ADVERTISEMENT

Budget 2024 Live Updates | ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರದಿಂದ ಶ್ವೇತಪತ್ರ: ನಿರ್ಮಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2024, 8:00 IST
Last Updated 1 ಫೆಬ್ರುವರಿ 2024, 8:00 IST
   

ಹಣಕಾಸು ಮಸೂದೆ–2024 ಅನ್ನು ಲೋಕಸಭೆ ಅಂಗೀಕರಿಸಿದೆ. ಬಜೆಟ್ ಅಧಿವೇಶನವನ್ನು ನಾಳೆಗೆ (ಫೆಬ್ರುವರಿ 2ಕ್ಕೆ) ಮುಂದೂಡಲಾಗಿದೆ.

59 ನಿಮಿಷ 15 ಸೆಕೆಂಡ್‌ಗಳಲ್ಲಿ ಬಜೆಟ್ ಭಾಷಣ ಮುಕ್ತಾಯ

ಪ್ರಸ್ತುತ ಹಣಕಾಸು ಕೊರತೆ ಶೇ 5.8 ರಷ್ಟಿದ್ದು, ಅದನ್ನು 2024–25ರ ಆರ್ಥಿಕ ವರ್ಷದಲ್ಲಿ ಶೇ 5.1ಕ್ಕೆ ಇಳಿಸುವ ಗುರಿ ಇಟ್ಟುಕೊಳ್ಳಲಾಗಿದೆ: ನಿರ್ಮಲಾ ಸೀತಾರಾಮನ್

2027ಕ್ಕೆ ವಿಕಸಿತ ಭಾರತ

  • ಎಲ್ಲರ ಸಮಗ್ರ ಅಭಿವೃದ್ಧಿ

  • 'ಪ್ರತಿಯೊಬ್ಬರ ಪ್ರಯತ್ನ' ಚಿಂತನೆಯಲ್ಲಿ 3ಡಿ (ಡೆಮಾಗ್ರಫಿ, ಡೆಮಾಕ್ರಸಿ, ಡೈವರ್ಸಿಟಿ) ಅಭಿವೃದ್ಧಿ.

    ADVERTISEMENT

ಆದ್ಯತೆಯ ವಲಯಗಳು: ಬಡವರ ಕಲ್ಯಾಣ–ದೇಶದ ಕಲ್ಯಾಣ, ಯುವ ಸಬಲೀಕರಣ, ರೈತರ ಕ್ಷೇಮಾಭ್ಯದಯ, ನಾರಿ ಶಕ್ತಿ

ಮಧ್ಯಂತರ ಬಜೆಟ್‌ ವ್ಯಾಪಕ ಮತ್ತು ವಿನೂತನವಾಗಿದೆ. ನಿರಂತರತೆಯ ವಿಶ್ವಾಸ ಇದರಲ್ಲಿದೆ. ವಿಕಸಿತ ಭಾರತದ ನಾಲ್ಕು ಆಧಾರ ಸ್ಥಂಭಗಳಾದ ಯುವ ಜನರು, ಬಡವರು, ಮಹಿಳೆಯರು ಮತ್ತು ರೈತರನ್ನು ಈ ಬಜೆಟ್‌ ಸಬಲೀಕರಣಗೊಳಿಸಲಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಖಾತ್ರಿ ನೀಡಿದೆ.
–ನರೇಂದ್ರ ಮೋದಿ, ಪ್ರಧಾನ ಮಂತ್ರಿ
9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ ನಿರೋಧಕ ಲಸಿಕೆ ಹಾಕಿಸಲು ಸರ್ಕಾರ ಉತ್ತೇಜನ ನೀಡಲಿದೆ.
–ನಿರ್ಮಲಾ ಸೀತಾರಾಮನ್

ಸದ್ಯ ಇರುವ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಆದ್ಯತೆ ನೀಡಲಿದೆ

ಸುಸ್ಥಿರ ಅಭಿವೃದ್ಧಿ ಮತ್ತು ಉತ್ಪಾದಕತೆ ಹೆಚ್ಚಿಸುವ ಆರ್ಥಿಕತೆಯನ್ನು ಸರ್ಕಾರ ಅಳವಡಿಸಿಕೊಳ್ಳಲಿದೆ

ನೇರ ತೆರಿಗೆಗೆ ಸಂಬಂಧಿಸಿದ 1962ರಷ್ಟು ಹಳೆಯ ಹಲವು ವಿವಾದಗಳು ದಾಖಲೆಗಳಲ್ಲೇ ಉಳಿದಿವೆ. 2009 ರವರೆಗಿನ ₹ 25,000ಕ್ಕಿಂತ ಕಡಿಮೆ ಮೊತ್ತದ ವಿವಾದಗಳನ್ನು ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.

ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ.
–ನಿರ್ಮಲಾ ಸೀತಾರಾಮನ್

ಆದಾಯ ತೆರಿಗೆ

  • ತೆರಿಗೆ ದರಗಳಲ್ಲಿ ಯಥಾಸ್ಥಿತಿ

  • ₹ 7 ಲಕ್ಷದ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಹೊರೆ ಇಲ್ಲ

  • ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು

ಆದಾಯ ಸ್ವೀಕೃತಿಗಳು ಬಜೆಟ್‌ನ ಅಂದಾಜಿಗಿಂತ ಸುಮಾರು ₹ 30.03 ಲಕ್ಷ ಕೋಟಿಗೂ ಅಧಿಕ ಇರಬಹುದು ಎಂದು ನಿರೀಕ್ಷಿಸಲಾಗಿದೆ. ತೆರಿಗೆ ಸ್ವೀಕೃತಿ 20.02 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.
–ನಿರ್ಮಲಾ ಸೀತಾರಾಮನ್

ತಂತ್ರಜ್ಞಾನ ಪ್ರಿಯ ಯುವ ಜನಾಂಗಕ್ಕೆ ಇದೊಂದು ಸುವರ್ಣ ಕಾಲ. 50 ವರ್ಷಗಳ ಬಡ್ಡಿರಹಿತ ಸಾಲ ನೀಡುವುದಕ್ಕಾಗಿ 1 ಲಕ್ಷ ಕೋಟಿ ನಿಧಿ ಸ್ಥಾಪನೆ. ಇದು ದೀರ್ಘಕಾಲಿಕ ಹಣಕಾಸು ನೆರವು ಅಥವಾ ತೀರಾ ಕಡಿಮೆ ಬಡ್ಡಿ ಅಥವಾ ಶೂನ್ಯ ಬಡ್ಡಿಯಲ್ಲಿ ಹೆಚ್ಚುವರಿ ಹಣಕಾಸು ನೆರವು

ಮಧ್ಯಮ ವರ್ಗದವರಿಗೆ ಮನೆ

ಬಾಡಿಗೆ, ಸ್ಲಂ ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಅಥವಾ ಖರೀದಿಸಲು ನೆರವು.

ಜನಸಂಖ್ಯೆ ವಿಪರೀತ ಏರಿಕೆಯಿಂದ ಸಂಭವನೀಯ ಸವಾಲುಗಳ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ ರಚನೆಗೆ ಒತ್ತು..

ಪ್ರವಾಸೋದ್ಯಮ

  • ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯಗಳಿಗೆ ಉತ್ತೇಜನ

  • ದ್ವೀಪ ಪ್ರದೇಶಗಳಲ್ಲಿ ಬಂದರು ಸಂಪರ್ಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ

ಮೂರು ಪ್ರಮುಖ ಆರ್ಥಿಕ ಕಾರಿಡಾರ್‌ ಅನುಷ್ಠಾನ

  • ಖನಿಜ ಶಕ್ತಿ ಮತ್ತು ಸಿಮೆಂಟ್‌ ಕಾರಿಡಾರ್

  • ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್

  • ಬಹು ಮಾದರಿ ಸಂಪರ್ಕ ಸಾಧ್ಯವಾಗಿಸುವ ಪಿಎಂ ಗತಿ ಶಕ್ತಿ ಕಾರಿಡಾರ್

ಆಯುಷ್ಮಾನ್‌ ಭಾರತ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆ ಇನ್ನುಮುಂದೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೂ ಅನ್ವಯವಾಗಲಿದೆ.

ನವೋದ್ಯಮಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ, ಮಹಿಳೆಯರ ಘನತೆ ಮತ್ತು  ಬದುಕಿನಲ್ಲಿ ಸುಧಾರಣೆಗಳನ್ನು ತರುವ ಮೂಲಕ ಕಳೆದ 10 ವರ್ಷಗಳಲ್ಲಿ ಸ್ತ್ರೀ ಸಬಲೀಕರಣಕ್ಕೆ ವೇಗ ದೊರೆತಿದೆ.

'ಸ್ಕಿಲ್‌ ಇಂಡಿಯಾ' ಯೋಜನೆ ಅಡಿಯಲ್ಲಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ.

ದೇಶದ ಜನರ ಸರಾಸರಿ ಆದಾಯ ಶೇ 50ರಷ್ಟು ಏರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೇಶದ ಆರ್ಥಿಕತೆ ಕಳೆದ 10 ವರ್ಷಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಂಡಿದೆ. ದೇಶದ ಜನರು ಭರವಸೆ ಮತ್ತು ಆಶಾದಾಯಕ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನರ ಆಶೀರ್ವಾದದೊಂದಿಗೆ 'ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌' ಮಂತ್ರದೊಂದಿಗೆ 2014ರಲ್ಲಿ ರಚನೆಯಾದಾಗ ರಾಷ್ಟ್ರವು ಅಪರಿಮಿತ ಸವಾಲುಗಳನ್ನು ಎದುರಿಸುತ್ತಿತ್ತು. ಎಲ್ಲಾ ಸವಾಲುಗಳನ್ನು ನಮ್ಮ ಸರ್ಕಾರ ಮೀರಿ ನಿಂತಿದೆ: ನಿರ್ಮಲಾ ಸೀತಾರಾಮನ್

ರಾಷ್ಟ್ರೀಯ ಶಿಕ್ಷಣ ನೀತಿಯು, ಸುಧಾರಿತ ಪರಿವರ್ತನೆಗಳಿಗೆ ದಾರಿತೋರುತ್ತದೆ ಎಂದು ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

ದೇಶವನ್ನು 2047ರ ವೇಳೆಗೆ 'ವಿಕಸಿತ ಭಾರತ'ವನ್ನಾಗಿಸಲು ಸರ್ಕಾರ ಶ್ರಮಿಸುತ್ತಿದೆ. ಬಡತನ ನಿರ್ಮೂಲನೆ, ರೈತರು, ಮಹಿಳೆಯರು ಮತ್ತು ಯುವಕರ ಏಳಿಗೆಗೆ ಆದ್ಯತೆ ನೀಡಲಾಗುವುದು.

ಕನಿಷ್ಠ ಬೆಂಬಲ ಬೆಲೆಯನ್ನು ನಿಯಮಿತವಾಗಿ ಏರಿಕೆ ಮಾಡಲಾಗಿದೆ: ನಿರ್ಮಲಾ ಸೀತಾರಾಮನ್

ಕೇಂದ್ರ ಸರ್ಕಾರವು ತನ್ನ 'ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌' ಮಂತ್ರಕ್ಕೆ ಬಲ ತುಂಬಿದೆ.
–ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ

ಮಧ್ಯಂತರ ಬಜೆಟ್‌ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್

'ನನಗೆ ಯಾವುದೇ ಮಾಹಿತಿ ಇಲ್ಲ'
'ನಾನು ಮುರ್ಷಿದಾಬಾದ್‌ನಲ್ಲಿದ್ದೇನೆ. ಕೇಂದ್ರ ಬಜೆಟ್‌ ದೆಹಲಿಯಲ್ಲಿ ಮಂಡನೆಯಾಗುತ್ತದೆ. ನನಗೆ ಯಾವುದೇ ಮಾಹಿತಿ ಇಲ್ಲ' –ಬಜೆಟ್‌ ನಿರೀಕ್ಷೆಗಳೇನು ಎಂದದ್ದಕ್ಕೆ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿದ್ದು ಹೀಗೆ.
ಈ ಸರ್ಕಾರ ಇನ್ನಾದರೂ ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಈ ಸರ್ಕಾರದಿಂದ ಯಾವ ಧನಾತ್ಮಕ ಅಂಶಗಳನ್ನೂ ನಿರೀಕ್ಷಿಸಿಲ್ಲ. ಇದು ಚುನಾವಣಾ ವರ್ಷವಾಗಿರುವುದರಿಂದ ಕೆಲವು ಯೋಜನೆಗಳನ್ನು ಘೋಷಿಸಬಹುದು.
–ಪಿ. ಸಂತೋಷ್‌ ಕುಮಾರ್, ‍ಸಿಪಿಐ ಸಂಸದ

2024–25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದು ಮಧ್ಯಂತರ ಬಜೆಟ್‌. ಹಾಗಾಗಿ, ಈ ಹಿಂದೆ ಯಾವೆಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆಯೋ ಅವು ಮುಂದುವರಿಯುತ್ತವೆ ಎಂದು ನಂಬಿದ್ದೇನೆ.
–ಎಂ.ನರೇಂದ್ರ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ

ಬಜೆಟ್ ಟ್ಯಾಬ್ಲೆಟ್‌ ಹಿಡಿದು ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಭಾರತದ ರೂಪಾಯಿ ಮೌಲ್ಯವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್‌ ಎದುರು 9 ಪೈಸೆಯಷ್ಟು ಏರಿಕೆಯಾಗಿದ್ದು, ₹ 82.95ಕ್ಕೆ ತಲುಪಿದೆ. ಬುಧವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯವು ಡಾಲರ್‌ ಎದುರು ₹ 83.04 ರಷ್ಟಿತ್ತು.

ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬಜೆಟ್ ಮಂಡನೆಗೂ ಮುನ್ನ ಹಣಕಾಸು ಇಲಾಖೆ ರಾಜ್ಯ ಖಾತೆ ಸಚಿವರಾದ ಪಂಕಜ್‌ ಚೌಧರಿ ಮತ್ತು ಭಾಗವತ್‌ ಕರದ್‌ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಪ್ರತಿದಿನ ಏರುತ್ತಲೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ.
–ಹಸ್ನೈನ್‌ ಮಸೂದಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಸಂಸದ

ಮಧ್ಯಂತರ ಬಜೆಟ್‌ನ ಪ್ರತಿಗಳನ್ನು ಸಂಸತ್ತಿಗೆ ತರಲಾಯಿತು

ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ಸಂಸತ್‌ ಭವನದತ್ತ..

ಹಣಕಾಸು ಸಚಿವಾಲಯದಿಂದ ಹೊರಡುವ ವೇಳೆ 'ಬಜೆಟ್‌' ಪ್ರದರ್ಶಿಸಿದ  ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024–25ನೇ ಹಣಕಾಸು ವರ್ಷದ 'ಮಧ್ಯಂತರ ಬಜೆಟ್‌' ಅನ್ನು ಲೋಕಸಭೆಯಲ್ಲಿ ಇಂದು (ಗುರುವಾರ, 1 ಫೆಬ್ರುವರಿ) ಬೆಳಿಗ್ಗೆ 11ಕ್ಕೆ ಮಂಡಿಸಲಿದ್ದಾರೆ.

ನಿರ್ಮಲಾ ಮಂಡಿಸುತ್ತಿರುವ ಆರನೇ ಬಜೆಟ್‌ ಇದಾಗಿದೆ. ಇದರೊಂದಿಗೆ ಅವರು, ಈ ಹಿಂದೆ ಆರು ಬಾರಿ ಬಜೆಟ್‌ ಮಂಡಿಸಿರುವ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಪ್ರಕಟಿಸುವುದಿಲ್ಲ ಎಂದು ಈಗಾಗಲೇ ಅವರು ಹೇಳಿದ್ದಾರೆ. ಹಾಗಾಗಿ, ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಡಿ ತೆರಿಗೆದಾರರಿಗೆ ಯಾವುದೇ ವಿನಾಯಿತಿ ಪ್ರಕಟಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.