ಮೂರು ದಶಕಗಳ ನಂತರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸ್ಥಿರ ಸರ್ಕಾರ ಸಹಜವಾಗಿಯೇ ದೇಶದ ಜನತೆಯಲ್ಲಿ ದೊಡ್ಡ ಮಟ್ಟದ ಆರ್ಥಿಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ದಿನವೇ (ಮೇ16) ಹಣಕಾಸು ಮಾರುಕಟ್ಟೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೋದಿ ಗೆಲುವಿಗೆ ಹಲವು ಅಂಶಗಳು ಕಾರಣವಾದರೂ, ಜನಸಾಮಾನ್ಯರನ್ನು ನೇರವಾಗಿ ತಟ್ಟಿದ ಬೆಲೆ ಏರಿಕೆ, ಹಣದುಬ್ಬರ, ಬಡ್ಡಿ ದರ ಹೆಚ್ಚಳದಂತಹ ‘ಆರ್ಥಿಕ ಸಮಸ್ಯೆ’ಗಳು ಕೂಡ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎನ್ನಬಹುದಾಗಿದೆ.
‘ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಚಲನಶೀಲತೆ ಹೊಸ ತಲೆಮಾರಿನವರ ಚಿಂತನೆ, ವರ್ತನೆಗಳನ್ನು ಬದಲಿಸಿದೆ. ದೇಶದ ಜನತೆಗೆ, ವಿಶೇಷವಾಗಿ ಯುವಜನತೆಗೆ ಈಗ ಚರಿತ್ರೆ ಮುಖ್ಯವಲ್ಲ. ಅವರಿಗೆ ಪ್ರಸ್ತುತ ಬದುಕೇ ಮುಖ್ಯ. ಉತ್ತಮ ಉದ್ಯೋಗ, ಕೈಗೆಟಕುವ ಬೆಲೆಯಲ್ಲಿ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಜನಸ್ನೇಹಿ ಆಡಳಿತ ಬಯಸಿ ಮತ ಚಲಾಯಿಸಿದ್ದರಿಂದ ಕೇಂದ್ರದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ’ ಎನ್ನುವುದು ಬಹುತೇಕ ಮಾರುಕಟ್ಟೆ ತಜ್ಞರ ವಿಶ್ಲೇಷಣೆ.
ಉದ್ಯಮ ವಲಯದ ಪ್ರತಿಕ್ರಿಯೆ ಕೂಡ ಈ ಅಭಿಪ್ರಾಯವನ್ನು ಅನುಮೋದಿಸುತ್ತದೆ. ‘ಸ್ಥಿರ’ ಸರ್ಕಾರ ಎಂದರೆ ಆರ್ಥಿಕ ಮತ್ತು ರಾಜಕೀಯ ಸ್ಥಿರತೆ. ಇವೆರಡು ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎನ್ನುತ್ತಾರೆ ಹೂಡಿಕೆದಾರರು.
ಸವಾಲುಗಳು
ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಎರಡು ದಿನ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಸರ್ಕಾರ ಎದುರಿಸಬೇಕಾದ ನಾಲ್ಕು ಆರ್ಥಿಕ ಸವಾಲುಗಳನ್ನು ಪಟ್ಟಿ ಮಾಡಿತ್ತು. ಇದರಲ್ಲಿ ಮಂದಗತಿ ಆರ್ಥಿಕ ಪ್ರಗತಿ (ಜಿಡಿಪಿ ಕುಸಿತ), ವಿತ್ತೀಯ ಕೊರತೆ, ಚಾಲ್ತಿ ಖಾತೆ ಹೊರೆ (ಸಿಎಡಿ) ಹಾಗೂ ಹಣದುಬ್ಬರ ಪ್ರಮುಖವಾಗಿದ್ದವು.
ಇದರ ಜತೆಗೆ ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ, ನಿರಾಶಾದಾಯಕ ಕೈಗಾರಿಕಾ ಪ್ರಗತಿ, ಆಮದು ಹೊರೆ ಹೆಚ್ಚಳ ಸೇರಿದಂತೆ ಇನ್ನೂ ಹತ್ತು ಹಲವು ಸಮಸ್ಯೆಗಳಿವೆ.
ಆತಂಕಕಾರಿ ಸಂಗತಿ ಎಂದರೆ ಹಣದುಬ್ಬರ ಹೆಚ್ಚಳದಿಂದ ಜನಸಾಮಾನ್ಯರ ಉಳಿತಾಯ ಗಣನೀಯವಾಗಿ ತಗ್ಗುತ್ತಿದೆ. ಈ ಉಳಿತಾಯವನ್ನು ಹಣದುಬ್ಬರದಿಂದ ರಕ್ಷಿಸುವುದೇ ಹೊಸ ಸರ್ಕಾರದ ಮುಂದಿರುವ ಮೊದಲ ಸವಾಲು.
ಹಣದುಬ್ಬರ ನಿಯಂತ್ರಣ
ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಸರಿಸುತ್ತಿರುವ ‘ರೆಪೊ’ (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ
ವಿಧಿಸಲಾಗುವ ಬಡ್ಡಿ) ದರ ಹೆಚ್ಚಳದಂತಹ ಆಕ್ರಮಣಕಾರಿ ನೀತಿಯು ಪ್ರಗತಿ ವಿರೋಧಿ ಎನ್ನುವುದು ಉದ್ಯಮ ವಲಯದ ಆರೋಪ.
ಜಾಗತೀಕರಣ ಮತ್ತು ಉದಾರೀಕರಣಕ್ಕೆ ತೆರೆದುಕೊಂಡ ಭಾರತದಂತಹ ಅರ್ಥವ್ಯವಸ್ಥೆಗೆ ಇಂತಹ ನೀತಿ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತದೆ. ಮಾರುಕಟ್ಟೆಗೆ ಬಂಡವಾಳದ ಹರಿವನ್ನು ನಿಯಂತ್ರಿಸುವುದರಿಂದ ತಯಾರಿಕಾ ವಲಯ ಮತ್ತು ಕೈಗಾರಿಕಾ ಪ್ರಗತಿ ನೆಲಕಚ್ಚುತ್ತದೆ ಎನ್ನುವುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.
ಆದರೆ, ‘ಆರ್‌ಬಿಐ’ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ‘ರೆಪೊ’ ದರ ಹೆಚ್ಚಿಸಿದರೂ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಬ್ಯಾಂಕುಗಳ ‘ನಗದು ಮೀಸಲು ಅನುಪಾತ’ (ಸಿಆರ್‌ಆರ್) ತಗ್ಗಿಸಲಾಗಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರವನ್ನು ಶೇ 9.5ರಿಂದ ಶೇ 9ಕ್ಕೆ ಇಳಿಸಲಾಗಿದೆ. ಹಣದುಬ್ಬರ ಹೆಚ್ಚಿರುವುದು ಬಾಹ್ಯ ಕಾರಣಗಳಿಂದಲೇ ಹೊರತು ಬಡ್ಡಿ ದರ ಏರಿಕೆಯಿಂದಲ್ಲ ಎನ್ನುವುದು ‘ಆರ್‌ಬಿಐ’ ಗವರ್ನರ್ ರಘುರಾಂ ರಾಜನ್ ಅವರ ವಿವರಣೆ.
ಈ ಸಮರ್ಥನೆ ಮುಂದಿಟ್ಟುಕೊಂಡೇ ‘ಆರ್‌ಬಿಐ’ 2013ರ ಸೆಪ್ಟೆಂಬರ್ನಿಂದ ಈವರೆಗೆ ಮೂರು ಬಾರಿಯೂ ‘ರೆಪೊ’ ದರವನ್ನು ಶೇ 0.25ರಷ್ಟು (ಒಟ್ಟು ಶೇ 0.75ರಷ್ಟು) ಏರಿಕೆ ಮಾಡಿದೆ. ಸದ್ಯ ಇದು ಶೇ 8ರಷ್ಟಿದೆ.
ಇದರ ಪರಿಣಾಮವಾಗಿ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) 2013–14ನೇ ಸಾಲಿನಲ್ಲಿ ಶೇ 0.1ರಷ್ಟು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ‘ಐಐಪಿ’ಗೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯದ ಪ್ರಗತಿ 0.8ಕ್ಕೆ ತಗ್ಗಿದೆ. ಇನ್ನೊಂದೆಡೆ 2013-–14ನೇ ಸಾಲಿನಲ್ಲಿ ಹಣದುಬ್ಬರ ಸರಾಸರಿ ಸೂಚ್ಯಂಕ ಶೇ 10ರಷ್ಟು ಹೆಚ್ಚಿದೆ. ದೇಶದಲ್ಲಿನ ಚಿಲ್ಲರೆ ವಹಿವಾಟಿನ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 8.59ಕ್ಕೇರಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ದರವೂ ಮೂರು ತಿಂಗಳ ಗರಿಷ್ಠ ಮಟ್ಟವಾದ ಶೇ 5.7ಕ್ಕೆ ಏರಿಕೆ ಕಂಡಿದೆ.
ಬಡ್ಡಿ ದರ ಏರಿಕೆ ಬದಲಿಗೆ, ಕೃಷಿಗೆ ಉತ್ತೇಜನ, ಪಡಿತರ ವ್ಯವಸ್ಥೆ ಸುಧಾರಣೆ, ಪೂರೈಕೆ ಭಾಗದಲ್ಲಿನ ಲೋಪಗಳನ್ನು ಸರಿಪಡಿಸುವಂತಹ ಪರ್ಯಾಯ ಕ್ರಮಗಳ ಮೂಲಕ ಹಣಕಾಸು ಸಚಿವಾಲಯ ಮತ್ತು ‘ಆರ್‌ಬಿಐ’ ಹಣದುಬ್ಬರ ನಿಯಂತ್ರಣಕ್ಕೆ ಮುಂದಾಗಬೇಕು ಎನ್ನುವುದು ಆರ್ಥಿಕ ತಜ್ಞರ ಸಲಹೆ. ‘ಎಲ್ ನಿನೊ’ ಪರಿಣಾಮವನ್ನು (ಸಂಭಾವ್ಯ ಮುಂಗಾರು ವೈಫಲ್ಯವನ್ನು) ಸಮರ್ಥವಾಗಿ ನಿರ್ವಹಿಸಲು ಸೂಕ್ತ ನೀತಿಯೊಂದನ್ನು ರಚಿಸಬೇಕು ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.
‘ಜಿಡಿಪಿ’ ಕುಸಿತ
2008ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ದೇಶದ ‘ಒಟ್ಟಾರೆ ಆಂತರಿಕ ಉತ್ಪಾದನೆ’ (ಜಿಡಿಪಿ) ಅರ್ಥಾತ್ ಆರ್ಥಿಕ ಪ್ರಗತಿ ಗಣನೀಯವಾಗಿ ಕುಸಿತ ಕಂಡಿದೆ. 2009–10ನೇ ಹಣಕಾಸು ವರ್ಷದಲ್ಲಿ ‘ಜಿಡಿಪಿ’ ಶೇ 9ರಷ್ಟು ಗರಿಷ್ಠ ಮಟ್ಟದಲ್ಲಿತ್ತು. ನಂತರ 2011– 12ರ ವೇಳೆಗೆ ಶೇ 6.7ಕ್ಕೆ ತಗ್ಗಿತು. 2012–13ನೇ ಹಣಕಾಸು ವರ್ಷದಲ್ಲಂತೂ ದಶಕದಲ್ಲೇ ಕನಿಷ್ಠ ಮಟ್ಟಕ್ಕೆ (ಶೇ 4.5) ಕುಸಿಯಿತು. ನಂತರ ಅತ್ಯಂತ ಅಲ್ಪ ಪ್ರಮಾಣದಲ್ಲಿ ಸುಧಾರಿಸಿಕೊಂಡು 2013–14ನೇ ಹಣಕಾಸು ವರ್ಷದಲ್ಲಿ ಶೇ 4.9ಕ್ಕೆ ಏರಿಕೆ ಕಂಡಿತು.
2014–15ರಲ್ಲಿ ಶೇ 5.5ರಷ್ಟು ‘ಜಿಡಿಪಿ’ ಪ್ರಗತಿಯನ್ನು ‘ಆರ್‌ಬಿಐ’ ಅಂದಾಜು ಮಾಡಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಜಾಗತಿಕ ರೇಟಿಂಗ್ ಸಂಸ್ಥೆಗಳಾದ ‘ಮೂಡೀಸ್’, ‘ಕ್ರಿಸಿಲ್’ ಮತ್ತು ‘ಫಿಚ್’ ಸಹ ಭಾರತದ ‘ಜಿಡಿಪಿ’ ಪ್ರಗತಿ ಇನ್ನೆರಡು ವರ್ಷಗಳಲ್ಲಿ ಶೇ 6.5ರಿಂದ 8ಕ್ಕೆ ಏರಿಕೆ ಕಾಣಲಿದೆ ಎಂದಿವೆ.
‘ಜಿಡಿಪಿ’ ಚೇತರಿಕೆಗಾಗಿ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಬೇಕು. ಹೆಚ್ಚಿನ ಹೂಡಿಕೆ ಆಕರ್ಷಿಸಲು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇದರಿಂದ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ವ್ಯತಿರಿಕ್ತವಾದ ತೆರಿಗೆ ವ್ಯವಸ್ಥೆ (ತೆರಿಗೆ ಭಯೋತ್ಪಾದನೆ) ಕೈಬಿಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಜಾರಿಗೆ ತರಬೇಕು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಇದರಿಂದ ಮುಂದಿನ ಎರಡು ವರ್ಷಗಳಲ್ಲಿ ಶೇ 8ರಿಂದ ಶೇ 10ರಷ್ಟು ‘ಜಿಡಿಪಿ’ ಪ್ರಗತಿ ದಾಖಲಿಸಬಹುದು ಎನ್ನುವುದು ‘ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ’ (ಅಸೋಚಾಂ), ‘ಭಾರತೀಯ ಕೈಗಾರಿಕಾ ಒಕ್ಕೂಟ’ (ಸಿಐಐ) ಮತ್ತು ‘ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ’ (ಫಿಕ್ಕಿ) ಹೊಸ ಸರ್ಕಾರಕ್ಕೆ ನೀಡಿರುವ ಆರ್ಥಿಕ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು.
ಚಾಲ್ತಿ ಖಾತೆ ಹೊರೆ
ಚಿನ್ನದ ಆಮದು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಕೇಂದ್ರ ಸರ್ಕಾರ ಅನುಸರಿಸಿದ ನಿಯಂತ್ರಣ ಕ್ರಮಗಳಿಂದ ‘ಚಾಲ್ತಿ ಖಾತೆ ಕೊರತೆ’ (ಸಿಎಡಿ) ಗಣನೀಯವಾಗಿ ತಗ್ಗಿದೆ ಎನ್ನಬಹುದು. 2012–13ನೇ ಸಾಲಿನಲ್ಲಿ ‘ಜಿಡಿಪಿ’ಯ ಶೇ 4.7ರಷ್ಟಿದ್ದ ಅಂದರೆ 8,800 ಕೋಟಿ ಡಾಲರ್ಗಳಷ್ಟಿದ್ದ (₨5.36 ಲಕ್ಷ ಕೋಟಿ) ‘ಸಿಎಡಿ’ಯನ್ನು 2013–14ನೇ ಸಾಲಿನ ಅಂತ್ಯದ ವೇಳೆಗೆ 3,200 ಕೋಟಿ ಡಾಲರ್‌ಗಳಿಗೆ (₨1.95 ಲಕ್ಷ ಕೋಟಿಗೆ) ತಗ್ಗಿಸಲಾಗಿದೆ. 2013–14ನೇ ಸಾಲಿನಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಶೇ 40ರಷ್ಟು ತಗ್ಗಿದೆ.
ಅಂದರೆ, ಮೌಲ್ಯದ ಲೆಕ್ಕದಲ್ಲಿ 3346 ಕೋಟಿ ಡಾಲರ್‌ಗಳಿಗೆ (ಸುಮಾರು ₨2.04 ಲಕ್ಷ ಕೋಟಿಗೆ) ಇಳಿಕೆ ಕಂಡಿದೆ. ಇದು ದೇಶದ ಒಟ್ಟಾರೆ ಆಮದು ವಹಿವಾಟಿನ ಶೇ 7ರಷ್ಟು ಮಾತ್ರ. ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 11ರಷ್ಟಿತ್ತು. ‘ಸಿಎಡಿ’ ತಗ್ಗಲು ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. 2014–15ನೇ ಸಾಲಿನಲ್ಲಿ ‘ಸಿಎಡಿ’ಯು ‘ಜಿಡಿಪಿ’ಯ ಶೇ 2ರಷ್ಟು ಪ್ರಮಾಣಕ್ಕೆ ತಗ್ಗಬಹುದು ಎಂದೂ ‘ಆರ್‌ಬಿಐ’ ಅಂದಾಜು ಮಾಡಿದೆ.
ಇನ್ನೊಂದೆಡೆ, ‘ಸಿಎಡಿ’ ತಗ್ಗಿಸಿದ ಕ್ರಮವೊಂದೇ ಈವರೆಗೆ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರ ಸಾಧನೆ. ಇದರ ವ್ಯತಿರಿಕ್ತ ಪರಿಣಾಮವಾಗಿ ಚಿನ್ನ ಕಳ್ಳಸಾಗಣೆ ಗಣನೀಯವಾಗಿ ಹೆಚ್ಚಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.
₨ ಮೌಲ್ಯವರ್ಧನೆ
‘ಎನ್‌ಡಿಎ’ ಮೈತ್ರಿಕೂಟ ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯದಲ್ಲಿ (ಮೇ 16) 41 ಪೈಸೆಯಷ್ಟು ಏರಿಕೆ ಕಂಡಿತು. ಕಳೆದ ಹತ್ತು ತಿಂಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿರುವುದು ಇದೇ ಮೊದಲು. ಮೇ 25ರಂದು ಪ್ರತಿ ಅಮೆರಿಕನ್ ಡಾಲರ್‌ಗೆ ರೂಪಾಯಿ ಬೆಲೆ ₨58.53ರಷ್ಟಿತ್ತು. 2013ರ ಆಗಸ್ಟ್‌ನಲ್ಲಿ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ₨68.75 ರವರೆಗೆ ಕುಸಿದಿತ್ತು. ಆಗ ಚಿನ್ನದ ಬೆಲೆಯೂ 10 ಗ್ರಾಂಗಳಿಗೆ ₨34,489ರಷ್ಟು ಗರಿಷ್ಠ ಮಟ್ಟಕ್ಕೆ ಏರಿತ್ತು.
ಇದೀಗ ಷೇರುಪೇಟೆ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಹೂಡಿಕೆ ಬೃಹತ್ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದರಿಂದ ಡಾಲರ್ ಒಳಹರಿವು ಹೆಚ್ಚಿದೆ. ಏಪ್ರಿಲ್ 4ಕ್ಕೆ ಕೊನೆಗೊಂಡ ವಾರದಲ್ಲಿ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ₨17,820 ಕೋಟಿಯಷ್ಟು ಹೆಚ್ಚಿದ್ದು, ಒಟ್ಟು ಸಂಗ್ರಹ ಮೌಲ್ಯ ₨18.39 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಆಮದುಸಂಸ್ಥೆಗಳು ಮತ್ತು ಬ್ಯಾಂಕುಗಳು ಸಹ ತಮ್ಮ ಬಳಿ ಸಂಗ್ರಹವಿರುವ ಡಾಲರ್ ಮಾರಾಟಕ್ಕೆ ಮುಂದಾಗಿವೆ. ಈ ಎಲ್ಲ ಕಾರಣಗಳಿಂದ ರೂಪಾಯಿ ಮೌಲ್ಯವರ್ಧನೆ ಆಗಿದೆ.
ಉದ್ಯಮ ನಿರೀಕ್ಷೆ
ಪಕ್ಷವೊಂದಕ್ಕೆ ಸ್ಪಷ್ಟ ಬಹುಮತ ಲಭಿಸಿರುವುದು ಉದ್ಯಮ ವಲಯದ ಆತ್ಮವಿಶ್ವಾಸ ಹೆಚ್ಚಿಸಿರುವುದೇನೋ ನಿಜ. ‘ಯುಪಿಎ’ ಸರ್ಕಾರದ ಅವಧಿಯಲ್ಲಿ ಯೋಜನೆಗಳಿಗೆ ಅನುಮೋದನೆ ಲಭಿಸಲು ಸಾಕಷ್ಟು ವಿಳಂಬವಾಗುತ್ತಿತ್ತು. ಹೀಗಾಗಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ ಎನ್ನುವ ಆರೋಪವಿತ್ತು.
ನೂತನ ಪ್ರಧಾನಿ ನರೇಂದ್ರ ಮೋದಿ ಅವರ ‘ಉದ್ಯಮ ಸ್ನೇಹಿ’ ನಾಯಕತ್ವ ಮತ್ತು ‘ಗುಜರಾತ್ ಮಾದರಿ’ ಅಭಿವೃದ್ಧಿ ಬಗ್ಗೆ ಹೂಡಿಕೆದಾರರು ವಿಶ್ವಾಸ ಹೊಂದಿದ್ದಾರೆ. ವಾಣಿಜ್ಯೋದ್ಯಮ ಸಂಸ್ಥೆಗಳು ಹೊಸ ಸರ್ಕಾರಕ್ಕೆ ಸಲ್ಲಿಸಿರುವ ಆರ್ಥಿಕ ಪ್ರಣಾಳಿಕೆಯಲ್ಲಿ ಯೋಜನೆಗಳ ಶೀಘ್ರ ಅನುಮೋದನೆಗೆ ‘ಏಕ ಗವಾಕ್ಷಿ’ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿವೆ.
‘ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸುವುದು, ತಯಾರಿಕಾ ವಲಯಕ್ಕೆ ಉತ್ತೇಜನ ನೀಡುವುದು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು.... ಈ ಮೂರೂ ಅಂಶಗಳು ದೇಶದ ಆರ್ಥಿಕ ಪ್ರಗತಿ ದೃಷ್ಟಿಯಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಎನ್ನುತ್ತಾರೆ ‘ಫಿಕ್ಕಿ’ ಅಧ್ಯಕ್ಷ ಸಿದ್ಧಾರ್ಥ ಬಿರ್ಲಾ.
ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ‘ಎಫ್‌ಡಿಐ’ ಪ್ರಕ್ರಿಯೆಯನ್ನು ‘ಬಿಜೆಪಿ’ ಬಲವಾಗಿ ವಿರೋಧಿಸಿತ್ತು. ಈಗ ಆ ಪಕ್ಷದ ನೇತೃತ್ವದ ‘ಎನ್‌ಡಿಎ’ ಸರ್ಕಾರವೇ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿರುವುದರಿಂದ ‘ಬಿಜೆಪಿ’ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನೂ ಕಾದು ನೊಡಬೇಕಿದೆ ಎನ್ನುತ್ತಾರೆ ಬಿರ್ಲಾ.
2015ರ ವೇಳೆಗೆ ‘ಜಿಎಸ್‌ಟಿ’ (ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್) ಜಾರಿಗೆ ತರಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಗೆ (ಎಂಜಿಎನ್ಆರ್ಇಜಿಎ) ತಿದ್ದುಪಡಿ ತರಬೇಕು ಎನ್ನುವುದು ‘ಫಿಕ್ಕಿ’ ಆಗ್ರಹ.
‘ವಿತ್ತೀಯ ಸೇರ್ಪಡೆ ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಉಳಿತಾಯ, ಹೂಡಿಕೆ ಆಧರಿಸಿದ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎನ್ನುವುದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಅಜಯ್ ಶ್ರೀರಾಂ ಅವರ ಅಭಿಪ್ರಾಯ. ‘ಎರಡು ಮತ್ತು ಮೂರನೆಯ ಹಂತದ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಭೂಸ್ವಾಧೀನ ವಿಳಂಬ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ‘ಭೂಬ್ಯಾಂಕ್’ ಸ್ಥಾಪಿಸಬೇಕು ಎನ್ನುತ್ತಾರೆ ‘ಅಸೋಚಾಂ’ ಅಧ್ಯಕ್ಷ ರಾಣಾ ಕಪೂರ್.
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೊಡಾಫೋನ್, ನೋಕಿಯಾ, ಷೆಲ್ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳು ಸಹ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ಸ್ವಾಗತಿಸಿದ್ದು, ‘ಸರಕು ಅಥವಾ ಸೇವೆಯ ವರ್ಗಾವಣೆ ತೆರಿಗೆ ದರ’ದಲ್ಲಿ ಇಳಿಕೆಯಾಗಬೇಕಿದೆ ಎಂಬ ಗಮನ ಸೆಳೆದಿವೆ.
ರಫ್ತಿಗೆ ಉತ್ತೇಜನ
2013–14ನೇ ಸಾಲಿನಲ್ಲಿ ಆಮದು ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಪ್ರಮುಖವಾಗಿ ಯೂರೋಪ್ ಮತ್ತು ಅಮೆರಿಕ ಮಾರುಕಟ್ಟೆಯಿಂದ ಸರಕುಗಳಿಗೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ರಫ್ತು ವಹಿವಾಟು ಗಣನೀಯವಾಗಿ ಇಳಿಕೆ ಕಂಡಿದೆ. ರಫ್ತಿಗೆ ಉತ್ತೇಜನ ನೀಡಲು ಬಜೆಟ್ ನಂತರ ಐದು ವರ್ಷಗಳ (2009–14) ವಿದೇಶಿ ವ್ಯಾಪಾರ ನೀತಿ (ಎಫ್‌ಟಿಪಿ) ಪ್ರಕಟಗೊಳ್ಳುವ ಸಾಧ್ಯತೆ ಇದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಇದಕ್ಕೆ ಸಬಂಧಿಸಿದಂತೆ ಈಗಾಗಲೇ ರೂಪುರೇಷೆಗಳನ್ನು ಅಂತಿಮಗೊಳಿಸಿದೆ.
ರಫ್ತು ಸರಕುಗಳ ಗುಣಮಟ್ಟ ಖಾತರಿ ಪಡಿಸುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬ್ರಾಂಡ್ ಮೌಲ್ಯ ಹೆಚ್ಚಿಸುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪಾಲು ಹೆಚ್ಚಿಸುವುದು ‘ಎಫ್‌ಟಿಪಿ’ಯ ಪ್ರಮುಖ ಉದ್ದೇಶ. ಹೊಸ ನೀತಿಯು ಆಗಸ್ಟ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಭಾರತೀಯ ರಫ್ತು ಒಕ್ಕೂಟಗಳ ಮಹಾನಿರ್ದೇಶಕ ಅಜಯ್ ಶಾಹಿ.
2012–13ರಲ್ಲಿ ₨18.74 ಲಕ್ಷ ಕೋಟಿ, 2011–12ರಲ್ಲಿ ₨18.42 ಲಕ್ಷ ಕೋಟಿ ರಫ್ತು ವಹಿವಾಟು ನಡೆದಿದೆ.
ತೆರಿಗೆ ಶ್ರೇಣಿ ವ್ಯತ್ಯಾಸ
2014–15ನೇ ಹಣಕಾಸು ವರ್ಷದ ಬಜೆಟ್ ಜುಲೈನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಈಗಿರುವ ತೆರಿಗೆ ಶ್ರೇಣಿಯಂತೆ ವಾರ್ಷಿಕ ₨2 ಲಕ್ಷದವರೆಗೆ ಆದಾಯ ಇರುವವರಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ₨2ರಿಂದ ₨5 ಲಕ್ಷದವರೆಗೆ ಶೇ 10ರಷ್ಟು, ₨5ರಿಂದ ₨10ಲಕ್ಷದವರೆಗೆ ಶೇ 20ರಷ್ಟು ₨10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಶ್ರೇಣಿ ಬದಲಾಗುವ ಸಾಧ್ಯತೆ ಇದೆ.
‘ಬಿಜೆಪಿ’ಯ ಹಿರಿಯ ಮುಖಂಡ ಯಶವಂತ ಸಿನ್ಹಾ ಅಧ್ಯಕ್ಷತೆಯಲ್ಲಿನ ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ₨3 ಲಕ್ಷದವರೆಗೆ ಹೆಚ್ಚಿಸಬೇಕು ಎಂಬ ಸಲಹೆ ನೀಡಿದೆ. ₨3 ಲಕ್ಷದಿಂದ ₨10 ಲಕ್ಷದವರೆಗಿನ ಆದಾಯಕ್ಕೆ ಶೇ 10ರಷ್ಟು, ₨10 ಲಕ್ಷದಿಂದ ₨20 ಲಕ್ಷದವರೆಗೆ ಶೇ 20ರಷ್ಟು ಮತ್ತು ₨20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಬೇಕೆಂದು ಶಿಫಾರಸು ಮಾಡಿದೆ.
ಎನ್‌ಪಿಎ ಹೆಚ್ಚಳ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಯು) ಒಟ್ಟಾರೆ ‘ಎನ್‌ಪಿಎ’ ಪ್ರಮಾಣ 2011ರ ಮಾರ್ಚ್ 31ರಂದು ₨94,121 ಕೋಟಿಗಳಷ್ಟಿತ್ತು. ನಂತರ 2012ರ ಮಾರ್ಚ್ 31ರ ವೇಳೆಗೆ ₨1.37 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿತು. 2013ರ ಮಾರ್ಚ್ ವೇಳೆಗೆ ₨1.83 ಲಕ್ಷ ಕೋಟಿ ಮುಟ್ಟಿತು. ‘ಪಿಎಸ್‌ಯು’ ಬ್ಯಾಂಕುಗಳ ‘ಎನ್‌ಪಿಎ’ ಪ್ರಮಾಣ ಎರಡೂವರೆ ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚಿದೆ ಎನ್ನುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ‘ಪಿಎಸ್‌ಯು’ ಬ್ಯಾಂಕುಗಳಲ್ಲಿ ಸರ್ಕಾರ ಹೊಂದಿರುವ ಪಾಲನ್ನು ಶೇ 50ಕ್ಕಿಂತ ಕೆಳಮಟ್ಟಕ್ಕೆ ತಗ್ಗಿಸಬೇಕು ಎಂದು ಪಿ.ಜೆ.ನಾಯಕ್ ನೇತೃತ್ವದ ಸಮಿತಿ (‘ಆರ್‌ಬಿಐ’ ನೇಮಿಸಿದ್ದ ಸಮಿತಿ) ಶಿಫಾರಸು ಮಾಡಿದೆ. ಬ್ಯಾಂಕ್‌ಗಳ ಮೇಲಿನ ಸರ್ಕಾರದ ನಿಯಂತ್ರಣ ಕಡಿಮೆಯಾದರೆ ಮಾತ್ರ ‘ಪಿಎಸ್‌ಯು’ ಬ್ಯಾಂಕುಗಳಲ್ಲಿ ಸುಧಾರಣೆ ಸಾಧ್ಯ ಎಂಬುದೇ ಅದರ ಸ್ಪಷ್ಟ ಅಭಿಪ್ರಾಯವಾಗಿದೆ.
‘ಹಣಕಾಸು ಮಾರುಕಟ್ಟೆ ಅಸ್ಥಿರತೆಯಿಂದಾಗಿ ಭಾರತವು ವಿಶ್ವದ ವಿಶ್ವಾಸವನ್ನೇ ಕಳೆದುಕೊಂಡಿರುವುದನ್ನು ಸರ್ಕಾರ ತಡವಾಗಿ ಗುರುತಿಸಿದೆ’ ಎಂದಿದ್ದರು ರತನ್ ಟಾಟಾ. ಹಿಂದೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅರಾಜಕತೆಯಿಂದ ನ್ಯಾನೊ ಕಾರು ತಯಾರಿಕಾ ಘಟಕ ಯೋಜನೆ ವಿಫಲವಾದಾಗ ಮೋದಿ ಅದನ್ನು ರಾತ್ರೊ ರಾತ್ರಿ ಗುಜರಾತ್ಗೆ ವರ್ಗಾಯಿಸುವಂತೆ ಮಾಡಿ, ಬೆರಳೆಣಿಕೆಯ ದಿನಗಳಲ್ಲಿ ಎಲ್ಲ ಪರವಾನಗಿ ಕೊಡಿಸಿದ್ದರು. ಇದೇ ಕಾರಣದಿಂದಾಗಿ ಟಾಟಾ ಸೇರಿದಂತೆ ಹಲವು ಉದ್ಯಮಿಗಳಿಗೆ ‘ಉದ್ಯಮ ಸ್ನೇಹಿ’ ನಾಯಕ ಎನಿಸಿದ ಮೋದಿ ಅವರು, ಈಗ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹಣಕಾಸು ಮಾರುಕಟ್ಟೆ ಎತ್ತ ಚಲಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.