ADVERTISEMENT

ಮೊಬೈಲ್ ಕರೆ ದರ: ಏರ್‌ಟೆಲ್ ಹಾದಿಯಲ್ಲಿ ಉಳಿದ ಕಂಪೆನಿಗಳು?

​ಪ್ರಜಾವಾಣಿ ವಾರ್ತೆ
Published 25 ಜುಲೈ 2011, 19:30 IST
Last Updated 25 ಜುಲೈ 2011, 19:30 IST

ನವದೆಹಲಿ (ಐಎಎನ್‌ಎಸ್): ಭಾರ್ತಿ ಏರ್‌ಟೆಲ್ ಮೊಬೈಲ್ ದೂರವಾಣಿ ಕರೆಗಳ ದರವನ್ನು ಶೇ 20ರಷ್ಟು ಹೆಚ್ಚಿಸಿರುವ ಬೆನ್ನಲ್ಲೆ, ಉಳಿದ ಕಂಪೆನಿಗಳೂ ಇದನ್ನು  ಹಿಂಬಾಲಿಸುವ ಸಾಧ್ಯತೆಗಳಿವೆ.

ಮುಖ್ಯವಾಗಿ ಚಿಕ್ಕ ಪ್ರಮಾಣದ ಮೊಬೈಲ್ ಸೇವಾ ಕಂಪೆನಿಗಳು ಕರೆ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಕಂಪೆನಿಗಳು ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದಲ್ಲಿವೆ. `ದೊಡ್ಡ ಕಂಪೆನಿಗಳ ಅಗ್ಗದ ಕರೆ ದರಗಳಿಂದ ಸಣ್ಣ ಪ್ರಮಾಣದ ಕಂಪೆನಿಗಳಿಗೆ ನಷ್ಟವಾಗಿದ್ದು, ಏರ್‌ಟೆಲ್‌ನ ನಿರ್ಧಾರ ಚಿಕ್ಕ ಕಂಪೆನಿಗಳಿಗೆ ಹರ್ಷ ತಂದಿದೆ~ ಎಂದು ದೂರವಾಣಿ ಸಲಹಾ ಸಂಸ್ಥೆ `ಫಸ್ಟ್ ಇಂಡಿಯಾ~ ನಿರ್ದೇಶಕ ಮಹೇಶ್ ಉಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಶುಕ್ರವಾರ ಏರ್‌ಟೆಲ್, ದೆಹಲಿ, ಆಂಧ್ರಪ್ರದೇಶ, ಕೇರಳ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಗುಜರಾತ್ ದೂರವಾಣಿ ವೃತ್ತಗಳಲ್ಲಿ ಕರೆ ದರಗಳನ್ನು ಶೇ 20ರಿಂದ 25ರಷ್ಟು ಹೆಚ್ಚಿಸಿತ್ತು. ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಮತ್ತು ಬ್ರಾಡ್‌ಬ್ಯಾಂಡ್ ನಿಸ್ತಂತು ಸಂಪರ್ಕಕ್ಕಾಗಿ (ಬಿಡ್ಲ್ಯುಎ)  ಕಂಪೆನಿ ಹೆಚ್ಚಿನ ಮೊತ್ತ ಪಾವತಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಏರ್‌ಟೆಲ್ ಪ್ರತಿಕ್ರಿಯಿಸಿದೆ.

ADVERTISEMENT

`3ಜಿ~ ಸೇವೆಗಾಗಿ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಕ್ರಮವಾಗಿ ರೂ. 12,295 ಕೋಟಿ ಮತ್ತು ರೂ. 8,583ಕೋಟಿ ಪಾವತಿಸಿವೆ. ಬ್ರಾಡ್‌ಬ್ಯಾಂಡ್ ನಿಸ್ತಂತು ಸೇವೆಗಾಗಿ ಏರ್‌ಟೆಲ್ ಹೆಚ್ಚುವರಿ ರೂ. 3,314 ಕೋಟಿ ಪಾವತಿಸಿದೆ.

`ದೂರವಾಣಿ ಕಂಪೆನಿಗಳ ನಡುವೆ ದರ ಸಮರ ಮೊದಲಿನಿಂದಲೂ ಇದೆ. ಈಗ ಏರ್‌ಟೆಲ್ ಇದಕ್ಕೆ ಹೊಸ ಮುನ್ನುಡಿ ಬರೆದಿದೆ. ಮುಂಬರುವ ದಿನಗಳಲ್ಲಿ ಉಳಿದ ಕಂಪೆನಿಗಳೂ ಕರೆ ದರ ಹೆಚ್ಚಿಸಬಹುದು ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೌಲ್ಯವರ್ಧಿತ ಸೇವೆಗಳ ಮೂಲಕ ಕಂಪೆನಿಗಳಿಗೆ ಸರಾಸರಿ ವರಮಾನ ಲಭಿಸುತ್ತಿಲ್ಲ. ಕರೆಗಳ ದರ ಏರಿಕೆಗೆ ಇದೇ ಮುಖ್ಯ ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.