ನವದೆಹಲಿ: ‘ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಿ, ಮಹಿಳೆಯರು ವರ್ಷಕ್ಕೆ ಕನಿಷ್ಠ 1 ಲಕ್ಷ ದುಡಿಯುವಂತೆ ಮಾಡುವ ಕೇಂದ್ರದ ಲಕ್ಷಾಧಿಪತಿ ದೀದಿ (ಲಖ್‌ಪತಿ ದೀದಿ) ಯೋಜನೆಯನ್ನು ಈಗಿರುವ 2 ಕೋಟಿಯಿಂದ 3 ಕೋಟಿ ಫಲಾನುಭವಿಗಳಿಗೆ ವಿಸ್ತರಿಸಲಾಗುತ್ತದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇಂದು ಮಧ್ಯಂತರ ಬಜೆಟ್ ಮಂಡಿಸಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದೆ ಎಂದಿದ್ದಾರೆ.
‘ದೇಶದ 83 ಲಕ್ಷ ಸ್ವ–ಸಹಾಯ ಗುಂಪುಗಳಲ್ಲಿ ಸುಮಾರು 9 ಕೋಟಿ ಮಹಿಳೆಯರು ಇದ್ದಾರೆ . ಈ ಗುಂಪುಗಳು ಮಹಿಳೆಯರ ಸಬಲೀಕರಣದ ಮೂಲಕ ಗ್ರಾಮೀಣ ಭಾಗದ ಆರ್ಥಿಕ–ಸಾಮಾಜಿಕ ಪರಿಸ್ಥಿತಿಯನ್ನು ಬದಲಿಸಿವೆ. ಈಗಾಗಲೇ ಸುಮಾರು 1 ಕೋಟಿ ಮಹಿಳೆಯರು ಲಕ್ಷಾಧಿಪತಿಗಳಾಗಿದ್ದು, ಇತರರಿಗೆ ಸ್ಪೂರ್ತಿಯಾಗಿದ್ದಾರೆ’ ಎಂದರು.
ಕಳೆದ ವರ್ಷ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್‌ಪತಿ ದೀದಿ’ ಯೋಜನೆಯನ್ನು ಘೋಷಿಸಿದ್ದರು. ಸ್ವ–ಸಹಾಯ ಗುಂಪುಗಳಲ್ಲಿ ಸಕ್ರಿಯರಾಗಿರುವ ಎರಡು ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದಿದ್ದರು.
ಏನಿದು ಯೋಜನೆ?
ಸ್ವ–ಸಹಾಯ ಗುಂಪುಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಮಹಿಳೆಯರಿಗೆ ಕೌಶಲ ತರಬೇತಿ ನೀಡುವುದರ ಮೂಲಕ ಆದಾಯ ಗಳಿಸುವ ಮಾರ್ಗವನ್ನು ತೋರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಸ್ವ–ಸಹಾಯ ಗುಂಪುಗಳ ಮೂಲಕ ಕಾರ್ಯಾಗಾರಗಳನ್ನು ನಡೆಸಿ, ಡಿಜಿಟಲ್ ಬ್ಯಾಂಕಿಂಗ್ ಸೇರಿದಂತೆ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದಾಗಿದೆ. ಅಲ್ಲದೇ ಎಲ್‌ಇಡಿ ಬಲ್ಬ್ ತಯಾರಿಕೆ, ಡ್ರೋನ್ ಆಪರೇಟಿಂಗ್ ಸೇರಿದಂತೆ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.