ನವದೆಹಲಿ: ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯು ಮಹತ್ವ ಪಡೆದಿದೆ.
2020–21ನೇ ಹಣಕಾಸು ವರ್ಷದಲ್ಲಿ ಎಂಎಸ್‌ಪಿ ಮೂಲಕ ಗೋಧಿ ಬೆಳೆಗಾರರಿಗೆ ₹75,100 ಪಾವತಿಯಾಗಿದೆ ಎಂದರು. ಕೃಷಿ ಕ್ಷೇತ್ರಕ್ಕೆ ಮೀಸಲಾಗಿರುವ ಅನುದಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದನ್ನು ಅಂಕಿ–ಅಂಶಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ಸರ್ಕಾರಿಂದ 43.36 ಲಕ್ಷ ಮಂದಿ ಗೋಧಿ ಬೆಳೆಗಾರರು ಪ್ರಯೋಜನ ಪಡೆದಿದ್ದಾರೆ. ಈ ಸಂಖ್ಯೆ ಕಳೆದ ವರ್ಷ 35.57 ಲಕ್ಷ ಇತ್ತು ಎಂದು ಸೋಮವಾರ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಗೋಧಿ ಬೆಳೆಗಾರರಿಗೆ 2020ನೇ ಸಾಲಿನಲ್ಲಿ ₹62,802 ಕೋಟಿ ಪಾವತಿಸಲಾಗಿದ್ದರೆ, 2014ನೇ ಸಾಲಿನಲ್ಲಿ ₹33,874 ಕೋಟಿ ಪಾವತಿಯಾಗಿತ್ತು. ಎಲ್ಲ ಉತ್ಪನ್ನಗಳಿಗೂ ಸರ್ಕಾರವು ಉತ್ಪಾದನೆಯ ಕನಿಷ್ಠ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುತ್ತಿದೆ. ಮೋದಿ ಅವರ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 2021ನೇ ಸಾಲಿನಲ್ಲಿ ಮೀಸಲಿರಿಸಿದ್ದ ₹30,000 ಕೋಟಿಯನ್ನು ಮುಂದಿನ ಹಣಕಾಸು ವರ್ಷಕ್ಕೆ ₹40,000 ಕೋಟಿ ಹೆಚ್ಚಿಸಲಾಗುತ್ತದೆ.
ಎಲೆಕ್ಟ್ರಾನಿಕ್ ನ್ಯಾಷನಲ್ ಮಾರ್ಕೆಟ್ ಜೊತೆಗೆ ಇನ್ನೂ 1,000 ಮಂಡಿಗಳನ್ನು ಸಂಯೋಜಿಸಲಾಗುತ್ತದೆ. ಬೇಗ ಹಾಳಾಗುವ ಬೆಳೆಗಳು ಆಪರೇಷನ್ ಗ್ರೀನ್ ಸ್ಕೀಮ್ ಅಡಿಯಲ್ಲಿ ಬರಲಿವೆ ಎಂದರು.
* ಗೋಧಿ ಬೆಳೆಗಾರರಿಗೆ
2020-21 ರಲ್ಲಿ ₹75,060 ಕೋಟಿ
* ಭತ್ತ ಖರೀದಿ ಪ್ರಕ್ರಿಯೆಯಿಂದ ರೈತರಿಗೆ ಪಾವತಿ
2013-14 - ₹63,928 ಕೋಟಿ
2019-20 - ₹1,41,930 ಕೋಟಿ
2020-21 - ₹1,72,742 ಕೋಟಿ (ಅಂದಾಜು) ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
* ಫಲಾನುಭವಿ ರೈತರ ಸಂಖ್ಯೆ
2019-20ರಲ್ಲಿ 1.24 ಕೋಟಿಯಿಂದ 2020-21ರಲ್ಲಿ 1.54 ಕೋಟಿಗೆ ಹೆಚ್ಚಳವಾಗಿದೆ.
2013-14ಕ್ಕಿಂತ 40 ಪಟ್ಟು ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.