ADVERTISEMENT

ಬೆಂಗಳೂರಿನಲ್ಲಿ ತಯಾರಾಗಲಿದೆ ಭಾರತದ ಮೊದಲ ವೇಗದ ರೈಲು: BEML ಪ್ರಕಟಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2024, 15:03 IST
Last Updated 15 ಅಕ್ಟೋಬರ್ 2024, 15:03 IST
<div class="paragraphs"><p>ಹೈಸ್ಪೀಡ್ ರೈಲು (ಸಂಗ್ರಹ ಚಿತ್ರ)</p></div>

ಹೈಸ್ಪೀಡ್ ರೈಲು (ಸಂಗ್ರಹ ಚಿತ್ರ)

   

ರಾಯಿಟರ್ಸ್

ಬೆಂಗಳೂರು: ಅಧಿಕ ವೇಗದ ಎರಡು ರೈಲುಗಳನ್ನು ಅಭಿವೃದ್ಧಿಪಡಿಸಲು ಸಮಗ್ರ ಬೋಗಿ ನಿರ್ಮಾಣ (ಐಸಿಎಫ್‌)ನಿಂದ ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿರುವುದಾಗಿ ಬಿಇಎಂಎಲ್‌ ಮಂಗಳವಾರ ಹೇಳಿದೆ.

ADVERTISEMENT

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಇಎಂಎಲ್‌, ‘ಎಂಟು ಕೋಚುಗಳುಳ್ಳ ಈ ರೈಲು ಗರಿಷ್ಠ ಪ್ರತಿ ಗಂಟೆಗೆ 249 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಇದು ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಿಸಲಾಗುತ್ತಿರುವ ಅತಿ ವೇಗದ ರೈಲ್ವೆ ಕಾರಿಡಾರ್‌ನಲ್ಲಿ (ಬುಲೆಟ್‌ ರೈಲು ಯೋಜನೆ) 2027ರಿಂದ ಬಳಸಲಾಗುವುದು’ ಎಂದಿದೆ.

ಇಂಥ ಒಂದು ರೈಲಿನ ಬೆಲೆ ₹27.86 ಕೋಟಿಯಾಗಲಿದೆ. ಆದರೆ ಇದರ ವಿನ್ಯಾಸ, ಅಭಿವೃದ್ಧಿ ಸೇರಿದಂತೆ ಹಲವು ಹಂತಗಳಲ್ಲಿ ಒಟ್ಟು ₹866.87 ಕೋಟಿ ಖರ್ಚಾಗಲಿದೆ. ಈ ಎಲ್ಲಾ ಅನುಭವಗಳನ್ನು ಭಾರತದ ಭವಿಷ್ಯದ ಬುಲೆಟ್ ರೈಲು ಅಭಿವೃದ್ಧಿಗೆ ಬಳಸಲಾಗುವುದು ಎಂದು ಬಿಇಎಂಎಲ್‌ ಹೇಳಿದೆ.

‘ಭಾರತದ ಅತಿ ವೇಗದ ರೈಲು ಅಭಿವೃದ್ಧಿ ಯೋಜನೆಯಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಗಂಟೆಗೆ 280 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ರೈಲು ಇದಾಗಲಿದೆ. ಈ ರೈಲು ಬೆಂಗಳೂರಿನಲ್ಲಿರುವ ರೈಲು ಕೋಚ್ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಜತೆಗೆ 2026ರ ಅಂತ್ಯದ ಹೊತ್ತಿಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ’ ಎಂದು ಬಿಇಎಂಎಲ್‌ ತಿಳಿಸಿದೆ.

‘ಈ ರೈಲು ಸಂಪೂರ್ಣ ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿರಲಿದೆ. ಚೇರ್ ಕಾರ್‌ಗಳನ್ನು ಅಳವಡಿಸಲಾಗುವುದು. ಪ್ರಯಾಣಿಕರಿಗೆ ಪ್ರಯಾಣದ ಹೊಸ ಅನುಭೂತಿ ನೀಡುವ ಉದ್ದೇಶದೊಂದಿಗೆ ಹಿಂದಕ್ಕೆ ಬಾಗುವ ಹಾಗೂ ತಿರುಗುವ ಸೀಟುಗಳು ಇರಲಿವೆ. ಅಂಗವಿಕಲರಿಗಾಗಿ ವಿಶೇಷ ಆಸನ ವ್ಯವಸ್ಥೆ ಹಾಗೂ ಮನರಂಜನೆಗಾಗಿ ಇನ್ಫೋಟೈನ್ಮೆಂಟ್‌ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಇದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.