಮಾರಾಟ ವಿಭಾಗದವರನ್ನು ಪರಿಸರಕ್ಕೆ ತಕ್ಕಂತೆ, ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಟೆಕ್ನಾಲಜಿಗಳಿಗೆ ಹೊಂದುಕೊಳ್ಳುವಂತೆ ತಮ್ಮ ಉತ್ಪನ್ನಗಳ ಎಲ್ಲ ಮಾಹಿತಿ ಹಾಗೂ ಅದು ಹೇಗೆ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂಬ ವಿಶೇಷ ತಿಳಿವಳಿಕೆ ಹೆಚ್ಚಿಸಿಕೊಳ್ಳುವಂತೆ ಬೋರ್ಡ್ ರೂಮಿನ ಸುತ್ತಮುತ್ತಲಿನ ಅಧಿಕಾರಿಗಳ ಎಚ್ಚರ ವಹಿಸಬೇಕು. ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ತಕ್ಕಂತೆ ತರಬೇತಿ, ವಿಶೇಷ ಶಿಬಿರಗಳನ್ನು ನಡೆಸುತ್ತಿರಬೇಕು. ಈ ಪರಿಯ ವ್ಯಕ್ತಿತ್ವವನ್ನು ರೂಢಿಸಿಕೊಂಡವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಹಾಗಾದಾಗ ಮಾರಾಟ ವಿಭಾಗದವರ ಕೆಲಸಕ್ಕೆ ಅದರ ನಿಜವಾದ ಅರ್ಥ ಹಾಗೂ ನಿರ್ದಿಷ್ಟವಾದ ಉದ್ದೇಶವೊಂದನ್ನು ಕಲ್ಪಿಸಿಕೊಟ್ಟಂತಾಗುತ್ತದೆ.
ಸಮಸ್ಯೆಗಳಿಗೆಲ್ಲ ಪರಿಹಾರ ನೀಡಬೇಕೆಂಬ ಈ ಲೇಖನದ ತಿರುಳು ಅಷ್ಟು ಸುಲಭದಲ್ಲಿ ದಕ್ಕುವುದಿಲ್ಲ. ಅದಕ್ಕಾಗಿ ಪೂರ್ವಯೋಜನೆ ಹಾಗೂ ಅದರದೇ ನಿಟ್ಟಿನಲ್ಲಿ ಸಾಧನೆ ಅತ್ಯಗತ್ಯ. ಅದರತ್ತ ನಮ್ಮ ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಅಂದ ಹಾಗೆ, ಮರೆತೇ ಬಿಟ್ಟಿದ್ದೆ. ಕೆಲಸದಲ್ಲಿ ಸಮಸ್ಯೆಗಳಿಗೆಲ್ಲ ಪರಿಹಾರವನ್ನು ಕಂಡುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತ, ನಿಮ್ಮ ಮನೆಯಲ್ಲಿ ಪತ್ನಿ ಮಾತಿಗಿಳಿದಾಗ, ಅವಳ ಸಮಸ್ಯೆಗಳಿಗೆ ದಿಢೀರನೆ ಪರಿಹಾರಗಳನ್ನು ಸೂಚಿಸುವ ತಪ್ಪು ಮಾಡಬೇಡಿ. ನಿಮ್ಮ ಗ್ರಾಹಕರಂತೆ ಅವಳಿಗೆ ನಿಮ್ಮ ಪರಿಹಾರಗಳ ಅಗತ್ಯವಿಲ್ಲ. ಆಕೆಗೆ ಬೇಕಿರುವುದು ಅವಳ ಎಲ್ಲವನ್ನೂ ತಾಳ್ಮೆಯಿಂದ ಕೇಳಬಲ್ಲ ನಿಮ್ಮ ಕಿವಿಗಳು, ಜತೆಗೆ ನಿಮ್ಮ ಅನುಕಂಪ ಹಾಗೂ ಸಾಂತ್ವನದ ಒಂದೆರಡು ಪ್ರೀತಿಯ ಮಾತುಗಳು, ಅಷ್ಟೆ!
ಜೀವನದ ಈ ಎರಡೂ ವೈಪರೀತ್ಯಗಳನ್ನು ಸೂಕ್ತವಾಗಿ ನಿಭಾಯಿಸುತ್ತ ಮುಂದುವರೆಯುವುದೇ ಪ್ರಗತಿ ಹಾಗೂ ಶಾಂತಿ. ಗುಡ್‌ಲಕ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.