ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು 2023–24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ದೇಶದ ಬಡವರಿಗೆ, ಮಧ್ಯಮ ವರ್ಗದವರಿಗೆ, ಯುವ ಜನರಿಗೆ, ಸಣ್ಣ ಉದ್ದಿಮೆದಾರರಿಗೆ, ಕಾರ್ಪೊರೇಟ್ ಉದ್ಯಮಿಗಳಿಗೆ ಸಹಜವಾಗಿಯೇ ಹಲವು ನಿರೀಕ್ಷೆಗಳಿವೆ.
2024ರ ಲೋಕಸಭಾ ಚುನಾವಣೆಗೂ ಮುನ್ನ ಮಂಡನೆಯಾಗಲಿರುವ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದರಿಂದ ಹಲವು ‘ರಿಲೀಫ್‘ಗಳನ್ನು ಜನ ಬಯಸಿದ್ದಾರೆ. ತೆರಿಗೆ ಕಡಿತ, ಆದಾಯ ತೆರಿಗೆ ಸ್ಲ್ಯಾಬ್ ಏರಿಕೆ, ಹಣದುಬ್ಬರ ನಿಯಂತ್ರಣಕ್ಕೆ ಕ್ರಮ, ಉದ್ಯೋಗ ಸೃಷ್ಠಿ ಮುಂತಾದ ಹಲವು ಆಕಾಂಕ್ಷೆಗಳು ಜನರಲ್ಲಿವೆ. ಈ ಬಜೆಟ್‌ನಲ್ಲಿ ನಿರೀಕ್ಷೆ ಮಾಡಬಹುದಾದ ಕೆಲವೊಂದು ‘ಬದಲಾವಣೆ‘ಗಳು ನಿಮಗಾಗಿ.
1. ವೇತನದಾರರ ತೆರಿಗೆ ಸ್ಲ್ಯಾಬ್ ಹೆಚ್ಚಳ
ಪ್ರತೀ ಬಾರಿ ಬಜೆಟ್ ಮಂಡನೆಯ ದಿನ ಹತ್ತಿರ ಬಂದಾಗ ತೆರಿಗೆ ವಿನಾಯಿತಿ ಬಗ್ಗೆ ಕಾತುರದಿಂದ ಕಾಯುವ ವರ್ಗಗಳಲ್ಲಿ ವೇತನದಾರರು ಕೂಡ ಒಬ್ಬರು. ಮೂಲಗಳ ಪ್ರಕಾರ ಸದ್ಯ ಇರುವ ಆರಂಭಿಕ ₹2.5 ಲಕ್ಷ ಸ್ಲ್ಯಾಬ್ ಅನ್ನು ₹5 ಲಕ್ಷಕ್ಕೆ ಏರಿಸುವ ನಿರೀಕ್ಷೆ ಇದೆ. ಕಳೆದ ಆರೇಳು ವರ್ಷಗಳಿಂದ ಈ ನಿರೀಕ್ಷೆ ಹುಸಿಯಾಗುತ್ತಾ ಬಂದಿದ್ದು, ಈ ಬಾರಿಯಾದರೂ ಈಡೇರಲಿದೆ ಎನ್ನುವುದು ವೇತನದಾರರ ನಿರೀಕ್ಷೆ. ಹಣದುಬ್ಬರ, ಬೆಲೆ ಏರಿಕೆ, ವೇತನ ಕಡಿತ, ಆದಾಯ ಕುಸಿತ ಇದ್ದರೂ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಆಗಿಲ್ಲ ಎನ್ನುವ ಅಸಮಾಧಾನ ಕೂಡ ಇದೆ. ಇದನ್ನು ಈ ಬಾರಿಯ ಬಜೆಟ್‌ನಲ್ಲಿ ಪರಿಗಣಿಸಿದರೆ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ.
ಈಗ ಹಳೇಯ ಹಾಗೂ ಹೊಸ ತೆರಿಗೆ ಪದ್ಧತಿ ಇದ್ದರೂ, ಹಲವು ಮಂದಿ ಹಳೇ ಪದ್ಧತಿಯನ್ನೇ ಆರಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಮಾಸಿಕ ವೇತನ ಪಡೆಯುವವರು ನೂತನ ತೆರಿಗೆ ಪದ್ಧತಿಯನ್ನು ನಿರೀಕ್ಷೆ ಮಾಡಬಹುದು.
2. ಷೇರು ಮಾರುಕಟ್ಟೆಯ ನಿರೀಕ್ಷೆಗಳು
ಕೋವಿಡ್ ಮೂರನೇ ಅಲೆ ಭಯ, ಜಾಗತಿಕ ಹಿಂಜರಿತದ ಭೀತಿ, ಉಕ್ರೇನ್‌ನೊಂದಿಗೆ ರಷ್ಯಾದ ಸಂಘರ್ಷ ಹೀಗೆ ಹಲವು ಕಾರಣಗಳಿಂದ ಕಳೆದೊಂದು ವರ್ಷದಲ್ಲಿ ವಿಶ್ವದ ಷೇರು ಮಾರುಕಟ್ಟೆಗಳು ಮಂದಗತಿಯಲ್ಲಿ ಸಾಗಿವೆ. ಇದರ ಹೊರತಾಗಿಯೂ ಭಾರತದ ಷೇರು ಮಾರುಕಟ್ಟೆ ಹೆಚ್ಚಿನ ಒತ್ತಡಕ್ಕೆ ಸಿಲುಕಲಿಲ್ಲ. ಈ ನಡುವೆ ದೇಶದಲ್ಲಿ ಡಿ–ಮ್ಯಾಟ್ ಖಾತೆ ಹೊಂದಿರುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎನ್ನುವುದು ಕೂಡ ಗಮನಾರ್ಹ. 2022ರ ಡಿಸೆಂಬರ್ ಅಂತ್ಯದ ವೇಳೆ ದೇಶದಲ್ಲಿ 10.8 ಕೋಟಿಯಷ್ಟು ಡಿ–ಮ್ಯಾಟ್ ಖಾತೆಗಳು ಇವೆ ಎನ್ನುವುದು ಅಂಕಿ ಅಂಶಗಳಿಂದ ಗೊತ್ತಾದ ಮಾಹಿತಿ.
ದೀರ್ಘಾವಧಿ ಬಂಡವಾಳ ಗಳಿಕೆ (Long-Term Capital Gains – LTCG) ಮೇಲೆ ಹೇರಲಾಗಿರುವ ತೆರಿಗೆಯನ್ನು ರದ್ದುಗೊಳಿಸುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ. ಸದ್ಯ ಒಂದು ವರ್ಷಕ್ಕಿಂತ ಅಧಿಕ ಕಾಲ ಇದ್ದ ಬಂಡವಾಳದ ಮೇಲೆ ಬಂದ ಆದಾಯದ ಮೇಲೆ ಶೇ 10 ರಷ್ಟು ತೆರಿಗೆ ಇದೆ. ಇದನ್ನು ರದ್ದುಗೊಳಿಸಬೇಕು ಎಂದು ಹೂಡಿಕೆದಾರರ ನಿರೀಕ್ಷೆ ಇದೆ. ಒಂದು ವೇಳೆ ಹೀಗಾದಲ್ಲಿ ಷೇರು ಮಾರುಕಟ್ಟೆ ಇನ್ನಷ್ಟು ಬೆಳವಣಿಗೆ ಕಾಣಲಿದೆ ಎನ್ನುವುದು ತಜ್ಞರ ಅಂದಾಜು.
3. ಕಾರ್ಪೊರೇಟ್ ಉದ್ದಿಮೆಗಳು ಬಯಸುತ್ತಿರುವುದೇನು?
ಕಾರ್ಪೊರೇಟ್ ಉದ್ಯಮಗಳು, ಅದರಲ್ಲೂ ಸಣ್ಣ ಉದ್ದಿಮೆಗಳು ಕೋವಿಡ್ ಹೊಡೆತದಿಂದ ಇನ್ನೂ ಹೊರಬಂದಿಲ್ಲ. ಇವುಗಳ ಮೇಲೆ ಇರುವ ಮಾರುಕಟ್ಟೆ ಒತ್ತಡ ಕೂಡ ಕಡಿಮೆಯಾಗಿಲ್ಲ. ಪರಿಣಾಮ ಈ ಆರ್ಥಿಕ ವರ್ಷದಲ್ಲಿ ಅವುಗಳ ಬೆಳವಣಿಗೆ ಕೂಡ ಭಾರೀ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಈ ವಲಯ ಕೂಡ ಹಲವು ನೀರಿಕ್ಷೆಯೊಂದಿಗೆ ಈ ಬಾರಿಯ ಬಜೆಟ್ ಅನ್ನು ಎದುರು ನೋಡುತ್ತಿದೆ.
ಸದ್ಯ ವಿವಿಧ ಸ್ತರದ ಕೈಗಾರಿಕೆಗಳಿಗೆ ವಿವಿಧ ತೆರಿಗೆ ಪದ್ಧತಿ ಒದೆ. ಇದೇ ಥರದ ತೆರಿಗೆ ಪದ್ಧತಿಯನ್ನು ಕಾರ್ಪೊರೇಟ್ ಉದ್ದಿಮೆಗಳು ಕೂಡ ನಿರೀಕ್ಷೆ ಮಾಡುತ್ತಿವೆ. ಭಾರತವನ್ನು ಉತ್ಪಾದಕನಾ ಹಾಗೂ ಸೇವಾ ಪೂರೈಕೆದಾರ ಹಬ್ ಅನ್ನಾಗಿ ಮಾಡಲು ಇದು ಸಹಕಾರಿ ಎನ್ನುವುದು ತಜ್ಞರ ಅಭಿಪ್ರಾಯ. ಜತೆಗೆ ಸದ್ಯ ಇರುವ ಶೇ 30 ರಷ್ಟು ಕಾರ್ಪೊರೇಟ್ ತೆರಿಗೆಯನ್ನು ಶೇ 15 ಕ್ಕೆ ಇಳಿಕೆ ಮಾಡುವ ನಿರೀಕ್ಷೆ ಈ ವರ್ಗದ್ದು. ಆದರೆ ಇದರ ಸಾಧ್ಯತೆ ಕಡಿಮೆ. ಒಂದು ವೇಳೆ ಕಡಿಮೆ ಮಾಡಿದ್ದೇ ಆದಲ್ಲಿ, ಭಾರತೀಯ ಕಂಪನಿಗಳು ಜಾಗತಿಕ ಸ್ಪರ್ಧೆಯನ್ನು ಎದುರಿಸುವಲ್ಲಿ ಇನ್ನಷ್ಟು ಶಶಕ್ತವಾಗಲಿದೆ.
ಇದರ ಜೆತೆಗೆ ಭಾರತದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳು ಕೂಡ ಹಲವು ರಿಯಾಯತಿಗಳನ್ನು ಎದುರು ನೋಡುತ್ತಿವೆ. ಭಾರತದಲ್ಲಿರುವ ಉದ್ಯಮ ಲಾಭದಾಯಕ ಹಾಗೂ ಸ್ಪರ್ಧಾತ್ಮಕವಾಗಿ ಇರಲು ಭಾರತದಲ್ಲಿರುವ ಶಾಖೆಗಳಿಗೆ ರಿಯಾಯತಿ ಸಿಗುವ ನಿರೀಕ್ಷೆಯಲ್ಲಿ ವಿದೇಶಿ ಕಂಪನಿಗಳು ಇವೆ.
4. ಮನೆ ಖರೀದಿದಾರರಿಗೆ ಹೆಚ್ಚಿನ ರಿಯಾಯತಿ ಸಿಗಲಿದೆಯಾ?
ರಿಯಲ್ ಎಸ್ಟೇಟ್ ಕ್ಷೇತ್ರವು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ವರ್ಷ ಸತತವಾಗಿ ಏರಿಕೆಯಾದ ಬಡ್ಡಿ ದರದಿಂದ ಹೊಸ ಮನೆ ಖರೀದಿ ಮಾಡುವವರ ಉಮೇದು ಕಡಿಮೆ ಮಾಡಿದ್ದಲ್ಲದೇ, ಗೃಹ ಸಾಲ ಪಡೆದವರಿಗೆ ಹೆಚ್ಚಿನ ‘ಇಎಂಐ‘ ಹೊರೆ ಬಿದ್ದಿದೆ. ಹೀಗಾಗಿ ಬಾಡಿಗೆ ಮನೆ ಪಡೆಯುವವರು ಹಾಗೂ ಹೊಸ ಮನೆ ಖರೀದಿ ಮಾಡುವವರು ಹಲವು ನಿರೀಕ್ಷೆಯೊಂದಿಗೆ ಕಾದು ಕುಳಿತಿದ್ದಾರೆ.
ಇದರ ಜತೆಗೆ ಸದ್ಯ ಆದಾಯ ತೆರಿಗೆ ಸೆಕ್ಷನ್ 24 (ಬಿ) ಅಡಿ ಇರುವ ಗೃಹ ತೆರಿಗೆ ಕ್ರೆಡಿಟ್ ರಿಯಾಯಿತಿ (housing tax credit rebate) ಯನ್ನು ₹2 ಲಕ್ಷದಿಂದ ₹5 ಲಕ್ಷದವರೆಗೆ ಏರಿಕೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಬಡ್ಡಿದರ ಹೆಚ್ಚಳದಿಂದ ಆಗಿರುವ ಸಮಸ್ಯೆಗೆ ಇನ್ನೊಂದು ರೀತಿಯಲ್ಲಿ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆ ಮನೆ ಖರೀದಿದಾರರದ್ದು.
5. ಸ್ಟಾರ್ಟಪ್‌ಗಳ ನಿರೀಕ್ಷೆ ಏನು?
ಉದ್ಯೋಗ ಸೃಷ್ಠಿ, ನಾವೀನ್ಯತೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ಟಾರ್ಟಪ್‌ಗಳ ಪಾತ್ರ ಬಹುಮುಖ್ಯವಾದುದು. ಈಗಾಗಲೇ ಸ್ಟಾರ್ಟಪ್‌ಗಳಿಗೆ ಹಲವು ವಿನಾಯಿತಿಗಳು ಇದ್ದರೂ, ನೋಂದಣಿ, ಕ್ಲಿಯರೆನ್ಸ್ ಮುಂತಾದ ಪ್ರಕ್ರಿಯೆಗಳು ಕ್ಲಿಷ್ಟಕರವಾಗಿವೆ. ಜತೆಗೆ ಸ್ಟಾರ್ಟಪ್‌ಗಳಿಗೆ ಇರುವ ತೆರಿಗೆ ವಿನಾಯಿತಿ ಪಡೆಯುವ ಪ್ರಕ್ರಿಯೆ ಕೂಡ ದೀರ್ಘವಾಗಿದೆ. ಇವುಗಳನ್ನು ಸುಲಭಗೊಳಿಸಿ ಏಕಗವಾಕ್ಷಿ ಸೇವೆಯ ಮೂಲಕ ಎಲ್ಲವೂ ಸಿಗುವಂತೆ ಮಾಡಿದರೆ ಒಳಿತು ಎನ್ನುವುದು ನವ ಉದ್ದಿಮೆಗಳ ಬಯಕೆ. ಇದು ಸಾಧ್ಯವಾದರೆ ಸ್ಟಾರ್ಟಪ್ ನೋಂದಣಿ ಸುಲಭವಾಗಲಿದೆ.
6. ತಳ ಹಾಗೂ ಮಧ್ಯಮ ವರ್ಗದವರ ನಿರೀಕ್ಷೆ
ಎಂದಿನಂತೆ ತಳ ಹಾಗೂ ಮಾಧ್ಯಮ ವರ್ಗದ ಜನ ಕೂಡ ಹಲವು ನಿರೀಕ್ಷೆಯೊಂದಿಗೆ ಈ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ. ಸತತ ಎರಡು ವರ್ಷಗಳ ಕೋವಿಡ್, ಜಾಗತಿಕ ಹಿಂಜರಿತ ಹೊಡೆತದಿಂದ ತಳ ಹಾಗೂ ಮಧ್ಯಮ ಸಮುದಾಯ ಭಾರೀ ಹಿನ್ನಡೆ ಅನುಭವಿಸಿದೆ. ಯುವ ಸಮೂಹ ಕೆಲಸ ಕಳೆದುಕೊಂಡು, ನಿರುದ್ಯೋಗ ಹೆಚ್ಚಳವಾಗಿದೆ. ರೆಪೋ ದರ ಹೆಚ್ಚಳದಿಂದ ‘ಇಎಮ್‌ಐ‘ ಹೊರೆ ಹೆಚ್ಚಳವಾಗಿದೆ. ಹೀಗಾಹೀ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎನ್ನುವುದು ಈ ವರ್ಗಗಳ ನಿರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.