ಮುಂದಿರುವ ತೊಂದರೆಗೆ ಪರಿಹಾರ ಮಾರ್ಗವನು/
ಕಂಡುಕೊಳ್ಳುವ ನಿನ್ನ ನಿರ್ಧಾರದಲ್ಲಿ//
ಅಂದಿಗಂದಿಗೆ ಒಲಿವ ವಸ್ತುನಿಷ್ಠೆಯ ಬಿಡದೆ/
ಸಂದಿರಲಿ ಭವಿಷಯವು –ನವ್ಯಜೀವಿ//
ಈ ಲೇಖನದಲ್ಲಿ ಒಂದು ಸುಂದರವಾದ ಸಮಸ್ಯೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವೇ ಅದನ್ನು ಬಗೆಹರಿಸಬೇಕು. ಒಂದು ಹಳ್ಳಿ. ಆ ಹಳ್ಳಿಯ ಹೊರವಲಯದ ಆಲಯದ ಬಳಿ ಟ್ರೇನುಗಳ ಓಡಾಟಕ್ಕಾಗಿ ಎರಡು ಜೊತೆ ಹಳಿಗಳಿವೆ. ಒಂದು ಜೊತೆ ತೀರಾ ಹಳೆಯದು. ಅದನ್ನು ಈಗ ಯಾರೂ ಬಳಸುತ್ತಿಲ್ಲ. ಆದರೂ ಆ ಹಳಿಗಳು ಬಹಳ ಹಿಂದಿನಿಂದಲೂ ಈ ಹಳ್ಳಿಗೆ ಟ್ರೇನುಗಳು ಬರುತ್ತಿತ್ತು ಎಂದು ಸಾರಿ ಹೇಳಲೆಂದೇ ಉಳಿದುಕೊಂಡಿರಬಹುದು.
ಆ ಹಳೆಯ ಹಳಿಗಳಿಂದಲೇ ಕವಲೊಡೆವಂತೆ ಹೊಸ ಹಳಿಗಳು ಶುರುವಾಗಿ ಸ್ವಲ್ಪ ವಾಲುತ್ತಾ ಮುಂದೆ ಸಾಗುತ್ತವೆ. ಟ್ರೇನುಗಳೆಲ್ಲ ಓಡಾಡುವುದು ಈ ಹೊಸ ಹಳಿಗಳ ಮೇಲೆಯೇ.
ಹಳ್ಳಿಯ ಮಕ್ಕಳಿಗೆಲ್ಲ ಆಲಯದ ಈ ಪಕ್ಕದ ಹಳಿಗಳು ಗೋಲಿ ಆಡುವುದಕ್ಕೆ ಅತ್ಯಂತ ಪ್ರಿಯವಾದ ಜಾಗ. ಅಂತೆಯೇ ವಾರಾಂತ್ಯದ ದಿನದ ಹೊತ್ತಿನಲ್ಲಂತೂ ಇಲ್ಲಿ ಹುಡುಗರ ದೊಡ್ಡ ಗುಂಪೇ ಇರುತ್ತದೆ.
‘ನೋಡ್ರೋ ಹುಶಾರು! ಆ ಹೊಸ ಹಳಿಗಳ ಮೇಲೆ ಗೋಲಿ ಆಡ್ಬೇಡಿ. ಯಾವಾಗ ತಿರುವಿನಿಂದ ದಿಢೀರನೆ ಟ್ರೇನು ಬರುತ್ತೋ ಗೊತ್ತಾಗಲ್ಲ. ಅಷ್ಟೊಂದು ಹಳಿಗಳ ಮೇಲೆಯೇ ಗೋಲಿ ಆಡ್ಬೇಕು ಅಂತ ಇದ್ರೆ, ಆ ಹಳೆಯ ಹಳಿಗಳ ಮೇಲೆ ಆಡಿ. ಗೊತ್ತಾಯ್ತ?’ ಎಂದು ಹಳ್ಳಿಗರು ತಮ್ಮ ಮಕ್ಕಳನ್ನು ನಿರಂತರವಾಗಿ ಎಚ್ಚರಿಸುತ್ತಲೇ ಇರುತ್ತಾರೆ.
‘ಆಯ್ತು’ ಎಂದು ತಲೆ ಅಲ್ಲಾಡಿಸುವವರೇ ಎಲ್ಲ!
ಆದರೆ ಮಕ್ಕಳಿಗೆಲ್ಲ ಗೋಲಿ ಆಡಲು ಹೊಸ ಹಳಿಗಳೇ ಪ್ರಿಯ. ಹಳೆಯ ಹಳಿಗಳು ಅಲ್ಲಲ್ಲಿ ತುಕ್ಕು ಹಿಡಿದಿರುವುದರಿಂದ ಎಲ್ಲ ಮಕ್ಕಳು ತಮ್ಮ ತಮ್ಮ ಗುಂಪುಗಳಲ್ಲಿ ಹೊಸ ಹಳಿಗಳ ಮೇಲೆಯೇ ಹರಡಿರುತ್ತಾರೆ.
ಆದರೆ, ರಾಮ ಮತ್ತು ಶ್ಯಾಮ ಎಂಬ ಸ್ನೇಹಿತರು ಮಾತ್ರ ತಮ್ಮ ಹಿರಿಯರು ತಿಳಿಸಿದಂತೆ ಎಂದಿಗೂ ಆ ಹಳೆಯ ಹಳಿಗಳಲ್ಲೇ ಆಡುತ್ತಾರೆ. ರಾಮನೋ ಪಿತೃವಾಕ್ಯ ಪರಿಪಾಲಕ ಹಾಗೂ ಶ್ಯಾಮನಾದರೋ ಆ ರಾಮನದೇ ಅವತಾರವಲ್ಲವೇ?
ಈ ಹಿನ್ನೆಲೆಯಲ್ಲಿ ಈಗ ಸಮಸ್ಯೆಗೆ ಬರುತ್ತೇನೆ. ಶನಿವಾರದ ಮಟಮಟ ಮಧ್ಯಾಹ್ನ. ಹೊಸ ಹಳಿಗಳ ಮೇಲೆ ಸುಮಾರು ಅರವತ್ತು ಮಂದಿ ಹುಡುಗರು ಗೋಲಿಯಾಟದಲ್ಲಿ ತನ್ಮಯರಾಗಿದ್ದಾರೆ. ರಾಮ ಮತ್ತು ಶ್ಯಾಮ ಮಾತ್ರ ಎಂದಿನಂತೆ ಹಳೆಯ ಹಳಿಗಳಲ್ಲೇ ಹುದುಗಿ ಹೋಗಿದ್ದಾರೆ. ದೂರದಿಂದ ಟ್ರೇನು ಬರುತ್ತಿದೆ, ನೀವೇ ಆ ಟ್ರೇನಿನ ಚಾಲಕರು!
ಟ್ರೇನು ಆಲಯದ ಹತ್ತಿರ ಬಂದಂತೆಲ್ಲ ನಿಮಗೆ ಮುಂದಿನ ಸನ್ನಿವೇಶದ ತೀವ್ರತೆ ಅರಿವಾಗುತ್ತದೆ. ನೀವು ಹೋಗಬೇಕಾದ ಹಳಿಗಳ ಮೇಲೆ ಅರವತ್ತು ಮಂದಿ ಮಕ್ಕಳು ಆಟವಾಡುತ್ತಿದ್ದಾರೆ. ಟ್ರೇನಿನ ಶಿಳ್ಳೆ ಹೊಡೆಯಲು ಮುಂದಾಗುತ್ತೀರಿ. ಯಾಕೋ ಆ ಕ್ಷಣಕ್ಕೆ ಅದು ಕೆಲಸ ಮಾಡುತ್ತಿಲ್ಲ. ನೀವು ಆಲಯದ ಹತ್ತಿರವಾಗುತ್ತಿರುವುದನ್ನು ಅಲ್ಲಿ ಯಾರೂ ಗಮನಿಸಿದಂತೆ ನಿಮಗೆ ತೋರುವುದಿಲ್ಲ. ಬ್ರೇಕ್ ಹಾಕಿದರೂ ಪ್ರಯೋಜನವಿಲ್ಲ ಎಂಬುದು ನಿಮಗೆ ಗೊತ್ತು. ಪಕ್ಕದಲ್ಲೇ ಹಳೆಯ ಹಳಿಗಳೂ ಕಾಣಿಸುತ್ತಿವೆ. ಅಲ್ಲಾದರೆ ಇಬ್ಬರೇ ಇಬ್ಬರು ಹುಡುಗರು ಮಾತ್ರ ಇದ್ದಾರೆ. ಇದು ನಿರ್ಧಾರದ ಕ್ಷಣ ನೀವೇನು ಮಾಡುತ್ತೀರಿ ಎಂಬುದೇ ಸಮಸ್ಯೆ.
ಬಹುತೇಕ ಎಲ್ಲರೂ ಯೋಚಿಸಿದಂತೆಯೇ ನೀವೂ ಯೋಚಿಸಿರುತ್ತೀರಿ. ನೇರ ಹೋದರೆ ಬಹುಶಃ ಅರವತ್ತು ಹುಡುಗರು ಬಲಿಯಾದಾರು. ಅದನ್ನು ಬಿಟ್ಟು ಮುಂದೆ ಕಾಣುತ್ತಿರುವ ಇನ್ನೊಂದು ಹಳಿಗಳ ಮೇಲೆ ಟ್ರೇನನ್ನು ನಡೆಸಿದರೆ ಹಾನಿಯಾಗುವುದು ಪ್ರಾಯಶಃ ಇಬ್ಬರಿಗೆ ಮಾತ್ರ. ಇಬ್ಬರು ಹೋಗಲಿ, ಅರವತ್ತು ಉಳಿಯಲಿ. ಹೌದು, ಬಹುಸಂಖ್ಯೆಯ ಉಳಿವಿಗೆ ಅಲ್ಪಸಂಖ್ಯೆಯೊಂದರ ಬಲಿ ಕೊಟ್ಟರೆ ಏನೂ ತಪ್ಪಿಲ್ಲ. ತಕ್ಷಣವೇ ನಿರ್ಧರಿಸಿ ಟ್ರೇನನ್ನು ನೀವೀಗ ಹಳೆಯ ಹಳಿಗಳ ಮೇಲೆ ತಿರುಗಿಸಿಬಿಟ್ಟಿದ್ದೀರಿ. ಮನಸ್ಸಿನಲ್ಲಿ ಅದೇನನ್ನೋ ಸಾಧಿಸಿದ ಭಾವ. ಧರ್ಮವನ್ನು ಉಳಿಸಿಬಿಟ್ಟೆವೆಂಬ ಸಾಂತ್ವನ!
ಈ ಸಮಸ್ಯೆಗೆ ಯಾರೂ ಕೊಡುವ ಪರಿಹಾರವನ್ನೇ ನೀವೂ ಕೊಟ್ಟಿದ್ದೀರಿ. ಇಲ್ಲಿ ಇನ್ನೂ ಅನೇಕ ಒಳವಿಚಾರಗಳಿವೆ ಹಾಗೂ ಇತರೆ ಸಾಧ್ಯತೆಗಳಿವೆ. ಅವುಗಳನ್ನು ಈಗ ವಿಶ್ಲೇಷಿಸೋಣ.
ಇನ್ನೊಮ್ಮೆ ಯೋಚಿಸಿ ನೋಡಿ. ದಿನಾ ಟ್ರೇನು ಓಡಾಡುವ ಹಳ್ಳಿಗಳ ಮೇಲೆ ಆಡುತ್ತಿರುವ ಮಕ್ಕಳಿಗೆ ಮನಸ್ಸಿನ ಮೂಲೆಯೊಂದರಲ್ಲಿ ಅಲ್ಲಿ ಟ್ರೇನು ಬರುತ್ತದೆಂದು ಗೊತ್ತು. ದೂರದಿಂದಲೇ ಟ್ರೇನಿನ ಶಿಳ್ಳೆ ಕೇಳದಿದ್ದರೂ ಅದು ಹತ್ತಿರವಾದಾಗ ಬರುವ ಸದ್ದಿನಿಂದ ಟ್ರೇನು ಬಂತೆಂದು ಗೊತ್ತಾಗಿ ಅವರೆಲ್ಲ ಹಳಿಗಳಿಂದ ಹಾರಿ ಪರಾರಿಯಾಗುವ ಸಾಧ್ಯತೆಯೇ ಅಧಿಕ.
ಆದರೆ ಹಳೆಯ ಹಳಿಗಳಲ್ಲಿ ಆಡುತ್ತಿರುವ ಇಬ್ಬರಿಗೂ ಟ್ರೇನು ಬರುವ ಸದ್ದು ಕೇಳಿಸಿದರೂ ಅದು ಎಂದಿನಂತೆ ಹೊಸ ಹಳಿಗಳ ಮೇಲೆ ಹೋಗುತ್ತದೆಂಬ ನಂಬಿಕೆಯಿಂದ ಹಳಿಗಳನ್ನು ತೊರೆಯದೆಯೇ ಇರಬಹುದು. ಏಕೆಂದರೆ ತಾವು ಆಡುವ ಹಳಿಗಳ ಮೇಲೆ ಇದುವರೆಗೆ ಟ್ರೇನುಗಳು ಹೋದದ್ದೇ ಇಲ್ಲವಲ್ಲ. ಹೀಗಾಗಿ ಅವರಿಬ್ಬರೂ ಬಲಿಯಾಗುವ ಸಾಧ್ಯತೆಯೇ ಹೆಚ್ಚು.
ಮತ್ತೊಂದು ವಿಚಾರ. ಚಾಲಕರಾದ ನೀವು ಮುಂದಿರುವ ಅರವತ್ತನ್ನು ಉಳಿಸುವ ನಿರ್ಧಾರದಲ್ಲಿ ಕಣ್ಣುಮುಚ್ಚಿ ಎರಡರ ಬೆನ್ನತ್ತಿದಾಗ, ಟ್ರೇನಿನಲ್ಲಿರುವ ಸಾವಿರಾರು ಯಾತ್ರಿಕರನ್ನೂ ಸಾವಿನ ಕೂಪಕ್ಕೆ ತಳ್ಳುತ್ತಿದ್ದೇನೆ ಎಂದು ನಿಮಗನ್ನಿಸಲಿಲ್ಲವೆ? ಮುಂದೆ ಕಾಣುತ್ತಿರುವ ಯಾವುದೋ ಹಳೆಯ ಹಳಿಗಳ ಮೇಲೆ ಟ್ರೇನನ್ನು ಓಡಿಸಿಬಿಟ್ಟರೆ ಆ ಟ್ರೇನು ಅಪಘಾತಕ್ಕೀಡಾಗುವ ಸಂಭವವೇ ಹೆಚ್ಚಲ್ಲವೇ?
‘ಎರಡರ ಸಾವಿನಲ್ಲಿ ಅರವತ್ತರ ಉಳಿವು’ ಎಂಬ ಸಿದ್ಧಾಂತದಲ್ಲಿ ಈಗ ‘ಅರವತ್ತರ ಉಳಿವಿನಲ್ಲಿ ಸಾವಿ ರಾರು ಸಾವು’ ಎಂಬ ಸತ್ಯವೇ ಗೋಚರಿಸುತ್ತಿದೆಯಲ್ಲಾ? ಒಂದು ಕ್ಷಣದ ಹಿಂದೆ ಯಾವುದು ಧರ್ಮಸಮ್ಮತ ವೆನ್ನಿಸಿತ್ತೋ ಅದೇ ಈಗ ಧರ್ಮಬಾಹಿರವಾಗಿದೆಯಲ್ಲ!
ಧರ್ಮವನ್ನು ಶಾಸ್ತ್ರಗಳ ಹಿನ್ನೆಲೆಯಲ್ಲಿ ಅರಿಯದೇ ನಮ್ಮದೇ ಸಂಕುಚಿತ ನೆಲೆಗಟ್ಟಿನಲ್ಲಿ ಪರಿಭಾಷಿಸಿ ದಾಗಲೆಲ್ಲ ಯಾವುದೋ ಪಟ್ಟಿನ ಮೂಲೆಯೊಂದರಲ್ಲಿ ಯಾರಿಗೂ ತೊಂದರೆ ಕೊಡದಂತೆ ತನ್ನ ಹಣದಲ್ಲಿ ಬಿಯರ್ ಕುಡಿಯುತ್ತಿರುವ ಅಬಲೆಯೊಬ್ಬಳು ಭ್ರಷ್ಠಳಾಗಿ ಬಿಡುತ್ತಾಳೆ. ಆದರೆ ಚಲನಚಿತ್ರಗಳ ಪರದೆಯ ಮೇಲೆ ದಿನನಿತ್ಯವೂ ಕುಡಿಯುತ್ತ, ಕುಡಿಸುತ್ತ ಅರೆನಗ್ನರಾಗಿಸಿ ಐಟಂ ಹಾಡುಗಳ ರಂಗೇರಿಸುವ ತಾಳಕ್ಕೆ ಹುಡುಗಿಯರನ್ನು ಮಿತಿಮೀರಿ ಕುಣಿಸುವ ಆ ಇಡಿಯ ವ್ಯವಸ್ಥೆ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಆಗಿಬಿಡುವುದು ಮಾತ್ರ ಒಂದು ವಿಪರ್ಯಾಸವೇ ಸರಿ.
ಇವೆಲ್ಲಕ್ಕಿಂತ ನನ್ನ ಮಟ್ಟಿಗೆ ಅತ್ಯಂತ ಮುಖ್ಯವಾದ ಒಂದು ಅಂಶವಿದೆ. ಹಿರಿಯರ ಮಾತಿಗೆ ಬೆಲೆ ಕೊಡದೆ ಹೊಸ ಹಳಿಗಳ ಮೇಲೆ ಆಟವಾಡುತ್ತಿದ್ದ ಮಕ್ಕಳೆಲ್ಲ ಕಾನೂನನ್ನು ಉಲ್ಲಂಘಿಸುವ ಪುಂಡರೇ. ಆದರೆ ಅವರೆಲ್ಲರೊಡನೆ ಕೂಡಿ ಆಡಬೇಕೆಂಬ ಮಕ್ಕಳ ಸಹಜ ಆಸೆಯನ್ನೂ ಅದುಮಿಟ್ಟು ಕಾನೂನಿಗೆ ತಲೆಬಾಗಿ ಹಳೆಯ ಹಳಿಗಳನ್ನಾಕ್ರಮಿಸಿದ ರಾಮ ಹಾಗೂ ಶ್ಯಾಮ ಮಾತ್ರ ಸುಸಂಸ್ಕೃತ ಮಕ್ಕಳು. ಆದರೆ, ನಿಮ್ಮ ಮೊದಲ ನಿರ್ಧಾರದಿಂದ ತಪ್ಪಿತಸ್ಥ ತಪ್ಪಿಸಿಕೊಂಡು ಏನೊಂದೂ ತಪ್ಪನ್ನೆಸಗದ ಸಂಭಾವಿತನಿಗೆ ಗಲ್ಲು ಶಿಕ್ಷೆಯಾಗಿ ಬಿಡುತ್ತದೆ. ಈಗ ನೀವೇ ಹೇಳಿ, ಮೇಲುನೋಟಕ್ಕೆ ಸರಿ ಎಂದು ತಕ್ಷಣಕ್ಕೆ ಕಂಡುಬಂದರೂ ನಿಮ್ಮ ನಿರ್ಧಾರ ಸರಿ ಇತ್ತೆ? ಮುಂದಿನ ಸಮಾಜಕ್ಕೆ ಮಾದರಿಯಾಗಬಲ್ಲ ಸತ್ಯ ಅದರಲ್ಲಿ ಅಡಗತ್ತೆ?
ಬೋರ್ಡ್‌ರೂಮಿನ ಸುತ್ತಮುತ್ತಲೂ ಪ್ರತಿದಿನ ಹಿರಿಯ ಅಧಿಕಾರಿಗಳಿಗೆ ಈ ಪರಿಯ ದ್ವಂದ್ವಗಳು ಕಾಡುತ್ತಲೇ ಇರುತ್ತವೆ. ತಾವು ತೆಗೆದುಕೊಳ್ಳಬೇಕಾದ ನಿರ್ಧಾರಗಳು ಸರಿಯೋ ಅಥವಾ ತಪ್ಪೋ? ಧರ್ಮವೋ ಅಥವಾ ಅರ್ಧಮವೋ? ಕಂಪನಿಯ ಹಿತಕ್ಕೋ ಅಥವಾ ಸ್ವಾರ್ಥಕ್ಕೋ? ಆಗಿನ ಕ್ಷಣದ ಮುದಕ್ಕೋ ಅಥವಾ ಮುಂದಿನ ಸಾರ್ಥಕ ಕ್ಷಣಕ್ಕೋ? ಎಂದು ಪ್ರಶ್ನಿಸುತ್ತಲೇ ಇರುತ್ತವೆ.
ಅವರ ಮುಂದೆ ಪ್ರತಿ ಸನ್ನಿವೇಶದಲ್ಲೂ ಕನಿಷ್ಠ ಎರಡು ಜೊತೆ ಹಳಿಗಳಿವೆ. ಯಾವುದನ್ನು ಆಯ್ದುಕೊಳ್ಳಬೇಕೆಂದು ಅವರು ತೆಗೆದುಕೊಳ್ಳುವ ನಿರ್ಧಾರಗಳ ಒಟ್ಟು ಪ್ರಭಾವದಿಂದಲೇ ಅವರು ಓಡಿಸುವ ಟ್ರೇನಿನ ಯಾತ್ರೆಯ ಫಲಾನುಫಲ. ಅವರು ತೆಗೆದುಕೊಳ್ಳುವ ಈ ನಿರ್ಧಾರಗಳ ಪ್ರಕ್ರಿಯೆಗೆ ಬಹುತೇಕ ವೇಳೆಗಳಲ್ಲಿ ಸಾಕಷ್ಟು ಸಮಯಾವಕಾಶವೂ ಇಲ್ಲದಿರುವುದೇ ಇಲ್ಲಿ ಅವರಿಗಿರುವ ಇನ್ನೊಂದು ದೊಡ್ಡ ತೊಡಕೂ ಹೌದು!
ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹಾಗೂ ಆ ನಿರ್ಧಾರಗಳನ್ನೆಲ್ಲ ಜಾಗೃತವಾಗಿ ಆಗಿಂದಾಗಲೇ ತೆಗೆದುಕೊಳ್ಳಬೇಕು. ಇದು ಅವರಿಗಿರುವ ಸವಾಲು ಆಗೆಲ್ಲ ಯಾರು ದಿಢೀರನೆ ಲಾಭ ಗಳಿಸಿಬಿಡಬೇಕೆಂಬ ಆಮಿಷಕ್ಕೆ ಬಲಯಾಗದೆ ಕಂಪೆನಿಯನ್ನು ಮುಂಬರುವ ದಶಕಗಳಲ್ಲಿ ಕಾಪಾಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಅವರೆಲ್ಲ ಚರಿತ್ರೆಯಲ್ಲಿ ಗೆದ್ದವರೇ ಆಗಿದ್ದಾರೆ.
ಸುಮಾರು 1986ರ ಆಸುಪಾಸು. ಆಗ ವಿಪ್ರೋ ಸಂಸ್ಥೆ ಗಣಕ ಯಂತ್ರಗಳನ್ನು ಮಾರುತ್ತಿತ್ತು. ತಂತ್ರಾಂಶ ಯುಗವಿನ್ನೂ ತನ್ನ ಕಹಳೆಯನ್ನು ಊದಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಾರಾಟ ವಿಭಾಗದ ಅತ್ಯಂತ ಯಶಸ್ವೀ ಹುಡುಗರು ತಮ್ಮ ಪ್ರವಾಸದ ಲೆಕ್ಕಪತ್ರಗಳನ್ನು ಸಲ್ಲಿಸುವಾಗ ಕೆಲವು ಸುಳ್ಳು ರಸೀತಿಗಳನ್ನು ಹಣ ಮಾಡುವ ಆಸೆಯಿಂದ ಸೇರಿಸಿಬಿಟ್ಟಿದ್ದರು.
ಇದು ಕಂಪೆನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂತು. ಕೆಲಸದಲ್ಲಿ ಅತ್ಯಂತ ನಿಪುಣರಾದ ಅವರಿಗೆ ಎಚ್ಚರಿಕೆಯ ಎರಡು ಮಾತನಾಡಿ ಈ ಪ್ರಸಂಗವನ್ನು ಅಲ್ಲೇ ಕೈಬಿಡಲು ನಿರ್ಧರಿಸುತ್ತಾರೆ. ಹಾಗೆ ಮಾಡಿದ್ದರೆ ಮುಂದೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಆ ಹೊತ್ತಿನಲ್ಲಿ ಆ ಇಬ್ಬರು ತಪ್ಪಿತಸ್ಥರನ್ನೂ ಕೆಲಸದಿಂದ ವಜಾ ಮಾಡುವ ನಿರ್ಧಾರ ತೆಗೆದುಕೊಂಡವರೇ ತಂತ್ರಾಂಶ ಜಗತ್ತಿನಲ್ಲಿಂದೂ ಏನೊಂದೂ ಸದ್ದುಗದ್ದಲವಿಲ್ಲದೆ ಯಶಸ್ಸನ್ನು ಗಳಿಸಿರುವ ಅಜೀಂ ಪ್ರೇಮ್‌ಜೀ ಅವರು.
ಅವರ ಆ ಒಂದು ನಿರ್ಧಾರ ಆ ಕ್ಷಣದ ಕಂಪೆನಿಯ ಮಾರಾಟಕ್ಕೆ ಸ್ವಲ್ಪ ಧಕ್ಕೆ ತಂದಿದ್ದರೂ ಅದರಿಂದ ಇಡಿಯ ಕಂಪೆನಿಯಲ್ಲಿ ಪ್ರಹರಿಸಿದ ಸಿದ್ಧಾಂತವೊಂದು ಬೋರ್ಡ್‌ರೂಮಿನ ಸುತ್ತಮುತ್ತಲಿನ ಅಧಿಕಾರ ವರ್ಗವನ್ನು ಒಂದು ಸರಿ ದಿಶೆಯಲ್ಲಿ ಮುನ್ನಡೆಯಿಸಿತು ಹಾಗೂ ಕಂಪೆನಿಯ ದಶಕಗಳ ಭವಿಷ್ಯದ ಸಾಧನೆಗೆ ತನ್ನದೇ ರೀತಿಯಲ್ಲಿ ಅಡಿಪಾಯ ಹಾಕಿತು ಎಂದೇ ನಾನು ಭಾವಿಸಿದ್ದೇನೆ. ಅನೇಕ ಬಾರಿ ನಿರ್ಧಾರಗಳೆಲ್ಲ ತಕ್ಷಣ ಆಗಬೇಕು. ಇಂದಿನ ವಾಸ್ತವಕ್ಕೆ ಸ್ಪಂದಿಸುತ್ತಲೇ ಮುಂದಿನ ಭವಿಷ್ಯವನ್ನೂ ರೂಪಿಸುವ ಹಾದಿಯೊಂದನ್ನು ಕಡೆಯಬೇಕು.
ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೆಗಲಿಗೇರಿಸಿ ಕೊಂಡಿರುವ ಬೋರ್ಡ್‌ರೂಮಿನ ಸುತ್ತಮುತ್ತಲಿನ ಅಧಿಕಾರಿ ವರ್ಗ ಸರ್ವಧಾ ಧರ್ಮಪರವಾಗಿ ಹಾಗೂ ದೀರ್ಘಕಾಲದ ಯಶಸ್ಸಿನ ಸರಿದಾರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತಾಗಲಿ ಎಂದೇ ನನ್ನ ಹಾರೈಕೆ. ಒಟ್ಟಿನಲ್ಲಿ, ರಾಮ ಹಾಗೂ ಶ್ಯಾಮ ಉಳಿಯಬೇಕು, ಅಷ್ಟೆ!.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.