ಮೊನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿದ್ಯಾರ್ಥಿಯೊಬ್ಬ, `ನಾನು ಪರೀಕ್ಷೆ ಶುಲ್ಕವನ್ನು ನೆಫ್ಟ್‌ನಲ್ಲಿ ಪಾವತಿ ಮಾಡಬಹುದೆಂದು ಪತ್ರಿಕಾ ಪ್ರಕಟಣೆ ನೋಡಿದೆ. ಅಂದರೆ, ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳುವುದು ಬೇಡವಾ ಸರ್? ಮತ್ತೆ ನೆಫ್ಟ್ ಅಂದರೇನು ಸರ್? ಎಂದು ಕೇಳಿದ.
ಇವನಾದರೋ ಇನ್ನೂ ಪ್ರೌಢಶಾಲೆ ವಿದ್ಯಾರ್ಥಿ. ಬ್ಯಾಂಕ್ ಡ್ರಾಫ್ಟ್ ಮತ್ತು ನೆಫ್ಟ್ ವ್ಯತ್ಯಾಸ ತಿಳಿದಿಲ್ಲ. ಆದರೆ ಇನ್ನೂ ಎಷ್ಟೋ ಜನರಿಗೆ ಕೂಡ ಈ ಹೊಸ ಬಗೆಯ ಹಣ ಪಾವತಿಗಳ ಸೌಲಭ್ಯಗಳು ಮತ್ತು ಅವುಗಳ ಅನುಕೂಲಗಳು ಏನೆಂದೇ ತಿಳಿದಿಲ್ಲ!
ಬೇರೆ ವ್ಯಕ್ತಿಗೆ ಹಣ ಸಂದಾಯ ಅಥವಾ ಪಾವತಿಯನ್ನು ನಗದು, ಚೆಕ್ ಅಥವಾ ಬ್ಯಾಂಕಿನ ಡ್ರಾಫ್ಟ್ ಮುಖಾಂತರ ಮಾಡುವುದು ಈವರೆಗೂ ನಡೆದುಕೊಂಡು ಬಂದಿರುವ ಪದ್ಧತಿ. ಗ್ರಾಹಕ ತಾನು ಸಂದಾಯ/ಪಾವತಿ ಮಾಡಬೇಕಿರುವ ಮೊತ್ತಕ್ಕೆ ತಕ್ಕಷ್ಟು ಹಣವನ್ನು ನಗದು ಅಥವಾ ಚೆಕ್ ಮೂಲಕ ಬ್ಯಾಂಕಿಗೆ ಪಾವತಿಸಿ ಹಣ ಸ್ವೀಕರಿಸಬೇಕಾದ ವ್ಯಕ್ತಿಯ ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ ಪಡೆದು, ಆ ಡ್ರಾಪ್ಟನ್ನು ಅಂಚೆಯಲ್ಲಿ ರವಾನಿಸುವುದೇ ಡಿಮ್ಯಾಂಡ್ ಡ್ರಾಫ್ಟ್ ಮಾರ್ಗದ ಹಣ ಪಾವತಿಯಾಗಿದೆ. ಡ್ರಾಫ್ಟ್ ಸ್ವೀಕರಿಸಿದ ವ್ಯಕ್ತಿ ತನ್ನ ಬ್ಯಾಂಕ್ ಖಾತೆಗೆ ಡ್ರಾಫ್ಟ್ ಅನ್ನು ಜಮಾ ಮಾಡಿ ನಗದು ಹಣ ಪಡೆಯಬಹುದಾಗಿದೆ. ಹೀಗೆ ಪಾವತಿದಾರನಿಂದ ಸ್ವೀಕರಿಸಬೇಕಾದ ವ್ಯಕ್ತಿಯ ಕೈಗೆ ಹಣ ವರ್ಗಾವಣೆ ಆಗಲು ಕನಿಷ್ಠ 5-6 ದಿನವಾದರೂ ಆಗುತ್ತದೆ.
ಅಂಚೆ ಬಟವಾಡೆಯಲ್ಲಿ ವಿಳಂಬ ಅಥವಾ ಡ್ರಾಫ್ಟ್ ಕಳಿಸುವವನ ಅಥವಾ ಪಡೆಯುವವನ ಬೇಜವಾಬ್ದಾರಿತನದಿಂದ ಡ್ರಾಫ್ಟ್ ಕಳೆದುಹೋದರೆ ಹಣ ಸಂದಾಯ ಮತ್ತಷ್ಟು ವಿಳಂಬವಾಗುತ್ತದೆ. ಅಷ್ಟೇ ಅಲ್ಲದೆ, ಕಳೆದುಹೋದ ಡ್ರಾಫ್ಟ್ ಅಪರಿಚಿತರ ಕೈಗೆ ಸಿಕ್ಕು ನಂತರದಲ್ಲಿ ನಡೆದ ವಂಚನೆ ಪ್ರಕರಣಗಳು ಬ್ಯಾಂಕಿನ ಇತಿಹಾಸದಲ್ಲಿ ಸಾಕಷ್ಟಿವೆ.
ಹಾಗಾದರೆ `ನೆಫ್ಟ್'ನಲ್ಲಿ ಹಣ ಸಂದಾಯ ಸುಲಭ ಮತ್ತು ಸುರಕ್ಷಿತ ಎನ್ನುತ್ತೀರಾ?
ಖಂಡಿತಾ ಹೌದು. `ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್' ಎಂಬ ವಿದ್ಯುನ್ಮಾನ ಮಾರ್ಗದ ಹಣ ವರ್ಗಾವಣೆಯ ಪ್ರಕ್ರಿಯೆಯ ಸಂಕ್ಷಿಪ್ತ ಹೆಸರೇ `ನೆಫ್ಟ್'.
ಬ್ಯಾಂಕ್ ಡ್ರಾಫ್ಟ್ ಮತ್ತು ಚೆಕ್ ಹಣ ವರ್ಗಾವಣೆ ಮಾದರಿಯಲ್ಲಿರುವ ತೊಂದರೆಗಳನ್ನು ತೊಡೆದು ಹಾಕುವ ಸದುದ್ದೆೀಶದಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಎಲ್ಲ ಬ್ಯಾಂಕ್‌ಗಳು ಒಳಗೊಳ್ಳುವಂತೆ ರಾಷ್ಟ್ರೀಯ ಮಟ್ಟದಲ್ಲಿ `ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್' ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಎಲ್ಲ ಗ್ರಾಹಕರೂ ಈ ವಿದ್ಯುನ್ಮಾನ ಮಾಧ್ಯಮದಲ್ಲಿ ತ್ವರಿತಗತಿಯಲ್ಲಿ ಹಣ ವರ್ಗಾವಣೆ ಆಗುವ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬಹುದು. ಈ ಮಾದರಿಯಲ್ಲಿ ಪಾವತಿ ಮಾಡುವ ಮೊತ್ತಕ್ಕೆ ಕನಿಷ್ಠ ಅಥವಾ ಗರಿಷ್ಠ ಮಿತಿ ಇಲ್ಲ. ಯಾವುದೇ ಕಮರ್ಷಿಯಲ್ ಬ್ಯಾಂಕಿನಿಂದಲಾದರೂ `ನೆಫ್ಟ್' ವ್ಯವಸ್ಥೆಯಡಿ ಹಣ ರವಾನಿಸಬಹುದು.
ಆದರೆ, ರೂ. 50,000ಕ್ಕೂ ಅಧಿಕ ಮೊತ್ತ ರವಾನಿಸಬೇಕಾದಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗಷ್ಟೇ ವರ್ಗಾವಣೆ ಸಾಧ್ಯ. ಆಗ ಹಣ ವರ್ಗಾಯಿಸಬೇಕಾದ ವ್ಯಕ್ತಿ ಮತ್ತು ಸ್ವೀಕರಿಸಬೇಕಾದ ವ್ಯಕ್ತಿ ಇಬ್ಬರೂ ಬ್ಯಾಂಕ್ ಖಾತೆಹೊಂದಿರಬೇಕಾದ್ದು ಅತ್ಯಗತ್ಯ. ಈ ನಿಬಂಧನೆಯಿಂದ ಹಣ ರವಾನಿಸುವ ವ್ಯಕ್ತಿಗೂ ಅನುಕೂಲವಿದೆ. ಹೇಗೆಂದರೆ ಒಂದೊಮ್ಮೆ ನಿರ್ದಿಷ್ಟ ವ್ಯಕ್ತಿಗೆ ಹಣ ವರ್ಗಾವಣೆ ಆಗದೇ ಇದ್ದಲ್ಲಿ ಆ ಮೊತ್ತವು ಮರಳಿ ಪಾವತಿಸಿದಾತನ ಖಾತೆಗೇ ಜಮಾ ಅಗುತ್ತದೆ.
ಈ ಸೌಲಭ್ಯವು ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಸಾಯಂಕಾಲ 7 ಗಂಟೆವರೆಗೆ, ಶನಿವಾರ ಮಧ್ಯಾಹ್ನ 1.30ರವರೆಗೆ ಎಲ್ಲ ಷೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿಯೂ ಲಭ್ಯವಿರುತ್ತದೆ. ಕೆಲವು ಬ್ಯಾಂಕ್‌ಗಳಲ್ಲಿ ವಾರದ ರಜೆ ಮತ್ತು ಕೆಲಸದ ಅವಧಿ ಬೇರೆಯದೇ ಆಗಿದ್ದರೆ ಅದಕ್ಕೆ ತಕ್ಕಂತೆಯೇ ಈ ಸೌಲಭ್ಯ ದೊರೆಯುವ ಸಮಯವೂ ಬದಲಾಗುತ್ತದೆ.
ದೆಹಲಿಯಲ್ಲಿ ಓದುತ್ತಿರುವ ನಿಮ್ಮ ಮಗಳಿಗೆ ಹಣ ಕಳುಹಿಸಬೇಕಿದೆ ಎನ್ನಿ. ನಿಮ್ಮ ಖಾತೆಯಿರುವ ಬ್ಯಾಂಕಿಗೆ ಹೋಗಿ `ನೆಫ್ಟ್'ಗೆ ಸಂಬಂಧಿಸಿದ ಅರ್ಜಿಯಲ್ಲಿ ಕೆಲವು ವಿವರಗಳನ್ನು ನೀಡಬೇಕು.
*ಯಾವ ಖಾತೆಯಿಂದ ಯಾವ ಖಾತೆಗೆ-ವ್ಯಕ್ತಿಗೆ ಹಣ ವರ್ಗಾಯಿಸಬೇಕು
*ಯಾವ ಬ್ಯಾಂಕಿನ ಯಾವ ಊರಿನ ಶಾಖೆಗೆ
*ಆ ಬ್ಯಾಂಕ್ ಶಾಖೆಯ `ಐಎಫ್ ಎಸ್' ಕೋಡ್
*ದೆಹಲಿಯಲ್ಲಿರುವ ನಿಮ್ಮ ಮಗಳ ಬ್ಯಾಂಕ್ ಖಾತೆ ಸಂಖ್ಯೆ
*ಅದು ಉಳಿತಾಯ ಅಥವಾ ಚಾಲ್ತಿ ಖಾತೆಯಾ?
*ವರ್ಗಾಯಿಸಬೇಕಿರುವ ಮೊತ್ತ
ಇದಿಷ್ಟೂ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು. ನಂತರ ಕಳುಹಿಸಬೇಕಿರುವ ಮೊತ್ತಕ್ಕೆ ಚೆಕ್ ಬರೆಯಬೇಕು. ಒಂದು ಲಕ್ಷ ರೂಪಾಯಿವರೆಗಿನ ಮೊತ್ತವನ್ನು `ನೆಫ್ಟ್' ಮಾರ್ಗದಲ್ಲಿ ರವಾನಿಸಲು ಯಾವುದೇ ಶುಲ್ಕ ಇರುವುದಿಲ್ಲ.
ನೀವು ಪಾವತಿಸಬೇಕಾದ ಮೊತ್ತವು 2*ಗಂಟೆಗಳೊಳಗೆ ನಿಮ್ಮ ಖಾತೆಯಿಂದ ಮಗಳ ಖಾತೆಗೆ ವರ್ಗಾವಣೆ ಆಗುತ್ತದೆ. `ನೆಫ್ಟ್' ಪ್ರಕ್ರಿಯೆ ಸಂದರ್ಭ ಬ್ಯಾಂಕಿಗೆ ನಿಮ್ಮ ಮೊಬೈಲ್ ಫೋನ್ ಸಂಖ್ಯೆ ನೀಡಿದ್ದರೆ ನಿಮ್ಮ ಮಗಳ ಖಾತೆಗೆ ಹಣ ರವಾನೆಯಾದ ತಕ್ಷಣ ಮೊಬೈಲ್ ಸಂದೇಶ ನಿಮಗೆ ಬರುತ್ತದೆ.
ಅನೇಕ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ 2*ಗಂಟೆಗಳ ಅವಧಿಗೂ ಮುನ್ನವೇ ದೇಶದ ಒಂದು ೂಲೆಯಿಂದ ಇನ್ನೊಂದು ಮೂಲೆಯಲ್ಲಿನ ಬ್ಯಾಂಕ್ ಶಾಖೆಗೆ ಯಶಸ್ವಿಯಾಗಿ ಹಣ ವರ್ಗಾವಣೆ ಮಾಡುತ್ತಿವೆ.
`ಐಎಫ್‌ಎಸ್' ಕೋಡ್ ಎಂದರೇನು?
`ಇಂಡಿಯನ್ ಫೈನಾನ್ಷಿಯಲ್ ಸಿಸ್ಟಂ'ನ ಸಂಕೇತಾಕ್ಷರವನ್ನೇ ಸಂಕ್ಷಿಪ್ತವಾಗಿ `ಐಎಫ್‌ಎಸ್' ಕೋಡ್ ಎನ್ನಲಾಗುತ್ತದೆ.
ಇದು ಬ್ಯಾಂಕ್ ಶಾಖೆಗೆ ನೀಡಲಾಗಿರುವ 11 ಅಂಕಿಗಳ ಸಂಕೇತವಾಗಿದೆ. ಮೊದಲ ನಾಲ್ಕು ಅಂಕಿಗಳು ಬ್ಯಾಂಕಿನ ಹೆಸರು ಸೂಚಿಸುತ್ತವೆ. ಐದನೇ ಅಂಕಿಯು ಯಾವಾಗಲೂ ಸೊನ್ನೆಯಾಗಿರುತ್ತದೆ. ನಂತರದ ಆರು ಅಂಕಿಗಳು ಬ್ಯಾಂಕಿನ ಶಾಖೆಯನ್ನು ಗುರುತಿಸುವುದಕ್ಕಾಗಿ ಇರುತ್ತವೆ.
ಈ ಗುಪ್ತ ಸಂಕೇತಾಕ್ಷರವನ್ನು(ಕೋಡ್) `ನೆಫ್ಟ್'ನಲ್ಲಿ ಭಾಗಿಯಾಗಿರುವ ಎಲ್ಲ ಬ್ಯಾಂಕ್‌ಗಳ ಶಾಖೆಗಳೂ ಹೊಂದಿರುತ್ತವೆ. ನಿಮ್ಮ ಬ್ಯಾಂಕ್ ಪಾಸ್ ಬುಕ್ ವೀಕ್ಷಿಸಿದರೆ ಆ ಶಾಖೆಯು `ನೆಫ್ಟ್' ವ್ಯವಸ್ಥೆಯ ಜಾಲದಲ್ಲಿ ಇದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಪಾಸ್‌ಬುಕ್‌ನಲ್ಲಿ ಶಾಖೆಯ `ಐಎಫ್‌ಎಸ್' ಕೋಡ್ ನಮೂದಾಗಿರುತ್ತದೆ. ಹಣ ಯಾವ ಬ್ಯಾಂಕಿನ ಶಾಖೆಗೆ ವರ್ಗಾವಣೆ ಆಗಬೇಕಿದೆಯೋ ಆ ಶಾಖೆಯ `ಐಎಫ್ ಎಸ್' ಕೋಡ್ ಈ `ನೆಫ್ಟ್' ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಯು ತನ್ನ ಬ್ಯಾಂಕಿನ ಪ್ರಧಾನ ಕೇಂದ್ರದಲ್ಲಿರುವ ಕಂಪ್ಯೂಟರ್ ಸರ್ವರ್ ಜೊತೆಗೂ, ಆ ಸರ್ವರ್ ಭಾರತೀಯ ರಿಸರ್ವ್ ಬ್ಯಾಂಕ್‌ನ `ಸರ್ವರ್' ಜೊತೆಗೂ ಸಂಪರ್ಕ ಹೊಂದಿರಬೇಕು. ಅಂತೆಯೇ, ನಿಮ್ಮ ಮಗಳ ಖಾತೆ ಇರುವ ಬ್ಯಾಂಕ್ ಶಾಖೆಯೂ ಇದೇ ರೀತಿಯಲ್ಲಿ ಈ ಸರ್ವರ್ ಜೊತೆ ಸಂಪರ್ಕ ಹೊಂದಿರುವುದು ಅವಶ್ಯ.
ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಬೇಡಿಕೆಯನ್ನು ನೀವು ನೀಡಿದ ವಿವರಗಳೊಂದಿಗೆ ಸ್ವೀಕರಿಸಿದ ನಂತರ ನಿಮ್ಮ ಬ್ಯಾಂಕ್ ಶಾಖೆಯು ರಿಸರ್ವ್ ಬ್ಯಾಂಕ್ ಸರ್ವರ್‌ಗೆ ಈ ಸಂದೇಶವನ್ನು ತಲುಪಿಸುತ್ತದೆ. ಇದೇ ರೀತಿಯಾಗಿ ಹಲವಾರು ಬ್ಯಾಂಕ್ ಶಾಖೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಸಂದೇಶಗಳು ರಿಸರ್ವ್ ಬ್ಯಾಂಕ್‌ನ ಮುಖ್ಯ ಕಂಪ್ಯೂಟರ್ ಸರ್ವರ್ ಅನ್ನು ಗಂಟೆಗೊಮ್ಮೆ ತಲುಪಿರುತ್ತವೆ. ಈ ಎಲ್ಲ ಸಂದೇಶಗಳೂ ಪ್ರತಿ ಗಂಟೆಗೆ ಒಮ್ಮೆ ಒಂದು ಬ್ಯಾಚ್‌ನಲ್ಲಿ(ಗುಂಪು) ಆಯಾ ಬ್ಯಾಂಕ್‌ಗಳ ಪ್ರಕಾರ ವಿಂಗಡಣೆಯಾಗಿ ಆ ಗುಂಪಿನಲ್ಲಿರುವ ಎಲ್ಲ ಬ್ಯಾಂಕಿನ ಸರ್ವರ್ ಗಳನ್ನೂ ತಲುಪುತ್ತವೆ.
ಬ್ಯಾಂಕ್‌ಗಳು ಕೂಡ ಗ್ರಾಹಕರ ನೆಫ್ಟ್ ಬೇಡಿಕೆಗಳನ್ನು ಪ್ರತಿ ಗಂಟೆಗೊಮ್ಮೆ ಪರಿಷ್ಕರಿಸುತ್ತವೆ. ಬ್ಯಾಂಕಿನ ಕಂಪ್ಯೂಟರ್ ಸರ್ವರ್ ಹೀಗೆ ಸ್ವೀಕರಿಸಿದ ಸಂದೇಶದಲ್ಲಿನ `ಐಎಫ್‌ಎಸ್' ಕೋಡ್ ಮತ್ತು ಖಾತೆಯ ಸಂಖ್ಯೆ ಮತ್ತಿತರ ವಿವರಗಳು ಹೊಂದಾಣಿಕೆಯಾಗುತ್ತದೆಯೇ ಎಂದು ತಾಳೆ ಹಾಕಿ ಪರಿಶೀಲಿಸುತ್ತದೆ. ಅದರಲ್ಲಿರುವ ಎಲ್ಲ ಮಾಹಿತಿಯೂ ಸರಿ ಇದೆ ಎನಿಸಿದ ತಕ್ಷಣವೇ ನಿಗದಿತ ಮೊತ್ತವನ್ನು ಹಣ ಸ್ವೀಕರಿಸಬೇಕಾದವರ ಬ್ಯಾಂಕ್ ಶಾಖೆಯ ಖಾತೆಗೆ ಜಮಾ ಮಾಡುತ್ತದೆ. ಈ ಎಲ್ಲ ಪ್ರಕ್ರಿಯೆಗಳೂ ಯಾರ ಹಸ್ತಕ್ಷೇಪವೂ ಇಲ್ಲದೆ ಬಲಿಷ್ಠ ಸಂಪರ್ಕ ಜಾಲ ಮತ್ತು ಕಂಪ್ಯೂಟರ್ ಹಾಗೂ ಸುಧಾರಿತ ತಂತ್ರಾಂಶಗಳ ನೆರವಿನಿಂದ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
`ನೆಫ್ಟ್' ಜಾಲದಲ್ಲಿರುವ ಎಲ್ಲ ಬ್ಯಾಂಕ್‌ಗಳೂ ಪ್ರತಿ ಗಂಟೆಯ ವ್ಯವಹಾರದಿಂದ ತಾವು ರಿಸರ್ವ್ ಬ್ಯಾಂಕ್‌ಗೆ ಅಥವಾ ರಿಸರ್ವ್ ಬ್ಯಾಂಕ್‌ನಿಂದ ತಮ್ಮ ಶಾಖೆಗೆ ಹಣವನ್ನು ಸಂದಾಯ ಮಾಡಬೇಕೋ/ಪಡೆಯಬೇಕೋ ಎನ್ನುವುದನ್ನು ನಿರ್ಧರಿಸಿ, ಅದಕ್ಕೆ ತಕ್ಕಂತೆ ಹಣದ ವ್ಯವಸ್ಥೆ ಮಾಡುತ್ತವೆ. ಇದರಿಂದ ಸಂಬಂಧಪಟ್ಟವರಿಗೆ ಯಾರಿಗೂ ಹಣ ವರ್ಗಾವಣೆ ಸಮಸ್ಯೆ ಉಂಟಾಗದು.
`ಆರ್‌ಟಿಜಿಎಸ್'...ಹಾಗೆಂದರೇನು?
ಇದೂ ಸಹ `ನೆಫ್ಟ್'ನಂತೆಯೇ ಎಲೆಕ್ಟ್ರಾನಿಕ್(ವಿದ್ಯುನ್ಮಾನ) ಮಾಧ್ಯಮದಲ್ಲಿ ಹಣ ರವಾನೆಯಾಗುವಂತಹ ಇನ್ನೊಂದು ವ್ಯವಸ್ಥೆಯಾಗಿದೆ. ಇದನ್ನು `ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್' ಎನ್ನಲಾಗುತ್ತದೆ.
ಇದರಲ್ಲಿ ಬ್ಯಾಂಕಿನ ವ್ಯವಹಾರದ ಸಮಯದಲ್ಲೇ ಹಣ ರವಾನೆಯಾಗುತ್ತದೆ. ಹೆಚ್ಚೆಂದರೆ, ಗ್ರಾಹಕ ಬ್ಯಾಂಕಿಗೆ ಬೇಡಿಕೆ ಸಲ್ಲಿಸಿದ ಎರಡು ಗಂಟೆಯೊಳಗೆಲ್ಲ ಹಣ ರವಾನೆಯಾಗುತ್ತದೆ. ಹಣ ಪಡೆಯುವ ವ್ಯಕ್ತಿಗೂ ತಕ್ಷಣವೇ ನಗದು ದೊರಕುತ್ತದೆ.
ಈ ಸೌಲಭ್ಯದಲ್ಲಿ ಕನಿಷ್ಠ 2 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ರವಾನಿಸಬಹುದಾಗಿದೆ. ಈ ಮಾದರಿ ಮುಖ್ಯವಾಗಿ ವರ್ತಕರು, ಉದ್ಯಮಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ನೀವು ಸರಿಯಾದ `ಐಎಫ್‌ಎಸ್' ಕೋಡ್ ಮತ್ತು ಖಾತೆದಾರರ ಹೆಸರು, ಖಾತೆ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿದ್ದರೆ ನೀವು ಸೂಚಿಸಿದ ಗ್ರಾಹಕರ ಖಾತೆಗೆ ಹಣ ತಕ್ಷಣವೇ ಪಾವತಿಯಾಗುತ್ತದೆ. ಒಂದೊಮ್ಮೆ ಇನ್ನೊಂದು ತುದಿಯಲ್ಲಿರುವ ವ್ಯಕ್ತಿಗೆ ಹಣ ಪಾವತಿ ಆಗದೇ ಹೋದರೂ ಭಯಪಡಬೇಕಿಲ್ಲ. ಆ ಹಣ ನಿಮ್ಮ ಖಾತೆಗೂ ವಾಪಸ್ ಜಮಾ ಆಗಿರುತ್ತದೆ. ಇದುವೇ `ನೆಫ್ಟ್' ಮತ್ತು `ಆರ್‌ಟಿಜಿಎಸ್' ವೈಶಿಷ್ಟ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.