ಬೆಂಗಳೂರು: ಆರ್ಥಿಕ ಸಮೀಕ್ಷೆ 2020–21ರ ಪ್ರಕಾರ, ಭಾರತದ ಫಾರ್ಮಾಸಿಟಿಕಲ್ ವಲಯವು ಮುಂದಿನ ಹತ್ತು ವರ್ಷಗಳಲ್ಲಿ ಮೂರು ಪಟ್ಟು ಬೆಳವಣಿಗೆ ಕಾಣಲಿದೆ.
ಪ್ರಸ್ತುತ 41 ಬಿಲಿಯನ್ ಡಾಲರ್ (₹2.98 ಲಕ್ಷ ಕೋಟಿ) ಮೌಲ್ಯದ ದೇಶದ ಫಾರ್ಮಾ ವಲಯವು 2024ರ ವೇಳೆಗೆ 65 ಬಿಲಿಯನ್ ಡಾಲರ್ ತಲುಪಲಿದ್ದು, 2030ಕ್ಕೆ ಭಾರತದ ಫಾರ್ಮಾ ವಲಯದ ಮೌಲ್ಯವು 120ರಿಂದ 130 ಬಿಲಿಯನ್ ಡಾಲರ್ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.
ಕಚ್ಚಾ ವಸ್ತುಗಳು ಹಾಗೂ ಕೌಶಲ್ಯ ಹೊಂದಿರುವ ಕಾರ್ಯಪಡೆಯ ಲಭ್ಯತೆಯಿಂದಾಗಿ ಜೆನೆರಿಕ್ ಔಷಧ ತಯಾರಿಕೆಯಲ್ಲಿ ಅಂತರರಾಷ್ಟ್ರೀಯ ಕೇಂದ್ರವಾಗಿ ಭಾರತವು ಹೊರಹೊಮ್ಮಿದೆ. ಅಮೆರಿಕದ ಹೊರಗೆ ಯುಎಸ್–ಎಫ್‌ಡಿಎ ಪೂರಕವಾದ ಅತಿ ಹೆಚ್ಚು (262ಕ್ಕೂ ಅಧಿಕ) ಫಾರ್ಮಾ ಘಟಕಗಳಿರುವುದು ಭಾರತದಲ್ಲಿ ಮಾತ್ರ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ.
2023ರ ವೇಳೆಗೆ ಜಾಗತಿಕ ಫಾರ್ಮಾಸಿಟಿಕಲ್ ಮಾರುಕಟ್ಟೆ ಮೌಲ್ಯ 1.5 ಟ್ರಿಲಿಯನ್ ಡಾಲರ್ ದಾಟಲಿದೆ ಎಂದು ಅಂದಾಜಿಸಿದೆ.
ಕೋವಿಡ್–19 ಅವಕಾಶ ಹಾಗೂ ಸವಾಲುಗಳನ್ನು ಮುಂದಿಡುವ ಮೂಲಕ ಭಾರತವು 'ವಿಶ್ವದ ಫಾರ್ಮಸಿ' ಆಗಿ ಹೊರಹೊಮ್ಮಿದೆ. 2020ರ ಏಪ್ರಿಲ್–ಅಕ್ಟೋಬರ್ ನಡುವೆ ಭಾರತದ ಫಾರ್ಮಾ ತಯಾರಿಕೆಗಳ ರಫ್ತು ಪ್ರಮಾಣ ಶೇ 18ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 11.1 ಬಿಲಿಯನ್ ಡಾಲರ್ ಆಗಿದೆ. 2019ರ ಏಪ್ರಿಲ್–ಅಕ್ಟೋಬರ್‌ನಲ್ಲಿ 9.4 ಬಿಲಿಯನ್ ಮೌಲ್ಯದ ಉತ್ಪಾದನೆಗಳನ್ನು ರಫ್ತು ಮಾಡಲಾಗಿತ್ತು. 2019ರಲ್ಲಿ ಶೇ 5.1ರಷ್ಟಿದ್ದ ಒಟ್ಟು ರಫ್ತು ಪ್ರಮಾಣ, 2020ರ ಏಪ್ರಿಲ್–ಅಕ್ಟೋಬರ್‌ನಲ್ಲಿ ಶೇ 7.3ರಷ್ಟಾಗಿದೆ. ಆ ಮೂಲಕ ಮೂರನೇ ಅತಿ ಹೆಚ್ಚು ರಫ್ತು ಮಾಡಲಾದ ಸರಕು ಫಾರ್ಮಾ ವಲಯದಿಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.