ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರಾಭಿವೃದ್ಧಿ ಕ್ಷೇತ್ರವನ್ನು ಈ ಬಾರಿ ಕೇಂದ್ರ ಸರ್ಕಾರ ತನ್ನ ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಲವು ಘೋಷಣೆಗಳನ್ನೂ ಮಾಡಿದೆ. ‘ನಗರಗಳನ್ನು ಬೆಳವಣಿಗೆಯ ಕೇಂದ್ರ’ವನ್ನಾಗಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಬೆಳವಣಿಗೆ ಕೇಂದ್ರಗಳೆಂದರೆ ಏನು ಎಂಬುದನ್ನೂ ಬಜೆಟ್‌ನಲ್ಲಿ ವಿವರಿಸಲಾಗಿದೆ. ನಗರದ ಒಟ್ಟಾರೆ ಆರ್ಥಿಕ ಬೆಳವಣಿಗೆ ಒತ್ತು ನೀಡುವುದು. ಜೊತೆಗೆ, ನಗರಗಳ ಬಹುಮುಖ್ಯ ಸಮಸ್ಯೆಯಾದ ವಾಹನ ದಟ್ಟಣೆ ಸಂಬಂಧ ಯೋಜನೆ ರೂಪಿಸುವುದು ಮತ್ತು ಉತ್ತಮ ರಸ್ತೆಗಳ ನಿರ್ಮಾಣವೂ ಸೇರಿಕೊಂಡಿದೆ. ನಗರ ಯೋಜನೆಗಳನ್ನು ಬಳಸಿಕೊಂಡು ನಗರಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹೇಳಿದೆ.
ನಗರಗಳಲ್ಲಿ ಪಾಳು ಬಿದ್ದ ಪ್ರದೇಶಗಳನ್ನು ಸೃಜನಾತ್ಮಕವಾಗಿ ಮರು ಅಭಿವೃದ್ಧಿ ಮಾಡಲಾಗುವುದು. ನಗರದ ಯಾವುದೋ ಒಂದು ಪ್ರದೇಶದಲ್ಲಿ ಈ ಹಿಂದೆ ಕಾರ್ಖಾನೆಗಳು ಇದ್ದಿರಬಹುದು ಅಥವಾ ಯಾವುದೋ ಕಚೇರಿಗಳ ಕಟ್ಟಡ ಇದ್ದಿರಬಹುದು. ಇಂಥ ಪ್ರದೇಶಗಳನ್ನು ಮರು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತದೆ.
ನಗರಗಳಲ್ಲಿ ವಾಸಿಸುವ ಬಡವರಿಗಾಗಿ ಮನೆ ನಿರ್ಮಾಣ ಮಾಡುವ ಸಂಬಂಧ ಅನುದಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಇದನ್ನು ‘ಪ್ರಧಾನಮಂತ್ರಿ ಆವಾಸ್ ಯೋಜನೆ– ನಗರ 2.0’ ಯೋಜನೆಯಡಿ ಕಾರ್ಯಗತಗೊಳಿಸಲಾಗುವುದು.
ದೇಶದಾದ್ಯಂತ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು 1 ಕೋಟಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಮಾಡಿಕೊಡುವ ಸಂಬಂಧ ₹10 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಜೊತೆಗೆ, ಕೈಗೆಟಕುವ ದರಗಳಲ್ಲಿ ಮನೆ ನಿರ್ಮಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅನುಕೂಲ ಮಾಡಿಕೊಡಲಾಗುವುದು ಎಂದೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ರಸ್ತೆಬದಿ ಫುಡ್ ಹಬ್ ನಿರ್ಮಾಣ: ನಗರ ಪ್ರದೇಶಗಳಲ್ಲಿ ರಸ್ತೆಬದಿ ತಿಂಡಿ ತಿನ್ನುವವರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿ ರಸ್ತೆಬದಿ ತಿಂಡಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು, ಒಂದು ವಾರವಿಡೀ ನಡೆಯುವ ಫುಡ್ ಹಬ್ (ಆಹಾರೋತ್ಸವ) ನಡೆಸಲಾಗುವುದು ಎಂದು ಕೇಂದ್ರ ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತೀ ವರ್ಷವೂ ಆಯ್ದ ಕೆಲವು ನಗರಗಳಲ್ಲಿ 100 ಫುಡ್ ಹಬ್‌ಗಳನ್ನು ಹಮ್ಮಿಕೊಳ್ಳಲಾಗುವುದು. ಇದನ್ನು ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ ಅಡಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.