ನವದೆಹಲಿ: ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಮಾಡಿರುವ ಆರೋಪಗಳ ತನಿಖೆ ಪೂರ್ಣಗೊಳಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ(ಸೆಬಿ) ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ಕಲ್ಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ವಿಚಾರಣೆ ಪೂರ್ಣಗೊಳಿಸಲು ಸೆಬಿಗೆ ಆರು ತಿಂಗಳ ಬದಲಿಗೆ ಮೂರು ತಿಂಗಳು ಕಾಲಾವಕಾಶ ನೀಡಲಾಗುವುದು. ಷೇರು ಪೇಟೆಯ ಮೇಲೆ ನಿಗಾ ಇಡಬೇಕು ಎಂದೂ ಸೆಬಿ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ (ನಿವೃತ್ತ) ಎ.ಎಂ. ಸಪ್ರೆ ಅವರ ಸಮಿತಿಯು ಸಲ್ಲಿಸಿದ ವರದಿಯನ್ನು ಕೋರ್ಟ್ ರಿಜಿಸ್ಟ್ರಿ ಸ್ವೀಕರಿಸಿದೆ. ವರದಿ ಪರಿಶೀಲಿಸಿದ ನಂತರ, ಸೆಬಿಯ ಅರ್ಜಿ ಮತ್ತು ಪಿಐಎಲ್‌ಗಳನ್ನು ಮೇ 15ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಅರ್ಜಿದಾರ ಜಯಾ ಠಾಕೂರ್ ಪರ ಹಾಜರಾಗಿದ್ದ ವಕೀಲರು, ಸೆಬಿಯ ವೈಫಲ್ಯದ ಬಗ್ಗೆ ಪೀಠವು ಏನನ್ನೂ ಹೇಳಲಿಲ್ಲ ಎಂದಾಗ, ವಕೀಲರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ ಪೀಠವು, ‘ಆರೋಪ ಮಾಡುವಾಗ ಎಚ್ಚರವಿರಲಿ. ಇದು ಷೇರು ಮಾರುಕಟ್ಟೆಯಲ್ಲಿನ ಭಾವನೆಗಳ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಎಲ್ಲ ಆರೋಪಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ’ ಎಂದೂ ಹೇಳಿದೆ.
ಅದಾನಿ ಸಮೂಹವು ತನ್ನ ಷೇರು ದರಗಳನ್ನು ಅಕ್ರಮವಾಗಿ ಏರಿಳಿತ ಮಾಡಿದೆ ಮತ್ತು ಮಾಹಿತಿಗಳನ್ನು ಮುಚ್ಚಿಟ್ಟಿದೆ ಎನ್ನುವ ಆರೋಪಗಳನ್ನು ಮಾಡಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ವರದಿ ಪ್ರಕಟಿಸಿತ್ತು. ಈ ಆರೋಪಗಳ ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಸೆಬಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿ, ಅರ್ಜಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.