ಬೆಡ್ರೂಮಲ್ಲಿ ಹೆಗ್ಣ ಬಂದ್ರೆ ಇಟರ್‌ನೆಟ್ಟಲ್ಲಿ ದೊಣ್ಣೆ ಹುಡ್ಕಿ...
ಯೋಗರಾಜ್ ಭಟ್ಟರ ಹಾಡಿನ ಈ ಸಾಲೇ ಸಾಕು ಇಂಟರ್‌ನೆಟ್‌ಗೆ ಇರುವ ಪ್ರಖ್ಯಾತಿಗೆ ಉದಾಹರಣೆ ನೀಡಲು. ಈ ಸಾಲಿನಲ್ಲಿನ ಎರಡೂ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲದಿರಬಹುದು. ಆದರೆ ವಿಷಯ ಯಾವುದೇ ಇದ್ದರೂ ಇಂಟರ್‌ನೆಟ್ಟಿನಲ್ಲಿ ಅದರ ಮಾಹಿತಿ ಪಡೆಯಬಹುದು ಎನ್ನುವುದಂತೂ ಹೌದು.
ಆರಂಭದಲ್ಲಿ ಮೇಲ್ ಕಳುಹಿಸಲಷ್ಟೇ ಇಂಟರ್‌ನೆಟ್ ಬಳಕೆಯಾಗುತ್ತಿತ್ತು. ಆದರೆ ಇಂದು ಇಂಟರ್‌ನೆಟ್ ಸರ್ವವ್ಯಾಪಿ, ವಿಶ್ವರೂಪಿ ಆಗಿದೆ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಲಭ್ಯವಿರುವುದರಿಂದ ಅಂಗೈಯಲ್ಲೇ ಜಗತ್ತನ್ನು ನೋಡುವ, ನಿರ್ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅವಕಾಶ ಲಭ್ಯವಾಗಿದೆ. ಜತೆಗೆ ವಾಹನಗಳ ಸಂಚಾರದ ವೇಳೆಯ ಪ್ರತಿ ಹಂತವನ್ನೂ ಸುಲಭವಾಗಿ ಅರಿಯಬಹುದು. ಈಗ ಪ್ರೀತಿಯ ಸಾಕು ಪ್ರಾಣಿ, ಪಕ್ಷಿಗಳ ಚಲನವಲನದತ್ತಲೂ ಸದಾ ಕಣ್ಣಿಡಬಹುದು. ‘ಜಿಪಿಎಸ್’ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ತಂತ್ರಜ್ಞಾನ ಇಂತಹ ಕೆಲಸಗಳನ್ನು ಮತ್ತಷ್ಟು ಸುಲಭಗೊಳಿಸಿದೆ.
ಜಿಪಿಎಸ್
ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (‘ಜಿಪಿಎಸ್’). ಪರಿಕಲ್ಪನೆ ಹೊಸತೇನಲ್ಲ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲೇ ಬ್ರಿಟಿಷ್ ಸೇನೆ ಇದನ್ನು ಬಳಸಿಕೊಂಡಿತ್ತು.
ಉಪಗ್ರಹಗಳು ಬಿತ್ತರಿಸುವ ಸಂಕೇತಗಳ ಮೂಲಕ ಒಂದು ವಸ್ತುವಿನ ಸ್ಥಾನ, ಜಾಗ ಮತ್ತು ಅದು ಚಲಿಸುತ್ತಿರುವ ದಿಕ್ಕನ್ನು ಸೂಚಿಸುವ ವ್ಯವಸ್ಥೆಗೆ ಜಿಪಿಎಸ್ ಎನ್ನಲಾಗುತ್ತದೆ. ಜಿಪಿಎಸ್ ವ್ಯವಸ್ಥೆ ಇರುವ ಸಾಧನದ ಮೂಲಕ ಅದನ್ನು ಪತ್ತೆಮಾಡುವುದಕ್ಕೆ ‘ಜಿಪಿಎಸ್ ಟ್ರ್ಯಾಕಿಂಗ್’ ಎನ್ನುತ್ತೇವೆ.
ಇತ್ತೀಚಿನ ವರ್ಷಗಳಲ್ಲಿ ಸಾಕುಪ್ರಾಣಿಗಳಿಗೆ ಬಹಳಷ್ಟು ಮನೆಗಳಲ್ಲಿ ಭಾರಿ ಮಹತ್ವ ಸಿಗುತ್ತಿದೆ. ನಾಯಿ, ಬೆಕ್ಕು, ಗಿಳಿ, ಪಾರಿವಾಳಗಳಷ್ಟೇ ಅಲ್ಲ, ಹಾವು, ಇಲಿ, ಕೊಕ್ಕರೆಯಂತಹ ನೂರಾರು ಪ್ರಾಣಿಗಳು ಈಗ ಮನೆ ಮಂದಿಯ ಪ್ರೀತಿ ಗಳಿಸಿಕೊಂಡು ಕುಟುಂಬದ ಭಾಗವೇ ಆಗಿಬಿಟ್ಟಿವೆ. ಇಂತಹ ಪ್ರೀತಿಯ ಸಾಕು ಪ್ರಾಣಿಗಳು ಕಳೆದುಹೋದರೆ, ಕಳುವಾದರೆ, ದಾರಿಯಲ್ಲೇ ಕಣ್ಮರೆಯಾದರೆ ಮಾಲೀಕರ, ಕುಟುಂಬ ವರ್ಗದವರ ಆತಂಕ, ದುಃಖ ಹೇಳತೀರದು. ತಮ್ಮ ಸಾಕುಪ್ರಾಣಿಯ ಶೋಧಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವವರು, ಪತ್ರಿಕಾ ಜಾಹೀರಾತು ನೀಡುವವರು, ದಿನಗಟ್ಟಲೆ ಇಡೀ ನಗರವನ್ನು ಜಾಲಾಡುವವರು ನಮ್ಮ ನಡುವೆಯೆ ಇದ್ದಾರೆ. ಇಂತಹವರಿಗೆ ನೆರವಾಗಲೆಂದೇ ಬಂದಿದೆ ‘ಜಿಪಿಎಸ್ ಟ್ರ್ಯಾಕರ್’.
ಸಾಕುಪ್ರಾಣಿಗಳ ಕೊರಳಿಗೆ ‘ಜಿಪಿಎಸ್ ಟ್ರ್ಯಾಕರ್’ ಕಟ್ಟಿ, ಅವು ದಿನನಿತ್ಯ ಓಡಾಡುವ ಪ್ರದೇಶದ ಮಾಹಿತಿಯನ್ನು ಸಾಧನದಲ್ಲಿ ದಾಖಲಿಸಿದರಾಯ್ತು. ಸಾಕುಪ್ರಾಣಿ ಮನೆಯಿಂದ ಕಾಣೆಯಾದರೆ, ಕಳುವಾದರೆ ಅಥವಾ ತಿರುಗಾಟಕ್ಕೆ ಕರೆದೊಯ್ದಾಗ ತಪ್ಪಿಸಿಕೊಂಡರೆ ಇಂತಹ ದಿಕ್ಕಿನಲ್ಲಿ ಸಾಕುಪ್ರಾಣಿ ಹೋಗುತ್ತಿದೆ ಎಂಬ ಸಂದೇಶ ನಿಮ್ಮ ಮೊಬೈಲಿಗೆ ಬರುತ್ತದೆ. ತಕ್ಷಣವೇ ಎಚ್ಚೆತ್ತುಕೊಂಡರಾಯ್ತು....
‘ಜಿಪಿಎಸ್ ಟ್ರ್ಯಾಕರ್’ ಮೂಲಕ ಅವು ಸಾಗಿದ ಮಾರ್ಗ, ಈಗ ಇರುವ ಸ್ಥಳವನ್ನು ನಿಖರವಾಗಿ ಕಂಡುಕೊಂಡು ಮನೆಗೆ ಕರೆತರಬಹುದು.
ಇದು ಬಹಳ ಲಘುವಾದ ವಿಷಯ ಎನಿಸಿದರೂ ವಾಸ್ತವ. ನಮ್ಮನ್ನೂ ಒಳಗೊಂಡಂತೆ ಮೂಕ ಪ್ರಾಣಿಗಳತ್ತ ಕಾಳಜಿಯ ನೋಟ ಹರಿಸಲು, ಜತೆಗೆ ರಕ್ಷಣೆಯನ್ನೂ ಒದಗಿಸಲು, ಇನ್ನೊಂದೆಡೆ ವಾಹನಗಳ ಓಡಾಟದ ದಿಕ್ಕುಗಳ ಮೇಲ್ವಿಚಾರಣೆ ನಡೆಸಲು ‘ಜಿಪಿಎಸ್ ಟ್ರ್ಯಾಕಿಂಗ್’ ವ್ಯವಸ್ಥೆ ಒಂದು ಸರಳವಾದ ಪ್ರಭಾವಿ ಸಾಧನ.
ಈ ನಿಟ್ಟಿನಲ್ಲಿ ‘ಒನ್ ಸ್ಟೆಪ್ ಸಲ್ಯೂಷನ್’ (ಒಎಸ್‌ಎಸ್) ಎಂಬ ಖಾಸಗಿ ಸಂಸ್ಥೆ ನೂತನ ಜಿಪಿಎಸ್ ಟ್ರ್ಯಾಕರ್ ಸಾಧನ ಅಭಿವೃದ್ಧಿಪಡಿಸಿದೆ.
ಶಾಲಾ ಮಕ್ಕಳು, ವಯಸ್ಕರು, ಸಾಕು ಪ್ರಾಣಿಗಳು, ಬೈಕು, ಕಾರು... ಹೀಗೆ ಹಲವು ರೀತಿಯಲ್ಲಿ ಟ್ರ್ಯಾಕಿಂಗ್‌ಗೆ ಒಳಪಡಿಸುವ ಉದ್ದೇಶದಿಂದ ಈ ಸಾಧನಗಳನ್ನು ತಯಾರಿಸಿದೆ.ಉಳಿದ ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳಿಗೆ ಹೋಲಿಸಿದಲ್ಲಿ ನಮ್ಮ ಸಾಧನ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವ್ಯಕ್ತಿ/ಪ್ರಾಣಿ/ವಾಹನ ಚಲಿಸುತ್ತಿರುವ ದಿಕ್ಕು, ವೇಗ ಮತ್ತು ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡುತ್ತದೆ ಎನ್ನುತ್ತಾರೆ ‘ಒಎಸ್‌ಎಸ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ.ದೀಕ್ಷಿತ್.
ಮಹಿಳೆಯರ ರಕ್ಷಣೆ, ಸಾಕು ಪ್ರಾಣಿಗಳ ಮೇಲ್ವಿಚಾರಣೆ, ವಾಹನಗಳ ಸುರಕ್ಷತೆಗೆ ಈ ಸಾಧನ ಬಹಳ ಉಪಯುಕ್ತ ಎನ್ನುವುದು ಸಂಸ್ಥೆಯ ಅಭಿಮತ.
ವೈಯಕ್ತಿಕ, ವ್ಯವಹಾರಿಕ ಬಳಕೆಗೆಂದು ವಿವಿಧ ಗಾತ್ರದ ಸಾಧನಗಳನ್ನು ‘ಒಎಸ್‌ಎಸ್’ ತಯಾರಿಸಿದೆ. ಆಯಾ ಉದ್ದೇಶಕ್ಕೆ ಅನುಗುಣವಾಗಿ ನಿರ್ದಿಷ್ಟ ಸಾಧನ ಕಾರ್ಯಾಚರಿಸಲಿದ್ದು, ಪ್ರತ್ಯೇಕ ಬೆಲೆ ನಿಗದಿಪಡಿಸಲಾಗಿದೆ.
ವ್ಯಕ್ತಿಗತ (personal device) ಸಾಧನವನ್ನು ವೃದ್ಧರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸಿ ರೂಪಿಸಲಾಗಿದೆ. ವೃದ್ಧರು ಹೊರಗಡೆ ಹೋಗುವಾಗ ಅವರ ಮೇಲೆ ನಿಗಾ ವಹಿಸಲು ಇದು ಹೆಚ್ಚು ಉಪಯುಕ್ತ ಎನ್ನುತ್ತಾರೆ ದೀಕ್ಷಿತ್.
ಇನ್ನು ಮಹಿಳೆಯರ ಸುರಕ್ಷತೆ ವಿಚಾರದತ್ತ ಗಮನ ಕೇಂದ್ರೀಕರಿಸಿ ಹೇಳುವುದಾದರೆ ಇದು ಈಗಿನ ಎಲ್ಲಾ ‘ಜಿಪಿಎಸ್’ ಸಾಧನಗಳಿಗಿಂತ ಬಿನ್ನವಾಗಿದೆ. ಮಹಿಳೆಯರು ಏಕಾಂಗಿಯಾಗಿ ಸಂಚರಿಸುವಾಗ ಅಪಾಯಕ್ಕೆ ಸಿಲುಕಿದರೆ ಈ ಜಿಪಿಎಸ್ ಸಾಧನ ತಕ್ಷಣ ಅವರ ನೆರವಿಗೆ ಒದಗುತ್ತದೆ. ‘ಮಹಿಳೆ ಅಪಾಯದಲ್ಲಿದ್ದಾರೆ, ನೆರವಿಗೆ ಅಗತ್ಯವಿದೆ’ ಎಂಬ ‘ಎಸ್‌ಎಂಎಸ್’ ಸಂದೇಶದ ಜತೆಗೆ ವಾಯ್ಸ್ ಕಾಲ್ ಸಹ ಈ ಮೊದಲೇ ನಿಗದಿಪಡಿಸಿದಂತಹ ಸಂಖ್ಯೆಗಳಿಗೆರವಾನೆಯಾಗುತ್ತದೆ.
ಆ ಮೂಲಕ ಆಪ್ತರು, ಪೊಲೀಸರ ಗಮನ ಸೆಳೆಯುತ್ತದೆ. ಅಷ್ಟೇ ಅಲ್ಲದೆ, ವ್ಯಕ್ತಿ ಇರುವ ಸ್ಥಳದ ಮಾಹಿತಿಯನ್ನು ಆದಷ್ಟೂ ನಿಖರವಾಗಿ ಈ ದೂರವಾಣಿ ಸಂಖ್ಯೆಗಳಿಗೆ ದಾಟಿಸುತ್ತದೆ. ಇದರಿಂದ ಆಪ್ತರು, ಪೊಲೀಸರು ಶೀಘ್ರವಾಗಿ ಘಟನಾ ಸ್ಥಳಕ್ಕೆ ತಲುಪಲು ಅಥವಾ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ದೀಕ್ಷಿತ್.
ಈ ಜಿಪಿಎಸ್ ಸಾಧನದ ಬ್ಯಾಟರಿಯನ್ನು ಮೊಬೈಲ್ ಫೋನ್ ರೀತಿಯಲ್ಲಿಯೇ ಚಾರ್ಜ್ ಮಾಡಬಹುದು. ಬ್ಯಾಟರಿ 15 ಗಂಟೆಗಳ ವರೆಗೆ ಚಾರ್ಜ್ ಹಿಡಿದಿಟ್ಟುಕೊಳ್ಳಬಲ್ಲದು. ಬಳಸದಿದ್ದಾಗ ಸ್ಲೀಪಿಂಗ್ ಮೋಡ್‌ನಲ್ಲಿ ಇಟ್ಟರೆ 30 ಗಂಟೆಗಳವರೆಗೂ ಬ್ಯಾಟರಿ ಒದಗುತ್ತದೆ.
ಈ ಸಾಧನದಲ್ಲಿರುವ ಎಸ್‌ಒಎಸ್ ಬಟನ್ ಒತ್ತಿದರೆ ಈ ಮೊದಲೇ ನಿಗದಿಪಡಿಸಿದ ಮೂರು ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಸಂದೇಶ ರವಾನೆಯಾಗುತ್ತದೆ. ಅದೇ ಗುಂಡಿಯನ್ನು ಎರಡನೇ ಬಾರಿ ಒತ್ತಿದರೆ ವಾಯ್ಸ್ ಕಾಲ್ ಮಾಡಬಹುದು. ಈ ಸಾಧನ ಜಿಎಸ್‌ಎಂ ಸಿಮ್‌ನಿಂದ ಕಾರ್ಯಾಚರಿಸುತ್ತದೆ. ವೈಯಕ್ತಿಕ ಸಾಧನಕ್ಕೆ ವಾಯ್ಸ್ ಕಾಲ್ ವ್ಯವಸ್ಥೆ ಇರುವ ಸಿಮ್ (SIM) ಖರೀದಿಸಬೇಕು. ಸಾಧನಕ್ಕೆ ತಗಲುವ ವೆಚ್ಚವಲ್ಲದೆ, ತಿಂಗಳಿಗೊಮ್ಮೆ ಸಿಮ್ ರೀಚಾರ್ಜ್ ಮಾಡಿಸಬೇಕು.
ಈ ಸಾಧನ ಖರೀದಿಸುವ ಮುನ್ನ ಡೆಮೊ ನೋಡಿ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. http://ossgpstracking.com/ ಪ್ರವೇಶಿಸಿ ಹೆಸರು, ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ದಾಖಲಿಸಬೇಕು. ಇ–ಮೇಲ್‌ಗೆ ಬರುವ ಲಾಗ್‌ಇನ್ ಐಡಿ ಮತ್ತು ಪಾಸ್‌ವರ್ಡ್ ಪಡೆದು ಡೆಮೊ ವೀಕ್ಷಿಸಬಹುದು. ಸಾಧನ ಖರೀದಿಸಿದರೆ ಮಾತ್ರ ಅಧಿಕೃತ ನೋಂದಣಿ ಮತ್ತು ವೆಬ್‌ಸೈಟ್ ನಿರ್ವಹಣೆ ಸಾಧ್ಯ. ಆನ್‌ಲೈನ್‌ನಲ್ಲಿ ಈ ಸಾಧನಗಳನ್ನು ಖರೀದಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.