ನವದೆಹಲಿ(ಪಿಟಿಐ): ಆದಾಯ ತೆರಿಗೆ ಇಲಾಖೆಗೆ 2014-15ನೇ ಹಣಕಾಸು ವರ್ಷದಲ್ಲಿನ ಗಳಿಕೆ, ಹೂಡಿಕೆ, ಉಳಿ ತಾಯ ಎಲ್ಲ ವಿವರಗಳನ್ನೂ ನೀಡಲು, ವರ್ಷದ ಲೆಕ್ಕಪತ್ರ (ರಿಟರ್ನ್) ಭರ್ತಿ ಮಾಡುವುದಕ್ಕೆ ಈ ಬಾರಿ ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಷ್ಟೇ ಅಲ್ಲ, ಜುಲೈ 31ಕ್ಕೂ ಮುಂಚೆ ಸಲ್ಲಿಸಬೇಕಾದ ‘ರಿಟರ್ನ್’, ಈ ಬಾರಿ ಅಧಿಕ ಮಾಹಿತಿಗಳನ್ನೂ ಕೋರಲಿದೆ. ಬ್ಯಾಂಕ್ ಖಾತೆಗಳು, ವಿದೇಶ ಪ್ರವಾಸದ ವಿವರಗಳನ್ನೂ ತೆರಿಗೆದಾರರು ಹೊಸದಾಗಿ ನೀಡಬೇಕಿದೆ.
2015-16ನೇ ಲೆಕ್ಕಾಚಾರ ವರ್ಷದ ರಿಟರ್ನ್ (ಲೆಕ್ಕಪತ್ರ ವಿವರ) ಸಲ್ಲಿಸುವ ವೇಳೆ, ತೆರಿಗೆದಾರರು ತಾವು ಬ್ಯಾಂಕ್ ಗಳಲ್ಲಿ ಹೊಂದಿರುವ ಎಲ್ಲ ಖಾತೆಗಳ ಮಾಹಿತಿ ಹಾಗೂ ವಿದೇಶ ಪ್ರವಾಸ ಕೈಗೊಂಡ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕು ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಸಕ್ತ ತೆರಿಗೆ ಲೆಕ್ಕಾಚಾರ ವರ್ಷಕ್ಕೆ (ಅಂದರೆ, 2014-15ನೇ ಹಣಕಾಸು ವರ್ಷದ ವಿವರ ಸಲ್ಲಿಕೆಗೆ) ಹೊಸತಾದ ಆದಾಯ ತೆರಿಗೆ ಲೆಕ್ಕಪತ್ರವನ್ನು (ಐಟಿಆರ್) ಬಳಸುವಂತೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಈವರೆಗೆ ಬಳಕೆಯಲ್ಲಿದ್ದ ಐಟಿಆರ್‌ಗೆ ಹೊಸದಾಗಿ ಕೆಲವು ಕಾಲಂಗಳನ್ನು ಸೇರಿಸಲಾಗಿದೆ. ಕಪ್ಪು ಹಣದ ಹಾವಳಿ ತಪ್ಪಿಸುವ ಸಲುವಾಗಿ ತೆರಿಗೆ ಪಾವತಿದಾರರಿಂದ ಇನ್ನಷ್ಟು ಹೊಸ ಹೊಸ ಮಾಹಿತಿಗಳನ್ನು ಕೋರಲಾಗಿದೆ.
ಐಟಿಆರ್-1 ಮತ್ತು ಐಟಿಆರ್-2 ಸೇರಿದಂತೆ ಹೊಸ ಆದಾಯ ತೆರಿಗೆ ಲೆಕ್ಕಪತ್ರ ವಿವರಣೆ ಸಲ್ಲಿಸುವ ಮಾದರಿ ಪತ್ರದಲ್ಲಿ ತೆರಿಗೆದಾರರು ಹೊಂದಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ವಿವರಗಳನ್ನೂ ಕೋರಲಾಗಿದೆ. 2014-15ನೇ ಹಣಕಾಸು ವರ್ಷದಲ್ಲಿ ಹೊಸ ದಾಗಿ ಆರಂಭಿಸಿದ ಬ್ಯಾಂಕ್ ಖಾತೆ ಅಥವಾ ಕೊನೆಗೊಳಿಸಿದ ಖಾತೆಯ ವಿವರಗಳನ್ನು ಕೂಡ ನೀಡಬೇಕಿದೆ. 2015ರ ಮಾರ್ಚ್ 31ರಲ್ಲಿ ಆ ಎಲ್ಲ ಬ್ಯಾಂಕ್ ಖಾತೆಗಳಲ್ಲಿ ಇದ್ದ ಮೊತ್ತದ ವಿವರವನ್ನೂ ತೆರಿಗೆ ಲೆಕ್ಕಪತ್ರದಲ್ಲಿ ದಾಖಲಿಸಬೇಕಿದೆ.
ಅಷ್ಟೇ ಅಲ್ಲದೇ, ಬ್ಯಾಂಕ್‌ನ ಹೆಸರು, ಖಾತೆಗಳ ಸಂಖ್ಯೆಗಳು, ಬ್ಯಾಂಕ್ ಶಾಖೆ ವಿಳಾಸ ಮತ್ತು ಐಎಫ್‌ಎಸ್ ಕೋಡ್, ಜಂಟಿ ಖಾತೆ ಹೊಂದಿದ್ದರೆ ಅದರ ವಿವರಗಳನ್ನೂ ನೀಡಬೇಕಿದೆ.
ವಿದೇಶ ಪ್ರವಾಸ ವಿವರ: ತೆರಿಗೆದಾರರು 2014-15ನೇ ಹಣಕಾಸು ವರ್ಷದಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದರೆ ಅದರ ವಿವರಗಳನ್ನೂ ನೀಡಬೇಕು. ಜತೆಗೆ, ಪಾಸ್‌ಪೋರ್ಟ್ ಸಂಖ್ಯೆಯನ್ನೂ ನಮೂದಿಸಬೇಕು.
ಅಷ್ಟೇ ಅಲ್ಲ, ಪಾಸ್‌ಪೋರ್ಟ್ ವಿತರಿಸಿದ ಸ್ಥಳ, ಕಳೆದ ವರ್ಷ ಭೇಟಿ ನೀಡಿದ ದೇಶಗಳು, ಎಷ್ಟು ಬಾರಿ ಪ್ರವಾಸ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನೂ ದಾಖಲಿಸಬೇಕಿದೆ. ದೇಶದಲ್ಲೇ ವಾಸಿಸುವ ತೆರಿಗೆ ದಾರರಾಗಿದ್ದರೆ, ವಿವಿಧ ದೇಶಗಳ ಭೇಟಿ ವೆಚ್ಚವನ್ನು ಸ್ವತಃ ಭರಿಸಲಾಗಿದೆಯೇ ಎಂಬುದನ್ನೂ ತಿಳಿಸಬೇಕಿದೆ.
ಆಧಾರ್ ಸಂಖ್ಯೆ: ಇದೆಲ್ಲದರ ಜತೆಗೆ ಮತ್ತೊಂದು ಅಂಕಣವೂ ಈ ಬಾರಿ ತೆರಿಗೆ ಲೆಕ್ಕ ಪತ್ರದಲ್ಲಿ ಹೊಸದಾಗಿ ಸೇರಿ ಕೊಂಡಿದೆ. ಅದರಲ್ಲಿ ತೆರಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸ ಬೇಕಿದೆ.
ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷವೂ ತೆರಿಗೆದಾರರಿಂದ ಹೊಸ ಹೊಸ ಮಾಹಿತಿಗಳನ್ನು ಕೇಳುತ್ತಲೇ ಇದೆ. ಹಿಂದಿನ ವರ್ಷ ತೆರಿಗೆದಾರರು ತಾವು ವಿದೇಶದಲ್ಲಿ ಹೊಂದಿರುವ ಎಲ್ಲಾ ಆಸ್ತಿಗಳ ವಿವರಗಳನ್ನು ತೆರಿಗೆ ಲೆಕ್ಕಪತ್ರ ದಲ್ಲಿ ಕಡ್ಡಾಯವಾಗಿ ದಾಖಲಿಸಬೇಕಿತ್ತು. ಅಲ್ಲದೇ, ವಿದೇಶಗಳಲ್ಲಿನ ವಹಿವಾಟು ಗಳಿಂದ ಹಣ ಗಳಿಸಿದ ಬಗೆಗೂ ಸಮಗ್ರ ಮಾಹಿತಿ ನೀಡಬೇಕಿತ್ತು.
ಈ ಹೊಸ ನಿರ್ಧಾರಗಳೆಲ್ಲವೂ ಕಪ್ಪುಹಣವನ್ನು ನಿಯಂತ್ರಿಸಬೇಕೆಂಬ ಕೇಂದ್ರ ಸರ್ಕಾರದ ಸದುದ್ದೇಶದ ಭಾಗವೇ ಆಗಿವೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.