ನವದೆಹಲಿ: ಮೇ ಅಂತ್ಯಕ್ಕೆ ಕೊನೆಗೊಂಡ ಅವಧಿಯಲ್ಲಿ ದೇಶದ 408 ಮೂಲಸೌಕರ್ಯ ಯೋಜನೆಗಳ ಯೋಜನಾ ವೆಚ್ಚದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಇವುಗಳ ಯೋಜನಾ ವೆಚ್ಚದಲ್ಲಿ ₹ 4.80 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ಹೇಳುತ್ತದೆ.
ದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ 1,691 ಯೋಜನೆಗಳ ಪೈಕಿ 408 ಯೋಜನೆಗಳ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದರೆ, 814 ಯೋಜನೆಗಳ ಅನುಷ್ಠಾನವೇ ವಿಳಂಬವಾಗಿದೆ ಎಂದು ಇದೇ ವರದಿ ಹೇಳುತ್ತದೆ.
ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ವಿವರಗಳಿವೆ. ₹ 150 ಕೋಟಿ ಹಾಗೂ ಅದಕ್ಕಿಂತ ಹೆಚ್ಚು ವೆಚ್ಚದ ಯೋಜನೆಗಳ ಮೇಲ್ವಿಚಾರಣೆಯನ್ನು ಈ ಸಚಿವಾಲಯ ಮಾಡುತ್ತದೆ.
‘1,681 ಯೋಜನೆಗಳ ಮೂಲ ಯೋಜನಾ ವೆಚ್ಚ ₹ 24 ಲಕ್ಷ ಕೋಟಿ ಇತ್ತು. ಈ ಯೋಜನೆಗಳ ಪೂರ್ಣಗೊಳ್ಳುವ ವೇಳೆಗೆ ಯೋಜನಾ ವೆಚ್ಚವು ₹ 28.96 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಅಂದರೆ, ಮೂಲ ವೆಚ್ಚಕ್ಕಿಂತ ಶೇ 19.86 ರಷ್ಟು (₹ 4,80,074.87 ಕೋಟಿ) ಹೆಚ್ಚಳವಾದಂತಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘607 ಯೋಜನೆಗಳ ಅನುಷ್ಠಾನ ವಿಳಂಬವಾಗಿದೆ. 419 ಯೋಜನೆಗಳು ಪೂರ್ಣಗೊಳ್ಳುವ ಹಂತ ಅಥವಾ ಕಾರ್ಯಾಚರಣೆಗೊಳ್ಳುವ ಹಂತವನ್ನು ತಲುಪಿಲ್ಲ’ ಎಂದೂ ತಿಳಿಸಲಾಗಿದೆ.
ಹೆಚ್ಚಳಕ್ಕೆ ಕಾರಣಗಳು: ಈ ಮೂಲಸೌಕರ್ಯ ಯೋಜನೆಗಳ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗುವುದಕ್ಕೆ ಸಚಿವಾಲಯವು ಹಲವು ಕಾರಣಗಳನ್ನು ವರದಿಯಲ್ಲಿ ನೀಡಿದೆ.
ಯೋಜನೆಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬ, ಅರಣ್ಯ ಮತ್ತು ಪರಿಸರ ಅನುಮೋದನೆ ಪಡೆದುಕೊಳ್ಳುವುದು ತಡವಾಗಿರುವುದು ಹಾಗೂ ಯೋಜನೆಗಳಿಗೆ ಪೂರಕವಾದ ಸೌಲಭ್ಯಗಳ ಕೊರತೆ ಪ್ರಮುಖ ಕಾರಣಗಳು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಹಣಕಾಸು, ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ಆಖೈರುಗೊಳಿಸುವಲ್ಲಿ ವಿಳಂಬ, ಯೋಜನೆಯ ವ್ಯಾಪ್ತಿ, ಟೆಂಡರ್, ಕಾರ್ಯಾದೇಶ ನೀಡುವುದು ಮತ್ತು ಅಗತ್ಯ ಸಲಕರಣೆಗಳ ಪೂರೈಕೆಯಲ್ಲಿನ ಬದಲಾವಣೆ, ಕಾನೂನು–ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದಾಗಿಯೂ ಯೋಜನೆಗಳ ವೆಚ್ಚ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.
2020 ಹಾಗೂ 2021ರಲ್ಲಿ ಕೋವಿಡ್–19 ಪಿಡುಗಿನ ಕಾರಣ ಲಾಕ್‌ಡೌನ್ ಜಾರಿಗೊಳಿಸಿದ್ದು ಮತ್ತೊಂದು ಪ್ರಮುಖ ಕಾರಣ ಎಂದೂ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.