ಬೆಂಗಳೂರು(ಪಿಟಿಐ): ದೇಶದ ಮೂರನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪೆನಿ ವಿಪ್ರೊ, 2014-15ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ2,286 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಜನವರಿ-ಮಾರ್ಚ್ ಅವಧಿಯಲ್ಲಿ ಗಳಿಸಿದ್ದ ರೂ2,239 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಗಳಿಕೆಯಲ್ಲಿ ಶೇ 2.1ರಷ್ಟು ಅಲ್ಪ ಹೆಚ್ಚಳವಷ್ಟೇ ಸಾಧ್ಯವಾಗಿದೆ.
4ನೇ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟು ವರಮಾನ ಶೇ 3.9ರಷ್ಟು ಹೆಚ್ಚಳ ದೊಂದಿಗೆ ರೂ12,171 ಕೋಟಿಗೆ ಏರಿಕೆ ಕಂಡಿದೆ. 2013-14ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ11,703 ಕೋಟಿ ವರಮಾನವಿತ್ತು. ಇದೇ ವೇಳೆ, ಐ.ಟಿ ಸೇವೆಗಳನ್ನು ಆಧರಿಸಿದ ವಹಿವಾಟಿ ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ವೃದ್ಧಿ ಕಂಡುಬಂದಿದೆ.
2014-15ನೇ ಹಣಕಾಸು ವರ್ಷದ ಒಟ್ಟು 4 ತ್ರೈಮಾಸಿಕಗಳಲ್ಲಿ ವಿಪ್ರೊ ನಿವ್ವಳ ಲಾಭ ಶೇ 11.03ರಷ್ಟು ಹೆಚ್ಚಳದೊಂದಿಗೆ ರೂ8,706 ಕೋಟಿಗೇರಿದೆ. ಒಟ್ಟು ವರಮಾನವೂ ಶೇ 8.14ರ ವೃದ್ಧಿಯೊಂದಿಗೆ ರೂ47,318 ಕೋಟಿಗೆ ಮುಟ್ಟಿದೆ.
ರಿಷದ್ ಪ್ರೇಮ್‌ಜಿ ನಿರ್ದೇಶಕ: ಕಂಪೆನಿಯ ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ ಅವರ ಹಿರಿಯ ಪುತ್ರ ರಿಷದ್ ಪ್ರೇಮ್‌ಜಿ ಅವರು ಆಡಳಿತ ಮಂಡಳಿಗೆ ಪೂರ್ಣಾವಧಿ ನಿರ್ದೇಶಕರಾಗಿ ಮಂಗಳ ವಾರ ನೇಮಕಗೊಂಡಿದ್ದಾರೆ. ಮೇ 1ರಿಂದ ಅವರ ಅಧಿಕಾರ ಅವಧಿ ಆರಂಭ ಗೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.