ADVERTISEMENT

Budget 2024: ರಾಜ್ಯದ ಪ್ರಮುಖ ರಾಜಕೀಯ ಮುಖಂಡರ ಪ್ರತಿಕ್ರಿಯೆಗಳು...

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 4:35 IST
Last Updated 24 ಜುಲೈ 2024, 4:35 IST
<div class="paragraphs"><p>ಸಚಿವ ಎಚ್.ಸಿ. ಮಹದೇವಪ್ಪ</p></div>

ಸಚಿವ ಎಚ್.ಸಿ. ಮಹದೇವಪ್ಪ

   

ತೆರಿಗೆ ಪಾಲಿನಲ್ಲಾದರೂ ನ್ಯಾಯ ಸಿಗಲಿ

ದೇಶದ ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯಾವ ಕೊಡುಗೆಯನ್ನೂ ನೀಡಿಲ್ಲ. ಕರ್ನಾಟಕವು ಎಲೆಕ್ಟ್ರಿಕ್‌ ವಾಹನ, ಹಸಿರು ಇಂಧನ ಮತ್ತಿತರ ವಲಯಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ವಿದೇಶಿ ಹೂಡಿಕೆ ಆಕರ್ಷಿಸುತ್ತಿದೆ. ದೇಶದ ಜಿಡಿಪಿಗೆ, ಆ ಮೂಲಕ ಆರ್ಥಿಕ ಬೆಳವಣಿಗೆ ಅಧಿಕ ಕೊಡುಗೆ ನೀಡುತ್ತಿರುವ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಪ್ರೋತ್ಸಾಹ ದೊರಕುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮುಂಬರುವ ದಿನಗಳಲ್ಲಾದರೂ ತೆರಿಗೆ ಪಾಲು ನೀಡುವಾಗ ಹೆಚ್ಚಿನ ಭಾಗ ನಿಗದಿಗೊಳಿಸಿ, ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕು.

ADVERTISEMENT

- ಎಂ.ಬಿ. ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

ರಾಜ್ಯಕ್ಕೆ ಅನ್ಯಾಯ

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ, ಪೊಳ್ಳು ಭರವಸೆಗಳು ಮುಂದುವರಿದಿವೆ.  ನಿರ್ಮಲಾ ಅವರು ಕೇವಲ ಬಜೆಟ್‌ ಮಂಡಿಸುವುದರಲ್ಲಷ್ಟೇ ಸಾಧನೆ ಮಾಡಿದ್ದಾರೆ. ಕರ್ನಾಟಕದಿಂದ 19 ಎನ್‌ಡಿಎ ಸಂಸದರನ್ನು ರಾಜ್ಯದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದು ವ್ಯರ್ಥವಾಗಿದೆ. ರಾಜ್ಯಕ್ಕೆ ಒಂದೇ ಒಂದು ಯೋಜನೆಯನ್ನು ನೀಡದೇ ಕನ್ನಡಿಗರಿಗೆ ಅನ್ಯಾಯ ಮಾಡಿದೆ.

- ಶಿವರಾಜ್‌ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ತಪ್ಪನ್ನು ಒಪ್ಪಿಕೊಂಡ ಕೇಂದ್ರ

ಬಿಜೆಪಿಯ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿತ್ತು. ಕಳೆದ 10 ವರ್ಷ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನವನ್ನೇ ಹರಿಸದಿದ್ದ ಕೇಂದ್ರ ಸರ್ಕಾರ ಈ ಬಜೆಟ್‌ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

- ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ನಾಲ್ಕು ಕೋಟಿ ಉದ್ಯೋಗ ಸೃಷ್ಟಿ 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಧಾನಿ ಮೋದಿ ಅವರ ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮಹಿಳೆಯರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್‌ ನೀಡಿದ್ದಾರೆ. ಒಂಬತ್ತು ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕೆ ₹1.48 ಲಕ್ಷ ಕೋಟಿ ಅನುದಾನ ನೀಡಿ ನಾಲ್ಕು ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಶ್ಲಾಘನೀಯ.

- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

ಒಕ್ಕೂಟದ ಆಶಯ ಮರೆತ ಬಜೆಟ್‌

ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಸುಮಾರು ₹11 ಸಾವಿರ ಕೋಟಿಗಳಷ್ಟು ಅಗತ್ಯವಿದ್ದಾಗಲೂ ಪ್ರಸ್ತಾವ ಮಾಡದ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಮರೆತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಬಾಕಿ ಉಳಿಸಿಕೊಂಡ ಅನುದಾನದ ಜೊತೆಗೆ ಹೊಸ ಅನುದಾನವನ್ನು ಮಂಜೂರು ಮಾಡಬೇಕಾಗಿತ್ತು. ಆದರೆ, ಈ ಕುರಿತು ಎಲ್ಲಿಯೂ ಪ್ರಸ್ತಾಪ ಇಲ್ಲ. ಜನಪರ ಯೋಜನೆ ಇಲ್ಲದ, ತೆರಿಗೆ ವಿಧಿಸುವುದೇ ತನ್ನ ಕಾಯಕ ಎನ್ನುವಂತಿದೆ. ಹಿಂದಿನ ಯಾವ ಬಜೆಟ್‌ಗಳೂ ಸರಿಯಾಗಿ ಅನುಷ್ಠಾನವಾಗಿಲ್ಲ, ಈ ಬಜೆಟ್‌ ಅದೇ ದಾರಿಯಲ್ಲಿ ಸಾಗಲಿದೆ.

- ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ಚಿನ್ನ, ಬೆಳ್ಳಿ ಉದ್ಯಮದ ಚೇತರಿಕೆ

ಚಿನ್ನದ ಮೇಲೆ ಅಬಕಾರಿ ಸುಂಕವನ್ನು ಶೇಕಡಾ 6ರಷ್ಟು ಕಡಿತ ಗೊಳಿಸಿರುವ ಕ್ರಮ ಅತ್ಯಂತ ಮಹತ್ವದ ನಿರ್ಧಾರ. ಚಿನ್ನ, ಬೆಳ್ಳಿ ಉದ್ಯಮ ದೇಶದ ಆರ್ಥಿಕ ಶಕ್ತಿಯ ಭಾಗವಾಗಲಿದೆ. ನಿರುದ್ಯೋಗ ನಿವಾರಣೆ, ಲಕ್ಷಾಂತರ ಹುದ್ದೆ ಸೃಷ್ಟಿಗೆ ಅವಕಾಶ ಒದಗಿಸಲಾಗಿದೆ. ರೈತರ ಪಾಲಿಗೆ ನೆಮ್ಮದಿ ತಂದಿದೆ.

ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ದೊಡ್ಡಮಟ್ಟದಲ್ಲಿ ಅವಕಾಶ ಕಲ್ಪಿಸುವ ವಿಕಸಿತ ಭಾರತದ ಕನಸನ್ನು ನನಸು ಮಾಡುವ ದೂರದೃಷ್ಟಿ, ಉಚಿತ ಆಹಾರ ಧಾನ್ಯವನ್ನು ಬರುವ ಐದು ವರ್ಷಕ್ಕೆ ವಿಸ್ತರಿರುವುದು ಶ್ಲಾಘನೀಯ.

- ಟಿ.ಎ. ಶರವಣ, ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.