ADVERTISEMENT

ರೇಷ್ಮೆ ನಾಡಲ್ಲಿ ಟೆಕ್ಸ್ ಟೈಲ್ ಪಾರ್ಕ್

ಗಣೇಶ ಅಮೀನಗಡ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಮೈಸೂರು ರೇಷ್ಮೆ ಸೀರೆ, ಮೈಸೂರು ರೇಷ್ಮೆ ಜರಿ ಪಂಚೆ, ಮೈಸೂರು ರೇಷ್ಮೆ ಜರಿ ಪೇಟ...
ಇವುಗಳ ಮೂಲಕ ಪ್ರಸಿದ್ಧವಾಗಿರುವ ಮೈಸೂರಿಗೆ ಇನ್ನೊಂದು ಗರಿಯೂ ಸದ್ಯದಲ್ಲೇ ಸೇರಿಕೊಳ್ಳಲಿದೆ. ಅದುವೇ ‘ಜವಳಿ ಉದ್ಯಮದಂಗಳ’ ಅರ್ಥಾತ್‌ ‘ಟೆಕ್ಸ್‌ಟೈಲ್‌ ಪಾರ್ಕ್’. ಇದಕ್ಕೆ ಕೇಂದ್ರ ಸರ್ಕಾರದ್ದೇ ನೇತೃತ್ವ.

ದೇಶದ ಆರು ಕಡೆ ಜವಳಿ ಪಾರ್ಕ್ ಆರಂಭಿಸ ಲಾಗುವುದು ಎಂದು ಕೇಂದ್ರ ಸರ್ಕಾರ 2014; 15ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಘೋಷಿಸಿದೆ. ಕರ್ನಾಟಕದಲ್ಲಿ ಮೈಸೂರಿನಲ್ಲಿ ಜವಳಿ ಉದ್ಯಮ ದಂಗಳ ನಿರ್ಮಾಣಗೊಳ್ಳಲಿದೆ. ‘ಮೈಸೂರು ರೇಷ್ಮೆ’ ಯಿಂದಲೇ ಪ್ರಖ್ಯಾತವಾಗಿರುವ ಈ ಸಾಂಸ್ಕೃತಿಕ ಮತ್ತು ಅರಮನೆಗಳ ನಗರಿಗೆ ‘ಟೆಕ್ಸ್‌ಟೈಲ್‌ ಪಾರ್ಕ್‌’ ಹೊಂದಿದ ಹೆಮ್ಮೆಯೂ ಸೇರಿಕೊಳ್ಳಲಿದೆ.
ಈಗಾಗಲೇ ಹಲವಾರು ಪ್ರಸಿದ್ಧ ಕಂಪೆನಿಗಳು ಜವಳಿ ಉತ್ಪಾದನೆಗೆ ಈ ಭಾಗದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ರಫ್ತು ವಹಿವಾಟಿನಲ್ಲೂ ಮುಂಚೂಣಿಯಲ್ಲಿವೆ.

ಹೆಚ್ಚಿನ ಉದ್ಯೋಗ
ಕೃಷಿ ಕ್ಷೇತ್ರದ ನಂತರ ಅತಿ ಹೆಚ್ಚು ಉದ್ಯೋಗ ನೀಡುವಂತಹ ಕ್ಷೇತ್ರ ಎಂದರೆ ಅದು ಜವಳಿ ಉದ್ಯಮ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕೈಮಗ್ಗ ನೇಕಾರರು, ವಿದ್ಯುತ್ ಮಗ್ಗದವರ ಜತೆಗೇ ಸಿದ್ಧ ಉಡುಪು ತಯಾರಿಕಾ ಘಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಇವುಗಳೊಂದಿಗೆ, ಜಿಲ್ಲೆಯಲ್ಲಿ ಐದು ಕೈಮಗ್ಗ ಸಹಕಾರ ಸಂಘಗಳು, ಮೂರು ವಿದ್ಯುತ್‌ ಮಗ್ಗದ ಸಂಘಗಳು ಹಾಗೂ 20 ಜವಳಿ ಘಟಕಗಳು ಇವೆ. ಇವುಗಳ ಜತೆಗೆ, ಟೆಕ್ಸ್‌ಟೈಲ್‌ ಪಾರ್ಕ್ ಸಹ ಬರಲಿರುವುದರಿಂದ ಹಳೆ ಮೈಸೂರು ಭಾಗವಷ್ಟೇ ಅಲ್ಲ, ಇಡೀ ರಾಜ್ಯದ ಜವಳಿ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗುತ್ತದೆ.

ಏನಿದು ಜವಳಿ ಪಾರ್ಕ್
ಒಂದೇ ಸೂರಿನಡಿ ಎಲ್ಲ ಸೌಲಭ್ಯ ಒದಗಿಸುವ ಹಾಗೂ ಜವಳ ಉದ್ಯಮಕ್ಕೆ ಸಂಬಂಧಿಸಿದ ವೈವಿಧ್ಯಮಯ ಕೈಗಾರಿಕಾ ಘಟಕಗಳ ಸಮೂಹವೇ ಈ ಟೆಕ್ಸ್‌ಟೈಲ್‌ ಪಾರ್ಕ್. ಬಂಡವಾಳ ಹೂಡಿಕೆದಾರರು ಕೇಂದ್ರ ಸರ್ಕಾರದ ವಿಶೇಷ ಯೋಜನೆಯಾದ ‘ಸ್ಪೆಷಲ್ ಪರ್ಪಸ್ ವೆಹಿಕಲ್’ (ಎಸ್‌ಪಿವಿ) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನಂತರ ಟೆಕ್ಸ್‌ಟೈಲ್‌ ಪಾರ್ಕ್‌ ಪ್ರದೇಶದಲ್ಲಿ ನಿವೇಶನ ಗುರುತಿಸಿ ಖರೀದಿಸಬೇಕು. ಇದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ (ಕೆಐಎಡಿಬಿ) ಮೂಲಕ ನಿವೇಶನ ವಶಪಡಿಸಿಕೊಂಡ ನಂತರ ಸಹಾಯಧನ (ಸಬ್ಸಿಡಿ) ಸಿಗುತ್ತದೆ.

ಹೀಗೆ ಜವಳಿ ಉದ್ಯಮಗಳಿಗೆ  ಬೇಕಾದ ನಿವೇಶನ ಲಭ್ಯವಾದ ನಂತರ ವಿವಿಧ ಘಟಕಗಳು ಕಾಲೂರಬಹುದು.
ಅವುಗಳಲ್ಲಿ;
*ಗ್ರೀನ್‌ ಫೀಲ್ಡ್ ಟೆಕ್ಸ್‌ಟೈಲ್ ಪಾರ್ಕ್: ರಸ್ತೆ, ಚರಂಡಿ, ಕಾಪೌಂಡ್... ಹೀಗೆ ಸಾಮೂಹಿಕವಾಗಿ ಬೇಕಾಗುವ ಸೌಲಭ್ಯಗಳನ್ನು ಯೋಜನಾ ವೆಚ್ಚದ ಮೇಲೆ ಶೇ 40ರಷ್ಟು ಅಥವಾ ರೂ. 20 ಕೋಟಿ ಸಹಾಯಧನ ದೊರೆಯಲಿದೆ.
*ಕೇಂದ್ರ ಸರ್ಕಾರದ ಯೋಜನೆಯಡಿ ಶೇ 10ರಷ್ಟು ಸಹಾಯಧನ ಅಥವಾ ರೂ.10 ಕೋಟಿ.
*ಬ್ರೌನ್ ಫೀಲ್ಡ್: ಇದರಲ್ಲಿ ಶೇ 40ರಷ್ಟು ಅಥವಾ ರೂ.12 ಕೋಟಿ ಸಹಾಯಧನ.
– ಈ ಘಟಕಗಳಿಗೆ ಸಾಲ ಆಧಾರಿತ ಬಂಡವಾಳದ ಸಹಾಯಧನವೂ ಕೇಂದ್ರ ಸರ್ಕಾರದಿಂದ ಸಿಗಲಿದೆ.
ಇದರಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸ್ಥಿರಾಸ್ತಿ ಮೇಲೆ ಶೇ 20ರಷ್ಟು ಇಲ್ಲವೇ ರೂ.10 ಕೋಟಿಗಳಷ್ಟು ಸಹಾಯಧನ ಸಿಗಲಿದೆ.

ಇನ್ನೊಂದು ಯೋಜನೆಯಲ್ಲಿ ರೂ.10 ಕೋಟಿಯಿಂದ ರೂ.25 ಕೋಟಿವರೆಗೂ
ಹೂಡಿಕೆ ಮಾಡುವ ಜವಳಿ ಉದ್ಯಮದವರಿಗೆ ಶೇ 20ರಷ್ಟು ಅಥವಾ ರೂ.3 ಕೋಟಿ ಸಹಾಯಧನ ಸಿಗಲಿದೆ.
ರೂ.26 ಕೋಟಿಯಿಂದ ರೂ.50 ಕೋಟಿ ಬಂಡವಾಳ ತೊಡಗಿಸುವವರಿಗೆ ಶೇ 20 ಅಥವಾ ರೂ.4 ಕೋಟಿ ಸಹಾಯಧನ.
ರೂ.51 ಕೋಟಿಯಿಂದ ರೂ.99 ಕೋಟಿವರೆಗಿನ ಹೂಡಿಕೆದಾರರಿಗೆ ಶೇ 20 ಅಥವಾ ರೂ.6 ಕೋಟಿ ಸಹಾಯಧನ ಸಿಗಲಿದೆ.
ಇದು ಕಟ್ಟಡ ನಿರ್ಮಾಣ ಹಾಗೂ ಯಂತ್ರಗಳ ಖರೀದಿಗಾಗಿ ಇರುವ ಹಣಕಾಸಿನ ನೆರವು.

ADVERTISEMENT

ವಿದ್ಯುತ್‌ಗೂ ಸಬ್ಸಿಡಿ!
ಜವಳಿ ಘಟಕ ಆರಂಭಿಸುವವರಿಗೆ ಮುಂದಿನ ಐದು ವರ್ಷಗಳವರೆಗೆ ವಿದ್ಯುತ್ತಿನ ಪ್ರತಿ ಯುನಿಟ್‌ಗೆ ಒಂದು ರೂಪಾಯಿ ಸಹಾಯಧನವನ್ನು ಮರುಪಾವತಿಸಲಾಗುತ್ತದೆ.

ಯಾವ ಘಟಕ ಬರಲಿವೆ?
*ಸಿದ್ಧ ಉಡುಪು ಘಟಕ
*ನೂಲಿನ ಗಿರಣಿ
*ಕಾಂಪೋಜಿಟ್ ಟೆಕ್ಸ್‌ಟೈಲ್‌ ಹಾಗೂ ನೂಲು ತಯಾರಿಕೆ ಘಟಕ
ಸಿಗಲಿದೆ.

10,000 ಉದ್ಯೋಗ ಸೃಷ್ಟಿ
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದಂತೆ ಜವಳಿ ಪಾರ್ಕಿಗೆ 100 ಎಕರೆ ಮೀಸಲಿಟ್ಟರೆ 25–50 ಬೃಹತ್‌ ಜವಳಿ ಉದ್ಯಮಗಳು  ಆ ಪ್ರದೇಶದಲ್ಲಿ ಆರಂಭಗೊಳ್ಳಬಹುದು. ಇದರಿಂದಾಗಿ ರೂ.10 ಸಾವಿರ ಕೋಟಿಗಳಷ್ಟು ಬೃಹತ್‌ ಬಂಡವಾಳವೂ  ಹರಿದು ಬರಲಿದೆ. ಜತೆಗೆ, ಕನಿಷ್ಠ 10 ಸಾವಿರ ಜನರಿಗೆ ಉದ್ಯೋಗವೂ ಸಿಗಲಿದೆ.
– ಜನಾರ್ದನ್, ಉಪ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ

ತಾಂತ್ರಿಕ ಜವಳಿ ಘಟಕಗಳು
ಇದರಲ್ಲಿ ವೈದ್ಯಕೀಯ ತಾಂತ್ರಿಕ ಜವಳಿ ಘಟಕ ಹಾಗೂ ವೈದ್ಯರು, ದಾದಿಯರು ಬಳಸುವ ವಸ್ತ್ರಗಳ (ಬಳಸಿ ಬಿಸಾಡುವ ಂತಹ ವಸ್ತ್ರ) ಉತ್ಪನ್ನ.

*ಆಟೊ ಟೆಕ್ಸ್‌ಟೈಲ್‌; ವಾಹನ, ಗ್ಯಾರೇಜುಗಳಲ್ಲಿ ಬಳಸಿ ಬಿಸಾಡುವ ಬಟ್ಟೆಗಳ ಉತ್ಪನ್ನ.
*ಜಿಯೊ ಟೆಕ್ಸ್‌ಟೈಲ್ಸ್: ರಸ್ತೆ ಹಾಗೂ ಕಾಲುವೆ ನಿರ್ಮಾಣದಲ್ಲಿ ಬಳಸುವ ಜವಳಿ ಉತ್ಪನ್ನಗಳ ತಯಾರಿಕಾ ಘಟಕ.
*ಅಗ್ರಿ ಟೆಕ್ಸ್‌ಟೈಲ್ಸ್: ಕೃಷಿಗೆ ಸಂಬಂಧಿಸಿದ ಜವಳಿ ಉತ್ಪನ್ನಗಳ ಘಟಕ.
*ಗೃಹೋಪಯೋಗಿ ಅಲಂಕಾರ ವಸ್ತುಗಳ ನಿರ್ಮಾಣದ ಘಟಕ.
*ಕೈಗಾರಿಕೆಗಳಿಗೆ, ಸೇನೆಯ ವಿವಿಧ ವಿಭಾಗಗಳಿಗೆ ಬೇಕಾಗುವಂತಹ ವಸ್ತ್ರಗಳನ್ನು ತಯಾರಿಸುವ ಘಟಕ.
ಈ ಘಟಕಗಳ ನಿರ್ಮಾಣದ ಜತೆಗೇ ಸಾಮೂಹಿಕ ತ್ಯಾಜ್ಯ ವಿಲೇವಾರಿ ಘಟಕವನ್ನೂ ನೆಲೆಗೊಳಿಸಿದರೆ ಶೇ 50ರಷ್ಟು ಸಹಾಯಧನವೂ
ಈ ವೈವಿಧ್ಯಮಯ ಜವಳಿ ಉತ್ಪಾದನೆಯ ಘಟಕಗಳನ್ನು ನಿರ್ಮಿಸುವವರಿಗೆ ‘ಪ್ರವೇಶ ತೆರಿಗೆ’ ಎಂದು ಶೇ 10ರಷ್ಟು ಮರುಪಾವತಿ  ಸೌಲಭ್ಯ ಇರುತ್ತದೆ. ಯಂತ್ರಗಳನ್ನು ಆಮದು ಮಾಡಿಕೊಂಡಾಗ ಪಾವತಿಸಿದ ಮುದ್ರಾಂಕ ಶುಲ್ಕದಲ್ಲಿ ಶೇ 50ರಷ್ಟು ಮೊತ್ತ ಮರುಪಾವತಿ ಆಗಲಿದೆ.

ಹೀಗೆ ‘ಟೆಕ್ಸ್‌ಟೈಲ್‌ ಪಾರ್ಕ್‌’ನಿಂದಾಗಿ ಅಪಾರ ಉದ್ಯೋಗಗಳು ಸೃಷ್ಟಿಯಾಗುವುದರ ಜತೆಗೇ, ಈ ಭಾಗದ, ರಾಜ್ಯದ ಆರ್ಥಿಕ ಉನ್ನತಿಯೂ ಆಗುತ್ತದೆ.

ಟೆಕ್ಸ್‌ಟೈಲ್‌ ಪಾರ್ಕ್‌ ನೆಲೆಗೊಳ್ಳುತ್ತಿರುವುದು ಬೆಂಗಳೂರಿನ ಆಚೆಗೆ. ಹಾಗಿದ್ದರೂ ಇದು ರಾಜಧಾನಿಗೆ ಹತ್ತಿರವೇ ಇರುವಂತಹ (140 ಕಿ.ಮೀ ಅಂತರ) 2ನೇ ಶ್ರೇಣಿಯ ದೊಡ್ಡ ನಗರ. ಮೈಸೂರಿನಲ್ಲಿ ಜವಳಿ ಪಾರ್ಕ್ ನಿರ್ಮಾಣದಿಂದ ಆಗಲಿರುವ ಇನ್ನೊಂದು ಹೆಚ್ಚುವರಿ ಪ್ರಯೋಜನವೆಂದರೆ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ಕೈಗಾರಿಕಾ ಪ್ರದೇಶ ಪೂರಕವಾಗಿರಲಿದೆ.

ತಾಂತ್ರಿಕ ಉನ್ನತೀಕರಣ
ಜವಳಿ ಪಾರ್ಕ್‌ ಆಗುವುದರಿಂದ ಅದರಲ್ಲಿ ಪಾಲ್ಗೊಳ್ಳುವ ನೌಕರರಿಗೆ ಹೆಚ್ಚಿನ ಕೌಶಲ ಅಭಿವೃದ್ಧಿ ತರಬೇತಿಯೂ ಇದ್ದೇ ಇರುತ್ತದೆ. ಇದರಿಂದ ನುರಿತ ಕಾರ್ಮಿಕರು ಸಿಗಲಿದ್ದಾರೆ. ಜತೆಗೆ, ನಮ್ಮ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ (ಕೆಎಸ್‌ಐಸಿ) ತಾಂತ್ರಿಕ ಉನ್ನತೀಕರಣವೂ ಸಾಧ್ಯವಾಗಲಿದೆ. ಇದರಿಂದ ನಮ್ಮ ‘ಕರ್ನಾಟಕ ಸಿಲ್ಕ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌’ (ಕೆಎಸ್‌ಐಸಿ) ಕಾರ್ಮಿಕರಿಗೆ ಹೆಚ್ಚಿನ ತಂತ್ರಜ್ಞಾನದ ಅರಿವು ಮತ್ತು ಕುಶಲತೆಯೂ ಸಿಗುತ್ತದೆ.

–ಸದಾನಂದಸ್ವಾಮಿ, ಪ್ರಧಾನ ವ್ಯವಸ್ಥಾಪಕ, ಕೆಎಸ್‌ಐಸಿ

ಸಮೂಹ ಘಟಕ ಲಾಭದಾಯಕ

ಒಂದೊಂದೇ ಘಟಕಕ್ಕೆ ನೆರವು ನೀಡುವುದರ ಬದಲು ಸಮೂಹ ಘಟಕಗಳಾದರೆ ಲಾಭ ಹೆಚ್ಚು. ಹೀಗಾಗಿ, ಸಮೂಹ ಘಟಕಗಳ ಸ್ಥಾಪನೆಗೆ ಹೆಚ್ಚು ಒತ್ತು ಸಿಗುತ್ತದೆ. ಇದಕ್ಕೆ ಬೇಕಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ನೀರು ಮೊದಲಾದವು ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿವೆ. ಸಾಗಾಣಿಕೆಗೆ ಬೇಕಾದ ದೊಡ್ಡ ಲಾರಿಗಳು ಸಿಗಲಿವೆ.
ಮುಖ್ಯವಾಗಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲ ಆಗಲಿದೆ. ತರಬೇತಿ ಹಾಗೂ ಸಂಶೋಧನೆಗೆ ಅವಕಾಶ ಸಿಗಲಿದೆ.
– ಸಿ.ಎಸ್‌.ಯೋಗೀಶ್, ಯೋಜನಾ ನಿರ್ದೇಶಕರು

ನೂತನ ಜವಳಿ ನೀತಿ, ಬೆಂಗಳೂರು
2012ರ ಮೇ 5ರಂದು ಮೈಸೂರಿನಲ್ಲಿ ವಲಯ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಿತು. ಇದರಲ್ಲಿ ಏಳೆಂಟು ಜವಳಿ ಉದ್ಯಮದಾರರು ಭಾಗವಹಿಸಿದ್ದರು. ನಂತರ ಜವಳಿ ಪಾರ್ಕ್ ಸಲುವಾಗಿ ಮೈಸೂರಿಗೆ ಸಮೀಪದ ಕಡಕೊಳ ಬಳಿಯ ಕೂಚನಹಳ್ಳಿಯ ಹತ್ತಿರ 250 ಎಕರೆ ಗುರುತಿಸಲಾಯಿತು. ಈ ಭೂ ಪ್ರದೇಶ ಸರ್ಕಾರದಿಂದ ನೋಟಿಫಿಕೇಷನ್‌ ಕೂಡಾ ಆಗಿದೆ. ಇಲ್ಲಿಯೇ ಕೇಂದ್ರ ಸರ್ಕಾರದ ಜವಳಿ ಪಾರ್ಕ್ ಆಗಬೇಕು.
– ಸುಧಾಕರ ಶೆಟ್ಟಿ, ಉದ್ಯಮಿ

ಸ್ಥಳೀಯ ಉದ್ಯಮಿಗಳಿಗೆ ನೆರವು

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಭಾಗಕ್ಕೆ ಜವಳಿ ಉದ್ಯಮಕ್ಕೆ ಹೆಚ್ಚಿನ ಒತ್ತು, ಉತ್ತೇಜನ ದೊರೆಯಿತು. ಏಕೆಂದರೆ, ತಮಿಳುನಾಡಿನ ಕೊಯಮತ್ತೂರು, ಸತ್ಯಮಂಗಲ, ಗೋಪಿನಾಥಂ, ತಿರುಪುರ, ಈರೋಡು, ತಿರುಚನಗೂಡು, ಕರೂರು... ಈ ಎಲ್ಲ ಪ್ರದೇಶಗಳು ಹತ್ತಿ ನೂಲಿನ ಬಟ್ಟೆಗಳಿಗೆ ಪ್ರಸಿದ್ಧ. ಮೈಸೂರು ಭಾಗದಲ್ಲಿ ಹತ್ತಿ ಬೆಳೆ ಜಾಸ್ತಿ. ಇಲ್ಲಿ ಬೆಳೆದ ಹತ್ತಿ ತಮಿಳುನಾಡಿಗೆ ಹೋಗಿ, ಬಟ್ಟೆ ತಯಾರಾಗಿ ಮೈಸೂರಿಗೆ ಬರುತ್ತಿದ್ದವು. ಆಗ ದೇವರಾಜ ಅರಸು ಅವರು ಹತ್ತಿಯಿಂದ ನೂಲು ತೆಗೆಯುವ ಗಿರಣಿಗಳನ್ನು ಆರಂಭಿಸಿದರು. ಹುಣಸೂರಿನಲ್ಲಿ ಮೀನಾಕ್ಷಿ ಸುಂದರಂ ಟೆಕ್ಸ್‌ಟೈಲ್, ಕುಮಾರವೇಲು ಟೆಕ್ಸ್‌ಟೈಲ್, ಪಿರಿಯಾಪಟ್ಟಣದಲ್ಲಿ ವಿಷ್ಣು ಟೆಕ್ಸ್‌ಟೈಲ್,  ಚಾಮರಾಜನಗರದಲ್ಲಿ ಶ್ರೀದೇವಿ ಟೆಕ್ಸ್‌ಟೈಲ್, ವೇಲನ್‌ ಟೆಕ್ಸ್‌ಟೈಲ್ ಶುರುವಾದವು. ಮೈಸೂರಲ್ಲಿ ಕೆ.ಆರ್‌. ಮಿಲ್‌ ಅಂದರೆ ‘ಕೃಷ್ಣ ರಾಜೇಂದ್ರ ಮಿಲ್‌’ ಆರಂಭವಾಯಿತು.

ಹೀಗೆ ಅಭಿವೃದ್ಧಿಗೊಂಡಾಗ ಹುಣಸೂರಿನಲ್ಲಿ ‘ಜವಳಿ ಪಾರ್ಕ್’ ಮಾಡಲು ಯೋಜಿಸಲಾಯಿತು. ಇದಕ್ಕಾಗಿ ಕೈಗಾರಿಕೆಗಳ ಷೆಡ್‌ಗಳನ್ನೂ ನಿರ್ಮಿಸಲಾಯಿತು. ಆದರೆ, ಅರಸು ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದ ಮೇಲೆ ಇಡೀ ಯೋಜನೆ ಮರೆಗೆ ಸರಿಯಿತು.
ಆದರೆ, ಕಳೆದ ಐದಾರು ವರ್ಷಗಳ ಹಿಂದೆ ಮೈಸೂರು ಬಳಿ 1,500 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕಿಗೆ 250 ಎಕರೆ ಮೀಸಲಿಡಬೇಕೆಂದು ಯೋಜಿಸಲಾಯಿತು. ಈಗ ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಕಾಲು ಎಕರೆ, ಒಂದು ಎಕರೆ ಬೇಕಷ್ಟೇ. ವಿದ್ಯುತ್‌ ಮಗ್ಗಗಳಿಗೂ ಕಾಲು ಎಕರೆ ಹಾಗೂ ಒಂದು ಎಕರೆ ಸಾಕು. ಹೀಗೆ ಸಾಮೂಹಿಕ ಘಟಕಗಳು ಬಂದರೆ ಹೆಚ್ಚು ಲಾಭ.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮೈಸೂರಿನಲ್ಲಿ ಆರಂಭಿಸಲು ಜವಳಿ ಪಾರ್ಕ್‌ಗೆ ರೂ.32 ಕೋಟಿ ಮೀಸಲಿಟ್ಟಿದೆ. ಮುಖ್ಯವಾಗಿ, ಸ್ಥಳೀಯ ವಿದ್ಯುತ್‌ ಮಗ್ಗಗಳ ಮಾಲೀಕರು ಹಾಗೂ ಸಿದ್ಧ ಉಡುಪು ತಯಾರಿಕಾ ಘಟಕದ ಮಾಲೀಕರು ಮುಂದೆ ಬರಬಹುದು. ಸ್ಥಳೀಯ ಉದ್ಯಮಿಗಳ ಅಭಿವೃದ್ಧಿಗೆ ಜವಳಿ ಪಾರ್ಕ್ ಪೂರಕವಾಗಲಿದೆ.
– ಸುರೇಶ್‌ ಕುಮಾರ್‌ ಜೈನ್, ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.