ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ನಿರೀಕ್ಷಿತ ಅನುದಾನ ಸಿಕ್ಕಿಲ್ಲ. ಸಂಸತ್‌ನಲ್ಲಿ ಬಜೆಟ್ ಭಾಷಣದ ನಂತರ ಬಹಿರಂಗಗೊಂಡಅಂಕಿಅಂಶಗಳನ್ನು ಗಮನಿಸಿದ ಹಲವು ವಿಶ್ಲೇಷಕರು, ‘ರಕ್ಷಣಾ ವ್ಯವಸ್ಥೆಯ ಆಧುನೀಕರಣಕ್ಕೆ ಸರ್ಕಾರ ಅಗತ್ಯ ಸಂಪನ್ಮೂಲ ಒದಗಿಸುವಲ್ಲಿ ವಿಫಲವಾದ್ದೇಕೆ’ಎಂದು ಪ್ರಶ್ನಿಸಿದ್ದಾರೆ.
ಭೂಸೇನೆ ಮತ್ತು ನೌಕಾಪಡೆಗೆ ಹೋಲಿಸಿದರೆ ವಾಯುಪಡೆಯ ಸ್ಥಿತಿ ಹೆಚ್ಚು ವಿಷಮಿಸಿದಂತೆ ಕಾಣುತ್ತದೆ. ಕಳೆದ ವರ್ಷ ಫೆಬ್ರುವರಿ 26ರಂದುಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ವಾಯುಪಡೆಯ ಯುದ್ಧವಿಮಾನಗಳುಮಿಂಚಿನ ದಾಳಿ ನಡೆಸಿದ್ದವು. ಇದಕ್ಕೆ ಪ್ರತೀಕಾರ ತೀರಿಸಲೆಂದು ಭಾರತೀಯ ಸೇನಾ ನೆಲೆಗಳತ್ತ ವ್ಯೂಹ ರಚಿಸಿಕೊಂಡು ಬಂದಿದ್ದ ಪಾಕ್ ವಾಯುಸೇನೆ ತನ್ನ ಸಾಮರ್ಥ್ಯ ತೋರಿಸಿತ್ತು.
ಪಾಕ್ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವುದು ಭಾರತದ ರಣತಂತ್ರ ನಿಪುಣರು ಊಹಿಸಿದಷ್ಟು ಸುಲಭವಾಗಿರಲಿಲ್ಲ. ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಮತ್ತು ಯುದ್ಧೋಪಕರಣಗಳಿಗೆ (ವಾಯುದಾಳಿಯ ಮುನ್ಸೂಚನೆ ನೀಡುವ ವ್ಯವಸ್ಥೆ, ಸುಧಾರಿತ ಕ್ಷಿಪಣಿಗಳು)ಹೋಲಿಸಿದರೆ ಪಾಕ್ ವಾಯುಪಡೆಯ ಸಾಮರ್ಥ್ಯ ಹೆಚ್ಚಾಗಿರುವ ಕಹಿಸತ್ಯಈ ಸಂದರ್ಭ ಬೆಳಕಿಗೆ ಬಂದಿತ್ತು.
ಭಾರತೀಯ ವಾಯುಪಡೆಯ ಕ್ಷಿಪ್ರಗತಿಯ ಸುಧಾರಣೆ ಅಗತ್ಯ ಎಂಬುದನ್ನು ಮನಗಂಡ ಹಿರಿಯ ಅಧಿಕಾರಿಗಳು ಆಧುನೀಕರಣ ಪ್ರಸ್ತಾವಕ್ಕೆ ವೇಗ ಸಿಗಬೇಕು ಎಂದು ಸರ್ಕಾರದ ಗಮನಕ್ಕೆ ತಂದಿದ್ದರು.ಆದರೆ ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದ ಅನುದಾನ ಒದಗಿಸದ ಕಾರಣ ಆಧುನೀಕರಣ ಪ್ರಕ್ರಿಯೆ ಮತ್ತಷ್ಟು ತಡವಾಗುವ ಅಪಾಯ ಎದುರಾಗಿದೆ.
ರಾಷ್ಟ್ರೀಯ ಭದ್ರತೆಯ ಆತಂಕಗಳನ್ನು ಪರಿಗಣಿಸಿ ವಾಯುಪಡೆಗೆ 42 ಫೈಟರ್ ಸ್ಕ್ವಾರ್ಡನ್ (18 ಯುದ್ಧವಿಮಾನಗಳಿರುವ ತುಕಡಿ) ಹೊಂದಲು ಅವಕಾಶವಿದೆ. ಆದರೆ ಪ್ರಸ್ತುತ ಯುದ್ಧವಿಮಾನಗಳ ಕೊರತೆಯಿಂದಾಗಿ ಈ ಪ್ರಮಾಣ ಕೇವಲ 28 ಫೈಟರ್ ಸ್ಕ್ವಾರ್ಡನ್‌ಗೆ ಇಳಿದಿದೆ. ಈ ಪೈಕಿ 10 ಸ್ಕ್ವಾರ್ಡನ್‌ಗಳು ಎಂದೋ ವಿದಾಯ ಹೇಳಬೇಕಿದ್ದಮಿಗ್ 21 ಬೈಸಾನ್ ಮತ್ತು ಜಾಗ್ವಾರ್‌ನಂಥ ಹಳೇಕಾಲದ ಯುದ್ಧವಿಮಾನಗಳನ್ನು ಹೊಂದಿವೆ. ಹಳೇ ಯುದ್ಧ ವಿಮಾನಗಳನ್ನು ಬದಲಿಸಲೆಂದೇ ವಾಯುಪಡೆ 200 ಹೊಸ ವಿಮಾನಗಳ ಖರೀದಿ ಪ್ರಕ್ರಿಯೆಗೆ ಆಸಕ್ತಿ ತೋರಿತ್ತು.
ಕಳೆದ ಬಾರಿಗಿಂತಲೂ ಕಡಿಮೆ ಅನುದಾನ
ಕಳೆದ ಆರ್ಥಿಕ ವರ್ಷದಲ್ಲಿ ವಾಯುಪಡೆಗೆ ಸರ್ಕಾರ ₹ 44,869.14ಕೋಟಿ ಅನುದಾನ ನೀಡಿತ್ತು.ಈ ಬಾರಿ ಇದು ₹ 43,281.91 ಕೋಟಿಗೆ ಕುಸಿದಿದೆ. ಅಂದರೆ ಅನುದಾನದ ಪ್ರಮಾಣ ಶೇ 3.5ರಷ್ಟು ಕಡಿಮೆಯಾಗಿದೆ. ಈಗಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿರುವ ಯುದ್ಧ ವಿಮಾನಗಳ ಪೂರೈಕೆಗಾಗಿ ವಾಯುಪಡೆ ಹಲವು ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕಿದೆ. ಇದರ ಜೊತೆಗೆ ಹೊಸದಾಗಿ ಸಾಕಷ್ಟು ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಇಂಥ ಸ್ಥಿತಿಯಲ್ಲಿ ಮಂಜೂರಾಗಿರುವ ಮೊತ್ತ ಏನೇನೂ ಸಾಲದು ಎನ್ನುವ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರ ಮಾತನ್ನು ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.
ಭೂಸೇನೆ ಮತ್ತು ನೌಕಾಪಡೆ
ಕಳೆದ ಬಜೆಟ್‌ನಲ್ಲಿ ಭೂಸೇನೆಗೆ ₹ 29,666.90 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಇದು ಶೇ 8.4ರಷ್ಟು ಏರಿಕೆ ಕಂಡಿದ್ದು, ₹ 32,392.38 ಕೋಟಿ ಅನುದಾನವನ್ನು ಘೋಷಿಸಲಾಗಿದೆ.
ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗುತ್ತಿರುವ ಚೀನಾ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಹೊತ್ತ ನೌಕಾಪಡೆಗೆ ಕಳೆದ ಬಜೆಟ್‌ಗಿಂತ ಶೇ 2ರಷ್ಟು ಹೆಚ್ಚು ಅನುದಾನ ಸಿಕ್ಕಿದೆ. ಕಳೆದ ಬಜೆಟ್‌ನಲ್ಲಿ ₹ 26,156.43 ಕೋಟಿ ಅನುದಾನ ಘೋಷಿಸಲಾಗಿತ್ತು. ಈ ಬಾರಿ ಅದು ₹ 26,688.28 ಕೋಟಿಗೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.