ADVERTISEMENT

ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಮಾಡಿ ತೋರಿಸಲಿ: ರಾಹುಲ್‌ಗೆ ನಿರ್ಮಲಾ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2022, 15:55 IST
Last Updated 1 ಫೆಬ್ರುವರಿ 2022, 15:55 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಇದೊಂದು ಶೂನ್ಯ ಬಜೆಟ್ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೊದಲು ಬಜೆಟ್ ಅನ್ನು ಸರಿಯಾಗಿ ಪಠಿಸಿ ಬನ್ನಿ, ಆಮೇಲೆ ಪ್ರತಿಕ್ರಿಯಿಸಿ ಎಂದು ತಿರುಗೇಟು ನೀಡಿದ್ದಾರೆ.

ವಿಮರ್ಶೆಗಳನ್ನು ಪರಿಗಣಿಸುತ್ತೇನೆ. ಬಜೆಟ್ ಅರ್ಥಮಾಡಿಕೊಂಡು ಬಂದು ಪ್ರಶ್ನಿಸಿದವರಿಗೆ ಉತ್ತರಿಸಲು ತಯಾರಾಗಿದ್ದೇನೆ. ಆದರೆ ಬಜೆಟ್ ಅರ್ಥ ಮಾಡಿಕೊಳ್ಳದವರಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಇದೊಂದು ಶೂನ್ಯ ಬಜೆಟ್. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ದುಡಿಯುವ, ಮಧ್ಯಮ, ಬಡ, ಯುವ ಜನಾಂಗ, ರೈತರು ಹಾಗೂ ಎಂಎಸ್‌ಎಂಇಗಳಿಗೆ ಏನೂ ಲಭಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.

ತ್ವರಿತ ಪ್ರತಿಕ್ರಿಯೆಯೊಂದಿಗೆ ಬರುವ ಜನರ ಮೇಲೆ ನನಗೆ ಅನುಕಂಪವಿದೆ. ಟ್ವಿಟರ್‌ನಲ್ಲಿ ಏನನ್ನಾದರೂ ಹಾಕುವುದರಿಂದ ನೆರವಾಗುವುದಿಲ್ಲ. ಅವರು ಮೊದಲು ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಏನನ್ನಾದರೂ ಮಾಡಿ ತೋರಿಸಲಿ. ನಂತರ ಈ ಬಗ್ಗೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಕಠಿಣ ಕಾಲಘಟ್ಟದಲ್ಲೂ ಆರ್ಥಿಕ ಬೆಳವಣಿಗೆ ಕಾಪಾಡಿಕೊಂಡಿದ್ದೇವೆ ಎಂದು ಸೀತಾರಾಮನ್ ತಿಳಿಸಿದರು.

‘ತೆರಿಗೆ ಏರಿಸದ ನಿರ್ಧಾರ ಸಮಯೋಚಿತ’
ಕೋವಿಡ್ ಸಾಂಕ್ರಾಮಿಕದಿಂದ ದೇಶದ ಜನರು ಬಿಕ್ಕಟ್ಟಿನಲ್ಲಿರುವಾಗ, ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತೆರಿಗೆಯನ್ನು ಹೆಚ್ಚಿಸದಿರುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡುವ ಡಿಜಿಟಲ್ ಕರೆನ್ಸಿಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ ಸೀತಾರಾಮನ್ ಅವರು, ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ಶೇ30ರಷ್ಟು ತೆರಿಗೆಯನ್ನು ಕ್ರಿಪ್ಟೋಕರೆನ್ಸಿಗಳ ಮೇಲೆ ಮಾತ್ರ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸುವಸಂದರ್ಭದಲ್ಲಿ ಮಹಾಭಾರತದ ಸಾಲೊಂದನ್ನು ಉಲ್ಲೇಖಿಸಿದರು.ಮಹಾಭಾರತದ ಶಾಂತಿ ಪರ್ವವನ್ನು ಉಲ್ಲೇಖಿಸಿದ ಅವರು, ಧರ್ಮದ ಹಾದಿಯಲ್ಲಿ ಸರ್ಕಾರವನ್ನು ನಡೆಸುವ ದೊರೆ, ಪ್ರಜೆಗಳ ಕಲ್ಯಾಣಕ್ಕಾಗಿ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.