ADVERTISEMENT

ಬ್ಯಾಂಕ್‌ ಲಾಕರ್ ಹೊಂದಿದ್ದೀರಾ?

ಮನೋಜ್ ಸಲ್ಡಾನ
Published 4 ಆಗಸ್ಟ್ 2015, 19:34 IST
Last Updated 4 ಆಗಸ್ಟ್ 2015, 19:34 IST

ಬ್ಯಾಂಕ್‌ ಲಾಕರ್‌ಗಳು ಅದೆಷ್ಟು ಸುರಕ್ಷಿತ? ಒಂದು ವೇಳೆ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ ವಸ್ತುಗಳು ಕಳುವಾದರೆ ಯಾರು ಜವಾಬ್ದಾರರು? ಕಳುವಾದ ವಸ್ತುಗಳಿಗೆ ಪ್ರತಿಯಾಗಿ ಅವುಗಳ ಮೌಲ್ಯವನ್ನು ಬ್ಯಾಂಕ್ ಗ್ರಾಹಕರಿಗೆ ನಗದಾಗಿ ಪಾವತಿಸುತ್ತದೆಯೇ?

ಲಾಕರ್ ಕೀಲಿಕೈ ಕಳೆದುಹೋದರೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ಬ್ಯಾಂಕ್‌ ಲಾಕರ್‌ಗಳಿಗೆ ಸಂಬಂಧಿಸಿದ ಪ್ರಾಥಮಿಕ ನಿಯಮಗಳನ್ನು ಅರಿಯುವುದು ಅತ್ಯವಶ್ಯ.

ಜನರಿಗೆ ಹಣವನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಡಲು ಬ್ಯಾಂಕುಗಳು ವಿಶ್ವಾಸಾರ್ಹ ಕೇಂದ್ರಗಳಾಗಿವೆ. ಅದೇ ರೀತಿಯಲ್ಲಿ ಬಹಳಷ್ಟು ಮಂದಿಗೆ ಬ್ಯಾಂಕ್‌ ಲಾಕರ್‌ಗಳು ಚಿನ್ನ, ಒಡವೆ, ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿಡಲು ಭರವಸೆ ಇರಿಸಬಹುದಾದ ಭದ್ರತಾ ಕಪಾಟುಗಳಾಗಿವೆ.

ಯಾವುದೇ ಬ್ಯಾಂಕ್‌ನಲ್ಲಿ ಲಾಕರ್‌ ಪಡೆಯಲು ಗ್ರಾಹಕರು ಮೊದಲು ಅರ್ಜಿ ಸಲ್ಲಿಸಬೇಕು. ನಂತರದಲ್ಲಿ ಯಾರು ಲಾಕರನ್ನು ತೆರೆಯುವುದು, ವಸ್ತುಗಳನ್ನು ಇಟ್ಟು ತೆಗೆಯುವುದು ಮಾಡುತ್ತಾರೆ ಎಂಬುದನ್ನು ತಿಳಿಸಬೇಕು. ಯಾರು ಲಾಕರ್‌ ನಿರ್ವಹಣೆ ಮಾಡುತ್ತಾರೆಯೊ ಅವರ ಫೋಟೊ ಮತ್ತು ಸಹಿ ಪರೀಕ್ಷಿಸಿ ಅಂತಹವರನ್ನು ಮಾತ್ರ ಲಾಕರ್ ತೆರೆಯಲು ಅವಕಾಶವಿದೆ. ಲಾಕರ್‌ಗೆ ಎರಡು ಕೀಲಿ ಇರುತ್ತದೆ. ಒಂದು ಗ್ರಾಹಕರಿಗೆ ಹಾಗೂ ಒಂದು ಬ್ಯಾಂಕ್ ಅಧಿಕಾರಿಗೆ. ಎರಡೂ ಕೀಲಿ ಲಾಕರ್‌ಗೆ ಹಾಕಿದಾಗ ಮಾತ್ರವೇ ಲಾಕರ್ ತೆರೆಯುತ್ತದೆ.

ಇಲ್ಲಿ ಒಂದು ಪ್ರಮುಖವಾದ ಅಂಶವನ್ನು ಗಮನಿಸಬೇಕು. ಒಂದು ವೇಳೆ ಗ್ರಾಹಕರು ಲಾಕರ್ ಕೀಲಿ ಕಳೆದರೆ ಏನಾಗುತ್ತದೆ?  ಲಾಕರ್ ತೆರೆಯಲು ಎರಡೂ ಕೀಲಿಕೈಗಳ ಅವಶ್ಯಕತೆ ಇದೆ. ಬ್ಯಾಂಕ್‌ನಲ್ಲಿ ಡುಪ್ಲಿಕೇಟ್ ಕೀಲಿಕೈ ಇರುವುದಿಲ್ಲ. ಹಾಗಾಗಿ ಒಂದು ಕೀಲಿಕೈ ಕಳೆದುಹೋದರೂ ಲಾಕರ್‌ನ ಬೀಗವನ್ನು ತೆರೆಯಲು ಸಾಧ್ಯವಿಲ್ಲ.

ಲಾಕರ್ ಬಾಡಿಗೆ?
ಲಾಕರ್‌ಗಳನ್ನು ಬ್ಯಾಂಕ್‌ಗಳ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಲಾಕರ್‌ಗಳು ವಿವಿಧ ಅಳತೆಯಲ್ಲಿ ಲಭ್ಯವಿರುತ್ತವೆ. ಗಾತ್ರಕ್ಕೆ  ಅನುಗುಣವಾಗಿ ಲಾಕರ್‌ ಬಾಡಿಗೆಯನ್ನು ನಿರ್ಧರಿಸಲಾಗುತ್ತದೆ. ಲಾಕರ್‌ಗಳನ್ನು ಗ್ರಾಹಕರಿಗೆ ವಾರ್ಷಿಕ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ. ವಾರ್ಷಿಕ ಬಾಡಿಗೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಲಾಕರ್‌ಗೆ ₹800ರಿಂದ ₹1200 ಹಾಗೂ ದೊಡ್ಡ ಗಾತ್ರದ ಲಾಕರ್‌ಗೆ ₹2 ಸಾವಿರ ಬಾಡಿಗೆ ಇರುತ್ತದೆ. ವಾರ್ಷಿಕ ಬಾಡಿಗೆಗೆ ಶೇ 14ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತದೆ.

ಬ್ಯಾಂಕುಗಳು ಭದ್ರತಾ ಠೇವಣಿಯಾಗಿ ಮೂರು ವರ್ಷಗಳ ಬಾಡಿಗೆಯನ್ನು ಗ್ರಾಹಕರಿಂದ ಮುಂಗಡವಾಗಿ ಪಡೆಯುತ್ತವೆ. ಲಾಕರ್ ಮುಚ್ಚಿ ಕೀಲಿ ಹಿಂತಿರುಗಿಸಿದಾಗ ಗ್ರಾಹಕರಿಗೆ ಈ ಮುಂಗಡ ಹಣವನ್ನು ಹಿಂತಿರುಗಿಸಲಾಗುತ್ತದೆ. ವಾರ್ಷಿಕ ಬಾಡಿಗೆಯನ್ನು ಗ್ರಾಹಕರ ಖಾತೆಯಿಂದ ಬ್ಯಾಂಕುಗಳು ಪಡೆದುಕೊಳ್ಳುತ್ತವೆ. 

ಲಾಕರ್ ಬಾಡಿಗೆ ನೀಡುವಾಗ ಕೆಲವು ಬ್ಯಾಂಕುಗಳು ಗ್ರಾಹಕರಿಂದ ನಿರ್ದಿಷ್ಟ ಅವಧಿ ಠೇವಣಿಯನ್ನು ಪಡೆಯುತ್ತವೆ. ಈ ಠೇವಣಿ ಮೊತ್ತವು ಲಾಕರ್‌ನ ವಾರ್ಷಿಕ ಬಾಡಿಗೆಗೆ ಭದ್ರತೆಯಾಗಿ ಇರುತ್ತದೆ. ಲಾಕರ್ ಬಾಡಿಗೆಗೆ ಸರಿಯಾಗುವಷ್ಟು ವಾರ್ಷಿಕ ಬಡ್ಡಿ ದೊರಕುವ ಠೇವಣಿಯನ್ನು ಪಡೆಯುತ್ತವೆ. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕುಗಳು ಗ್ರಾಹಕರಿಂದ ಮೂರು ವರ್ಷಗಳ ಲಾಕರ್ ಬಾಡಿಗೆ ಮತ್ತು ಲಾಕರ್ ಮುರಿಯುವ ವೆಚ್ಚಕ್ಕೆ ಸರಿಯಾಗುವಷ್ಟು ಮೊತ್ತವನ್ನು ಠೇವಣಿ ಮೂಲಕ ಪಡೆಯಬಹುದಾಗಿದೆ.

ಜಂಟಿ ಲಾಕರ್ ಖಾತೆ?
ಗ್ರಾಹಕರು ಲಾಕರ್ ಪಡೆಯುವಾಗ ಇಬ್ಬರ ಹೆಸರಿನಲ್ಲಿ ಲಾಕರ್ ಜಂಟಿ ಖಾತೆ ತೆರಯುವುದು ಸೂಕ್ತ. ದಂಪತಿಗಳು ಜಂಟಿ ಖಾತೆ ತೆರೆದರೆ, ಗಂಡ-ಹೆಂಡತಿ ಇಬ್ಬರೂ ಲಾಕರನ್ನು ಬಳಸಬಹುದಾಗಿರುತ್ತದೆ. ಒಂದೊಮ್ಮೆ ಲಾಕರ್‌ ಪಡೆದಿರುವ ಗ್ರಾಹಕರ ಸಾವಿಗೀಡಾದರೆ, ಅದು ಜಂಟಿ ಖಾತೆ ಆಗಿಲ್ಲದಿದ್ದರೆ ಅಥವಾ ನಾಮಿನಿಯ ನೇಮಕವಾಗಿಲ್ಲದೇ ಇದ್ದರೆ, ಆಗ ಲಾಕರ್ ತೆರೆಯಲು ಸಾಧ್ಯವಿಲ್ಲ.

ಬಹಳಷ್ಟು ಸಂದರ್ಭಗಳಲ್ಲಿ, ಗಂಡನ ಹೆಸರಿನಲ್ಲಿ ಲಾಕರ್ ಇದ್ದು, ಆತನ ಸಾವು ಸಂಭವಿಸಿದಾಗ, ಹೆಂಡತಿಯು ಲಾಕರ್‌ನಲ್ಲಿ ಇರುವ ವಸ್ತುಗಳನ್ನು ಪಡೆಯಲು ಪರದಾಡುವ ಸಂದರ್ಭ ಎದುರಾಗುತ್ತದೆ. ಸಾವಿನ ದುಃಖದಲ್ಲಿದ್ದವರಿಗೆ ಇಂಥ ಸಂದರ್ಭ ಎದುರಾಗುವುದು ಶೋಚನೀಯ ಸಂಗತಿ. ನಾಮಿನಿಯ ನೇಮಕ ಆಗಿಲ್ಲದೇ ಇರುವ ಕೆಲವು ಪ್ರಕರಣಗಳಲ್ಲಿ ಗ್ರಾಹಕರ ಸಾವಿನ ನಂತರ ಅವರ ಕುಟುಂಬದವರಿಗಾಗಲೀ, ಬಂಧುಗಳಿಗಾಗಲೀ ಲಾಕರ್ ಇರುವ ಸಂಗತಿಯೇ ತಿಳಿಯುವುದಿಲ್ಲ. ಬ್ಯಾಂಕ್‌ನವರಿಗೂ ಗ್ರಾಹಕರ ಸಾವಿನ ಸುದ್ದಿ ಮುಟ್ಟದೇ ಇದ್ದರೆ ಲಾಕರ್‌ ಇರುವ ಸಂಗತಿ ವರ್ಷಗಳ ಕಾಲ ಯಾರಿಗೂ ತಿಳಿಯದೇ ಉಳಿದುಬಿಡುವ ಸಂದರ್ಭವೂ ಸೃಷ್ಟಿಯಾಗುತ್ತದೆ.

ಕೆಲ ವರ್ಷಗಳ ನಂತರ ಗ್ರಾಹಕರ ಖಾತೆಯಲ್ಲಿ ಹಣವಿಲ್ಲದಂತಾದಾಗ, ಲಾಕರ್‌ ಬಾಡಿಗೆ ಪಾವತಿಸುವಂತೆ ಬ್ಯಾಂಕಿನಿಂದ ನೋಟಿಸ್ ಮನೆಗೆ ಬಂದಾಗಲೇ ತಮ್ಮವರು ಲಾಕರ್  ಪಡೆದಿದ್ದರು ಎಂಬ ಸಂಗತಿ ಮನೆಯವರಿಗೆ ತಿಳಿಯುವಂತಾಗುತ್ತದೆ. ಹಾಗಾಗಿ, ಜಂಟಿ ಲಾಕರ್‌ ಖಾತೆ  ಹೊಂದುವುದು ಹಾಗೂ ನಾಮಿನಿಯನ್ನು ನೇಮಿಸಿ, ಅವರ ವಿಳಾಸ, ದೂರವಾಣಿ ಸಂಖ್ಯೆಯನ್ನು ಬ್ಯಾಂಕ್‌ಗೆ ನೀಡುವುದು ಉತ್ತಮ.

ಲಾಕರ್ ಕೀಲಿ ಕಳೆದರೆ?
ಗ್ರಾಹಕರು ಲಾಕರ್ ಕೀಲಿ ಕಳೆದರೆ, ಬ್ಯಾಂಕ್‌ಗೆ ದೂರು ನೀಡಬೇಕು. ಬ್ಯಾಂಕ್‌ನವರು ಲಾಕರ್ ಕಂಪೆನಿಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ  ಬ್ಯಾಂಕ್ ಲಾಕರ್‌ಗಳ ಕಂಪೆನಿ ಗೋದ್ರೆಜ್. ಲಾಕರ್ ಕಂಪೆನಿ ಸಿಬ್ಬಂದಿ ಲಾಕರನ್ನು ಒಡೆದು ತೆರೆಯುತ್ತಾರೆ. ಲಾಕರ್ ಕಂಪೆನಿಯವರು ಸಹ ಯಾವುದೇ ಡುಪ್ಲಿಕೇಟ್ ಕೀಲಿಯಿಂದ ಲಾಕರ್ ತೆರೆಯಲು ಸಾಧ್ಯವಿಲ್ಲ.

ಲಾಕರ್ ಕಂಪೆನಿಯವರು ದೂರದಿಂದ ಬರಬೇಕಾಗುತ್ತದೆ. ಲಾಕರ್ ಒಡೆಯಲು ತಜ್ಞರು ಬೇಕು. ಆದ ಕಾರಣ, ಲಾಕರ್ ತೆರೆಯುವ ಖರ್ಚು ₹2 ಸಾವಿರದಿಂದ ₹5 ಸಾವಿರದವರೆಗೂ ತಗಲುವ ಸಾಧ್ಯತೆ ಇದೆ. ಈ ಖರ್ಚನ್ನು ಗ್ರಾಹಕರೇ ನೀಡಬೇಕಾಗುತ್ತದೆ. ಲಾಕರ್ ಒಡೆದು ತೆರೆಯಬೇಕಾದರೆ, ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿ ಇಬ್ಬರೂ ಹಾಜರಿರಬೇಕು. ಲಾಕರ್‌ನಲ್ಲಿ ಬೆಲೆ ಬಾಳುವ ವಸ್ತುಗಳು ಇರುತ್ತವೆ. ಆದ್ದರಿಂದ ಗ್ರಾಹಕರು ಲಾಕರ್ ತೆರೆಯುವ ಸಮಯ ಹಾಜರಿರಲೇಬೇಕು. ಲಾಕರ್ ಒಡೆದು ತೆರೆದ ನಂತರ ನಕಲು ಕೀಲಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ.

ಲಾಕರ್ ಮುರಿಯಲು ತಗಲುವ ವೆಚ್ಚ ಅಧಿಕವಾಗಿರುವುದರಿಂದ ಗ್ರಾಹಕರು ಕೀಲಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಲ್ಲದೇ, ಲಾಕರ್ ಮುರಿದು ತೆರೆಯುವುದಕ್ಕೂ ಬಹಳ ದಿನಗಳು ಹಿಡಿಯುತ್ತವೆ. ಜತೆಗೆ ಸಾಕಷ್ಟು ನಿಯಮಗಳನ್ನೂ ಪಾಲಿಸಬೇಕಿರುತ್ತದೆ. ಆದ್ದರಿಂದ ಲಾಕರ್ ಕೀಲಿಕೈಯನ್ನು ಬೇರೆ ಸಾಮಾನ್ಯ ಕೀಲಿಯಂತೆ ಮನೆಯಲ್ಲಿ ಬೇಜವಾಬ್ದಾರಿಯಾಗಿ ಇಡುವುದು ಸರಿಯಲ್ಲ.

ಲಾಕರ್‌ಗಳು ಅದೆಷ್ಟು ಸುರಕ್ಷಿತ?
ಒಂದು ವೇಳೆ ಬ್ಯಾಂಕ್‌ನಲ್ಲಿ ದರೋಡೆಯಾಗಿ ಲಾಕರ್‌ಗಳಲ್ಲಿನ ವಸ್ತುಗಳು ಲೂಟಿಯಾದರೆ? ಲಾಕರ್‌ನಲ್ಲಿದ್ದ ವಸ್ತುಗಳ ಮೌಲ್ಯವನ್ನು ಗ್ರಾಹಕರಿಗೆ ಬ್ಯಾಂಕ್‌ ನೀಡುತ್ತದೆಯೇ? ಇಲ್ಲ, ಲಾಕರ್‌ನಲ್ಲಿಟ್ಟಿದ್ದ ವಸ್ತುಗಳು ಕಳುವಾದರೆ ಬ್ಯಾಂಕ್ ವಸ್ತುಗಳ ನಷ್ಟವನ್ನು ಗ್ರಾಹಕರಿಗೆ ಭರಿಸುವುದಿಲ್ಲ.

ಒಂದು ಮನೆಯನ್ನು ಮನೆ ಮಾಲೀಕರು ಬಾಡಿಗೆಗೆ ನೀಡಿದಾಗ, ಆ ಮನೆಯಲ್ಲಿ ಕಳವಾದರೆ ಮಾಲೀಕರು ಹೊಣೆಗಾರರಲ್ಲ ಅಲ್ಲವೇ. ಅದೇ ರೀತಿಯಲ್ಲಿಯೇ ಬ್ಯಾಂಕ್‌ನಲ್ಲಿ ಕಳವು ನಡೆದು ಲಾಕರ್‌ನಲ್ಲಿರುವ ವಸ್ತುಗಳು ಲೂಟಿಯಾದರೆ ಬ್ಯಾಂಕ್ ಸಹ ಹೊಣೆ ಆಗುವುದಿಲ್ಲ. ಆದರೆ ಲಾಕರ್‌ನ ಸುರಕ್ಷತೆಗಾಗಿ ಬ್ಯಾಂಕ್ ಆಡಳಿತವು ಸೂಕ್ತ ಭದ್ರತೆಯನ್ನು ಒದಗಿಸಬೇಕು. ಬ್ಯಾಂಕುಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು.

ಸಿಸಿ ಟಿವಿ ಕ್ಯಾಮೆರಾ, ಬಲಿಷ್ಠವಾದ ಭದ್ರತಾ ಕೊಠಡಿ ಹಾಗೂ ಅದಕ್ಕೆ ಬಲವಾದ ಬೀಗ, ಸೈರನ್‌ ಮೊದಲಾದ ವ್ಯವಸ್ಥೆಗಳು ಇರುತ್ತವೆ. ಒಂದೊಮ್ಮೆ ಬ್ಯಾಂಕ್‌ನ ಭದ್ರತಾ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ, ಅದರಿಂದಾಗಿಯೇ ಕಳವು ನಡೆದು ಗ್ರಾಹಕರು ಲಾಕರ್‌ನಲ್ಲಿಟ್ಟಿದ್ದ ವಸ್ತುಗಳು ಕಾಣೆಯಾದರೆ ಅದಕ್ಕೆ ಖಂಡಿತವಾಗಿಯೂ ಬ್ಯಾಂಕ್ ಹೊಣೆಯಾಗುತ್ತದೆ.

ಭೂಕಂಪ, ಪ್ರವಾಹ, ಬೆಂಕಿ ಮೊದಲಾದ ಪ್ರಾಕೃತಿಕ ವಿಪತ್ತುಗಳು ಸಂಭವಿಸಿ ಲಾಕರ್‌ನಲ್ಲಿನ ವಸ್ತುಗಳು ನಾಶವಾದರೆ, ಕಣ್ಮರೆಯಾದರೆ ಅದಕ್ಕೆ ಬ್ಯಾಂಕ್  ಆಡಳಿತ ಜವಾಬ್ದಾರಿಯಾಗುವುದಿಲ್ಲ. ಕೆಲವು ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಮಾತ್ರವೇ ಲಾಕರ್‌ಗಳಲ್ಲಿನ ವಸ್ತುಗಳನ್ನು ದೋಚಲಾಗಿದೆ. 

ಭದ್ರತಾ ವ್ಯವಸ್ಥೆ ಬಲವಾಗಿರುವುದರಿಂದ ಬ್ಯಾಂಕುಗಳಲ್ಲಿ ಕಳವು ಕಷ್ಟ. ಅಂತಹ ಘಟನೆಗಳೂ ಅಪರೂಪ. ಹಾಗಾಗಿ ಗ್ರಾಹಕರಿಗೆ ಬ್ಯಾಂಕ್ ಲಾಕರ್‌ನಲ್ಲಿ ಈಗಲೂ ವಿಶ್ವಾಸವಿದೆ. ಬ್ಯಾಂಕ್‌ನ ಬೇಜವಾಬ್ದಾರಿಯಿಂದಾಗಿಯೇ ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾದರೆ ಆಗ ಗ್ರಾಹಕರಿಗೆ ಬ್ಯಾಂಕ್ ಪರಿಹಾರ ನೀಡಬೇಕಾಗುತ್ತದೆ.
*
ಪರಿಹಾರ ಕೊಡಬೇಕಾಯಿತು
ಕನಕ್ ಚೌದರಿ ಎಂಬ ಗ್ರಾಹಕ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲಾಕರ್ ಸೌಲಭ್ಯ ಹೊಂದಿದ್ದರು. ಅವರು ತಮ್ಮ ಲಾಕರ್‌ನಲ್ಲಿ ನಗದು ಹಣ ಹಾಗೂ ಪ್ರಮುಖ ದಾಖಲೆಗಳನ್ನು ಇಟ್ಟಿದ್ದರು. ಗೆದ್ದಲುಗಳಿಂದಾಗಿ ಹಣ ಮತ್ತು ದಾಖಲೆ ಪತ್ರಗಳಿಗೆ ಹಾನಿಯಾಯಿತು. ಅವರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಬ್ಯಾಂಕ್‌ನ ಬೇಜವಾಬ್ದಾರಿಯಿಂದಲೇ ಗೆದ್ದಲು ಬಂದು ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ. ಆದಕಾರಣ ಬ್ಯಾಂಕ್ ಚೌದರಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್‌ ತೀರ್ಪು ನೀಡಿತು.

*
3ನೇ ಬೀಗಕ್ಕೂ ಅವಕಾಶ
ಬ್ಯಾಂಕ್‌ ಲಾಕರ್‌ಗಳಿಗೆ ಎರಡು ಬೀಗ ಮತ್ತು ಕೀಲಿಕೈಗಳಿರುತ್ತವೆ. ಒಂದು ಕೀಲಿಕೈ ಗ್ರಾಹಕರ ಬಳಿ, ಮತ್ತೊಂದು ಬ್ಯಾಂಕ್‌ ಶಾಖೆ ಮುಖ್ಯಸ್ಥರ ಬಳಿ ಇರುತ್ತದೆ. ಇದಕ್ಕೆ ಹೊರತಾಗಿ, ಮೂರನೇ ಬೀಗ ಅಳವಡಿಸಲು ಲಾಕರ್‌ನಲ್ಲಿ ಅವಕಾಶವಿದೆ. ಗ್ರಾಹಕರು ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಬೇಕಿದ್ದರೆ ಮೂರನೇ ಬೀಗವನ್ನು  ಅಳವಡಿಸಿಕೊಂಡು ಬಳಸಬಹುದು.

ADVERTISEMENT

ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರು ನೆನಪಿಡಬೇಕಾದ ಸಂಗತಿಗಳೆಂದರೆ, ಲಾಕರ್ ಕೀಲಿಯನ್ನು ಮನೆ/ಕಚೇರಿಯಲ್ಲಿ ಬಹಳ ಸುರಕ್ಷಿತವಾದ ಜಾಗದಲ್ಲಿ ಜೋಪಾನವಾಗಿ ಇಡಬೇಕು. ಅದು ಸುಲಭಕ್ಕೆ ಯಾರಿಗೂ ಸಿಗದಂತೆ ಕಾಪಾಡಿಕೊಳ್ಳಬೇಕು. ಆದರೆ, ಲಾಕರ್‌ ಹೊಂದಿರುವ ಮಾಹಿತಿಯನ್ನು ಮನೆಯಲ್ಲಿ  ಒಂದಿಬ್ಬರಿಗಾದರೂ ತಿಳಿಸಿರುವುದು ಒಳಿತು.
*
ವಿಮೆಯಿಂದ ಪರಿಹಾರ ಧನ
ಬ್ಯಾಂಕುಗಳು ಲಾಕರ್‌ಗಳನ್ನು ವಿಮೆ ಮಾಡಿಸಿರುತ್ತವೆ. ಲಾಕರ್‌ನಲ್ಲಿನ ವಸ್ತುಗಳಿಗೆ ಹಾನಿಯಾಗಿ ಪರಿಹಾರ ನೀಡಬೇಕಾಗಿ ಬಂದರೆ ಬ್ಯಾಂಕ್‌ ಸ್ವತಃ ಆ ಮೊತ್ತವನ್ನು ಭರಿಸುವುದಿಲ್ಲ. ವಿಮಾ ಸಂಸ್ಥೆಯಿಂದ ದೊರಕುವ ಪರಿಹಾರದ ಹಣವನ್ನೇ ಗ್ರಾಹಕರಿಗೆ ನೀಡುತ್ತದೆ.

ಆದರೆ ಲಾಕರ್‌ನಲ್ಲಿ ಏನಿದೆ ಎಂಬುವುದು ಬಹಳ ಗೌಪ್ಯವಾದ ಸಂಗತಿ.  ಲಾಕರ್‌ ನಿರ್ವಹಿಸುವ ಗ್ರಾಹಕರಿಗಷ್ಟೇ ಅದರ ಮಾಹಿತಿ ಇರುತ್ತದೆ. ಲಾಕರ್‌ನಲ್ಲಿ ಎಷ್ಟು ಮೌಲ್ಯದ ವಸ್ತುಗಳಿತ್ತು ಎನ್ನುವುದಕ್ಕೆ ದಾಖಲೆಗಳು ಇರುವುದಿಲ್ಲ. ಲಾಕರ್‌ನಲ್ಲಿ ಏನಿತ್ತು ಎಂಬುದರ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ, ಲಾಕರ್‌ನಲ್ಲಿನ ವಸ್ತುಗಳು ಕಾಣೆಯಾದಾಗ, ಹಾನಿಗೀಡಾದಾಗ ಎಲ್ಲ ಪ್ರಸಂಗಗಳಲ್ಲಿಯೂ ಬ್ಯಾಂಕ್‌ನಿಂದ ಪರಿಹಾರ ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.