ಸತತ ದುಡಿಮೆಯೊಳೆಂದು ಹಿಡಿದ ಕೆಲಸವ ನೀನು/
ಎತ್ತರಕ್ಕೊಯ್ಯಬೇಕೆಂಬ ಆಸೆಯಿದೆ//
ಉತ್ತಮದಿ ನಡೆಸುತ್ತ ಅದರ ಅನುಸರಣೆಯಲಿ/
ಮುತುವರ್ಜಿ ಇರಬೇಕು –ನವ್ಯಜೀವಿ//
ನದಿಯ ಪಕ್ಕದಲ್ಲೇ ಒಂದು ಕಂಪೆನಿ. ತನ್ನ ಸರಕುಗಳನ್ನು ದಿನನಿತ್ಯ ನದಿಯ ಆ ಬದಿಗೆ ಕೊಂಡೊಯ್ದು ಅಲ್ಲಿ ಮಾರುವುದೇ ಅದರ ಕಸುಬು.
ಆ ಕಂಪೆನಿಗೆ ಕೆಲಸಕ್ಕೆ ಸೇರಿದ ಶಾಮನನ್ನು ಆತನ ಬಾಸ್ ದಿನದ ಕೆಲಸಕ್ಕೆ ಹಚ್ಚುತ್ತಾನೆ – ‘ನೋಡಿ ಶಾಮ್, ಈ ಸರಕನ್ನು ನಿಮ್ಮ ಬೆನ್ನಿನ ಮೇಲೆ ಹೊತ್ತು ನದಿಯ ಆ ಬದಿಗೆ ಈಜಿ ಅದನ್ನು ಅಲ್ಲಿಯ ನಮ್ಮ ಗೋದಾಮಿನಲ್ಲಿ ಇಟ್ಟು ಬರಬೇಕು’.
ಶಾಮನೊ ಒಳ್ಳೆಯ ಈಜುಗಾರ. ನದಿಯನ್ನು ಸಲೀಸಾಗಿ ಈಜಿ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಬರುತ್ತಾನೆ.
ಮರು ದಿನ ಕೆಲಸಕ್ಕೆ ಸೇರಿದವನೇ ಸೋಮ. ಅವನಿಗೂ ಅದೇ ಕೆಲಸವನ್ನು ಕೊಡಲಾಗುತ್ತದೆ. ಸೋಮ ಈಜುತ್ತಾ ಇರುವಾಗ ನದಿಯ ಮಧ್ಯದಲ್ಲಿ ಈಜಲು ಕಷ್ಟ ಪಡುತ್ತಿದ್ದ ಸಹೋದ್ಯೋಗಿಯೊಬ್ಬನನ್ನು ಕಾಣುತ್ತಾನೆ. ಅವನ ಕೈ ಹಿಡಿದೆಳೆಯುತ್ತ ಅವನೊಂದಿಗೆ ಆಚೆಯ ದಡ ಸೇರಿದ ಸೋಮನೂ ತನಗೊಪ್ಪಿಸಿದ ಕೆಲಸವನ್ನು ಮುಗಿಸಿ ಹಿಂತಿರುಗುತ್ತಾನೆ.
ಮಾರನೆಯ ದಿನ ಅಲ್ಲಿಗೆ ಕೆಲಸಕ್ಕೆ ಬಂದವನೇ ಭೀಮ. ಆತ ನದಿಗೆ ಇಳಿವ ಮುನ್ನ ಆ ನದಿಯನ್ನು ದಿನವೂ ದಾಟಿ ಬರುವ ಶಾಮ, ಸೋಮ ಹಾಗೂ ಇನ್ನಿತರ ಸಹೊದ್ಯೋಗಿಗಳಿಂದ ಅವರವರ ಅನುಭವಗಳನ್ನು ಕೇಳಿ ತಿಳಿದು ಕೊಳ್ಳುತ್ತಾನೆ. ನದಿಯನ್ನು ದಾಟುವಾಗ ಎದುರಾಗುವ ಎಲ್ಲ ಸವಾಲುಗಳನ್ನು ಪಟ್ಟಿ ಮಾಡಿ ಅವುಗಳನ್ನು ಹೇಗೆ ನಿಭಾಯಿಸಬೇಕೆಂಬ ವಿಚಾರಗಳನ್ನು ಸೂತ್ರಗಳ ರೂಪದಲ್ಲಿ ಪುಸ್ತಕವೊಂದರಲ್ಲಿ ಬರೆದಿಡುತ್ತಾನೆ. ಆ ಪುಸ್ತಕ ‘ನದಿಯನ್ನು ದಾಟುವುದು ಹೇಗೆ’ ಎಂಬುದಕ್ಕೆ ಇರುವ ಒಂದು ಒಳ್ಳೆಯ ಕೈಪಿಡಿಯಾಗುತ್ತದೆ. ಅದನ್ನು ಓದಿಕೊಂಡು ಅದರಲ್ಲಿರುವ ಕ್ರಮವನ್ನು ಪಾಲಿಸಿದವರಿಗೆಲ್ಲಾ ಈಗ ನದಿ ದಾಟುವುದು ಬಹಳ ಸುಲಭವಾಗಿದೆ. ಅಂದಿನಿಂದ ಆ ಕಂಪೆನಿಯ ಎಲ್ಲರಿಗೂ ಭೀಮನ ಕೈಪಿಡಿಯೇ ನದಿ ಹಾಯುವುದಕ್ಕಿರುವ ಮಾರ್ಗಸೂಚಿ.
ಹೀಗೆ ಕೆಲವು ದಿನಗಳು ಕಳೆಯುತ್ತದೆ. ಮಳೆಗಾಲ ಶುರುವಾಗಿದೆ. ನದಿಯ ಸೆಳೆತ ಜೋರಾಗಿದೆ. ಭೀಮನ ಕೈಪಿಡಿ ಈಗ ನದಿ ದಾಟುವುದಕ್ಕೆ ಸಹಾಯಕವಾಗಿಲ್ಲ. ಆ ದಿನಗಳಲ್ಲಿ ಕೆಲಸಕ್ಕೆ ಸೇರಿದವನೇ ಚೋಮ. ನೀರಿನಲ್ಲಿ ತೇಲುತ್ತಿದ್ದ ಒಂದು ದಿಮ್ಮಿಯನ್ನು ಗಮನಿಸಿ ಅದರ ಬಗ್ಗೆ ಅತೀ ಕುತೂಹಲ ಹೊಂದಿದ್ದ ಆತ, ಅಂತಹುದೇ ಮರದ ದಿಮ್ಮಿಗಳನ್ನು ಒಟ್ಟಾಗಿ ಸೇರಿಸಿ ನೀರಿನ ಮೇಲೆ ತೇಲುವ ಸಾಧನವೊಂದನ್ನು ಹುಟ್ಟುಹಾಕಿದ್ದಾನೆ. ನದಿಯನ್ನು ದಾಟುವುದಕ್ಕೆ ಒಂದು ಸುಲಭೋಪಾಯವನ್ನು ಕಂಡುಹಿಡಿದು ತನ್ನ ಕಂಪೆನಿಗೆ ಮಹತ್ತರ ಸೇವೆ ಸಲ್ಲಿಸಿದ್ದಾನೆ. ಮಳೆಗಾಲದಲ್ಲಿ ವ್ಯಾಪಾರವಿಲ್ಲದೆ ಸಂಕಟಕ್ಕೀಡಾಗಿದ್ದ ಕಂಪೆನಿಗೆ ಈಗ ಕುಂಭದ್ರೋಣ ಮಳೆಯಲ್ಲೂ ವ್ಯಾಪಾರ ಭರದಿಂದ ಸಾಗಿದೆ.
ಕಂಪೆನಿಗೆ ನದಿ ದಾಟಿಸುವ ಕೆಲಸವನ್ನೀಗ ಚೋಮನ ಸಾಧನಗಳೇ ನಡೆಸುತ್ತಿವೆ. ಆದರೆ ಆಗಾಗ ಚೋಮನ ಸಾಧನದ ಹಗ್ಗ ಕಡಿದು ಬಿದ್ದು. ದಿಮ್ಮಿಗಳು ಬೇರ್ಪಟ್ಟು ಸರಕು ನೀರಿನ ಪಾಲಾದದ್ದು ಉಂಟು. ಆಗೆಲ್ಲ ಮತ್ತೆ ಭೀಮನ ಕೈಪಿಡಿಯನ್ನು ಅನುಸರಿಸುವುದೇ ಎಲ್ಲರಿಗೂ ಉಳಿದಿರುವ ಉಪಾಯ. ಒಟ್ಟಿನಲ್ಲಿ ಇವೆರಡೂ ನದಿ ದಾಟುವುದಕ್ಕೆ ಕಂಪೆನಿ ಬಳಸುವ ಅಂಶಗಳೇ ಆಗಿ ಹೋಗಿವೆ.
ಅಂತಹ ಸಮಯದಲ್ಲಿ ಕಂಪೆನಿಗೆ ಕೆಲಸಕ್ಕೆ ಸೇರಿದವನೇ ರಾಮ. ತನ್ನ ದಿನನಿತ್ಯದ ಕೆಲಸದಲ್ಲೇ ನದಿ ದಾಟುವುದಕ್ಕೆ ಕಂಪೆನಿ ಇದುವರೆಗೆ ನಡೆಸಿರುವ ಎಲ್ಲ ಕಸರತ್ತುಗಳನ್ನು ಅರಿತುಕೊಂಡು, ಅವುಗಳಲ್ಲಿರುವ ನ್ಯೂನತೆಗಳನ್ನು ಮನಗಂಡು ಎಲ್ಲಕ್ಕೂ ಮಿಗಿಲಾದ ಒಂದು ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಿರ್ಧರಿಸುತ್ತಾನೆ. ಎಲ್ಲದರ ಸರಿ ಲೆಕ್ಕಾಚಾರ ಹಾಕಿ ಕಡೆಗೆ ಆ ನದಿಗೆ ಒಂದು ಸೇತುವೆ ಕಟ್ಟುತ್ತಾನೆ. ಈಗ ನದಿಯ ಆ ಬದಿಗೆ ಸರಕನ್ನು ಸಾಗಿಸುವುದು ಸುಲಭವಾಗಿದೆ. ಸುರಕ್ಷಿತವೂ ಆಗಿದೆ. ಎಲ್ಲ ಋತುಗಳಲ್ಲೂ ಇದರ ಬಳಕೆ ಯಾಗುತ್ತಿದೆ. ಕೆಳಗೆ ನದಿಯ ನೀರಿನ ಸೆಳೆತ ಅದೆಷ್ಟೇ ಇದ್ದರೂ ಸೇತುವೆಯ ಮೇಲೆ ಈಗ ಎಲ್ಲವೂ ಸರಾಗ. ಹಾಗಾಗಿ ಕಂಪೆನಿಯ ವ್ಯಾಪಾರ ವೃದ್ಧಿಗೆ ಅದು ಅತ್ಯಂತ ಲಾಭದಾಯಕವೂ ಆಗಿದೆ.
ಈಗ ಯೋಚಿಸಿ. ನಮ್ಮ ಈ ಕಾಲ್ಪನಿಕ ಕತೆಯಲ್ಲಿ ಬರುವ ಶಾಮ, ಸೋಮ, ಭೀಮ, ಚೋಮ ಹಾಗೂ ರಾಮ ಎಲ್ಲರೂ ಒಳ್ಳೆಯ ನೌಕರರೆ. ತಮಗೊಪ್ಪಿಸಿದ ಮೂಲ ಕೆಲಸವನ್ನು ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದವರೆ. ಆದರೆ ಅವರೆಲ್ಲರಲ್ಲೂ ಒಂದು ಸ್ಪಷ್ಟವಾದ ವ್ಯತ್ಯಾಸವಿದೆ.. ಒಬ್ಬರಿಂದೊಬ್ಬರಲ್ಲಿ ಒಂದು ಗಣನೀಯವಾದ ಅಂತರವಿದೆ.
ಮೊದಲನೆಯವನಾದ ಶಾಮ ಬಹಳ ನಿಷ್ಠಾವಂತ ನೌಕರ. ತನಗೊಪ್ಪಿಸಿದ ಕೆಲಸವನ್ನು ಚಾಚೂ ತಪ್ಪದೆ ಮಾಡಿದ್ದಾನೆ. ಇದಿಷ್ಟೇ ಇವನ ಹಿರಿಮೆಯಾದರೆ, ಸೋಮನದು ಒಂದು ಮಳಿಗೆ ಮೇಲಿನ ವಾಸ. ತನ್ನ ಕೆಲಸವನ್ನು ಮಾಡುವಾಗಲೇ ತನ್ನ ಸಹೋದ್ಯೋಗಿಗಳಿಗೂ ನೆರವಾಗುತ್ತ ಎಲ್ಲರೂ ಅವರವರ ಕೆಲಸವನ್ನು ಮಾಡಿ ಮುಗಿಸುವಂತೆ ನೋಡಿಕೊಂಡಿದ್ದಾನೆ. ಹಾಗಾಗಿ ಈತ ಶಾಮನಿಗಿಂತ ಮಿಗಿಲಾದವನು.
ಭೀಮನಿದ್ದಾನಲ್ಲ, ಅವನದು ವಿಶೇಷವಾದ ಕಾರ್ಯವೈಖರಿ. ಅವನದು ಕೊಟ್ಟ ಕೆಲಸವನ್ನು ಕಣ್ಣು ಮುಚ್ಚಿ ಮಾಡಿ ಸಂಜೆ ಮನೆಗೆ ಹಿಂತಿರುಗಿ ಬಿಡುವ ಜಾಯಮಾನವೇ ಅಲ್ಲ. ಕೆಲಸದ ಎಲ್ಲ ಸೂಕ್ಷ್ಮತೆಗಳನ್ನು ಅರಿತುಕೊಂಡು, ಆ ಕೆಲಸವನ್ನು ತಾನು ಮಾತ್ರವಲ್ಲದೆ ಪ್ರತಿಯೊಬ್ಬರೂ ಪ್ರತಿಯೊಂದು ಸನ್ನಿವೇಶದಲ್ಲೂ ಮಾಡಲು ಅನುವಾಗುವಂತೆ ಕೈಪಿಡಿಯೊಂದನ್ನು ಸಿದ್ಧಪಡಿಸುತ್ತಾನೆ. ಈ ಮಾರ್ಗಸೂಚಿಯನ್ನು ಅನುಸರಿಸಿ ಎಲ್ಲರೂ ಕೆಲಸ ಮಾಡಿದಾಗ ಸಮಷ್ಠಿಯಲ್ಲಿ ಇಡಿಯ ಕಂಪೆನಿಯ ಕೆಲಸ ಅಷ್ಟರ ಮಟ್ಟಿಗೆ ಸುಧಾರಿಸುವಷ್ಟು ಸಂದೇಹವೇ ಇಲ್ಲ. ತನ್ನ ಕೆಲಸವನ್ನು ಮಾಡುವುದರ ಜೊತೆಯಲ್ಲೇ ಅದರ ಗುಣಮಟ್ಟವನ್ನೂ ವೃದ್ಧಿಸುವತ್ತ ದೃಷ್ಟಿ ಹರಿಯುವ ವಿಶೇಷ ನೌಕರ ಈತ.
ನಾಲ್ಕನೆಯವನಾದ ಚೋಮ ಕೆಲಸವೊಂದನ್ನು ಕ್ರಮಬದ್ಧವಾಗಿ ಮಾಡುತ್ತಲೇ ವ್ಯತಿರಿಕ್ತವಾದ ಸನ್ನಿವೇಶಗಳಲ್ಲೂ ಆ ಕೆಲಸವನ್ನು ಹಾಗೆಯೇ ಮುಂದುವರೆಸಬೇಕೆಂದು ಹಂಬಲಿಸಿದವ. ಅದಕ್ಕಾಗಿ ಮತ್ತೊಂದು ಕೈಪಿಡಿ ಒದಗಿ ಬರುವುದಿಲ್ಲ. ಏನಿದ್ದರೂ ಒಂದು ಹೊಸ ವಿದ್ಯಮಾನವನ್ನೇ ಸೃಷ್ಟಿಸಬೇಕು. ಹಿಂದೆಂದೂ ಕಂಪೆನಿ ಅನುಸರಿಸದ ವಿಧಾನವೊಂದನ್ನು ಹುಟ್ಟುಹಾಕಬೇಕು. ಚೋಮ ಮಾಡಿದ್ದು ಅದನ್ನೇ. ಮರದ ದಿಮ್ಮಿಗಳ ಸಾಧನವೊಂದನ್ನು ಕಟ್ಟಿ ಕೆಲಸದಲ್ಲಿ ನಿಷ್ಟೆಯ ಜೊತೆಜೊತೆಗೇ ಬುದ್ಧಿವಂತಿಕೆಯನ್ನೂ ಮೆರೆದ ಆತ ವಿಶಿಷ್ಟ ನೌಕರ.
ಇನ್ನು ಕಡೆಯದಾಗಿ ರಾಮ ತ್ರೇತಾಯುಗದಲ್ಲೂ ಅಷ್ಟೆ ಹಾಗೂ ನಮ್ಮ ಹಿಂದಿನ ಕಾಲ್ಪನಿಕ ಕತೆಯಲ್ಲೂ ಅಷ್ಟೆ. ಒಂದು ಸೇತುವೆಯನ್ನು ಕಟ್ಟಿಬಿಟ್ಟ!
ಎಲ್ಲ ಕಾಲಕ್ಕೂ ಹಾಗೂ ಎಲ್ಲ ವೈಪರೀತ್ಯದ ಸನ್ನಿವೇಶಗಳಲ್ಲೂ ಕಂಪೆನಿಗೆ ಯಾವುದೇ ತೊಡಕು ಉಂಟಾಗದಂತೆ ನೋಡಿಕೊಂಡ. ಹಾಗೆ ಮಾಡುವಾಗಲೇ ಕಂಪೆನಿಗೊಂದು ಬೆಲೆ ಬಾಳುವ ಆಸ್ತಿಯನ್ನು ರೂಪಿಸಿಕೊಟ್ಟ. ಇವನದು ನಿಷ್ಟೆ, ಬುದ್ಧಿವಂತತನ. ಹಾಗೂ ಕಂಪೆನಿಯ ತೊಂದರೆಗಳಿಗೆ ದೀರ್ಘಕಾಲದ ಹಾಗೂ ಲಾಭದಾಯಕ ಪರಿಹಾರಗಳನ್ನು ಹುಡುಕಿಕೊಡಬಲ್ಲ ದೂರದೃಷ್ಟಿ.
ನಮ್ಮ ಈ ಕತೆಯ ಐವರೂ ಒಳ್ಳೆಯ ನೌಕರರೇ ಹೌದು. ಆದರೆ ಒಬ್ಬರಿಗಿಂತ ಇನ್ನೊಬ್ಬರು ತಾವು ಕೆಲಸದಲ್ಲಿ ನಡೆದುಕೊಂಡ ರೀತಿಯಿಂದ ವಿಭಿನ್ನರಾಗಿದ್ದಾರೆ. ಮುಂದೊಂದು ದಿನ ಕಂಪೆನಿಗೆ ನಾಯಕನಾಗುವ ತನ್ನ ಕನಸನ್ನು ರಾಮ ಸಾಕಾರವಾಗಿಸಿಕೊಂಡರೆ ಶಾಮ ಮಾತ್ರ ಜೀವನವಿಡೀ ಒಂದು ಒಳ್ಳೆಯ ನೌಕರನಾಗಿಯೇ ಉಳಿದುಬಿಟ್ಟ ಎಂಬುದೇ ವಾಸ್ತವ ಹಾಗೂ ವಿಪರ್ಯಾಸ.
ಹಾಗಾದರೆ ಇವರೆಲ್ಲರ ನಡುವೆ ಇದ್ದ ಆ ವ್ಯತ್ಯಾಸವೇನು? ಅದನ್ನೇ ನಾನು ‘ಮುತುವರ್ಜಿ’ ಎಂದು ಗುರುತಿಸುತ್ತೇನೆ. ಯಾವ ನೌಕರನಿಗೆ ತನಗೊಪ್ಪಿಸಿದ ಕೆಲಸವನ್ನು ಮಾತ್ರ ಸರಿಯಾಗಿ ಮಾಡುವ ಮನಸ್ಥಿತಿ ಇದೆಯೋ ಅವನಿಗಿಂತ ಕೆಲಸದ ಎಲ್ಲ ಆಯಾಮಗಳನ್ನೂ ಗುಣಪಡಿಸುವ ಒಲವಿರುವ ನೌಕರ ಬೆಳೆಯುತ್ತಾನೆ. ಯಾವ ನೌಕರ ತನ್ನ ಕಂಪೆನಿಗೆ ಒಳಿತಾಗುವಂತೆ ತನ್ನ ಕೆಲಸವನ್ನು ನಿಭಾಯಿಸುತ್ತಲೇ ಕಂಪೆನಿಯ ತೊಂದರೆಗಳಿಗೆಲ್ಲ ಪರಿಹಾರ ಹುಡುಕುವತ್ತಲೂ ಗಮನ ಹರಿಸುತ್ತಾನೋ, ಆತ ಎಲ್ಲರಿಗಿಂತಲೂ ಎತ್ತರಕ್ಕೆ ಬೆಳೆಯ ಬಲ್ಲ. ಇವೆಲ್ಲ ಸಾಕ್ಷಾತ್ಕಾರವಾಗುವುದು ನೌಕರನೊಬ್ಬ ತನ್ನ ಕೆಲಸದಲ್ಲಿ ತೋರುವ ‘ಮುತುವರ್ಜಿ’ಯಿಂದ ಎಂಬ ವಿಷಯವನ್ನು ಯಾರೂ ಮರೆಯಬಾರದು.
ಯಾರಲ್ಲಿ ಮುತುವರ್ಜಿ ತರುತ್ತದೋ ಅಂತಹ ನೌಕರನಲ್ಲಿ ಸಂಬಳಕ್ಕೆ ತಕ್ಕಂತೆ ದುಡಿಯಬೇಕೆಂಬ ನಿಲುವನ್ನೂ ಮೀರಿ ಸ್ವಯಂ ಪ್ರೇರಣೆಯಿಂದ ತಾನೇನಾದರೂ ಸಾಧಿಸ ಬೇಕೆಂಬ ಮನದಾಳದ ಕಿಚ್ಚು ಅಧಿಕವಾಗಿರುತ್ತದೆ.
ನಮ್ಮೆಲ್ಲರ ವೈಯಕ್ತಿಕ ಸಂಬಂಧಗಳೆಲ್ಲಾ ಅಷ್ಟೆ. ಪರಸ್ಪರ ಪ್ರೀತಿ, ಪ್ರೇಮ, ಗೌರವ ಹಾಗೂ ಹೊಂದಾಣಿಕೆ; ಈ ಎಲ್ಲದರ ಜೊತೆ ಎಂದೂ ಬತ್ತಿಹೋಗದ ಅಕ್ಕರಾಸ್ಥೆ ಮುಖ್ಯ, ಮುತುವರ್ಜಿ ಅಗತ್ಯ. ಅದೊಂದಿದ್ದರೆ ನಮ್ಮ ಎಲ್ಲ ಗುಣಗಳೂ ದಿನನಿತ್ಯ ಹೊಸ ಹೊಸ ಕಲ್ಪನೆಗಳಲ್ಲಿ ಪ್ರತ್ಯಕ್ಷವಾಗುತ್ತ ಬದುಕನ್ನು ರಂಗಾಗಿಸಬಲ್ಲದು.
ಯಾವುದೇ ಕಾರ್ಯಕ್ಷೇತ್ರವಿರಲಿ, ಅಲ್ಲಿ ಸಾಮಾನ್ಯ ನೌಕರನಾದ ಶಾಮ, ಸೋಮರಾಗಬೇಕಾದರೆ, ಸೋಮ, ಭೀಮನಾಗಿ, ಭೀಮ ಚೋಮನಾಗಿ ಕಡೆಯಲ್ಲಿ ಚೋಮ ರಾಮನಾಗಬೇಕಾದರೆ ಕೆಲಸದ ಪ್ರತಿ ಹಂತದಲ್ಲೂ ಅವರು ತೋರಲೇಬೇಕಾದ ಒಂದು ಸದ್ಗುಣವೇ – ‘ಮುತುವರ್ಜಿ’. ಸಾಧಾರಣವಾದುದೊಂದನ್ನು ‘ಅಸಾಧಾರಣ’ ವಾಗಿಸುವುದಕ್ಕೆ ಇದು ಅತ್ಯಂತ ಸುಲಭ ಸಾಧ್ಯ!
**
ಲೇಖಕರನ್ನು satyesh.bellur@gmail.com ಇ- ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.