ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ ಆರಂಭವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ‘ಜಿಡಿಪಿ’ ಕುಸಿತ ಕಂಡಿರುವುದು ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಮಂಗಳವಾರ ಮಧ್ಯಾಹ್ನದ ವಹಿವಾಟಿನಲ್ಲಿ ಸೂಚ್ಯಂಕ 700 ಅಂಶಗಳಷ್ಟು ಭಾರಿ ಕುಸಿತ ಕಂಡಿದ್ದು, 25,579 ಅಂಶಗಳಿಗೆ ಇಳಿದಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 218 ಅಂಶಗಳಷ್ಟು ಕುಸಿದು, 7,800 ಮಟ್ಟದಿಂದ ಕೆಳಗಿಳಿಯಿತು. ಚೀನಾದಲ್ಲಿ ತಯಾರಿಕಾ ವಲಯದ ಪ್ರಗತಿ ಮೂರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದು ಕೂಡ ಜಾಗತಿಕ ಷೇರುಪೇಟೆಯ ಮೇಲೆ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪ್ರಭಾವ ಬೀರಿದೆ. ಒತ್ತಡಕ್ಕೆ ಒಳಗಾದ ಹೂಡಿಕೆದಾರರು ಒಮ್ಮಲೆ ಷೇರು ಮಾರಾಟಕ್ಕೆ ಮುಗಿಬಿದ್ದ ಪರಿಣಾಮ ಬೆಳಗಿನ ವಹಿವಾಟಿನಲ್ಲೇ ಬಿಎಸ್‌ಇ ಶೇ 2.67ರಷ್ಟು ಇಳಿಕೆ ಕಂಡಿತು. ಬ್ಯಾಂಕ್, ಲೋಹ, ರಿಯಲ್ ಎಸ್ಟೇಟ್ ವಲಯದ ಷೇರು ಮೌಲ್ಯ ಗರಿಷ್ಠ ಮಟ್ಟದಲ್ಲಿ ಶೇ 4.15ರಷ್ಟು ಹಾನಿ ಅನುಭವಿಸಿದವು.
ಕೋಲ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಹಿಂಡಾಲ್ಕೊ, ಬಿಎಚ್‌ಇಎಲ್, ಟಾಟಾ ಸ್ಟೀಲ್ ಕಂಪೆನಿಗಳ ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.