ಸಣ್ಣ ಸಾಲ ಪರಿಕಲ್ಪನೆಯ ಮೂಲಕ ವಿಶ್ವದಲ್ಲಿ ‘ಮೈಕ್ರೊ ಕ್ರೆಡಿಟ್’ ಮತ್ತು ‘ಮೈಕ್ರೊ ಫೈನಾನ್ಸ್’ ಎಂಬ ಆರ್ಥಿಕ ವ್ಯವಸ್ಥೆಗೆ ಬಲ ತಂದಿರುವ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿನ ಸಂಸ್ಥಾಪಕ ಪ್ರೊ. ಮುಹಮ್ಮದ್ ಯೂನುಸ್, ‘ಬಡವರ ಬ್ಯಾಂಕರ್’ ಎಂದೇ ಗುರುತಿಸಿಕೊಂಡವರು. ಹುಬ್ಬಳ್ಳಿಯಲ್ಲಿ ನಡೆದ ‘ಅಭಿವೃದ್ಧಿ ಸಂವಾದ–2016’ದಲ್ಲಿ ಅವರು ತಮ್ಮ ಬದುಕಿನ ಹಾದಿಯನ್ನು ಬಿಚ್ಚಿಟ್ಟಿದ್ದನ್ನು ರಾಜೇಶ್ ರೈ ಚಟ್ಲ ಅವರು ಇಲ್ಲಿ ವಿವರಿಸಿದ್ದಾರೆ.
ಗ್ರಾಮೀಣ ಬ್ಯಾಂಕ್, ಬಾಂಗ್ಲಾದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಆರ್ಥಿಕ ಚೇತನ ನೀಡುವ ಉದ್ದೇಶದಿಂದ ಭದ್ರತೆಯ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೊ ಕ್ರೆಡಿಟ್) ಒದಗಿಸುವ ಮೂಲಕ ಈ ಬ್ಯಾಂಕ್ ಅಲ್ಲಿನ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ವೃದ್ಧಿ ಹಾಗೂ ಕೃಷಿಗೆ ಸಾಲ ನೀಡುತ್ತದೆ. ಈ ಬ್ಯಾಂಕಿನ ಸಂಸ್ಥಾಪಕ ಪ್ರೊ. ಮುಹಮ್ಮದ್ ಯೂನುಸ್ ಅವರದ್ದು ಈ ನಿಟ್ಟಿನಲ್ಲಿ ಭಿನ್ನ ಚಿಂತನೆ. ವಿಭಿನ್ನ ಯೋಚನೆ. ಅದನ್ನು ಅವರ ಮಾತುಗಳಲ್ಲೇ ಕೇಳಬೇಕು...
‘ಬದುಕಿನುದ್ದಕ್ಕೂ ಬಡತನದ ಬವಣೆಯಲ್ಲಿ ನೊಂದವನು ನಾನು. ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾಗ ಪ್ರತಿವಾರ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಅಲ್ಲಿನ ಬಡವರ ಬದುಕು ಕಂಡಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಅದು 1976ರ ಆಸುಪಾಸು. ಬಾಂಗ್ಲಾದೇಶದಲ್ಲಿ ಭೀಕರ ಬರಗಾಲ ಆವರಿಸಿತ್ತು. ಬಡತನ, ಹಸಿವಿನಿಂದ ಜನ ಸಾವಿಗೀಡಾಗುತ್ತಿದ್ದರು. ಹಳ್ಳಿಯ ಬಡವರು ಶ್ರೀಮಂತರಿಂದ ಸಾಲ ಪಡೆದು, ಹೆಚ್ಚಿನ ಬಡ್ಡಿ ತೆತ್ತು ಸಂಕಷ್ಟ ಅನುಭಸುತ್ತಿದ್ದರು. ಇದನ್ನು ಕಂಡು ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಮನಸ್ಸು ಮರುಗಿತು.
‘ನಾನು ನನ್ನ ತಿಂಗಳ ವೇತನದ ಹಣವನ್ನು ಬಡವರಿಗೆ ಸಾಲವಾಗಿ ನೀಡಿದೆ. ಆಗ ನಾನು ನಂಬಿದ್ದು ಅವರ ನಂಬಿಕೆಯನ್ನು, ಹಳ್ಳಿಗಳ ಮಹಿಳೆಯರ ಆತ್ಮವಿಶ್ವಾಸವನ್ನು. ನನ್ನಿಂದ ಸಾಲ ಪಡೆದವರು ನನ್ನ ನಂಬಿಕೆ, ವಿಶ್ವಾಸಕ್ಕೆ ಮೋಸ ಮಾಡಲಿಲ್ಲ. ಸ್ವ ಉದ್ಯೋಗದ ಮೂಲಕ ಸಂಪಾದನೆಯ ದಾರಿ ಕಂಡುಕೊಂಡರು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡರು. ಅಷ್ಟೇ ಅಲ್ಲ, ನನ್ನಿಂದ ಪಡೆದ ಸಾಲವನ್ನು ಗಳಿಸಿದ ಹಣದಿಂದ ತೀರಿಸಿದರು. ಈ ಬೆಳವಣಿಗೆ ಮತ್ತಷ್ಟು ಜನರಿಗೆ ಸಾಲ ನೀಡುವಂತೆ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತು. ನನ್ನ ಸಾಲಗಾರರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ಇದು ಹೀಗೆಯೇ ಕೆಲವು ವರ್ಷ ಮುಂದುವರೆಯಿತು.
‘ಕೈಯಲ್ಲಿದ್ದ ಹಣ ಖಾಲಿಯಾದಾಗ ಬ್ಯಾಂಕ್‌ಗಳ ಬಳಿಗೆ ಹೋದೆ. ಬಡವರಿಗೆ ಸಾಲ ನೀಡುವಂತೆ ಬ್ಯಾಂಕ್‌ಗಳಲ್ಲಿ ವಿನಂತಿಸಿದೆ. ಆದರೆ, ಬ್ಯಾಂಕಿಗೆ ಬೇಕಾಗಿದ್ದುದು ಉಳ್ಳವರು, ಉದ್ಯಮಿಗಳು, ವ್ಯಾಪಾರಸ್ಥರೇ ಹೊರತು ಬಡವರಲ್ಲ. ‘ಬಡವರ ಬಳಿ ಆಸ್ತಿ- ಪಾಸ್ತಿ ಇಲ್ಲ. ಅವರು ಸಾಲ ತೀರಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಏನು’ ಎನ್ನುವುದು ಬ್ಯಾಂಕಿನವರ ಪ್ರಶ್ನೆಯಾಗಿತ್ತು. ಹೀಗಾಗಿ ಅವರು ಬಡವರಿಗೆ ಸಾಲ ಕೊಡಲು ಒಪ್ಪಲಿಲ್ಲ. ಆಗ ನಾನೇ ಗ್ಯಾರಂಟಿದಾರನಾಗಿ ನಿಂತೆ.
ನನ್ನ ನಿರೀಕ್ಷೆಗಳಿಗೆ ತಕ್ಕಂತೆ ಬ್ಯಾಂಕುಗಳು ಸ್ಪಂದಿಸಲಿಲ್ಲ. ಅದರ ಫಲವೇ ‘ಗ್ರಾಮೀಣ ಬ್ಯಾಂಕ್’ ಸ್ಥಾಪನೆ (1983). ಬ್ಯಾಂಕ್ ಸಾಲ ಪಡೆಯುವ ಯಾವ ಅರ್ಹತೆಯೂ ಇಲ್ಲದವರಿಗೆ ಆರ್ಥಿಕ ಆಸರೆಯಾಗಿ ಈ ‘ಮೈಕ್ರೊ ಫೈನಾನ್ಸ್’ ಯೋಜನೆ ಆರಂಭಿಸಿದಾಗ ಸಿಕ್ಕಿದ ಸ್ಪಂದನೆ ಗ್ರಾಮೀಣ ಬ್ಯಾಂಕ್ ಪರಿಕಲ್ಪನೆಗೆ ಜೀವ ನೀಡಿದೆ. ಸಾಮಾಜಿಕ ಉದ್ಯಮಶೀಲತೆಯ ಕಡೆಗೆ ಮುಖ ಮಾಡುವಂತೆ ಮಾಡಿದೆ. ಯಶಸ್ಸಿನ ಬಗ್ಗೆ ಚಿಂತೆ ಮಾಡದೆ ಹೆಜ್ಜೆ ಇಟ್ಟೆ. ಕಾಲ ಗತಿಸಿದಂತೆ ಯೋಜನೆಯು ಯಶಸ್ಸಿನ ಹಾದಿ ಹಿಡಿಯಿತು’ ಎಂದು ಅವರು ತಾವು ಸಾಗಿ ಬಂದ ಹಾದಿಯನ್ನು ವಿವರಿಸಿದರು.
ಕಲಿತಿದ್ದ ಅರ್ಥಶಾಸ್ತ್ರ ಮುಹಮ್ಮದ್ ಯೂನಸ್ ಅವರನ್ನು ಬ್ಯಾಂಕಿಗೆ ಕರೆದುಕೊಂಡು ಹೋಯಿತು. ಬಾಂಗ್ಲಾ ದೇಶದಾದ್ಯಂತ ಸದ್ಯ ಗ್ರಾಮೀಣ ಬ್ಯಾಂಕಿನ 2,600ಕ್ಕೂ ಹೆಚ್ಚು ಶಾಖೆಗಳಿವೆ. 71 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ವಿಸ್ತರಣೆಗೊಂಡಿದೆ. 1.25 ಶತಕೋಟಿ ಡಾಲರ್ (₹ 8,500 ಕೋಟಿ) ಸಾಲ ನೀಡಲಾಗಿದ್ದು, ಬ್ಯಾಂಕಿನ ಗ್ರಾಹಕರು 1.5 ಶತಕೋಟಿ ಡಾಲರ್‌ನಷ್ಟು (₹ 10,200 ಕೋಟಿ) ಉಳಿತಾಯ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಹಲವು ಕಡೆ ಶಾಖೆಗಳನ್ನು ವಿಸ್ತರಿಸಿದೆ. ಅಮೆರಿಕದಲ್ಲಿ 60 ಸಾವಿರ ಮಹಿಳೆಯರಿಗೆ ಬ್ಯಾಂಕ್ ಸಾಲ ನೀಡಿದೆ. ಬ್ಯಾಂಕಿನ ಮಾಲೀಕತ್ವದಲ್ಲಿ, ಸಾಲಗಾರರಾದ ಹಳ್ಳಿಯ ಷೇರುದಾರರದ್ದೇ ಸಿಂಹಪಾಲು.
ಬೆರಳೆಣಿಕೆಯ ಮಹಿಳೆಯರಿಗೆ ಸಾಲ ಕೊಡಿಸುವ ಮೂಲಕ ಆರಂಭವಾದ ಸಣ್ಣ ಸಾಲ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತ ಯಶೋಗಾಥೆಯನ್ನು ಅವರು ಹಂಚಿಕೊಂಡಾಗ, ‘ಈ ಯಶಸ್ಸು ಹೇಗೆ ಸಾಧ್ಯವಾಯಿತು’ ಎಂಬ ಪ್ರಶ್ನೆ ಮೂಡುವುದು ಸಹಜ. ‘ಪುರುಷರಿಗಿಂತ ಮಹಿಳೆಯರು ಹೆಚ್ಚು ನಂಬಿಕಸ್ಥರು ಮತ್ತು ಜವಾಬ್ದಾರಿಯುಳ್ಳವರು ಎಂಬುದು ನನ್ನ ಅನುಭವ. ಮಹಿಳೆಯರ ಕೈಗೆ ಹಣ ಸಿಕ್ಕರೆ ಅವರು ಸಬಲರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಾರೆ.
ತಾವು ಬದುಕುವುದಷ್ಟೇ ಅಲ್ಲ, ತಮ್ಮ ಕುಟುಂಬವನ್ನು, ಆ ಮೂಲಕ ತಮ್ಮ ಹಳ್ಳಿಯನ್ನು ಬದುಕಿಸುತ್ತಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಅದು ನಿಜವಾಯಿತು. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಇಂದು ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಳ್ಳಲು ಗ್ರಾಮೀಣ ಬ್ಯಾಂಕ್ ಸೂರು ಆಯಿತು. ಆ ಮೂಲಕ ಸಾಮಾಜಿಕ ಬದಲಾವಣೆ ಕಂಡುಬಂತು. ಬಡತನದ ಛಾಯೆಯಿಂದ ದೇಶ ಹೊರಬಂತು. ಮನೆಯಿಂದ ಹೊರಗೆ ಬರಲು ಆರಂಭಿಸಿದ ಮಹಿಳೆ, ಚುನಾವಣೆಗಳಲ್ಲಿ ಮತ ಚಲಾಯಿಸಲು ಮುಂದೆ ಬಂದರು’ ಎನ್ನುತ್ತಾರೆ ಮುಹಮ್ಮದ್.
‘ಸಾಂಪ್ರದಾಯಿಕ ಬ್ಯಾಂಕುಗಳಿಗಿಂತ ವಿರುದ್ಧವಾದ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುವುದರಿಂದ ಗ್ರಾಮೀಣ ಬ್ಯಾಂಕ್‌ಗಳು ಯಶಸ್ಸು ಕಂಡಿವೆ. ಬಡಜನರಿಗೆ ಸಾಲ ನೆರವು ನೀಡುವ ವೇಳೆ ನಮಗೆ ಭದ್ರತೆ, ಕಾನೂನು ಪತ್ರಗಳು ಬೇಕಾಗಿಲ್ಲ. ಪರಸ್ಪರ ವಿಶ್ವಾಸದ ಮೇಲೆ ಇಡೀ ವ್ಯವಸ್ಥೆ ನಿಂತಿದೆ. ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕಿನ ಒಂದೇ ಒಂದು ಶಾಖೆ ನಗರ ಪ್ರದೇಶದಲ್ಲಿ ಇಲ್ಲ. ಬ್ಯಾಂಕಿನ 84 ಲಕ್ಷ ಸದಸ್ಯರ ಪೈಕಿ ಶೇ 97ರಷ್ಟು ಮಹಿಳೆಯರು. ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾದ ಬಡ ಮಹಿಳೆಯರೇ ಬ್ಯಾಂಕಿನ ಮಾಲೀಕರು.
ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎನ್ನುವ ಅವರು, ‘ಸಿಬ್ಬಂದಿ ಮತ್ತು ಗ್ರಾಹಕರನ್ನು ನಾವೆಷ್ಟು ಪ್ರೀತಿಸುತ್ತೇವೊ ಅದಕ್ಕಿಂತ ಇಮ್ಮಡಿಯಷ್ಟು ನಮ್ಮ ಉದ್ಯಮ ಉನ್ನತ ಮಟ್ಟಕ್ಕೇರುತ್ತದೆ. ಪ್ರಾಮಾಣಿಕತೆ, ಪಾರದರ್ಶಕತೆ, ಪರಿಶ್ರಮ, ಬದ್ಧತೆ ಬೇಕು ಅಷ್ಟೆ....’ ಎಂದು ತಂತ್ರಗಾರಿಕೆಯ ಸೂತ್ರವನ್ನು ತೆರೆದಿಟ್ಟರು. ಸಹಕಾರಿ ಬ್ಯಾಂಕ್‌ಗಳು ಮೂಲ ತತ್ವ ಮರೆತು ಬಿಟ್ಟು ಲಾಭ ಗಳಿಸುವ ಉದ್ದೇಶದಿಂದ ಹೆಚ್ಚಿನ ಬಡ್ಡಿ ವಿಧಿಸಲು ಮುಂದಾದರೆ ಭವಿಷ್ಯ ಇಲ್ಲ. ಸಾಂಪ್ರದಾಯಿಕ ಬ್ಯಾಂಕ್‌ಗಳ ನೀತಿ ನಿರೂಪಣೆಗಳು ಶ್ರೀಮಂತರಿಗೆ ಪೂರಕವಾಗಿವೆ. ಅವುಗಳು ಸಾಲ ನೀಡುವ ಸಂದರ್ಭದಲ್ಲಿ ಭದ್ರತೆಗೆ ದಾಖಲೆ ಕೇಳುವುದರಿಂದ ಬಡವರಿಂದ ಅವು ದೂರ ಇವೆ.
ಆ ಚೌಕಟ್ಟು ಮುರಿದು ಸಾಂಪ್ರದಾಯಿಕ ಬ್ಯಾಂಕುಗಳು ಹೊರಬರಬೇಕು. ಇಲ್ಲವೇ ಬಡವರಿಗೆ ಸಾಲ ನೀಡಲು ಭಿನ್ನವಾದ ಮತ್ತು ಸ್ವಾವಲಂಬಿ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಕಿರು ಸಾಲ ವಲಯದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಗಳಿಗೆ ಬ್ಯಾಂಕಿಂಗ್ ಪರವಾನಗಿ ನೀಡಿದರೆ ಅನುಕೂಲ ಎನ್ನುವುದು ಅವರ ಅಭಿಮತ. ‘ನಾವ್ಯಾರೂ ಉದ್ಯೋಗ ನೆಚ್ಚಿಕೊಂಡು ಈ ಭೂಮಿಗೆ ಬಂದಿಲ್ಲ. ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವವರು ನಾವು. ಹೀಗಾಗಿ ನಾನು ಉದ್ಯೋಗ ಆಕಾಂಕ್ಷಿಯಲ್ಲ; ಬದಲಿಗೆ ಉದ್ಯೋಗ ಸೃಷ್ಟಿಸುವವನು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು.
ನಾನು ಹೋದ ಕಡೆಯಲ್ಲೆಲ್ಲ ಇದನ್ನೇ ಹೇಳುತ್ತಾ ಬಂದಿದ್ದೇನೆ. ಮನುಷ್ಯ ಹುಟ್ಟಿ ಬರುವಾಗ ಉದ್ಯೋಗದ ಅರ್ಜಿ ಹಿಡಿದುಕೊಂಡು ಹುಟ್ಟಲಿಲ್ಲ. ನಾವು ಅದರ ಬೆನ್ನತ್ತಿ ಹೋಗುತ್ತೇವೆ. ಆದರೆ ಉದ್ಯೋಗದಲ್ಲಿ ಕ್ರಿಯಾಶೀಲತೆಗೆ ಅವಕಾಶ ಇಲ್ಲ. ಉದ್ಯೋಗ ಅರಸಿ ಹೋಗುವ ಬದಲು ಸ್ವಂತ ಉದ್ಯೋಗ ಆರಂಭಿಸಿ. ಅದರಲ್ಲಿ ನೀವೆಷ್ಟು ಜಾಣರು ಎಂಬ ಬಗ್ಗೆ ಚಿಂತೆ ಬೇಡ. ತಳಮಟ್ಟದಿಂದ ಕೆಲಸ ಆರಂಭಿಸಿ. ಇಷ್ಟದಂತೆ ಬದುಕು ರೂಪಿಸಿಕೊಳ್ಳಿ. ನಿಮಗೆ ನೀವೇ ಬಾಸ್. ಮನುಷ್ಯನಿಗೆ ಸ್ಪಷ್ಟತೆ ಇರಬೇಕು. ಇದು ಇರಬೇಕಾದಲ್ಲಿ ನೀವು ಮುಕ್ತವಾಗಿರಬೇಕು’ ಎನ್ನುತ್ತಾರೆ ಅವರು.
‘ಉದ್ಯಮಶೀಲತೆ ನಮ್ಮ ರಕ್ತದಲ್ಲೇ ಇದೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಅದನ್ನು ಮರೆಯುವಂತೆ ಮತ್ತು ಉದ್ಯೋಗ ಅರಸುವಂತೆ ಮಾಡಿದೆ. ಅನಕ್ಷರಸ್ಥ ತಾಯಿ ಸಣ್ಣ ಪ್ರಮಾಣದಲ್ಲಿ ಸಾಲ ಪಡೆದು ಸ್ವಂತ ಉದ್ಯಮ ಆರಂಭಿಸಿ, ಸಂಪಾದನೆಯಲ್ಲಿ ಮಗಳಿಗೆ ಅಕ್ಷರ ಕಲಿಸುತ್ತಾಳೆ. ಆಕೆ ಉದ್ಯೋಗ ಅರಸಿ ಹೋಗುತ್ತಾಳೆ. ನಿರುದ್ಯೋಗ ಸಮಸ್ಯೆ ಕಡೆಗೆ ಬೊಟ್ಟು ಮಾಡುತ್ತಾಳೆ. ವಿಜ್ಞಾನ-, ತಂತ್ರಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್... ಹೀಗೆ ಯಾವುದೇ ಶಿಕ್ಷಣದ ಬಳಿಕ ಸ್ವಂತ ಉದ್ಯೋಗ ಆರಂಭಿಸುವ ಕಡೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ.
ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಉದ್ಯೋಗ ಅರಸುವ ಯುವಕರನ್ನು ಸೃಷ್ಟಿ ಮಾಡುತ್ತಿದೆ. ಈ ಸ್ಥಿತಿಯಲ್ಲಿ ಬದಲಾವಣೆ ಉಂಟಾದರೆ ಸಾಮಾಜಿಕ ಪರಿವರ್ತನೆ ಸಾಧ್ಯ. ಬಡವರು ಬೋನ್ಸಾಯ್ ಮರ ಇದ್ದಂತೆ. ಬಡವರು ಮೇಲೆ ಬರಬೇಕು ಎಂಬ ನಿಟ್ಟಿನಲ್ಲಿ ಯಾರೊಬ್ಬರೂ ಯೋಚಿಸುವುದಿಲ್ಲ. ಬಡತನ ಸಮಾಜ ನಿರ್ಮಿತ ಸಮಸ್ಯೆ. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪೂರಕವಾದ ಶಿಕ್ಷಣ ವ್ಯವಸ್ಥೆ ಇಲ್ಲ ಎನ್ನುವುದು ಅವರ ನೋವು.
***
ಸಾಂಪ್ರದಾಯಿಕ ಬ್ಯಾಂಕ್‌ಗಳು ಸಿರಿವಂತರ ಪರ ಎನ್ನುವಂತಾಗಿದೆ. ಹೀಗಾಗಿ ಬಡವರು ಬ್ಯಾಂಕಿಂಗ್ ಮುಖ್ಯವಾಹಿನಿಯಿಂದಲೇ ಹೊರಗಿದ್ದಾರೆ.
–ಪ್ರೊ. ಮುಹಮ್ಮದ್ ಯೂನುಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.