ADVERTISEMENT

Budget 2021: ಆರ್ಥಿಕ ಸಮೀಕ್ಷೆ ಹಿಂದಿನ ಶಕ್ತಿ ಕೃಷ್ಣಮೂರ್ತಿ ಸುಬ್ರಮಣಿಯನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2021, 7:23 IST
Last Updated 29 ಜನವರಿ 2021, 7:23 IST
ಕೃಷ್ಣಮೂರ್ತಿ ಸುಬ್ರಮಣಿಯನ್ – ಎಎಫ್‌ಪಿ ಚಿತ್ರ
ಕೃಷ್ಣಮೂರ್ತಿ ಸುಬ್ರಮಣಿಯನ್ – ಎಎಫ್‌ಪಿ ಚಿತ್ರ   

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಬಜೆಟ್‌ ಅನ್ನು ಫೆಬ್ರುವರಿ 1ರಂದು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಕೇಂದ್ರ ಸರ್ಕಾರವು 2021ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದೆ.

ಪ್ರತಿ ವರ್ಷ ಈ ಸಮೀಕ್ಷಾ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿಇಎ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದೆ.

ಯಾರು ಕೃಷ್ಣಮೂರ್ತಿ ಸುಬ್ರಮಣಿಯನ್?

ADVERTISEMENT

ಕೃಷ್ಣಮೂರ್ತಿ ಸುಬ್ರಮಣಿಯನ್ ಸದ್ಯ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರು. ಆರ್ಥಿಕ ನೀತಿ, ಬ್ಯಾಂಕಿಂಗ್ ಹಾಗೂ ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ತಜ್ಞರು.

ಸುಬ್ರಮಣಿಯನ್ ಅವರು ‘ಯುನಿವರ್ಸಿಟಿ ಆಫ್ ಷಿಕಾಗೊ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್’ನಲ್ಲಿ ‘ಹಣಕಾಸು ಆರ್ಥಿಕತೆ’ ವಿಷಯದಲ್ಲಿ ಲುಯಿಗಿ ಜಿಂಗೇಲ್ಸ್ ಹಾಗೂ ರಘುರಾಂ ರಾಜನ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪೂರೈಸಿದ್ದಾರೆ. ಇವರು ಕಾನ್ಪುರ ಐಐಟಿಯ ಹಳೆ ವಿದ್ಯಾರ್ಥಿಯೂ ಹೌದು. ಅಲ್ಲಿ ಇವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೋಲ್ಕತ್ತದ ಐಐಎಂನಲ್ಲಿಯೂ ಅಧ್ಯಯನ ಮಾಡಿದ್ದಾರೆ.

‘ಇಂಡಿಯನ್ ಸ್ಕೂಲ್‌ ಆಫ್‌ ಬ್ಯುಸಿನೆಸ್‌’ನಲ್ಲಿ ಹಣಕಾಸು ವಿಷಯಕ್ಕೆ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅಟ್ಲಾಂಟದ ಎಮೊರಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಐಸಿಐಸಿಐ, ಜೆಪಿ ಮೋರ್ಗನ್ ಚೇಸ್ ಸೇರಿದಂತೆ ಪ್ರಮುಖ ಹಣಕಾಸು ಕಂಪನಿಗಳಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪಿ.ಜೆ.ನಾಯಕ್ ಸಮಿತಿ ಸೇರಿದಂತೆ ಹಲವು ತಜ್ಞರ ಸಮಿತಿಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಬಂಧನ್ ಬ್ಯಾಂಕ್‌ನ ಸ್ಥಾಪಕ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ (2015–18).

ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಯನ್ನು ತಿಳಿಸುವ ಆರ್ಥಿಕ ಸಮೀಕ್ಷೆ ವರದಿ ಸಂಸತ್ತಿನಲ್ಲಿ ಇಂದು (ಶುಕ್ರವಾರ) ಮಂಡನೆ ಆಗಲಿದೆ. ಬಜೆಟ್‌ನಲ್ಲಿ ಒಂದು ವರ್ಷದ ನೀತಿಯನ್ನು ಮಾತ್ರ ಹೇಳುವುದಲ್ಲದೆ, ಅರ್ಥ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳುವಂತೆಯೂ ಸಮೀಕ್ಷಾ ವರದಿಯು ಸರ್ಕಾರಕ್ಕೆ ಸಲಹೆ ನೀಡುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.