2023–24ನೇ ಸಾಲಿನ ಕೇಂದ್ರ ಬಜೆಟ್‌ಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಜನ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಯೊಂದಿಗೆ ಈ ಆಯವ್ಯಯವನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಈ ಬಜೆಟ್‌ನಲ್ಲಿ ಹಲವಾರು ನಿರೀಕ್ಷೆಗಳಿವೆ.
ಕೋವಿಡ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದ ಮುಂದುವರಿಕೆ, ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ನಷ್ಟ, ನಿರೀಕ್ಷಿತ ಆರ್ಥಿಕ ಹಿಂಜರಿತ ಇವೆಲ್ಲವುಗಳ ಋಣಾತ್ಮಕ ಫಲವನ್ನು ಹೆಚ್ಚಾಗಿ ಉಂಡಿರುವ ಮಧ್ಯಮ ವರ್ಗ, ಸಹಜವಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಹಲವು ರಿಯಾಯತಿಗಳನ್ನು ಎದುರು ನೋಡುತ್ತಿದೆ. ಹಾಗಾದರೆ ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸಿಗಬಹುದಾದ ರಿಯಾಯತಿಗಳೇನು? ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತೆರಿಗೆ ವಿನಾಯಿತಿ ಹೆಚ್ಚಳ
ಕಳೆದ ಹಲವಾರು ವರ್ಷಗಳಿಂದ ಪರಿಷ್ಕರಣೆಯಾಗದೇ ಇರುವ ತೆರಿಗೆ ವಿನಾಯಿತಿ ಮಿತಿಯನ್ನು ಈ ಬಾರಿಯಾದರೂ ಹೆಚ್ಚಳ ಮಾಡಬಹುದು ಎನ್ನುವ ನಿರೀಕ್ಷೆ ದೇಶದ ಬಹುಪಾಲು ತೆರಿಗೆ ಪಾವತಿದಾರರದ್ದು. ಸದ್ಯ ₹2.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದ್ದು, ಇದು ₹5 ಲಕ್ಷಕ್ಕೆ ಏರಿಕೆಯಾಗಬಹುದು ಎನ್ನುವ ನಿರೀಕ್ಷೆ ಇದೆ. ಒಂದು ವೇಳೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿದ್ದೇ ಆದಲ್ಲಿ, ಕೋಟ್ಯಾಂತರ ತೆರಿಗೆ ಪಾವತಿದಾರರಿಗೆ ರಿಲೀಫ್ ಸಿಗಲಿದೆ. ಐದು ಲಕ್ಷದ ವರೆಗೆ ಆದಾಯ ಇರುವವರು ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡುವ ಪ್ರಮೇಯವೂ ತಪ್ಪಲಿದೆ.
80C ಅಡಿ ವಿನಾಯಿತಿ ಹೆಚ್ಚಳ
ವಿವಿಧ ಖರ್ಚು ಹಾಗೂ ಹೂಡಿಕೆಗಳ ಮೇಲೆ ಆದಾಯ ತೆರಿಗೆಯ 80C ಅಡಿಯಲ್ಲಿರುವ ವಿನಾಯಿತಿ ಮೊತ್ತ ಈ ಬಜೆಟ್‌ನಲ್ಲಿ ಏರಿಕೆಯಾಗಲಿದೆ ಎನ್ನುವ ನಿರೀಕ್ಷೆ ಇದೆ. ಸದ್ಯ ಈ ಸೆಕ್ಷನ್‌ನಡಿ ₹1.5 ಲಕ್ಷ ವಿನಾಯಿತಿ ಇದೆ. ಇದು ಪರಿಷ್ಕರಣೆಯಾಗದೇ ದಶಕಗಳೇ ಸಂದಿದೆ. ಹೀಗಾಗಿ ಈ ಸೆಕ್ಷನ್‌ನಡಿ ವಿನಾಯಿತಿ ಮಿತಿ ಹೆಚ್ಚಳವಾಗಬಹುದು ಎನ್ನುವ ನಿರೀಕ್ಷೆ ಹಲವರದ್ದು.
80DDಯಲ್ಲಿ ಹಲವು ವಿನಾಯಿತಿ
ಕೋವಿಡ್ ಬಳಿಕ ಆರೋಗ್ಯ ಸಂಬಂಧ ಖರ್ಚುಗಳು ಹೆಚ್ಚಾಗಿವೆ. ಹೀಗಾಗಿ 80DD ಸೆಕ್ಷನ್‌ನಡಿ ಈ ಬಾರಿ ಹಲವು ವಿನಾಯಿತಿಗಳು ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಮಧ್ಯಮ ವರ್ಗದ ಮೇಲಿನ ಹೊರೆ ಕಡಿಮೆ ಮಾಡಲು ಸರ್ಕಾರ ಈ ಬಗ್ಗೆ ಚಿಂತನೆ ಕೂಡ ಮಾಡಬಹುದು ಎನ್ನುವ ಊಹೆ ತಜ್ಞರದ್ದು. ವೈದ್ಯರ ಭೇಟಿ ಶುಲ್ಕ, ಪ್ರಯೋಗಾಲಯ ಪರೀಕ್ಷೆ ಶುಲ್ಕ ಮುಂತಾದವುಗಳಿಗೂ ಈ ಸೆಕ್ಷನ್‌ನಡಿ ವಿನಾಯಿತಿ ಲಭಿಸುವ ಸಾಧ್ಯತೆ ಇದೆ ಎನ್ನುವುದು ಬಜೆಟ್ ತಜ್ಞರ ಅಭಿಪ್ರಾಯ.
ಮನೆ ಖರೀದಿದಾರಿಗೆ ನೆಮ್ಮದಿ ಸಿಗಬಹುದೇ?
ರೆಪೋ ದರ ಹಾಗೂ ಬಡ್ಡಿ ದರ ಏರಿಕೆಯ ಪರಿಣಾಮ ಗೃಹಸಾಲದ ಪಡೆದವರ ‘ಇಎಂಐ‘ ಹೊರೆ ಹೆಚ್ಚಳವಾಗಿದೆ. ಇದು ಮಧ್ಯಮ ವರ್ಗದ ತೆರೆಗೆ ಪಾವತಿದಾರರ ಜೇಬಿಗೆ ಕತ್ತರಿ ಹಾಕಿದೆ. ಸದ್ಯ ಗೃಹ ಸಾಲದ ಬಡ್ಡಿ ಮೇಲೆ ₹2 ಲಕ್ಷದಷ್ಟು ವಿನಾಯಿತಿ ಇದೆ. ಇದನ್ನು ಏರಿಕೆ ಮಾಡಬೇಕು ಎನ್ನುವ ಆಗ್ರಹ ಕೂಡ ಇದ್ದು, ಇದನ್ನು ಸರ್ಕಾರ ಈಡೇರಿಸುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಇದರ ಜತೆಗೆ 2019ರ ಏಪ್ರಿಲ್ 1ರಿಂದ 2022ರ ಮಾರ್ಚ್ 31ರ ನಡುವೆ ಪಡೆಯಲಾದ ಗೃಹ ಸಾಲದ ಮೇಲಿನ ಬಡ್ಡಿಗೆ 80EEA ಅಡಿ ವಿನಾಯಿತಿ ಪಡೆಯುವ ಅವಕಾಶ ಇದೆ. ಈ ಕಾಲಮಿತಿಯನ್ನು ಹೆಚ್ಚಳ ಮಾಡಿ ಎನ್ನುವ ಬೇಡಿಕೆ ಇದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆಯೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳ
2018–19ನೇ ಸಾಲಿನ ಬಳಿಕ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳವಾಗಿಲ್ಲ. ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವ ಜನ, ಸದ್ಯ ಇರುವ ₹50,000 ಮಿತಿಯನ್ನು ಕನಿಷ್ಠ ₹1 ಲಕ್ಷಕ್ಕೆ ಏರಿಸಿ ಎಂದು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆ ಸಾಕಾರಗೊಂಡರೆ ಹೆಚ್ಚಿನ ಹೊರೆ ತಪ್ಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.