ADVERTISEMENT

Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ಪಿಟಿಐ
Published 1 ಫೆಬ್ರುವರಿ 2024, 14:02 IST
Last Updated 1 ಫೆಬ್ರುವರಿ 2024, 14:02 IST
   

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 2024–25ನೇ ಸಾಲಿಗೆ ₹1.27 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ. 

‍ಪ್ರಸಕ್ತ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ತುಸುಮಟ್ಟಿನ ಹೆಚ್ಚಳವಾಗಿದೆ. ಕೃಷಿ ಇಲಾಖೆಗೆ ₹ 1.16 ಲಕ್ಷ ಕೋಟಿ ಮೀಸಲಿಡಲಾಗಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಗೆ ₹9,876 ಕೋಟಿ ನೀಡಲಾಗಿದೆ.

ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ₹60 ಸಾವಿರ ಕೋಟಿ ಮೀಸಲಿಡಲಾಗಿದೆ. ಪ್ರತಿ ರೈತನಿಗೆ ಒಂದು ವರ್ಷಕ್ಕೆ ಮೂರು ಕಂತಿನಲ್ಲಿ ಒಟ್ಟು ₹6 ಸಾವಿರ ನೀಡುವ ಯೋಜನೆ ಇದಾಗಿದ್ದು, 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ADVERTISEMENT

ಗ್ರಾಹಕರ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆಗಾಗಿ ₹2.13 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದು 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಗ್ರಾಹಕರ ವ್ಯವಹಾರ ಇಲಾಖೆಗೆ ಕಳೆದ ಸಾಲಿನಲ್ಲಿ ₹309 ಕೋಟಿ ನೀಡಲಾಗಿತ್ತು. 2024–25ನೇ ಸಾಲಿನಲ್ಲಿ ₹303 ಕೋಟಿ ನೀಡಲಾಗಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣೆಗೆ ₹2.13 ಲಕ್ಷ ಕೋಟಿ ಅನುದಾನ ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹2.21 ಲಕ್ಷ ಕೋಟಿ ಘೋಷಿಸಲಾಗಿತ್ತು. ಈ ಇಲಾಖೆ ಮೂಲಕ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. 

ರಾಸಾಯನಿಕ ಹಾಗೂ ಗೊಬ್ಬರ ಸಚಿವಾಲಯಕ್ಕೆ ₹1.64 ಲಕ್ಷ ಕೋಟಿ ಘೋಷಿಸಲಾಗಿದೆ. ಪ್ರಸಕ್ತ ₹1.88 ಲಕ್ಷ ಕೋಟಿ ನೀಡಲಾಗಿತ್ತು.

ರಾಸಾಯನಿಕ ಹಾಗೂ ಪೆಟ್ರೊಕೆಮಿಕಲ್ಸ್ ಇಲಾಖೆಗೆ ₹139 ಕೋಟಿ ಘೊಷಿಸಲಾಗಿದೆ. 2023–24ರಲ್ಲಿ ₹572 ಕೋಟಿ ನೀಡಲಾಗಿತ್ತು.

ಔಷಧ ಇಲಾಖೆಗೆ ಅನುದಾನ ಈ ಬಾರಿ ಹೆಚ್ಚಿಸಲಾಗಿದೆ. 2023–24ನೇ ಸಾಲಿನಲ್ಲಿ ₹2,697 ಕೋಟಿ ನೀಡಲಾಗಿತ್ತು. ಈ ಬಾರಿ ಈ ಇಲಾಖೆಗೆ ₹4,089 ಕೋಟಿ ಅನುದಾನ ಘೋಷಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ ನಿರ್ವಹಿಸುವ ಸಹಕಾರ ಸಚಿವಾಲಯಕ್ಕೆ ಈ ಬಾರಿ ಅನುದಾನ ಹೆಚ್ಚಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹747 ಕೋಟಿ ನೀಡಲಾಗಿತ್ತು. ಇದನ್ನು ಬರುವ ಆರ್ಥಿಕ ವರ್ಷಕ್ಕೆ ₹1,183 ಕೋಟಿಗೆ ಹೆಚ್ಚಿಸಲಾಗಿದೆ.

ಮೀನುಗಾರಿಕೆ, ಹೈನು ಮತ್ತು ಪ್ರಾಣಿ ಸಾಕಾಣಿಕೆ ಇಲಾಖೆಗೆ 2024–25ಕ್ಕೆ ₹7,105 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಮೀನುಗಾರಿಕೆಗೆ ₹2,584 ಕೋಟಿ (ಪ್ರಸಕ್ತ ₹1,701ಕೋಟಿ), ಪ್ರಾಣಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಕ್ಷೇತ್ರಕ್ಕೆ ₹4,521 ಕೋಟಿ (ಪ್ರಸಕ್ತ ₹ 3,913 ಕೋಟಿ) ಘೋಷಿಸಲಾಗಿದೆ.

ಆಹಾರ ಸಂಸ್ಕರಣೆ ಕೈಗಾರಿಕೆಗಳಿಗೆ ಮುಂದಿನ ವರ್ಷಕ್ಕೆ ₹3,290 ಕೋಟಿ ಅನುದಾನ ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹2,911 ಕೋಟಿ ಅನುದಾನ ನೀಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.