ನವದೆಹಲಿ: ಸುದೀರ್ಘ ಭಾಷಣದಿಂದ ಬಸವಳಿದಂತೆ ಕಂಡು ಬಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಾತುಗಳನ್ನು ಮೊಟಕುಗೊಳಿಸಿದ ಪ್ರಸಂಗ ಬಜೆಟ್ ಮಂಡನೆ ವೇಳೆ ನಡೆಯಿತು.
ಕಳೆದ ವರ್ಷ ಜುಲೈನಲ್ಲಿ ಸುದೀರ್ಘ ಬಜೆಟ್ ಭಾಷಣ ಮಾಡಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ತಾವೇ ತಮ್ಮ ದಾಖಲೆಯನ್ನು ಮುರಿದರು.
ಕಳೆದ ಜುಲೈನಲ್ಲಿ 2.20 ಗಂಟೆ ಅವಧಿಯ ಭಾಷಣ ಮಾಡಿದ್ದ ಅವರು, ಈ ಬಾರಿ 2.40 ಗಂಟೆಯಷ್ಟು ದೀರ್ಘ ಅವಧಿಗೆ ವಿಷಯ ಮಂಡನೆ ಮಾಡಿ ಗಮನ ಸೆಳೆದರು. ಕಳೆದ ವರ್ಷದ ಬಜೆಟ್ ಭಾಷಣದಲ್ಲಿ 11 ಸಾವಿರ ಪದ
ಗಳಿದ್ದರೆ ಈ ಬಾರಿಯ ಭಾಷಣ 13,285 ಶಬ್ದಗಳನ್ನು ಒಳಗೊಂಡಿತ್ತು.
ತಮ್ಮ ಬಜೆಟ್ ಭಾಷಣದಲ್ಲಿ ಕೇವಲ ಅಂಕಿ–ಅಂಶಗಳನ್ನು ಹೇಳದೆ, ವಿವಿಧ ಭಾಷೆಗಳ ಪ್ರಸಿದ್ಧ ಕವಿಗಳ ರಚನೆಗಳನ್ನು ಪ್ರಸ್ತಾಪಿಸಿದರು. ಕಾಶ್ಮೀರಿ ಕವಿ ದೀನಾನಾಥ್ ಕೌಲ್, ತಮಿಳಿನ ದಾರ್ಶನಿಕ ಕವಿಗಳಾದ ತಿರುವಳ್ಳುವರ್, ಅವ್ವೈಯಾರ್, ಕಾಳಿದಾಸ ಕವಿಯ ಮಹಾಗ್ರಂಥ ‘ರಘುವಂಶ’ದ ಸಾಲುಗಳನ್ನು ಹೇಳುವ ಮೂಲಕ ಅವರು ಕೇಂದ್ರ ಸರ್ಕಾರದ ಆದ್ಯತೆ–ಆಶಯ–ಆಲೋಚನೆಗಳನ್ನು ದೇಶದ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.
ಸುದೀರ್ಘವಾದ ಭಾಷಣದ ಪ್ರತಿ ಓದಿ ಸುಸ್ತಾದವರಂತೆ ಕಂಡು ಬಂದ ನಿರ್ಮಲಾ ಸೀತಾರಾಮನ್ ಅವರನ್ನು ಗಮನಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕುಳಿತು
ಕೊಂಡು ಓದು ಮುಂದುವರಿಸುವಂತೆ ಸೂಚಿಸಿದರು. ನಿಶ್ಶಕ್ತ
ರಾದಂತೆ ಕಂಡು ಬಂದ ಅವರಿಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಕ್ಕರೆ ಮಿಠಾಯಿ ನೀಡಿದರು. ಅಷ್ಟರಲ್ಲಿ, ಅವರ ಆಸನದತ್ತ ಧಾವಿಸಿದ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಸಿಂಗ್ ಬಾದಲ್, ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೋಳಿ ಘೋಷ್ ದಸ್ತಿದಾರ್, ನಿರ್ಮಲಾ ಅವರ ಕುಶಲ ವಿಚಾರಿಸಿದರು. ನಂತರ, ‘ಇನ್ನೂ ಎರಡೇ ಪುಟಗಳು ಉಳಿದಿವೆ’ ಎಂದು ಹಿರಿಯ ಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದ ನಿರ್ಮಲಾ ಸೀತಾರಾಮನ್, ‘ಬಾಕಿ ಉಳಿದ ಭಾಷಣದ ಅಂಶಗಳನ್ನು ಸದನ
ದಲ್ಲಿ ಮಂಡಿಸುತ್ತೇನೆ’ ಎಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿ, ಬಜೆಟ್ ಭಾಷಣಕ್ಕೆ ವಿರಾಮ
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.