ADVERTISEMENT

ಆರ್ಥಿಕ ಸಮೀಕ್ಷೆ | ಮುಂದಿನ ವರ್ಷ ತಗ್ಗಲಿದೆ ಜಿಡಿಪಿ: ಸಚಿವೆ ನಿರ್ಮಲಾ ಸೀತಾರಾಮನ್

ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಅನ್ನಪೂರ್ಣ ಸಿಂಗ್
Published 1 ಫೆಬ್ರುವರಿ 2022, 2:01 IST
Last Updated 1 ಫೆಬ್ರುವರಿ 2022, 2:01 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯು ಶೇಕಡ 9.2ರಷ್ಟು ಇರಲಿದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡನೆ ಯಾಗಿರುವ ಆರ್ಥಿಕ ಸಮೀಕ್ಷೆ ವರದಿಯು ಹೇಳಿದೆ. ಮುಂದಿನ ಹಣಕಾಸು ವರ್ಷದಲ್ಲಿ (2022–23) ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ತುಸು ತಗ್ಗಲಿದ್ದು, ಅದು ಶೇ 8ರಿಂದ ಶೇ 8.5ರ ನಡುವೆ ಇರಲಿದೆ ಎಂದು ವರದಿ ಅಂದಾಜು ಮಾಡಿದೆ.

2022–23ರಲ್ಲಿ ಸಾಂಕ್ರಾಮಿಕದಿಂದಾಗಿ ಯಾವುದೇ ತೊಂದರೆಗಳು ಎದುರಾಗದೆ ಇದ್ದರೆ, ಮುಂಗಾರು ಮಳೆಯು ಸಹಜ ಪ್ರಮಾಣದಲ್ಲಿ ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ನಿಂದ 75 ಡಾಲರ್ ನಡುವೆ ಇದ್ದರೆ ಹಾಗೂ ಜಾಗತಿಕ ಮಟ್ಟದಲ್ಲಿ ಸರಕುಗಳ ಪೂರೈಕೆ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳು ನಿವಾರಣೆ ಆದರೆ ಮಾತ್ರ ಶೇ 8–8.5ರ ಬೆಳವಣಿಗೆ ಸಾಧ್ಯವಾಗಲಿದೆ ಎಂದು ವರದಿ
ಹೇಳಿದೆ. ಆದರೆ, ಕಚ್ಚಾ ತೈಲದ ಬೆಲೆಯು ಈಗಲೇ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗೆ ತಲುಪಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮೀಕ್ಷೆ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದರು.

ಅರ್ಥ ವ್ಯವಸ್ಥೆಯು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ ಎಂದು ಸಮೀಕ್ಷೆ ಹೇಳಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ, ಹೂಡಿಕೆ ಕೂಡ ಜಾಸ್ತಿ ಆಗಲಿದೆ ಎಂಬ ಆಶಾಭಾವನೆಯನ್ನು ವರದಿಯು ವ್ಯಕ್ತ
ಪಡಿಸಿದೆ. ‘ಖಾಸಗಿ ಹೂಡಿಕೆಯ ಚೇತರಿಕೆಯು ಶೈಶವಾವಸ್ಥೆಯಲ್ಲಿ ಇದೆ. ಆದರೆ, ಹೂಡಿಕೆ ಹೆಚ್ಚಾಗು
ತ್ತದೆ ಎಂಬುದರ ಸೂಚನೆಗಳು ಕಂಡುಬರುತ್ತಿವೆ’ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಕೇಂದ್ರ ಸರ್ಕಾರವು ಬಂಡವಾಳ ವೆಚ್ಚವನ್ನು ಇನ್ನೂ ಹೆಚ್ಚು ಮಾಡುವ ಅಗತ್ಯ ಇದೆ. ಅದು ಈ ಬಾರಿಯ
ಬಜೆಟ್ ಮೂಲಕ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿದೆ.

ಕೋವಿಡ್‌ ಸಾಂಕ್ರಾಮಿಕದ ಪರಿಣಾಮವು ಅತ್ಯಂತ ಕಡಿಮೆ ಇದ್ದ ಕೃಷಿ ವಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 3.9ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಹೇಳಲಾಗಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಯು ದುಬಾರಿ ಆಗಿರುವ ಕಾರಣ ಹಣದುಬ್ಬರ ಹೆಚ್ಚಳದ ಮೇಲೆ ದೇಶವು ಒಂದು ಕಣ್ಣು ಇರಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದೆ.

ದೇಶದ ಆರ್ಥಿಕ ಚಟುವಟಿಕೆಗಳ ಪಾಲಿನ ಬೆನ್ನೆಲುಬಿನಂತೆ ಇರುವ ಸೇವಾ ವಲಯದ ಬೆಳವಣಿಗೆ ವಿಚಾರ
ವಾಗಿ ಆರ್ಥಿಕ ಸಮೀಕ್ಷೆಯು ಆಶಾಭಾವನೆಯನ್ನು ಹೊಂದಿದೆ. ಸಾಂಕ್ರಾಮಿಕದ ಕಾರಣದಿಂದಾಗಿ ದೊಡ್ಡ ಮಟ್ಟದ ನಷ್ಟಕ್ಕೆ ಗುರಿಯಾಗಿದ್ದ ಈ ವಲಯವು, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 8.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ. ಹಿಂದಿನ ವರ್ಷದಲ್ಲಿ ಈ ವಲಯವು ಶೇ (–)8.4ರಷ್ಟು ಕುಸಿತ ಕಂಡಿತ್ತು.

ಸಾರ್ವಜನಿಕರ ಕಡೆಯಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಹಾಗೂ ಸೇವೆಗಳಿಗೆ ಬರುವ ಬೇಡಿಕೆಯು ಗಣನೀಯವಾಗಿ ಹೆಚ್ಚಳ ಕಂಡಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರದ ಕಡೆಯಿಂದ ಬರುವ ಬೇಡಿಕೆಗಳು
ಶೇ 7.6ರ ಪ್ರಮಾಣದಲ್ಲಿ ಹೆಚ್ಚಳವಾಗಿ, ಕೋವಿಡ್ ಪೂರ್ವದ ಸ್ಥಿತಿಯನ್ನು ದಾಟಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೂಡಿಕೆಗಳು ಶೇ 15ರಷ್ಟು ಏರಿಕೆ ದಾಖಲಿಸಿ, ಕೋವಿಡ್‌ ಪೂರ್ವ ಸ್ಥಿತಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಜೆಟ್ ಮಂಡನೆ ಇಂದು:

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022–23ನೇ ಸಾಲಿನ ಬಜೆಟ್‌ಅನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಐಷಾರಾಮಿ ವಸ್ತುಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸುವ ಪ್ರಸ್ತಾವನೆ ಬಜೆಟ್‌ನಲ್ಲಿ ಇರುವ ನಿರೀಕ್ಷೆ ಇದೆ. ವೆಚ್ಚಗಳನ್ನು ಜಾಗರೂಕವಾಗಿ ಮಾಡು
ವುದು ಹಾಗೂ ಬೆಳವಣಿಗೆಗೆ ಇಂಬು ಕೊಡುವುದರ ನಡುವೆ ಸಮತೋಲ ಸಾಧಿಸುವ ಯತ್ನವನ್ನು ನಿರ್ಮಲಾ ಅವರು ಮಾಡುವ ನಿರೀಕ್ಷೆ ಇದೆ.

ಜಿಎಸ್‌ಟಿ ಸಂಗ್ರಹ ₹ 1.38 ಲಕ್ಷ ಕೋಟಿ:

ನವದೆಹಲಿ (ಪಿಟಿಐ): ಜನವರಿ ತಿಂಗಳಿನಲ್ಲಿ ಸರಕು ಮತ್ತು ಸೇವಾ
ತೆರಿಗೆ (ಜಿಎಸ್‌ಟಿ) ಸಂಗ್ರಹ ₹ 1.38 ಲಕ್ಷ ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇಕಡ 15ರಷ್ಟು ಹೆಚ್ಚಳ ಆಗಿದೆ.

ಜನವರಿಯಲ್ಲಿ ಇಷ್ಟು ಮೊತ್ತ ಸಂಗ್ರಹ ಆಗಿರುವುದರಿಂದಾಗಿ, ಸತತ ನಾಲ್ಕು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹವು ₹ 1.30 ಲಕ್ಷ ಕೋಟಿಗಿಂತ ಹೆಚ್ಚಾದಂತೆ ಆಗಿದೆ.

ಜನವರಿಯಲ್ಲಿ ಆಗಿರುವ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 24,674 ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 32,016 ಕೋಟಿ ಹಾಗೂ ಏಕೀಕೃತ ಜಿಎಸ್‌ಟಿ ಪಾಲು ₹ 72,030 ಕೋಟಿ, ಸೆಸ್‌ನ ಪಾಲು ₹ 9,674 ಕೋಟಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಇದುವರೆಗೆ ತಿಂಗಳೊಂದರಲ್ಲಿ ಆಗಿರುವ ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹ ಮೊತ್ತ ₹ 1.39 ಲಕ್ಷ ಕೋಟಿ. ಇದು 2021ರ ಏಪ್ರಿಲ್‌ನಲ್ಲಿ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.