ನವದೆಹಲಿ: ಕೋವಿಡ್–19 ಕಾರಣಗಳಿಂದಾಗಿ ಈ ಬಾರಿಯ ಕೇಂದ್ರ ಬಜೆಟ್ ದಾಖಲೆಗಳ ಮುದ್ರಣ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇ–ಪ್ರತಿಗಳನ್ನು ಸಂಸದರಿಗೆ ವಿತರಿಸಲಾಗುತ್ತದೆ.
ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ದಾಖಲೆಗಳ ಭೌತಿಕ ಮುದ್ರಣ ನಡೆಯುತ್ತಿಲ್ಲ. 1947ರ ನವೆಂಬರ್ 26ರಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಬಜೆಟ್ ಮಂಡಿಸಲಾಯಿತು. ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚ, ಹೊಸ ಆರ್ಥಿಕ ವರ್ಷಕ್ಕೆ ಅಳವಡಿಸಿಕೊಳ್ಳುವ ತೆರಿಗೆಯಲ್ಲಿನ ಬದಲಾವಣೆ ಸೇರಿದಂತೆ ಇತರೆ ಕ್ರಮಗಳನ್ನು ಮುಂಗಡ ಪತ್ರ ಒಳಗೊಂಡಿರುತ್ತದೆ.
ಕಾಗದ ರಹಿತವಾಗಿ ಫೆಬ್ರುವರಿ 1ರಂದು ಏಪ್ರಿಲ್‌ನಿಂದ ಆರಂಭವಾಗಲಿರುವ ಹಣಕಾಸು (2021–22) ವರ್ಷಕ್ಕೆ ಸಂಬಂಧಿಸಿದ ಮುಂಗಡ ಪತ್ರವು ಮಂಡನೆಯಾಗಲಿದೆ. ಎಲ್ಲ ಸಂಸದರು ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಯ ಡಿಜಿಟಲ್ ಪ್ರತಿಗಳನ್ನು ಪಡೆಯಲಿದ್ದಾರೆ.
ಹಲ್ವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಜೆಟ್ ಪ್ರತಿಗಳ ಮುದ್ರಣ ಕಾರ್ಯಕ್ಕೆ ಚಾಲನೆ ನೀಡುವ ವಾಡಿಕೆ ಇದೆ. ಮುದ್ರಣ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿ ಹಣಕಾಸು ಸಚಿವಾಲಯದ ನೆಲ ಮಾಳಿಗೆಯ ಮುದ್ರಣಾಲಯದಲ್ಲಿ ಉಳಿಯುತ್ತಾರೆ. ಬಜೆಟ್ ಮಂಡನೆಯಾದ ಬಳಿಕವಷ್ಟೇ ಸಿಬ್ಬಂದಿ ಬಂಧನದಿಂದ ಹೊರ ಬರುತ್ತಾರೆ. ಆದರೆ, ಈ ಬಾರಿ ಮುದ್ರಣ ಇಲ್ಲದಿದ್ದರೂ ಹಲ್ವಾ ತಯಾರಿಸಿ ಬಜೆಟ್ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯುವ ಕುರಿತು ಇನ್ನೂ ತಿಳಿದು ಬಂದಿಲ್ಲ.
ಹಾಗೇ ಬಜೆಟ್ ದಿನದಂದು ಟ್ರಕ್‌ಗಳಲ್ಲಿ ಬಜೆಟ್ ದಾಖಲೆಗಳನ್ನು ಹೊತ್ತು ಬರುವುದು ಹಾಗೂ ಭದ್ರತಾ ಸಿಬ್ಬಂದಿ ಅವುಗಳ ತಪಾಸಣೆ ನಡೆಸುವುದು ಈ ಬಾರಿ ಇರುವುದಿಲ್ಲ.
ಕೊರೊನಾ ವೈರಸ್ ಸೋಂಕಿನ ಸಾಧ್ಯತೆ ತಡೆಯುವ ನಿಟ್ಟಿನಲ್ಲಿ ಭೌತಿಕ ರೂಪದ ಬಜೆಟ್ ಪ್ರತಿಗಳನ್ನು ವಿತರಿಸದಿರಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
'ಈವರೆಗೂ ಮಂಡನೆಯಾಗದಿರುವ ರೀತಿಯ ಬಜೆಟ್ ಪ್ರಸ್ತುತ ಪಡಿಸಲಾಗುತ್ತದೆ. ಅದಕ್ಕೆ ನಿಮ್ಮಿಂದ ಸಲಹೆಗಳು, ನಿರೀಕ್ಷೆಗಳ ಪಟ್ಟಿ ಅಗತ್ಯವಾಗಿದೆ,..' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎಂಟನೇ ಬಜೆಟ್ 2021ರ ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.
ಫೆಬ್ರುವರಿ ಕೊನೆಯಲ್ಲಿ ಬಜೆಟ್ ಮಂಡನೆ ರೂಢಿಯನ್ನು ಮುರಿದು 2017ರ ಫೆಬ್ರುವರಿ 1ರಂದು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದರು. 1999ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆಯ ಸಮಯವನ್ನು ಸಂಜೆ 5ಕ್ಕೆ ಬದಲಾಗಿ ಬೆಳಿಗ್ಗೆ 11ಕ್ಕೆ ಬದಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.