ಆರ್ಥಿಕ ಹಿಂಜರಿತದ ಮೊದಲ ಆಘಾತ ಪಡೆದ ಆಟೊಮೊಬೈಲ್ ಕ್ಷೇತ್ರವು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಿಎಸ್‌ಟಿ ಕಡಿತ, ವಿಮೆ ಮತ್ತು ಹಲವು ‘ಕಡ್ಡಾಯ’ಗಳನ್ನು ರದ್ದು ಮಾಡುವ ನಿರೀಕ್ಷೆಯಲ್ಲಿವೆ. ಇಲ್ಲವಾದಲ್ಲಿ ಮಾರುಕಟ್ಟೆ ಕುಸಿತ ಇನ್ನಷ್ಟು ಹೆಚ್ಚಾಗುವ ಎಚ್ಚರಿಕೆಯನ್ನೂ ಕಂಪನಿಗಳು ನೀಡಿವೆ.
2019ರಲ್ಲಿ ಶೇ 14ರಷ್ಟು ಮಾರಾಟ ಕುಸಿತ ಅನುಭವಿಸಿದ ಆಟೊ ಮೊಬೈಲ್ ಕ್ಷೇತ್ರವು, ಜಿಎಸ್‌ಟಿ ದರ ತಗ್ಗಿಸುವಂತೆ ಒತ್ತಡ ಹೇರಿದೆ. ಸದ್ಯ ವಾಹನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಒಂದೊಮ್ಮೆ ವಾಹನ ಕ್ಷೇತ್ರವು ಚೇತರಿಕೆಯ ಹಾದಿಗೆ ಮರಳಬೇಕೆಂದರೆ ಇದನ್ನು ಶೇ 18ಕ್ಕೆ ತಗ್ಗಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಒತ್ತಾಯ.
ಬರುವ ಏಪ್ರಿಲ್‌ನಿಂದ ಭಾರತ್–6 (ಬಿಎಸ್–6) ಜಾರಿಗೆ ಬರುತ್ತಿದೆ. ಇದರಿಂದ ವಾಹನಗಳ ಬೆಲೆಯಲ್ಲಿ ಶೇ 20ರಿಂದ 30ರಷ್ಟು ಹೆಚ್ಚಳಾಗುವ ಸಾಧ್ಯತೆ ಇದೆ. ಇದು ಖರೀದಿದಾರರನ್ನು ಮತ್ತಷ್ಟು ಹಿಮ್ಮೆಟ್ಟಿಸುವ ಸಾಧ್ಯತೆ ಇರುವುದರಿಂದ, ತೆರಿಗೆ ತಗ್ಗಿಸುವ ಮೂಲಕ ಮಾರಾಟ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಉದ್ಯಮಿಗಳು ಮುಂದಿಟ್ಟಿದ್ದಾರೆ.
ಇಂಧನ ಮಿತಬಳಕೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲೆಕ್ಟ್ರಿಕ್ ಮತ್ತು ಹೈಬ್ರೀಡ್ ವಾಹನಗಳನ್ನು ಹೆಚ್ಚಾಗಿ ಉತ್ತೇಜಿಸಲಾಗುತ್ತಿದೆ. ಆದರೆ ಇಲ್ಲೂ ತಾರತಮ್ಯವಿದೆ ಎಂದು ಕ್ಷೇತ್ರದ ಅಸಮಾಧಾನ. ಹೈಬ್ರೀಡ್ ವಾಹನಗಳಿಗೆ ಈವರೆಗೂ ಯಾವುದೇ ರಿಯಾಯಿತಿಯನ್ನು ನೀಡಿಲ್ಲ. ಹೈಬ್ರೀಡ್ ಎಸ್‌ಯುವಿ ಕಾರುಗಳ ಮೇಲಿನ ತೆರಿಗೆ ಶೇ 43ರಷ್ಟಿದೆ. ಆದರೆ ವಿದ್ಯುತ್ ಚಾಲಿತ ಕಾರುಗಳ ಮೇಲಿನ ಜಿಎಸ್‌ಟಿ ಶೇ 5ರಷ್ಟಿದೆ ಎಂದರೆ ವ್ಯತ್ಯಾಸವನ್ನು ಊಹಿಸಬಹುದು. ಹೀಗಾಗಿ ಜಿಎಸ್‌ಟಿಯನ್ನು ಶೇ 18ಕ್ಕೆ ಇಳಿಸಬೇಕು ಇಲ್ಲವೇ ಸೆಸ್ ಅನ್ನು ಶೇ 15ರಷ್ಟು ಇಳಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಹೊಸ ವಾಹನಗಳ ಖರೀದಿ ಹೆಚ್ಚಿಸಬೇಕೆಂದರೆ ಹಳೇ ವಾಹನಗಳನ್ನು ರದ್ದುಪಡಿಸಬೇಕಾದ್ದು ಅನಿವಾರ್ಯ. ಈ ನಿಟ್ಟಿನಲ್ಲೂ ಕೇಂದ್ರ ಸರ್ಕಾರದ ನೂತನ ಬಜೆಟ್‌ನಲ್ಲಿ ಕೆಲವೊಂದು ನೀತಿಗಳನ್ನು ವಾಹನ ಕ್ಷೇತ್ರ ನಿರೀಕ್ಷಿಸಿದೆ. ಹಳೆಯ ಹಾಗೂ ಹೆಚ್ಚು ಹೊಗೆ ಉಗುಳುವ ಟ್ರಕ್‌ಗಳು, ಬಸ್ಸುಗಳನ್ನು ಗುಜುರಿಗೆ ಹಾಕುವುದನ್ನು ಕಡ್ಡಾಯಗೊಳಿಸಬೇಕು. ಇದಕ್ಕಾಗಿ ವಾಹನ ಮಾಲೀಕರಿಗೆ ಒಂದಷ್ಟು ಕೊಡುಗೆಗಳನ್ನು ನೀಡಬೇಕು. ಆ ಮೂಲಕ ಹೊಸ ವಾಹನ ಖರೀದಿಗೆ ಉತ್ತೇಜಿಸಬೇಕು ಎಂಬುದು ಅವರ ಬೇಡಿಕೆ.
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಸರ್ಕಾರವು ‘ಎಲೆಕ್ಟ್ರಿಕ್ ಮತ್ತು ಹೈಬ್ರೀಡ್ ವಾಹನಗಳ ತಯಾರಿಕೆ ಮತ್ತು ಶೀಘ್ರ ಅನುಷ್ಠಾನ’ (ಫೇಮ್)ದ 2ನೇ ಆವೃತ್ತಿಗೆ ₹10 ಸಾವಿರ ಕೋಟಿ ನಿಧಿಯನ್ನು ಇಟ್ಟಿದೆ. ಆದರೆ ವೈಯಕ್ತಿಕವಾಗಿ ಇಂಥ ವಾಹನಗಳನ್ನು ಖರೀದಿಸುವವರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದರೆ ಈ ವಾಹನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುವವರಿಗೆ ₹1.5 ಲಕ್ಷದಷ್ಟು ರಿಯಾಯಿತಿ ಸಿಗುತ್ತಿದೆ. ಒಂದೊಮ್ಮೆ ಸರ್ಕಾರಕ್ಕೆ ನಿಜಕ್ಕೂ ಇಂಥ ವಾಹನಗಳನ್ನು ಉತ್ತೇಜಿಸಬೇಕೆಂದಿದ್ದರೆ, ಇದನ್ನು ಪ್ರತಿಯೊಬ್ಬ ಖರೀದಿದಾರನಿಗೂ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.
ಬ್ಯಾಟರಿ ಆಮದು ಮೇಲಿನ ಸುಂಕ ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ವಿದ್ಯುತ್ ಚಾಲಿತ ವಾಹನಗಳ ತಯಾರಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಲೀಥಿಯಂ ಅಯಾನ್ ಬ್ಯಾಟರಿ ಸೆಲ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಬೇಕೆಂದಿದ್ದರೆ ಬ್ಯಾಟರಿ ಆಮದು ಸುಂಕ ತಗ್ಗಿಸಿ, ಬಹುತೇಕರನ್ನು ಖರೀದಿ ವ್ಯಾಪ್ತಿಗೆ ತರಲು ಸರ್ಕಾರ ಪ್ರಯತ್ನಿಸಬೇಕು ಎಂಬುದು ಇವರ ವಾದ. ಆದರೆ ಈ ಬ್ಯಾಟರಿಗಳು ಇಲ್ಲೇ ತಯಾರಿಸುವುದಿದ್ದರೆ ಸರ್ಕಾರ ಉತ್ತೇಜಿಸುತ್ತದೆ ಎಂದು ಹೇಳಿದ್ದರೂ, ಅವು ಇನ್ನೂ ಕಡತಗಳಲ್ಲೇ ಉಳಿದಿದೆ.
ಮಾರಾಟ ಪ್ರಗತಿ ಬೇಕೆಂದರೆ ದರ ಕಡಿತಗೊಳಿಸಿ
ಒಂದೊಮ್ಮೆ ವಾಹನ ಕ್ಷೇತ್ರವು ಪ್ರಗತಿಯಲ್ಲಿ ಸಾಗಿ ದೇಶದ ಆರ್ಥಿಕತೆ ವೃದ್ಧಿಸಬೇಕೆಂದರೆ ಜಿಎಸ್‌ಟಿ ಸೇರಿದಂತೆ ಹಲವು ಅನಗತ್ಯಗಳನ್ನು ಕಡಿತಗೊಳಿಸಲೇಬೇಕುಎಂಬ ಬೇಡಿಕೆಯನ್ನು ಬಜಾಜ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.
ಸಿಎನ್‌ಬಿಸಿ ಸುದ್ದಿ ವಾಹಿನಿಗೆ ಅವರು ನೀಡಿರುವ ಸಂದರ್ಶನದಲ್ಲಿ ಮೂರು ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಕಡ್ಡಾಯ ವಿಮೆ ಮಾಡಿಸುವುದನ್ನು ರದ್ದುಗೊಳಿಸಿ, ಅವರವರ ಸಾಮರ್ಥ್ಯ ಹಾಗೂ ಬೇಡಿಕೆಗೆ ಅನುಗುಣವಾಗಿ ವಿಮೆ ಮಾಡಿಸುವ ಅವಕಾಶವನ್ನು ವಾಹನ ಮಾಲೀಕರಿಗೆ ನೀಡಬೇಕು.
150ಸಿಸಿ ಹಾಗೂ 200ಸಿಸಿ ಸ್ಕೂಟರ್ ಹಾಗೂ ಮೋಟಾರು ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಕಡ್ಡಾಯಗೊಳಿಸಲಾಗಿದೆ. ಇದನ್ನು 250ಸಿಸಿ ಮೇಲ್ಪಟ್ಟ ವಾಹನಗಳಿಗೆ ಕಡ್ಡಾಯಗೊಳಿಸಬೇಕು. ಇವಿಗೆ ಶೇ 5ರಷ್ಟು ತೆರಿಗೆ ವಿಧಿಸಿದ್ದೀರಿ, ಹಾಗೆಯೇ ಇತರ ಇಂಧನಗಳಿಂದ ಚಲಿಸುವ ವಾಹನಗಳ ಜಿಎಸ್‌ಟಿ ದರವನ್ನು ಶೇ 28ರಿಂದ ಶೇ 18ಕ್ಕೆ ತಗ್ಗಿಸಬೇಕು ಎಂದಿದ್ದಾರೆ.
ಬಿಎಸ್–6 ಬರುವ ಏಪ್ರಿಲ್‌ನಿಂದ ಜಾರಿಗೆ ಬರುತ್ತಿದ್ದು, ಒಂದೊಮ್ಮೆ ಇದೇ ತರಿಗೆ ದರ ಮುಂದುವರಿದರೆ ಇಡೀ ಕ್ಷೇತ್ರ ಅಂದಾಜು ಶೇ 20ರಷ್ಟು ಕುಸಿತ ಕಾಣಲಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.
ಕಡ್ಡಾಯಗಳನ್ನು ಕೈಬಿಡಿ
ಸುರಕ್ಷತೆಯ ಹೆಸರಿನಲ್ಲಿ ಹಲವು ಸೌಲಭ್ಯಗಳನ್ನು ವಾಹನಗಳಲ್ಲಿ ಅಳವಡಿಸುವಂತೆ ಕೇಂದ್ರ ಸೂಚಿಸಿದೆ. ಇದರಿಂದ ಕಳೆದ 12 ತಿಂಗಳಲ್ಲಿ ವಾಹನಗಳ ತಯಾರಿಕಾ ವೆಚ್ಚ ಶೇ 20ರಷ್ಟಿದೆ.ಇದರಲ್ಲಿ ಏರ್‌ಬ್ಯಾಗ್, ಹಿಂಬದಿ ಚಲನೆಯ ಸೆನ್ಸರ್, ಎಬಿಎಸ್, ಅಪಘಾತ ಸುರಕ್ಷತಾ ಪರೀಕ್ಷೆ, ಬಿಎಸ್–6 ಸೇರಿವೆ. ಇರುವ ಬೆಲೆಯಲ್ಲೇ ಇವುಗಳನ್ನು ಅಳವಡಿಸುವುದು ಕಷ್ಟದಾಯಕ. ಇವುಗಳಿಗಾದರೂ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯೂ ವಾಹನ ಕ್ಷೇತ್ರದ್ದಾಗಿದೆ.
ವಾಹನ ಕ್ಷೇತ್ರದ ಇನ್ನಷ್ಟು ಬೇಡಿಕೆಗಳು
* ವಿಮೆ ಪ್ರೀಮಿಯಂ ಮೊತ್ತ ತಗ್ಗಿಸಬೇಕು
* ಸುರಕ್ಷತೆಗೆ ಸಂಬಂಧಿಸಿದ ನಿಯಮಾವಳಿ ಸಡಿಲಿಕೆ
* ಇಂಧನ ಬೆಲೆ ನಿಯಂತ್ರಣಕ್ಕೆ ಕಾನೂನು
* ಬಿಎಸ್–6 ಜಾರಿ ಕುರಿತು ಇರುವ ಅನಿಶ್ಚಿತತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.