ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿರುವ ಕೇಂದ್ರದ ಬಜೆಟ್ ನಿರಾಶಾದಾಯಕ ಎಂದು ಕಾಂಗ್ರೆಸ್ ಟೀಕಿಸಿದೆ.
‘ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಇದಾಗಿದೆ. ಕಾಯಿಲೆಯನ್ನು ಸರಿಯಾಗಿ ಪತ್ತೆ ಮಾಡದೆ ಔಷಧಿ ಕೊಟ್ಟಂತಾಗಿದೆ’ ಎಂದು ಟೀಕಿಸಿದೆ.
‘ಹಣಕಾಸು ಸಚಿವೆ ಬಹಳ ದಿಟ್ಟತನದಿಂದ, ಜನಪರವಾದ ಬಜೆಟ್ ಮಂಡಿಸಬೇಕಾಗಿತ್ತು. ಆದರೆ, ಬಹಳ ಅಳುಕಿನಿಂದಲೇ ಮಂಡಿಸಿದಂತಿದೆ. ಕುಸಿದಿರುವ ಆರ್ಥಿಕತೆಗೆ ಚೈತನ್ಯ ನೀಡಲು ಹಲವಾರು ದಿಟ್ಟ ಕ್ರಮಗಳನ್ನು ಪ್ರಕಟಿಸಬೇಕಾಗಿತ್ತು’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಉಪನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ.
‘ಯಾವುದೇ ಗೊತ್ತುಗುರಿ ಇಲ್ಲದ ಈ ಬಜೆಟ್, ರಾಷ್ಟ್ರವನ್ನೇ ಮಾರಾಟ ಮಾಡುವ ಯೋಜನೆಯಂತಿದೆ’ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಆರೋಪಿಸಿದ್ದಾರೆ.
ಮತ್ತೊಬ್ಬ ಹಿರಿಯ ಮುಖಂಡ ಶಶಿ ತರೂರ್ ಸಹ ಬಜೆಟ್ ಬಗ್ಗೆ ವ್ಯಂಗ್ಯಭರಿತ ಟೀಕೆ ಮಾಡಿದ್ದಾರೆ. ‘ನಿಮ್ಮ ವಾಹನದ ಬ್ರೇಕ್‌ಗಳನ್ನು ದುರಸ್ತಿ ಮಾಡಲು ನನ್ನಿಂದ ಆಗಲಿಲ್ಲ, ಹೀಗಾಗಿ ವಾಹನದ ಹಾರ್ನ್ ಹೆಚ್ಚು ಶಬ್ದ ಮಾಡುವಂತೆ ಮಾಡಿದ್ದೇನೆ ಎಂಬುದಾಗಿ ಒಬ್ಬ ಮೆಕ್ಯಾನಿಕ್ ತನ್ನ ಗ್ರಾಹಕನಿಗೆ ಹೇಳಿದಂತೆ ಈ ಬಜೆಟ್ ಇದೆ‘ ಎಂದಿದ್ದಾರೆ.
‘ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೃಹ ಸಾಲ ಮರುಪಾವತಿಯಲ್ಲಿ ರಿಯಾಯಿತಿ, ಇಂಧನದ ಮೇಲಿನ ಜಿಎಸ್‌ಟಿಯಲ್ಲಿ ಇಳಿಕೆ ಇಲ್ಲ. ಹೀಗಾಗಿ ಈ ಬಜೆಟ್ ಮಧ್ಯಮ ವರ್ಗದವರ ಗಾಯದ ಮೇಲೆ ಬರೆ ಎಳೆದಂತಿದೆ‘ ಎಂದು ಮತ್ತೊಬ್ಬ ಮುಖಂಡ ಜೈವೀರ್ ಶರ್ಗಿಲ್ ಟೀಕಿಸಿದ್ದಾರೆ.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.