ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕದಿಂದಾಗಿ ಹೊಸ ಮಾದರಿಯ ಉದ್ಯೋಗ ವ್ಯವಸ್ಥೆ ಕಂಡುಬರುತ್ತಿದೆ. ಹೆಚ್ಚಿನ ವಲಯಗಳು ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ವ್ಯವಸ್ಥೆ ಅನುಸರಿಸುತ್ತಿವೆ.
ಆದರೆ, ಈ ಕೆಲಸದ ಪದ್ಧತಿಯು ಜೀವನಶೈಲಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಹೆಚ್ಚು ವೆಚ್ಚಗಳಿಗೆ ಕಾರಣವಾಗಿದೆ. ಉದ್ಯೋಗಿಗಳು ಮೊಬೈಲ್ ದೂರವಾಣಿ, ಇಂಟರ್‌ನೆಟ್ ವೆಚ್ಚ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ. ಮನೆಯಿಂದಲೇ ಕೆಲಸ ಮಾಡುವಾಗ ಉದ್ಯೋಗಿಗಳು ಈ ವೆಚ್ಚವನ್ನು ಭರಿಸಬೇಕಾಗುತ್ತದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಕಡಿಮೆಯಾಗುತ್ತಿರುವ ತಲಾ ಆದಾಯಗಳಿಂದಾಗಿ ಉದ್ಯೋಗಿಗಳು ‘ವರ್ಕ್ ಫ್ರಂ ಹೋಮ್’ ಭತ್ಯೆ ಮತ್ತು ತೆರಿಗೆ ಕಡಿತ ನಿರೀಕ್ಷಿಸುತ್ತಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ‘ವರ್ಕ್ ಫ್ರಂ ಹೋಮ್’ ವೆಚ್ಚಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ‘ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ’ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಪೀಠೋಪಕರಣಗಳು, ವಿದ್ಯುತ್, ಇಂಟರ್‌ನೆಟ್, ವೈದ್ಯಕೀಯ ಹಾಗೂ ದಿನಬಳಕೆಯ ವಸ್ತುಗಳ ವೆಚ್ಚ ಹೆಚ್ಚಳದಿಂದಾಗಿ ಜನರು ‘ಸ್ಟಾಂಡರ್ಡ್ ಡಿಡಕ್ಷನ್ ಲಿಮಿಟ್’ ಅನ್ನು ₹50,000ದಿಂದ ₹75,000ಕ್ಕೆ ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ.
‘ವಾರ್ಷಿಕ ₹1.5 ಲಕ್ಷ ಮಿತಿಯ 80ಸಿ ಅಡಿಯಲ್ಲಿನ ತೆರಿಗೆ ಉಳಿತಾಯ ಸ್ಕೀಮ್‌ಗಳು’ ಪ್ರಯೋಜನಕಾರಿಯಾಗಲಿವೆ ಎಂದು ‘ಫಿ–ನಿಯೊ–ಬ್ಯಾಂಕ್’ನ ಸಹ ಸಂಸ್ಥಾಪಕ ಸುಜಿತ್ ನಾರಾಯಣ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ತೆರಿಗೆ ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳ ಲಾಕ್–ಇನ್ ಅವಧಿಯನ್ನು 3ರಿಂದ 5 ವರ್ಷಗಳಿಗೆ ಹೆಚ್ಚಿಸುವುದು ಉತ್ತಮ ಆಯ್ಕೆಯಾಗಿರಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.