ADVERTISEMENT

ಷೇರುಪೇಟೆಯಲ್ಲಿ ‘ಹಬ್ಬ’

ಸೂಚ್ಯಂಕ 727 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 11:02 IST
Last Updated 11 ಸೆಪ್ಟೆಂಬರ್ 2013, 11:02 IST

ಮುಂಬೈ (ಪಿಟಿಐ): ದೇಶದ ಷೇರು­ಪೇಟೆಯಲ್ಲಿ ಗೌರಿ–ಗಣೇಶ ಹಬ್ಬದ ಸಂಭ್ರಮ ಮಂಗಳವಾರವೂ ಮುಂದು­ವ­­ರಿಯಿತು. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಒಮ್ಮೆಲೇ 727 ಅಂಶಗಳಷ್ಟು (ಶೇ 3.77ರಷ್ಟು) ಭಾರಿ ಏರಿಕೆ ದಾಖಲಿಸಿ ಹೂಡಿಕೆದಾರರಲ್ಲಿ ಸಂತಸದ ಹೊಳೆಯನ್ನೇ ಹರಿಸಿತು.

ಇದು ಕಳೆದ ನಾಲ್ಕು ವರ್ಷಗಳಲ್ಲೇ ಸೂಚ್ಯಂಕದ ಒಂದು ದಿನದಲ್ಲಿನ ಅತ್ಯಧಿಕ ಪ್ರಮಾಣದ ಗಳಿಕೆಯಾಗಿದೆ. ಇದ­ರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ರೂ 2 ಲಕ್ಷ ಕೋಟಿಗಳಷ್ಟು ಹೆಚ್ಚಿದೆ.

ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಕಳೆದ ಒಂದೆರಡು ದಿನಗಳಿಂದ ಹೆಚ್ಚಿನ ಶಕ್ತಿ ಪಡೆದುಕೊಳ್ಳುತ್ತಿದೆ. ಮಂಗಳವಾರ ಡಾಲರ್‌ ವಿರುದ್ಧ ರೂಪಾಯಿಗೆ 140 ಪೈಸೆಗಳ ಮೌಲ್ಯ ಹೆಚ್ಚಿತು. ಇದು  ಷೇರುಪೇಟೆಗೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಿ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿತು. ಇನ್ನೊಂದೆಡೆ ಸಿರಿಯಾ ಮೇಲಿನ ಅಮೆರಿಕ ದಾಳಿ ಸಾಧ್ಯತೆ ಕ್ಷೀಣಿಸಿದ್ದೂ ಸಹ ಷೇರು­ಪೇಟೆಯಲ್ಲಿ ಸಮಾಧಾನದ ಭಾವ ಮೂಡಿಸಿತು.

ಇದೆಲ್ಲದರಿಂದಾಗಿ ವಾಹನ ಉದ್ಯಮ ವಲಯ, ಎಫ್‌ಎಂಸಿಜಿ, ಪ್ರಧಾನ ಸರಕುಗಳ ವಲಯದ ಷೇರುಗಳು ಖರೀದಿದಾರರಿಂದ ಭಾರಿ ಬೇಡಿಕೆ ಪಡೆದುಕೊಂಡವು. ಇದು ವಹಿವಾಟಿ­ನಲ್ಲಿ ದಿಢೀರ್‌ ತೇಜಿ ಉಂಟಾಗಲು ಕಾರಣವಾಯಿತು.

727.04 ಅಂಶಗಳಷ್ಟು ಏರಿಕೆ ಕಂಡ ಸೂಚ್ಯಂಕವು 19,997.10 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಜುಲೈ 25ರ ನಂತರ ಸೂಚ್ಯಂಕ ಮತ್ತೊಮ್ಮೆ 20 ಸಾವಿರ ಅಂಶಗಳ ಗಡಿಗೆ ಬಂದಿತು.

2009ರ ಮೇ 18ರಂದು ಸೂಚ್ಯಂಕ 2,110.79 ಅಂಶಗಳಷ್ಟು (ಶೇ 17.34ರಷ್ಟು) ಏರಿಕೆಯೇ ಈವರೆಗಿನ ಒಂದು ದಿನದ ಗರಿಷ್ಠ ಗಳಿಕೆಯಾಗಿದೆ.

ಇನ್ನೊಂದೆಡೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ(ಎನ್‌ಎಸ್‌ಇ)  ‘ನಿಫ್ಟಿ’ ಸಹ 216.35 ಅಂಶಗಳನ್ನು ಗಳಿಸಿಕೊಂಡು ಶೇ 3.81ರಷ್ಟು ಉತ್ತಮ ಸಾಧನೆ ತೋರಿತು. ಒಂದು ಹಂತದಲ್ಲಿ 5,904.85 ಅಂಶಗಳವರೆಗೂ ಏರಿಕೆ ಕಂಡಿದ್ದ ‘ನಿಫ್ಟಿ’, ನಂತರ 5,896.75 ಅಂಶಗಳಲ್ಲಿ ದಿನದಂತ್ಯ ಕಂಡಿತು.

ವಿದೇಶಿ ಹೂಡಿಕೆ
ಶುಕ್ರವಾರ ಷೇರುಗಳ ಮೇಲೆ ರೂ800.71 ಕೋಟಿ ಹಣ ತೊಡಗಿಸಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ), ವಹಿವಾಟಿನ ವಾರದ ಆರಂಭದ ದಿನವಾದ ಮಂಗಳವಾರ­ವಂತೂ ಭಾರಿ ಪ್ರಮಾಣದಲ್ಲಿ (ರೂ 2,561 ಕೋಟಿ ಮೌಲ್ಯದ) ಷೇರು­ಗಳನ್ನು ಖರೀದಿಸಿದರು. ಈ ಅಂಶವೂ ದಿನದ ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಿತು.

ಟಾಟಾ ಮೋಟಾರ್ಸ್ ಷೇರುಗಳು ಶೇ 9.88ರಷ್ಟು ಪ್ರಮಾಣದಲ್ಲಿ ಗರಿಷ್ಠ ಮೌಲ್ಯ ಹೆಚ್ಚಿಸಿಕೊಂಡರೆ, ಭಾರ್ತಿ ಏರ್‌ಟೆಲ್‌ ಷೇರು ಶೇ 8.15, ಹೀರೊ ಮೊಟೊ ಕಾರ್ಪ್ ಶೇ 7.22. ಲಾರ್ಸೆನ್‌ ಶೇ 7.11, ಸೇಸ ಗೋವಾಶೇ 6.3ರಷ್ಟು ಬೆಲೆ ಹೆಚ್ಚಿಸಿಕೊಂಡವು.

ಮಂಗಳವಾರದ ವಹಿವಾಟಿನಲ್ಲಿ 1502 ಷೇರುಗಳಿಗೆ ಲಾಭವಾಗಿದ್ದರೆ, 829 ಷೇರುಗಳ ಸ್ವಲ್ಪ ಮಟ್ಟಿಗೆ ಬೆಲೆ ಕಳೆದುಕೊಂಡವು. 143 ಷೇರುಗಳ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡವು.

ವಿದೇಶಿ ಪೇಟೆಯಲ್ಲೂ ಹರ್ಷ
ಇದೇ ವೇಳೆ, ಚೀನಾ, ಹಾಂಕಾಂಗ್‌, ದಕ್ಷಿಣ ಕೊರಿಯಾ, ಸಿಂಗಪುರ, ಜಪಾನ್‌ ಮತ್ತು ತೈವಾನ್‌ ಷೇರು­ಪೇಟೆಗಳೂ ಸಹ ಮಂಗಳವಾರ ಏರುಗತಿಯಲ್ಲೇ ಇದ್ದವು.

ಇನ್ನೊಂದೆಡೆ ಫ್ರಾನ್ಸ್‌, ಜರ್ಮನಿ ಮತ್ತು ಬ್ರಿಟನ್‌ ಸೇರಿದಂತೆ ಯೂರೋಪ್‌ ವಲಯದ ಷೇರುಪೇಟೆ­ಗಳಿಂದಲೂ ಉತ್ತಮ ಫಲಿತಾಂಶವೇ ಹೊರಬಿದ್ದಿದೆ. ಚೀನಾದ ಕೈಗಾರಿಕಾ ಉತ್ಪಾದನೆ ಮತ್ತು ಚಿಲ್ಲರೆ ಮಾರಾಟ ವಲಯದ ಆಗಸ್ಟ್‌ ಸಾಧನೆ ಉತ್ತಮವಾಗಿದೆ ಎಂಬ ಅಂಕಿ–ಅಂಶಗಳು ಪ್ರಕಟಗೊಂಡಿದ್ದು ವಿವಿಧ ದೇಶಗಳ ಷೇರುಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT