ADVERTISEMENT

ವಾಹನಗಳಿಗೆ ಡಿಜಿಟಲ್‌ ಸಾಧನ

ಟೋಲ್‌ ಶುಲ್ಕ ಪಾವತಿ ಸುಲಭಗೊಳಿಸಲು ಕೇಂದ್ರ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ವಾಹನಗಳಿಗೆ ಡಿಜಿಟಲ್‌ ಸಾಧನ
ವಾಹನಗಳಿಗೆ ಡಿಜಿಟಲ್‌ ಸಾಧನ   

ನವದೆಹಲಿ : ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಗಾಗಿ ಸರತಿಯಲ್ಲಿ ಕಾಯದೇ, ತಡೆ ರಹಿತವಾಗಿ ಸಂಚರಿಸಲು ಕಾರು ಸೇರಿದಂತೆ ಹೊಸ ವಾಹನಗಳಲ್ಲಿ  ವಿಶಿಷ್ಟ ಸಾಧನ ಅಳವಡಿಕೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ನಗದು ರಹಿತ ಆರ್ಥಿಕತೆಯತ್ತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ವಾಹನಗಳಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಕಲೆಕ್ಷನ್‌ (ಇಟಿಸಿ) ಆಧಾರಿತ ಡಿಜಿಟಲ್‌ ಐಡೆಂಟಿಟಿ ಟ್ಯಾಗ್‌ ಅಳವಡಿಸುವಂತೆ ವಾಹನ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.

₹500, ₹1000 ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ಟೋಲ್‌ಗಳಲ್ಲಿ ಶುಲ್ಕ ಪಾವತಿ ಕಷ್ಟವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್‌ ಐಡೆಂಟಿಟಿ ಟ್ಯಾಗ್‌ ಅಳವಡಿಸುವಂತೆ ತಿಳಿಸಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಏನಿದು ಡಿಜಿಟಲ್‌ ಟ್ಯಾಗ್‌?: ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್‌ಐಡಿ) ತಂತ್ರಜ್ಞಾನಆಧರಿಸಿದ ವ್ಯವಸ್ಥೆ  ಇದಾಗಿದೆ. ಈ ತಂತ್ರಜ್ಞಾನ ಇರುವ ಚಿಪ್‌ ಒಂದನ್ನು ವಾಹನದಲ್ಲಿ ಅಳವಡಿಸಲಾಗುತ್ತದೆ. ಅದನ್ನು ಟೋಲ್‌ ಗೇಟ್‌ನಲ್ಲಿ ಗುರುತಿಸಲು ವಾಹನಕ್ಕೆ ಸ್ಟಿಕ್ಕರ್‌ (ಟ್ಯಾಗ್‌) ಅಂಟಿಸಲಾಗುತ್ತದೆ. 

ಚಿಪ್‌ ಪಡೆಯುವುದು ಹೇಗೆ?: ಚಿಪ್ ಅಳವಡಿಸಿದ ಸ್ಟಿಕ್ಕರ್‌ ಪಡೆಯಲು ವಾಹನಗಳ ಮಾಲೀಕರು ಇದಕ್ಕಾಗಿಯೇ ನಿಗದಿಪಡಿಸಿದ ಏಜೆನ್ಸಿ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು. ತಮ್ಮ ಹೆಸರು, ವಿಳಾಸ, ವಾಹನದ ಮಾದರಿ ಮತ್ತು ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಏಜೆನ್ಸಿಗಳಿಗೆ ನೀಡಬೇಕು.

ನಂತರದಲ್ಲಿ ಪ್ರತಿ ವಾಹನಕ್ಕೂ ನಿರ್ದಿಷ್ಟವಾದ ಸಂಕೇತ ಸಂಖ್ಯೆಗಳನ್ನು ಒಳಗೊಂಡ ಸ್ಟಿಕ್ಕರ್‌ವೊಂದನ್ನು ನೀಡಲಾಗುತ್ತದೆ. ಕಾರ್ಯವೈಖರಿ: ಈ ಸ್ಟಿಕ್ಕರ್‌ ಅನ್ನು ವಾಹನಕ್ಕೆ ಅಂಟಿಸುವಾಗ ಒಂದು ನಿರ್ದಿಷ್ಟ ಮೊತ್ತವನ್ನು ಮುಂಚಿತವಾಗಿಯೇ (ಪೂರ್ವ ಪಾವತಿ ರೀತಿ) ಸಂಗ್ರಹಿಸಲಾಗುತ್ತದೆ.

ಜತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಆರ್‌ಎಫ್‌ಐಡಿ ಸಂಕೇತ ಸಂಗ್ರಾಹಕ ಯಂತ್ರಗಳನ್ನೂ ಟೋಲ್‌ ಗೇಟ್‌ಗಳಲ್ಲಿ  ಅಳವಡಿಸಲಾಗುತ್ತದೆ. ಸ್ಟಿಕ್ಕರ್ ಇರುವ ವಾಹನಗಳು ಟೋಲ್‌ ಗೇಟ್‌ ಮೂಲಕ ಹಾದು ಹೋಗುವಾಗ ಅಲ್ಲಿರುವ ಸಂಕೇತ ಸಂಗ್ರಾಹಕ ಯಂತ್ರವು ವಾಹನದಲ್ಲಿನ ಆರ್‌ಎಫ್‌ಐಡಿಯ ನಿರ್ದಿಷ್ಟ ಸಂಖ್ಯೆಯನ್ನು ಗ್ರಹಿಸಿಕೊಳ್ಳುತ್ತದೆ.

ಇಂಥ ಸಂಖ್ಯೆಯ ವಾಹನ ಈ ಮಾರ್ಗದಲ್ಲಿ ಹಾದು ಹೋಗಿದೆ ಎಂಬ ಸಂದೇಶವನ್ನು ಅದರ ನಿಯಂತ್ರಣ ಕೇಂದ್ರದಲ್ಲಿರುವ ಸರ್ವರ್‌ಗೆ ತಕ್ಷಣವೇ ರವಾನಿಸುತ್ತದೆ.ಆಗ ಆ ವಾಹನದಿಂದ ಮೊದಲೇ ಸಂಗ್ರಹಿಸಲಾಗಿದ್ದ (ಪೂರ್ವ ಪಾವತಿ) ಮೊತ್ತದಿಂದ ನಿಗದಿತ ಹೆದ್ದಾರಿ ಟೋಲ್‌ ಶುಲ್ಕವು  ಹೆದ್ದಾರಿಯಲ್ಲಿನ ಟೋಲ್‌ ಗೇಟ್‌ ನಿರ್ವಾಹಕರ ಖಾತೆಗೆ ಜಮಾ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.